Asianet Suvarna News Asianet Suvarna News

ಕಾಂಗ್ರೆಸ್‌ ಗಾದಿಗೆ ಲಾಬಿ ಶುರು..!

*  ಕುರಿ ಶಿವಮೂರ್ತಿ, ಗುಜ್ಜಲ ನಾಗರಾಜ, ಸಿರಾಜ್‌ ಶೇಖ್‌, ಎಂ.ಪಿ. ವೀಣಾ ಆಕಾಂಕ್ಷಿಗಳು
*  ಜಾತಿ ಲೆಕ್ಕಾಚಾರ
*  ವರಿಷ್ಠರ ದುಂಬಾಲು ಬಿದ್ದ ಆಕಾಂಕ್ಷಿಗಳು 
 

Aspirants Approach to DK Shivakumar for Vijayanagara District Congress President Seat grg
Author
Bengaluru, First Published Sep 9, 2021, 11:30 AM IST

ಕೃಷ್ಣ ಎನ್‌. ಲಮಾಣಿ

ಹೊಸಪೇಟೆ(ಸೆ.09): ವಿಜಯನಗರ ಜಿಲ್ಲಾ ಕಾಂಗ್ರೆಸ್‌ಗೆ ಹೊಸ ಅಧ್ಯಕ್ಷರನ್ನು ನೇಮಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರು ಮುಂದಾಗಿದ್ದು, ಹುದ್ದೆ ಮೇಲೆ ಕಣ್ಣಿಟ್ಟಿರುವ ಆಕಾಂಕ್ಷಿಗಳು ಈಗಾಗಲೇ ರಾಜ್ಯ ವರಿಷ್ಠರ ದುಂಬಾಲು ಬಿದ್ದಿದ್ದಾರೆ.

ಹೊಸದಾಗಿ ಜಿಲ್ಲೆ ರಚನೆಯಾಗಿರುವ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್‌ ಬರ್ಕಾಸ್ತುಗೊಂಡು ಹೊಸದಾಗಿ ವಿಜಯನಗರ ಜಿಲ್ಲಾಧ್ಯಕ್ಷರ ಆಯ್ಕೆ ನಡೆಯಲಿದೆ. ಜಿಲ್ಲಾ ಗ್ರಾಮೀಣ ಕಾಂಗ್ರೆಸ್‌ನ ಅಧ್ಯಕ್ಷ ಬಿ.ವಿ. ಶಿವಯೋಗಿ ಅವರ ಅಧಿಕಾರಾವಧಿ ಈಗಾಗಲೇ ಮುಗಿದಿದೆ. ಹೊಸ ಅಧ್ಯಕ್ಷರ ಆಯ್ಕೆವರೆಗೆ ಅವರು ಮುಂದುವರೆಯಲಿದ್ದಾರೆ. ಈ ಹಿನ್ನೆಲೆಯಲ್ಲಿ ಹುದ್ದೆ ಆಕಾಂಕ್ಷಿಗಳು ಲಾಬಿ ಮಾಡುತ್ತಿದ್ದಾರೆ.

ಅಭಿಪ್ರಾಯ ಕ್ರೋಢೀಕರಣ:

ವಿಜಯನಗರ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸೂಕ್ತ ಮುಖಂಡರನ್ನು ಆಯ್ಕೆ ಮಾಡಲು ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯ ಮುಖಂಡರ ಅಭಿಪ್ರಾಯವನ್ನು ಕೆಪಿಸಿಸಿ ಅಧ್ಯಕ್ಷರು ಕ್ರೋಢೀಕರಣ ಮಾಡಲಿದ್ದಾರೆ. ಹೀಗಾಗಿ, ಅಧ್ಯಕ್ಷರ ಹುದ್ದೆ ಮೇಲೆ ಕಣ್ಣಿಟ್ಟಿರುವವರು ರಾಜ್ಯ ಮುಖಂಡರಿಗೆ ದುಂಬಾಲು ಬಿದ್ದಿದ್ದಾರೆ.

ವಿಜಯನಗರ ಜಿಲ್ಲಾಧ್ಯಕ್ಷ ಹುದ್ದೆಗೆ ಪ್ರಮುಖವಾಗಿ ಮಾಜಿ ಶಾಸಕ ಸಿರಾಜ್‌ ಶೇಖ್‌, ಕೆಪಿಸಿಸಿ ಸದಸ್ಯ ಕುರಿ ಶಿವಮೂರ್ತಿ ಮತ್ತು ಮುಖಂಡ ಗುಜ್ಜಲ ನಾಗರಾಜ ಅವರ ಹೆಸರು ಕೇಳಿ ಬರುತ್ತಿದೆ. ವಿಜಯನಗರ ಜಿಲ್ಲೆಯಲ್ಲಿ ಐದು ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಈ ಪೈಕಿ ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಭೀಮಾ ನಾಯ್ಕ ಶಾಸಕರಾಗಿದ್ದಾರೆ. ಇನ್ನೂ ಹೂವಿನಹಡಗಲಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಪಿ.ಟಿ. ಪರಮೇಶ್ವರ ನಾಯ್ಕ ಅವರು ಶಾಸಕರಾಗಿದ್ದಾರೆ. ಉಳಿದ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ. ಹೀಗಾಗಿ, ವಿಜಯನಗರ ಜಿಲ್ಲೆಯಲ್ಲಿ ಕಾಂಗ್ರೆಸ್‌ ಅನ್ನು ಬೇರು ಮಟ್ಟದಿಂದ ಬಲಪಡಿಸುವುದಕ್ಕಾಗಿ ಜಿಲ್ಲೆಯ ಎಲ್ಲ ಹಿರಿಯ ಹಾಗೂ ಕಿರಿಯ ನಾಯಕರ ಅಭಿಪ್ರಾಯವನ್ನೂ ಕ್ರೋಢೀಕರಿಸಿ ಸೂಕ್ತರಾದವರನ್ನು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲು ಕೆಪಿಸಿಸಿ ಅಧ್ಯಕ್ಷರು ಮುಂದಾಗಿದ್ದಾರೆ ಎಂದು ಪಕ್ಷದ ಮೂಲಗಳು ಕನ್ನಡಪ್ರಭಕ್ಕೆ ತಿಳಿಸಿವೆ.

