ಕರ್ಫ್ಯೂ ಘೋಷಣೆ ಮಾಡಿರುವುದರಿಂದ ಏಷ್ಯಾದಲ್ಲೇ ಎರಡನೇ ಅತಿದೊಡ್ಡ ಟೊಮೆಟೋ ಮಾರುಕಟ್ಟೆಯಾದ ಕೋಲಾರ ಎಪಿಎಂಸಿ ಬಂದ್ ಆಗಲಿದೆ

ಕೋಲಾರ (ಏ.24): ವಾರಾಂತ್ಯದಲ್ಲಿ 2 ದಿನ ಕರ್ಫ್ಯೂ ಘೋಷಣೆ ಮಾಡಿರುವುದರಿಂದ ಏಷ್ಯಾದಲ್ಲೇ ಎರಡನೇ ಅತಿದೊಡ್ಡ ಟೊಮೆಟೋ ಮಾರುಕಟ್ಟೆಯಾದ ಕೋಲಾರ ಎಪಿಎಂಸಿ ಕೂಡ ಬಂದ್‌ ಆಗಲಿದೆ. 

ಮಾರುಕಟ್ಟೆಬಂದ್‌ ಆಗುತ್ತಿರುವುದಕ್ಕೆ ರೈತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಎರಡು ದಿನ ತರಕಾರಿ ಮಾರಾಟವಾಗದಿದ್ದರೆ ನಮ್ಮ ಗತಿ ಏನು ಎಂದು ಅಳಲು ತೋಡಿಕೊಂಡಿದ್ದಾರೆ. ಮಹಾರಾಷ್ಟ್ರದ ನಾಸಿಕ್‌ನ ಪಿಂಪಲಾಗಾಂವ್‌ನ ನಂತರ ಏಷ್ಯಾದ 2ನೇ ಅತಿದೊಡ್ಡ ಟೊಮೆಟೋ ಮಾರುಕಟ್ಟೆಯೆನಿಸಿರುವ ಕೋಲಾರದಲ್ಲಿ ಪ್ರತಿದಿನ 4 ಸಾವಿರ ಟನ್‌ಗಳಷ್ಟುಟೊಮೆಟೋ ಹಾಗೂ ಪ್ರತಿದಿನ 1 ಸಾವಿರ ಕ್ವಿಂಟಲ್‌ನಷ್ಟುವಿವಿಧ ರೀತಿಯ ತರಕಾರಿಗಳು ಮಾರಾಟವಾಗುತ್ತವೆ.

ಕರ್ನಾಟಕದಲ್ಲಿ ವೀಕೆಂಡ್ ಕರ್ಫ್ಯೂ ಜಾರಿ; ಅಗತ್ಯ,ತುರ್ತು ಸೇವೆ ಮಾತ್ರ ಲಭ್ಯ!

ಇಲ್ಲಿಂದ ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ಹಾಗೂ ಕೊಲ್ಕತ್ತಾ ಹೀಗೆ ಹೊರ ರಾಜ್ಯ ಹಾಗೂ ವಿದೇಶಕ್ಕೂ ಟೊಮೆಟೋ ಮತ್ತು ತರಕಾರಿಗಳು ಸರಬರಾಜಾಗುತ್ತದೆ. ಟೊಮೆಟೋ ಮತ್ತು ತರಕಾರಿಗಳನ್ನು ಹೆಚ್ಚು ದಿನ ಕಾಪಿಟ್ಟುಕೊಳ್ಳುವುದು ಕಷ್ಟ. ಪರಿಸ್ಥಿತಿ ಹೀಗಿರುವಾಗ 2 ದಿನ ಮಾರುಕಟ್ಟೆಬಂದ್‌ ಆದರೆ ತರಕಾರಿಗೆ ಸರಿಯಾದ ಬೆಲೆ ಸಿಗದೇ ಹೋಗಬಹುದು ಎನ್ನುವ ಆತಂಕ ರೈತರನ್ನು ಕಾಡುತ್ತಿದೆ.