ಕಾವೇರಿ ಎಸ್‌.ಎಸ್‌.

ಬೆಂಗಳೂರು(ಏ.17): ‘ನಾವು ಕೊರೋನಾ ವೈರಸ್‌ ಕುರಿತು ಸರ್ವೇ ಕಾರ್ಯ ಮುಗಿಸಿ ಮನೆಗೆ ಹಿಂದಿರುಗುವಾಗ ಅಕ್ಕಪಕ್ಕದವರು ನೀವು ಊರೆಲ್ಲ ತಿರುಗಿ ರೋಗಿಗಳನ್ನು ಭೇಟಿ ಮಾಡಿ ಬರುತ್ತೀರಿ. ಪುಟ್ಟ ಮಕ್ಕಳು, ವಯಸ್ಸಾದವರು ಇರುತ್ತಾರೆ. ಬರುವಾಗಲೇ ಏನಾದರೂ ಸ್ಪ್ರೇ ಮಾಡಿಕೊಂಡು ಬನ್ನಿ ಅಂತಾರೆ. ಆದರೆ ನಾವೇ ಮಕ್ಕಳಿಂದ ದೂರ ಇರುತ್ತಿದ್ದೇವೆ. ಮನೆಗೆ ಬಂದೊಡನೆ ಹತ್ತಿರ ಬರುವ ಮಕ್ಕಳನ್ನು ಗದರಿಸಿ ದೂರ ಉಳಿಯುತ್ತಿದ್ದೇವೆ. ಮಕ್ಕಳನ್ನು ಬೇರೆಡೆ ಮಲಗಿಸಿ, ನಾವು ಮನೆಯ ಮೂಲೆಯೊಂದರಲ್ಲಿ ಮಲಗುತ್ತಿದ್ದೇವೆ’

ಹೀಗೆಂದು ಕೊಂಚ ಬೇಸರದಿಂದ ನುಡಿದವರು ಬೆಂಗಳೂರು ನಗರ ಬಿಬಿಎಂಪಿ ವ್ಯಾಪ್ತಿಯಲ್ಲಿ ‘ಕೊರೋನಾ ವಾರಿಯರ್ಸ್‌’ ಆಗಿ ಸರ್ವೇ ಕಾರ್ಯದಲ್ಲಿ ನಿರತರಾಗಿರುವ ಆಶಾ ಕಾರ್ಯಕರ್ತೆ ನಾಗಲಕ್ಷ್ಮಿ.
ಗುರುವಾರ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಅವರು, ಸದ್ಯ ಭಯದ ವಾತಾವರಣದಲ್ಲಿ ನಾವು ಮಾಡುತ್ತಿರುವ ಕೆಲಸದ ಬಗ್ಗೆ ಹೆಮ್ಮೆ ಇದೆ. ಆರಂಭದಲ್ಲಿ ಸರ್ವೇಗೆ ಹೋದಾಗ ಮುಸ್ಲಿಂ ಸಮುದಾಯದವರಲ್ಲಿ ಎನ್‌ಆರ್‌ಸಿ ಸಮೀಕ್ಷೆ ಮಾಡುತ್ತಿದ್ದಾರೆ ಎಂಬ ಅಪನಂಬಿಕೆ ಹೊಂದಿದ್ದರು. ಈಗ ಕೊರೋನಾ ವೈರಸ್‌ ಪಾಸಿಟಿವ್‌ ಪ್ರಕರಣಗಳು ಹೆಚ್ಚಾದ ಮೇಲೆ ಸ್ಪಂದಿಸುತ್ತಿದ್ದಾರೆ ಎಂದರು.

