ಹೆಚ್ಡಿಕೆ ಬಗ್ಗೆ ನಾನು ಹೇಳಿದ್ದ ಮಾತೆ ನಿಜವಾಯಿತು

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 27, Aug 2018, 3:05 PM IST
Asaduddin Owaisi begins campaign in Mysuru Local body Election
Highlights

ನನ್ನ ಮಾತು ಎಂದೂ ಸಂವಿಧಾನ ಚೌಕಟ್ಟು ಮೀರಿಲ್ಲ. ಮಾಧ್ಯಮಗಳು ಪ್ರಧಾನಿ ನರೇಂದ್ರ ಮೋದಿ,ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಮಾತ್ರ ದೇಶದ ನಂ.1 ರಾಜಕಾರಣಿಗಳಂತೆ ಬಿಂಬಿಸುತ್ತಿವೆ.

ಮೈಸೂರು[ಆ.27]: ಸಂವಿಧಾನಬದ್ಧ ಹಕ್ಕನ್ನು ಪಡೆಯಲು ಮುಸ್ಲಿಂ ಸಮುದಾಯದಲ್ಲಿ ಜಾಗೃತಿ ಮೂಡಿಸಿ, ಹೋರಾಟ ನಡೆಸುತ್ತಿರುವುದಾಗಿ ಎಐಎಂಐಎಂ ಪಕ್ಷದ ಅಧ್ಯಕ್ಷರಾದ ಸಂಸದ ಅಸಾದುದ್ದೀನ್ ಒವೈಸಿ ತಿಳಿಸಿದರು.

ಬನ್ನಿಮಂಟಪದ ಹುಡ್ಕೋ ಮುಖ್ಯ ರಸ್ತೆಯಲ್ಲಿರುವ ಟಿಪ್ಪು ಮಸೀದಿ ಹತ್ತಿರ ಆಲ್ ಇಂಡಿಯಾ ಮಜ್ಲಿಸ್ ಇ ಇತ್ತೆಹಾದುಲ್ ಮುಸ್ಲಿ ಮೀನ್(ಎಐಎಂಐಎಂ) ಪಕ್ಷವು ಆಯೋಜಿಸಿದ್ದ ಮೈಸೂರು ಮಹಾನಗರ ಪಾಲಿಕೆ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಡಾ. ಅಂಬೇಡ್ಕರ್ ನೀಡಿರುವ ಸಂವಿಧಾನದಲ್ಲಿ ಮುಸ್ಲಿಂ, ದಲಿತರ ಶ್ರೇಯಸ್ಸು ಕಾಯ್ದುಕೊಳ್ಳಲಾಗಿದೆ. ಸಂವಿಧಾನಬದ್ಧವಾಗಿ ಮುಸ್ಲಿಮರಿಗೆ ಇರುವ ಹಕ್ಕನ್ನು ಜಾರಿಗೊಳಿಸಲು ಹೋರಾಟ ನಡೆಸುತ್ತಿದ್ದೇನೆ. ನನ್ನ ಮಾತು ಎಂದೂ ಸಂವಿಧಾನ ಚೌಕಟ್ಟು ಮೀರಿಲ್ಲ. ಮಾಧ್ಯಮಗಳು ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಮಾತ್ರ ದೇಶದ ನಂ.1 ರಾಜಕಾರಣಿಗಳಂತೆ ಬಿಂಬಿಸುತ್ತಿವೆ. ಹಾಗಾದರೇ ನಾವುಗಳೇನು ಎಂದು ಅವರು ಪ್ರಶ್ನಿಸಿದರು.

ದಲಿತರ ಹೋರಾಟ ಮಾದರಿಯಾಗಬೇಕು
ಎಸ್ಸಿ, ಎಸ್ಟಿ ಸಂಬಂಧಿಸಿದ ದೌರ್ಜನ್ಯ ತಡೆ ಕಾಯಿದೆ ಸಡಿಸಲಗೊಳಿಸಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪು ವಿರೋಧಿಸಿ ದಲಿತರು ಒಗ್ಗೂಡಿ ದೇಶಾದ್ಯಂತ ಬಂದ್ ಮಾಡಿದರು. ಇದರಿಂದ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಕಾಯಿದೆಯಲ್ಲಿ ಬದಲಾವಣೆ ಕೈಬಿಟ್ಟು ಯಥಾಸ್ಥಿತಿ ಕಾಯ್ದುಕೊಳ್ಳಲಾಯಿತು. ಆದರೆ, ಸುಪ್ರೀಂಕೋರ್ಟ್ ತ್ರಿವಳಿ ತಲಾಖ್ ನಿಷೇಧಿಸಿದಾಗ ಮುಸ್ಲಿಮರು ಸಮರ್ಥವಾಗಿ ವಿರೋಧಿಸಿಲ್ಲ. ಮುಸ್ಲಿಂ ಸಮುದಾಯದ ಹೋರಾಟ ಈ ರೀತಿ ದುರ್ಬಲಗೊಳ್ಳಬಾರದು. ದಲಿತರ ಹೋರಾಟದಿಂದ ಮುಸ್ಲಿಂ ಸಮುದಾಯ ಕಲಿಯುವುದು ಬೇಕಾದಷ್ಟಿದೆ ಎಂದು ಅವರು ತಿಳಿಸಿದರು.

