ಗುರು ರಾಘವೇಂದ್ರ ಬ್ಯಾಂಕ್ ವಂಚನೆ: ಕೊನೆಗೂ ಅಧ್ಯಕ್ಷ, 7 ನಿರ್ದೇಶಕರ ಬಂಧನ
ಹೊರ ರಾಜ್ಯಗಳಲ್ಲಿ ತಲೆ ಮರೆಸಿಕೊಂಡಿದ್ದ ಅಧ್ಯಕ್ಷ, ಆತನ ಪುತ್ರ| ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ನಲ್ಲಿ 1400 ಕೋಟಿ ಆರೋಪ| ಬ್ಯಾಂಕಿನ ಅಧ್ಯಕ್ಷ ರಾಮಕೃಷ್ಣ, ಪುತ್ರ ವೇಣುಗೋಪಾಲ್ ಸೇರಿದಂತೆ ಕೆಲವರು ಪ್ರಮುಖ ನಿರ್ದೇಶಕರ ಪತ್ತೆಗೆ ಹುಡುಕಾಟ ನಡೆಸಿತ್ತು|
ಬೆಂಗಳೂರು(ಅ.13): ಬಹುಕೋಟಿ ವಂಚನೆ ಆರೋಪ ಹೊತ್ತು ಕಳೆದ ನಾಲ್ಕೈದು ತಿಂಗಳಿಂದ ರಾಜ್ಯ ಹೊರ ರಾಜ್ಯಗಳಲ್ಲಿ ತಲೆಮರೆಸಿಕೊಂಡಿದ್ದ ಬಸವನಗುಡಿಯ ಶ್ರೀ ಗುರು ರಾಘವೇಂದ್ರ ಬ್ಯಾಂಕ್‌ನ ಅಧ್ಯಕ್ಷ, ಆತನ ಪುತ್ರ ಹಾಗೂ ಏಳು ನಿರ್ದೇಶಕರು ಕೊನೆಗೂ ಸಿಐಡಿ ಬಲೆಗೆ ಸೋಮವಾರ ಬಿದ್ದಿದ್ದಾರೆ.
ಬ್ಯಾಂಕ್‌ನ ಅಧ್ಯಕ್ಷ ಕೆ.ರಾಮಕೃಷ್ಣ, ಅವರ ಪುತ್ರ ಮತ್ತು ನಿರ್ದೇಶಕ ಕೆ.ಆರ್.ವೇಣುಗೋಪಾಲ್ ಹಾಗೂ ಇತರೆ ನಿರ್ದೇಶಕರು ಬಂಧಿತರು. ಬಹುಕೋಟಿ ವಂಚನೆ ಕೃತ್ಯ ಬೆಳಕಿಗೆ ಬಂದ ನಂತರ ಬಂಧನ ಭೀತಿಯಿಂದ ತಮಿಳುನಾಡು, ಆಂಧ್ರಪ್ರದೇಶ, ಕೇರಳ ಸೇರಿದಂತೆ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ರಾಮಕೃಷ್ಣ ಹಾಗೂ ಆತನ ಮಗ ವೇಣುಗೋಪಾಲ್ ತಲೆಮರೆಸಿಕೊಂಡಿದ್ದರು. ಅಲ್ಲದೆ, ಅಪ್ಪ-ಮಗನ ಬಗ್ಗೆ ಮಾಹಿತಿ ನೀಡಿದರೆ ಬಹುಮಾನ ನೀಡುವುದಾಗಿ ಸಹ ಸಾರ್ವಜನಿಕರಿಗೆ ಸಿಐಡಿ ಘೋಷಿಸಿತ್ತು.
ಗುರು ರಾಘವೇಂದ್ರ ಬ್ಯಾಂಕ್ ವಂಚನೆ ಕೇಸ್: ಆರೋಪಿಗಳ ಸುಳಿವು ನೀಡಿದರೆ ಬಹುಮಾನ
ಬ್ಯಾಂಕ್‌ಗೆ ಸುಳ್ಳು ದಾಖಲೆ ಸೃಷ್ಟಿಸಿ ಸಾಲ ಮಂಜೂರು ಮಾಡಿಕೊಂಡು ರಾಮಕೃಷ್ಣ ಕೋಟ್ಯಂತರ ಅಕ್ರಮ ಎಸಗಿದ್ದಾರೆ. ಹೀಗೆ ಸಂಪಾದಿಸಿದ ಹಣದಲ್ಲಿ ತಮ್ಮ ಪುತ್ರ ವೇಣುಗೋಪಾಲ್ ಹಾಗೂ ಕುಟುಂಬದ ಸದಸ್ಯರ ಹೆಸರಿನಲ್ಲಿ ಅಪಾರ ಮೌಲ್ಯದ ಆಸ್ತಿ ಖರೀದಿಸಿದ್ದಾರೆ ಎಂಬ ಆಪಾದನೆ ಬಂದಿದೆ.
ಕೆಲ ತಿಂಗಳ ಹಿಂದೆ ಬಸವನಗುಡಿಯ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ನಲ್ಲಿ 1400 ಕೋಟಿ ಆರೋಪ ಕೇಳಿ ಬಂದಿದೆ. ಈ ಆರೋಪಕ್ಕೆ ತುತ್ತಾಗಿದ್ದ ಬ್ಯಾಂಕ್‌ನ ನಿವೃತ್ತ ಸಿಇಓ ವಾಸುದೇವ ಮಯ್ಯ ಅವರು, ಕಳೆದ ಜುಲೈನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಈ ಬಗ್ಗೆ ತನಿಖೆ ಆರಂಭಿಸಿದ ಸಿಐಡಿ, ಅವ್ಯವಹಾರದ ಬಯಲಾದ ದಿನದಿಂದಲೂ ನಾಪತ್ತೆಯಾಗಿದ್ದ ಬ್ಯಾಂಕಿನ ಅಧ್ಯಕ್ಷ ರಾಮಕೃಷ್ಣ, ಪುತ್ರ ವೇಣುಗೋಪಾಲ್ ಸೇರಿದಂತೆ ಕೆಲವರು ಪ್ರಮುಖ ನಿರ್ದೇಶಕರ ಪತ್ತೆಗೆ ಹುಡುಕಾಟ ನಡೆಸಿತ್ತು.