ಖಾತೆ ಕ್ಯಾತೆ ತೆಗೆದಿದ್ದ ಆನಂದ್ ಸಿಂಗ್‌ಗೆ ಬಂಪರ್ ಗಿಫ್ಟ್

ಜಾತಿ ಲೆಕ್ಕಾಚಾರ:

ಮುಸ್ಲಿಂ, ಕುರುಬ ಹಾಗೂ ವಾಲ್ಮೀಕಿ ನಾಯಕ ಮತ್ತು ವೀರಶೈವ ಲಿಂಗಾಯತ ಸಮಾಜದಲ್ಲಿ ಒಬ್ಬರನ್ನು ಅಧ್ಯಕ್ಷ ಗಾದಿಗೆ ಪರಿಗಣನೆ ಮಾಡುವ ಸಾಧ್ಯತೆ ಇದೆ. ಮುಸ್ಲಿಂ ಸಮಾಜದಿಂದ ಮಾಜಿ ಶಾಸಕ ಸಿರಾಜ್‌ ಶೇಖ್‌ ಅವರ ಹೆಸರು ಮುಂಚೂಣಿಯಲ್ಲಿದೆ. ಆದರೆ, ಅವರಿಗೆ ಹೊಸಪೇಟೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಚ್‌ಎನ್‌ಎಫ್‌ ಮಹಮ್ಮದ್‌ ಇಮಾಮ್‌ ನಿಯಾಜಿ ಅವರು ಪೈಪೋಟಿ ನೀಡುತ್ತಿದ್ದಾರೆ.

ಇನ್ನೊಂದೆಡೆ ಕುರುಬ ಸಮಾಜದಿಂದ ಕೆಪಿಸಿಸಿ ಸದಸ್ಯ ಕುರಿ ಶಿವಮೂರ್ತಿ ಅವರ ಹೆಸರು ಬಲವಾಗಿ ಕೇಳಿ ಬರುತ್ತಿದೆ. ಒಂದೆರಡು ಬಾರಿ ಕೆಪಿಸಿಸಿ ಕಚೇರಿಗೂ ತೆರಳಿ ಶಿವಮೂರ್ತಿ ಅವರು ತಮ್ಮ ಅನಿಸಿಕೆ ಹೇಳಿ ಬಂದಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಮುಖಂಡ ಗುಜ್ಜಲ ನಾಗರಾಜ ಅವರು ವಾಲ್ಮೀಕಿ ನಾಯಕ ಸಮಾಜಕ್ಕೆ ಸೇರಿದ್ದಾರೆ. ಅವರನ್ನು ಆಯ್ಕೆ ಮಾಡಿದರೆ, ವಾಲ್ಮೀಕಿ ನಾಯಕ ಸಮಾಜದ ಮತಗಳನ್ನು ಕಾಂಗ್ರೆಸ್‌ ತೆಕ್ಕೆಗೆ ಪಡೆಯಬಹುದು ಎಂಬ ಲೆಕ್ಕಾಚಾರವೂ ಇದೆ.

ಇನ್ನೊಂದು ಕಡೆಯಲ್ಲಿ ವೀರಶೈವ ಲಿಂಗಾಯತ ಸಮಾಜಕ್ಕೆ ಸೇರಿರುವ ಮಾಜಿ ಉಪಮುಖ್ಯಮಂತ್ರಿ ದಿ. ಎಂ.ಪಿ. ಪ್ರಕಾಶ ಅವರ ಪುತ್ರಿ ಎಂ.ಪಿ. ವೀಣಾ ಅವರ ಹೆಸರು ಕೂಡ ಈ ಹುದ್ದೆಗೆ ಕೇಳಿ ಬರುತ್ತಿದೆ. ಕಾಂಗ್ರೆಸ್‌ಗೆ ಸೇರ್ಪಡೆಯಾಗಿರುವ ಹರ್ಷವರ್ಧನ ಅವರ ಹೆಸರು ಕೂಡ ಕೇಳಿ ಬಂದಿದ್ದು, ದಲಿತ ಸಮುದಾಯದಿಂದ ಹೆಗ್ಡಾಳ್‌ ರಾಮಣ್ಣ ಅವರ ಹೆಸರು ಕೇಳಿ ಬರುತ್ತಿದೆ.
 

Follow Us:
Download App:
  • android
  • ios