ಶಿವಮೊಗ್ಗ [ಫೆ.29]:  ಕಳೆದೊಂದು ತಿಂಗಳಿಂದ ಏರುಮುಖದಲ್ಲಿ ಸಾಗುತ್ತಿರುವ ಅಡಕೆ ಧಾರಣೆ ಶುಕ್ರವಾರ 3 ವರ್ಷಗಳ ಬಳಿಕ ಇನ್ನೊಂದು ದಾಖಲೆ ಬರೆದಿದೆ. ಅಡಕೆ ವೆರೈಟಿಗಳಲ್ಲಿ ಒಂದಾದ ರಾಶಿಇಡಿ ಅಡಕೆ ಕ್ವಿಂಟಲ್ ಒಂದಕ್ಕೆ ಶಿವಮೊಗ್ಗದಲ್ಲಿ 40 ಸಾವಿರ ರು. ದಾಖಲಾಗಿದೆ. 

ಕಳೆದ ಎರಡು ಮೂರು ವರ್ಷಗಳಿಂದ 30 - 35  ಸಾವಿರ ರು.ಗಳ ಆಚೀಚೆಯೇ ಇದ್ದ ಅಡಕೆ ಧಾರಣೆ ಕಳೆದೊಂದು ತಿಂಗಳಿಂದ ಏರುಮುಖದಲ್ಲಿ ಸಾಗಿತ್ತು. ಕಳೆದ 10 ದಿನಗಳಿಂದ 38 ಸಾವಿರ ರು.ಗಳಲ್ಲಿ ಸ್ಥಿರವಾಗಿದ್ದ ಅಡಕೆ ಶುಕ್ರವಾರ ಕ್ವಿಂಟಲ್‌ಗೆ 40 ಸಾವಿರ ರು.ಗಳಿಗೆ ಏರಿಕೆಯಾಗಿದೆ. ಶುಕ್ರವಾರ ಶಿವಮೊಗ್ಗ ಮಾರುಕಟ್ಟೆಯಲ್ಲಿ ಸರಕು ಕ್ವಿಂ.ಗೆ 48,009 ರಿಂದ 63,900,  ಬೆಟ್ಟೆ 38,809 ರಿಂದ 40,600, ರಾಶಿಇಡಿ 35009 ರಿಂದ 40,000 ರು.ಗಳಿಗೆ ಮಾರಾಟವಾಗಿದೆ.

2014 ರಲ್ಲಿ ಅಡಕೆ ಧಾರಣೆ ಇದೇ ರೀತಿ ಏರಿಕೆಯಾಗುತ್ತಾ ಹೋಗಿ ಪ್ರತಿ ಕ್ವಿಂಟಲ್‌ಗೆ  ಲಕ್ಷ ರು. ಮುಟ್ಟಿತ್ತು. ಬಳಿಕ ಇಳಿಕೆಯ ಹಾದಿಯಲ್ಲಿ ಜಾರಿ 40 ಸಾವಿರಕ್ಕೆ ಬಂದಿತ್ತು. ನಂತರ ಇನ್ನೂ ಇಳಿಯಲಾರಂಭಿಸಿದ್ದು, 2017 ರಲ್ಲಿ ಒಮ್ಮೆ ರಾಶಿಇಡಿ 53 ಸಾವಿರ ರು.ಗಳಿಗೆ ಬಿಕರಿಯಾಗಿತ್ತು.

ಫಸಲಿಲ್ಲದೆ ಕಂಗಾಲಾಗಿರುವ ಅಡಿಕೆ ಬೆಳೆಗಾರರಿಗೆ ಮತ್ತೊಂದು ಶಾಕ್..!

ನಂತರ ಇಳಿದ ಅಡಕೆ ಧಾರಣೆ ಏರಿಕೆಯಾಗಿರಲೇ ಇಲ್ಲ. ಕನಿಷ್ಟ 35 ಸಾವಿರವಾದರೂ ಸಿಗಲಿ ಎನ್ನುತ್ತಿದ್ದ ರೈತರಿಗೆ ನಿರಾಶೆ ಎಂಬಂತೆ 32-33 ಸಾವಿರ ರು. ದಾಟಲೇ ಇಲ್ಲ. ಈ ವರ್ಷ ಅಡಕೆ ಧಾರಣೆ ಚೇತರಿಕೆಯ ಹಾದಿಯಲ್ಲಿರುವುದು ರೈತ ಸಮುದಾಯಲ್ಲಿ ಖುಷಿ ತರಿಸಿದೆ. ಆದರೆ ಬಹುತೇಕ ರೈತರಲ್ಲಿ ಈ ಬಾರಿ ಅಡಕೆ ಇಲ್ಲ. ಕೊಳೆ ರೋಗದಿಂದ ತೀವ್ರ ಉತ್ಪಾದನೆಯಲ್ಲಿ ಕೊರತೆ ಎದುರಿಸಿದ ಅಡಕೆ ಬೆಳೆಗಾರರಿಗೆ ಈಗ ಧಾರಣೆ ಇದ್ದರೂ ಅದರ ಲಾಭ ಸಿಗದಂತಾಗಿದೆ.

ಅದರಲ್ಲಿಯೂ ಮುಖ್ಯವಾಗಿ ಮಲೆನಾಡಿನ ರೈತರಿಗೆ ಉತ್ಪಾದನೆಯ ಕೊರತೆ ಕಾಣಿಸಿದೆ. ಅಡಕೆ ದಾಸ್ತಾನು ಕಡಿಮೆ ಇರುವುದು, ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿರುವುದು ಧಾರಣೆ ಹೆಚ್ಚಳಕ್ಕೆ ಕಾರಣ ಎನ್ನಲಾಗಿದೆ. ಈ ಧಾರಣೆ ಇನ್ನೂ ಸ್ವಲ್ಪ ಏರಿಕೆ ಕಾಣಬಹದು ಎನ್ನಲಾಗಿದ್ದು, ಏಪ್ರಿಲ್, ಮೇ ವರೆಗೆ ಇದಕ್ಕೆ ಕಾಯಬೇಕಾಗಬಹುದು.