ಅಡಕೆ ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ 10 ಕೋಟಿ ರು. ಅನುದಾನ
ಅಡಕೆ ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ 10 ಕೋಟಿ ರು. ಅನುದಾನ ಸೇರಿ ಹಲವು ಉದ್ದೇಶಕ್ಕೆ ಈ ಹಣವನ್ನು ವೆಚ್ಚ ಮಾಡಲಾಗುವುದು ಎಂದರಲ್ಲದೆ, ಶೀಘ್ರದಲ್ಲಿಯೇ ಈ ಅನುದಾನ ಬಿಡುಗಡೆ ನಿರೀಕ್ಷೆ ಇದೆ ಎಂದು ಆರಗ ಜ್ಞಾನೇಂದ್ರ ಹೇಳಿದರು
ಶಿವಮೊಗ್ಗ [ಫೆ.09]: ಅಡಕೆ ಬೆಳೆಗಾರರ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಸರ್ಕಾರ ಅಡಕೆ ಟಾಸ್ಕ್‌ಫೋರ್ಸ್ ಸ್ಥಾಪಿಸಿದ್ದು, ತಮ್ಮನ್ನು ಇದಕ್ಕೆ ಅಧ್ಯಕ್ಷರನ್ನಾಗಿ ಮಾಡಿದೆ. ತಾವು ಅಡಕೆ ಬೆಳೆಗಾರರ ಸಮಸ್ಯೆ ಬಗೆಹರಿಸುವ ದೃಷ್ಟಿಯಿಂದ ಸರ್ಕಾರದೊಂದಿಗೆ ಚರ್ಚಿಸಿದ್ದು, ಟಾಸ್ಕ್‌ಫೋರ್ಸ್‌ಗೆ 10 ಕೋಟಿ ರು. ಅನುದಾನಕ್ಕೆ ಬೇಡಿಕೆ ಇಡಲಾಗಿದೆ ಎಂದು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಡಕೆ ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ 10 ಕೋಟಿ ರು. ಅನುದಾನ ಸೇರಿ ಹಲವು ಉದ್ದೇಶಕ್ಕೆ ಈ ಹಣವನ್ನು ವೆಚ್ಚ ಮಾಡಲಾಗುವುದು ಎಂದರಲ್ಲದೆ, ಶೀಘ್ರದಲ್ಲಿಯೇ ಈ ಅನುದಾನ ಬಿಡುಗಡೆ ನಿರೀಕ್ಷೆ ಇದೆ ಎಂದರು.
ಕಳೆದ ಲೋಕಸಭಾ ಚುನಾವಣೆಗೂ ಮೊದಲು ತೀರ್ಥಹಳ್ಳಿಯಲ್ಲಿ ನಡೆದ ಅಡಕೆ ಬೆಳೆಗಾರರ ಸಮಾವೇಶದಲ್ಲಿ ಆಗಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಶಿವಮೊಗ್ಗದಲ್ಲಿ ಅಡಕೆ ಸಂಶೋಧನಾ ಕೇಂದ್ರ ಸ್ಥಾಪನೆಗೆ 500 ಕೋಟಿ ರು. ನೀಡುವುದಾಗಿ ಭರವಸೆ ನೀಡಿದ್ದರು. ಈ ಕುರಿತು ಚರ್ಚೆ ನಡೆಯುತ್ತಿದೆ ಎಂದರು.
ರಾಜ್ಯ ರಾಜಕೀಯದಲ್ಲಿ ಅನಿವಾರ್ಯ ಪ್ರಸಂಗಗಳು ಎದುರಾಗುತ್ತಿವೆ : ಬಿಜೆಪಿ ಶಾಸಕ
ಹಿಂದಿನ ಸರ್ಕಾರ ಅಡಕೆ ಆರೋಗ್ಯಕ್ಕೆ ಹಾನಿಕಾರಕ ಎಂದು ಸುಪ್ರೀಂಕೋರ್ಟ್‌ನಲ್ಲಿ ಅಫಿಡವಿಟ್ ಸಲ್ಲಿಕೆ ಮಾಡಿದ್ದರಿಂದ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ವಿಚಾರಣೆಗೆ ಬರುವ ಸಾಧ್ಯತೆಯಿದೆ. ಅಲ್ಲದೆ ಅಡಕೆ ಬೆಳೆಗಾರರು ಇನ್ನೂ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದರು.
ಬೆಳೆಗಾರರ ಒತ್ತಾಯದ ಮೇರೆಗೆ ಕೇಂದ್ರ ಸರ್ಕಾರ ವಿದೇಶದಿಂದ ಆಮದಾಗುತ್ತಿದ್ದ ಅಡಕೆಗೆ ಸುಂಕ ಹೆಚ್ಚಳ ಮಾಡಿದೆ. ಇದರಿಂದಾಗಿ ವಿದೇಶದಿಂದ ಆಮದಾಗುತ್ತಿದ್ದ ಅಡಕೆ ಪ್ರಮಾಣ ಕಡಿಮೆಯಾಗಿದೆ. ಸರ್ಕಾರ ಬೆಳೆಗಾರರ ರಕ್ಷಣೆಗೆ ಬದ್ಧವಾಗಿದೆ ಎಂದು ಹೇಳಿದರು.
ಅಡಕೆ ಬೆಳೆಗೆ ಹಲವಾರು ರೋಗ ಬಾಧಿಸುತ್ತಿದೆ. ಇದರ ಜೊತೆಗೆ ಇದೀಗ ಅಡಕೆ ಹಿಂಗಾರ ತಿನ್ನುವ ಹೊಸ ರೋಗ ಅಡಕೆ ಬೆಳೆಗಾರರನ್ನು ಇನ್ನಷ್ಟುಇಕ್ಕಟ್ಟಿಗೆ ಸಿಲುಕಿಸಿದೆ. ರೋಗದಿಂದಾಗಿ ಅಡಕೆ ಬೆಳೆ ಶೇ. 25 ರಷ್ಟುಕಡಿಮೆಯಾಗಿದೆ. ಹೀಗಾಗಿ ಶೇ.75ರಷ್ಟುರಿಯಾಯಿತಿ ದರದಲ್ಲಿ ಬೆಳೆಗಾರರಿಗೆ ಔಷಧ ನೀಡುವಂತೆ ಒತ್ತಡ ಹೇರಲಾಗಿದೆ ಎಂದು ತಿಳಿಸಿದರು.
ಮಲೆನಾಡು ಭಾಗದಲ್ಲಿ ಹಳ್ಳಗಳಿಗೆ ಕಾಲುಸಂಕ ಹಾಗೂ ಕಿರು ಸೇತುವೆ ನಿರ್ಮಾಣ ಸಂಭಂದ ಸರ್ಕಾರದೊಂದಿಗೆ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದರು. ಗೋಷ್ಠಿಯಲ್ಲಿ ಮಾಮ್‌ಕೋಸ್ ಉಪಾಧ್ಯಕ್ಷ ಯಡಗೆರೆ ಸುಬ್ರಹ್ಮಣ್ಯ ಮತ್ತಿತರರು ಹಾಜರಿದ್ದರು.