ಶಿವಮೊಗ್ಗ(ಸೆ.08): ಸಂಚಾರ ನಿಮಯ ಉಲ್ಲಂಘನೆಗೆ ಭಾರೀ ದಂಡ ವಿಧಿಸುವ ಹೊಸ ಕಾಯ್ದೆ ಜಾರಿಗೆ ಬಂದ ಬಳಿಕ ಜಿಲ್ಲೆಯಲ್ಲಿ ಎರಡು ದಿನಗಳಲ್ಲಿ ಪೊಲೀಸರು ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 84,800 ರು. ದಂಡ ವಿಧಿಸಿದ್ದಾರೆ.

ಶುಕ್ರವಾರ 36 ವಿವಿಧ ಪ್ರಕರಣಗಳಲ್ಲಿ ಒಟ್ಟು 24,900 ರು. ದಂಡ ವಿಧಿಸಿದ್ದರೆ, ಶನಿವಾರ 71 ಪ್ರಕರಣಗಳಲ್ಲಿ ಒಟ್ಟು 59,900 ರು. ದಂಡ ವಿಧಿಸಿದ್ದಾರೆ.

ಶನಿವಾರ 71 ಪ್ರಕರಣಗಳಲ್ಲಿ ವಾಹನ ಚಲಾಯಿಸುವ ವೇಳೆಯಲ್ಲಿ ಮೊಬೈಲ್‌ ಬಳಕೆಯ 1 ಪ್ರಕರಣದಲ್ಲಿ 5 ಸಾವಿರ ರು. ದಂಡ ವಿಧಿಸಲಾಗಿದೆ. ನಿಗದಿತ ಸಂಖ್ಯೆಗಿಂತ ಹೆಚ್ಚುವರಿ ಜನರ ಸಾಗಾಣಿಕೆ ಮಾಡಿದ 15 ಪ್ರಕರಣಗಳಲ್ಲಿ 4400 ರು.ದಂಡ ಸಂಗ್ರಹಿಸಿದ್ದಾರೆ.

ಹೊಸ ಟ್ರಾಫಿಕ್ ರೂಲ್ಸ್: ಮಂಗಳೂರಲ್ಲಿ ಮದ್ಯ ಸೇವಿಸಿ ಚಾಲನೆಗೆ ಮೊದಲ ದಂಡ..!

ಕಾರುಗಳಲ್ಲಿ ಸೀಟ್‌ ಬೆಲ್ಟ್‌ ಧರಿಸದೆ ಇರುವ ಮತ್ತು ಮಕ್ಕಳನ್ನು ಮುಂಭಾಗ ಕೂರಿಸಿದ ಒಟ್ಟು 24 ಪ್ರಕರಣಗಳಲ್ಲಿ 25 ಸಾವಿರ ರು. ದಂಡ ವಿಧಿಸಿದ್ದಾರೆ. ಹೆಲ್ಮೆಟ್‌ ಧರಿಸದೆ ಪ್ರಯಾಣಿಸುವ ಒಟ್ಟು 14 ಪ್ರಕರಣಗಳಲ್ಲಿ 14 ಸಾವಿರ ರು. ದಂಡ ವಿಧಿಸಲಾಗಿದೆ. ಒಟ್ಟಾರೆ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ 59,900 ರು. ದಂಡ ವಿಧಿಸಲಾಗಿದೆ.

ಮದ್ಯ ಸೇವನೆ: 12 ಸಾವಿರ ದಂಡ:

ಗುರುವಾರ ರಾತ್ರಿ ಮದ್ಯ ಸೇವನೆ ಮಾಡಿ ವಾಹನ ಚಾಲನೆ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಪೊಲೀಸರು ತಡೆದು ಪ್ರಕರಣ ದಾಖಲಿಸಿದ್ದರು. ಶುಕ್ರವಾರ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಒಟ್ಟು 12 ಸಾವಿರ ರು.ದಂಡ ವಿಧಿಸಿ ತೀರ್ಪು ನೀಡಿದೆ.

ದಂಡ ಕಟ್ಟು ಎಂದಿದ್ದಕ್ಕೆ ಎಎಸ್‌ಐಗೆ ಪಂಚ್‌!

ಶಿಕಾರಿಪುರದಿಂದ ಶಿವಮೊಗ್ಗಕ್ಕೆ ಕಾರು ಚಲಾಯಿಸಿಕೊಂಡು ಬರುತ್ತಿದ್ದ ವ್ಯಕ್ತಿಯನ್ನು ಬಿಕ್ಕನಹಳ್ಳಿ ಬಳಿ ಶಿವಮೊಗ್ಗ ಗ್ರಾಮಾಂತರ ಪೊಲೀಸರು ತಡೆದು ತಪಾಸಣೆಗೆ ಒಳಪಡಿಸಿದಾಗ ಇವರು ಮದ್ಯ ಸೇವಿಸಿ ಚಾಲನೆ ಮಾಡುವುದು ದೃಢ ಪಟ್ಟಿತ್ತು. ಈ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಲಯವು ಕುಡಿದು ವಾಹನ ಚಲಾಯಿಸಿದ ಕಾರಣಕ್ಕೆ 10 ಸಾವಿರ ರು.ದಂಡ ಹಾಗೂ ಅಡ್ಡಾದಿಡ್ಡಿ ವಾಹನ ಚಲಾಯಿಸಿದ ಕಾರಣಕ್ಕೆ 2 ಸಾವಿರ ರು.ದಂಡ ವಿಧಿಸಿ ತೀರ್ಪು ನೀಡಿದೆ.