ಕೊರೋನಾ ಆತಂಕ: ಸೋಂಕಿತ ಓಡಾಡಿದ್ದ ಪ್ರದೇಶದಲ್ಲಿ ಆಶಾ ಕಾರ್ಯಕರ್ತೆಯರಿಂದ ಸಮೀಕ್ಷೆ

ನಾವು ಮನೆ ಬಾಗಿಲ ಬಳಿ ಹೋದಾಗ ಕೆಲವರು, ನೀವು ಬೇರೆ ಮನೆಗೆಲ್ಲ ಹೋಗಿ ಬರ್ತೀರಿ. ಅವರಿಗೆ ಯಾವ್ಯಾವ ರೋಗಗಳು ಇರುತ್ತದೋ. ಎಲ್ಲೆಡೆ ಸುತ್ತಿ ಬಂದು ನಮಗೂ ರೋಗ ಹತ್ತಿಸಿ ಹೋಗುತ್ತೀರ ಅನ್ನುತ್ತಾರೆ. ಕೆಲವರು ಕೊರೋನಾ ಲಕ್ಷಣಗಳು ಇದೆ ಅಂದರೆ ನಮ್ಮನ್ನು ಎಲ್ಲಿ ಕರೆದೊಯ್ಯುತ್ತಾರೋ ಎಂಬ ಭಯದಲ್ಲಿ ಹತ್ತಿರ ಬರದಂತೆ ಗದರಿಸುತ್ತಾರೆ ಎನ್ನುತ್ತಾರೆ ನಾಗಲಕ್ಷ್ಮಿ. ಕೊರೋನಾ ವೈರಸ್‌ ಹರಡದಂತೆ ಮುನ್ನೆಚ್ಚರಿಕೆ ವಹಿಸಲು ಹೆಚ್ಚೆಚ್ಚು ನೀರು ಕುಡಿಯಬೇಕು. ಗಂಟಲು ಒಣಗಲು ಬಿಡಬಾರದು. ಆದರೆ. ನಾವು ಹೋದ ಕಡೆಗಳಲ್ಲಿ ಶೌಚಾಲಯ ವ್ಯವಸ್ಥೆ ಇರೋದಿಲ್ಲ. ಹೀಗಾಗಿ ಬಹುತೇಕರು ನೀರು ಕುಡಿಯುವುದನ್ನೇ ಕಡಿಮೆ ಮಾಡಿದ್ದೇವೆ. ಬಿಸಿಲಿನ ಬೇಗೆಗೆ ಗಂಟಲು ಒಣಗುತ್ತದೆ ಎಂದು ಅಳಲು ತೊಡಿಕೊಂಡರು.

ನಮಗೂ ಪಿಪಿಇ ಕಿಟ್‌ ಕೊಡಿ

ವೈದ್ಯರು, ನರ್ಸ್‌ಗಳಂತೆ ಜೀವದ ಹಂಗು ತೊರೆದು ನಾವು ಮಾಡುತ್ತಿದ್ದೇವೆ. ಈಗಾಗಲೇ ಕೆಲವರಿಗೆ ಜ್ವರ, ನೆಗಡಿ, ಅಲರ್ಜಿಯಂಥ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ತಂಡಕ್ಕೆ ಒಂದರಂತೆ ಸ್ಯಾನಿಟೈಸರ್‌ ನೀಡುತ್ತಿದ್ದಾರೆ. ಇತರರು ಬಳಸಿದ್ದನ್ನೇ ನಾವು ಬಳಸುವುದರಿಂದ ಅಪಾಯ ಹೆಚ್ಚು. ಹೀಗಾಗಿ ತಲಾ ಒಬ್ಬೊಬ್ಬರಿಗೆ ಸ್ಯಾನಿಟೈಸರ್‌ ಕೊಡಬೇಕು. ಆಶಾ ಕಾರ್ಯಕರ್ತೆಯರಿಗೂ ಪಿಪಿಇ ಕಿಟ್‌ ನೀಡಬೇಕು. ನಮಗೂ ವಾರಕ್ಕೊಮ್ಮೆ ಆರೋಗ್ಯ ತಪಾಸಣೆ ನಡೆಸಬೇಕು. ನಮಗೂ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು ಎಂದು ಮನವಿ ಮಾಡಿದರು.