ಇಷ್ಟು ವರ್ಷ ಕಾಂಗ್ರೆಸ್ ಪಕ್ಷವು ಜಾತ್ಯತೀತ ಸೋಗಿನಲ್ಲಿ ಮುಸ್ಲಿಂ, ದಲಿತರು, ಬುಡಕಟ್ಟು ಜನರನ್ನು ವಂಚಿಸುತ್ತಾ ಬಂದಿದೆ. ಇನ್ನೂ ಮುಂದೆ ಅದು ಸಾಧ್ಯವಿಲ್ಲ. ಈವರೆಗೂ ವೋಟ್‌ಬ್ಯಾಂಕ್ ರಾಜಕಾರಣ ಮಾಡಿ ಕೊಂಡು ಬಂದಿರುವ ಕಾಂಗ್ರೆಸ್ ಪಕ್ಷವು, ಮುಸ್ಲಿಂ ಯುವಕರನ್ನು ಅಭಿವೃದ್ಧಿಯಿಂದ ವಂಚಿಸಿದೆ. ಕಾಂಗ್ರೆಸ್ ಪಕ್ಷ ನಮಗೆ ಔಷಧಿಯಲ್ಲ, ಕಾಯಿಲೆ ಎಂಬುದನ್ನು ಅರಿತುಕೊಳ್ಳಬೇಕು. ಬಿಜೆಪಿ, ಕಾಂಗ್ರೆಸ್ ಪಕ್ಷಗಳು ಮುಸ್ಲಿಂ, ದಲಿತರ ವಿರೋಧಿಗಳು ಎಂಬುದು ಈಗ ಎಲ್ಲರಿಗೂ ಗೊತ್ತಾಗಿದೆ ಎಂದರು.

ಹೆಚ್ಡಿಕೆ ಬಗ್ಗೆ ಹೇಳಿದ್ದ ನನ್ನ ಮಾತೆ ಸತ್ಯವಾಯಿತು
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಕಿಂಗ್ ಮೇಕರ್ ಆಗಲಿದ್ದಾರೆ ಎಂದು ಮಾಧ್ಯಮಗಳು ಹೇಳುತ್ತಿದ್ದವು. ಆದರೆ, ನಾನು ಮಾತ್ರ ಕುಮಾರಸ್ವಾಮಿ ಕಿಂಗ್ ಮೇಕರ್ ಅಲ್ಲ, ಕಿಂಗ್ ಆಗುತ್ತಾರೆ ಎಂದಿದ್ದೆ. ಹಾಗೆಯೇ ಕುಮಾರಸ್ವಾಮಿ ಅವರು ರಾಜ್ಯದ ಮುಖ್ಯ ಮಂತ್ರಿಯಾಗಿದ್ದಾರೆ. ಇದೇ ರೀತಿ ನಮ್ಮ ಪಕ್ಷಕ್ಕೂ ಮತದಾರರ ಬೆಂಬಲ ದೊರೆತರೆ ದೇಶದ ಕೆಲವು ರಾಜ್ಯಗಳಲ್ಲಿ ನಾವು ಕಿಂಗ್ ಮೇಕರ್ ಆಗಬಹುದು. ಇಲ್ಲವೇ ಕಿಂಗ್ ಆಗಬಹುದು ಎಂದು ಅವರು ಹೇಳಿದರು.

ಈ ಹಿಂದೆ ಕಾಂಗ್ರೆಸ್ ಬಿಟ್ಟು ಬೇರೆ ಆಯ್ಕೆ ಇರಲಿಲ್ಲ. ಈಗ ನಮ್ಮ ಪಕ್ಷ ಸೇರಿದಂತೆ ಸ್ಥಳೀಯ ಮಟ್ಟದಲ್ಲಿ ಅನೇಕ ಮುಖಂಡರಿದ್ದಾರೆ. ಅವರನ್ನು ಗುರುತಿಸಿ, ರಾಜಕಾರಣದಲ್ಲಿ ಬೆಳೆಸಬೇಕು. ಇಲ್ಲವಾದರೆ ಇನ್ನೂ ನೂರು ವರ್ಷವಾದರೂ ನಮ್ಮ ಸಮುದಾಯದ ಅಭಿವೃದ್ಧಿ ಅಸಾಧ್ಯ. ಹೀಗಾಗಿ, ಪಾಲಿಕೆ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಅವರು ಮನವಿ ಮಾಡಿದರು. ನಗರ ಪಾಲಿಕೆ ವಾರ್ಡ್ ನಂ.8ರ ಅಭ್ಯರ್ಥಿ ರಫತ್ ಉಲ್ಲಾ ಖಾನ್ ಮೊದಲಾದವರು ಇದ್ದರು.

loader