Asianet Suvarna News Asianet Suvarna News

New Technology in Agriculture: ಮಲೆನಾಡಲ್ಲಿ ಶುರುವಾಯ್ತು ಅಡಕೆ ಮಿಲ್‌ಗಳ ಸದ್ದು..!

*    ಅಕ್ಕಿ ಮಿಲ್‌ಗಳು ಅವನತಿ ಹಾದಿ ಎಫೆಕ್ಟ್‌ 
*    ಕೂಲಿಗಳ ಕೊರತೆಯಿಂದ ಯಂತ್ರಗಳಿಗೆ ಮೊರೆಹೋದ ರೈತರು
*    ಈ ವ್ಯಾಪಾರವನ್ನು ಇನ್ನಷ್ಟು ದೊಡ್ಡದಾಗಿಸಿಕೊಂಡಿರುವ ಮಾದರಿಯೇ ಅಡಕೆ ಮಿಲ್
 

Areca Nut Mills Starts in Malenadu Region in Karnataka grg
Author
Bengaluru, First Published Jan 17, 2022, 8:13 AM IST

ಗೋಪಾಲ್ ಯಡಗೆರೆ

ಶಿವಮೊಗ್ಗ(ಜ.17):  ಒಂದು ಕಾಲದಲ್ಲಿ ಮಲೆನಾಡು(Malenadu), ಅರೆಮಲೆನಾಡು ಸೇರಿದಂತೆ ಭತ್ತ ಬೆಳೆಯುತ್ತಿದ್ದ ಪ್ರದೇಶಗಳಲ್ಲಿ ಅಕ್ಕಿ ಮಿಲ್‌ಗಳ(Rice Mill) ಹವಾ ಜೋರಾಗಿಯೇ ಇತ್ತು. ಭಾರೀ ಶ್ರೀಮಂತರು ಮಾತ್ರ ನಡೆಸುತ್ತಿದ್ದ ಅಕ್ಕಿ ಮಿಲ್ ಅಥವಾ ಭತ್ತದ ಮಿಲ್‌ಗಳು ಕಣ್ಮರೆಯಾಗುತ್ತಿವೆ. ಈ ಸ್ಥಾನದಲ್ಲಿ ಇದೀಗ ಅಡಕೆ ಮಿಲ್‌ಗಳು(Areca Nut Mill) ಶುರುವಾಗಿದ್ದು, ಮಲೆನಾಡಿನಲ್ಲಿ ಅಡಕೆ ಬೆಳೆ ವ್ಯಾಪಿಸುತ್ತಿರುವ ಸ್ಪಷ್ಟ ಸಂಕೇತವಾಗಿ ಇದು ಗೋಚರಿಸಲಾರಂಭಿಸಿದೆ.

Areca Nut Mills Starts in Malenadu Region in Karnataka grg

ಮಲೆನಾಡಿನ ಭತ್ತದ(Paddy) ಗದ್ದೆಗಳು ನಿಧಾನವಾಗಿ ಅಡಕೆ ತೋಟವಾಗಿ ಮಾರ್ಪಾಡಾಗುತ್ತಿವೆ. ಕೆಲವು ಗ್ರಾಮಗಳಲ್ಲಿ ಭತ್ತದ ಗದ್ದೆಗಳು ನೋಡಲು ಸಹ ಸಿಗಲಾರದಂತಹ ಸ್ಥಿತಿ ನಿರ್ಮಾಣವಾಗಿದೆ. ಜಲಾಶಯದ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಇದೀಗ ಸಂಪೂರ್ಣವಾಗಿ ಅಡಕೆ ತೋಟಗಳು ವ್ಯಾಪಿಸಿದೆ. ಈಗ್ಗೆ ಕೆಲವು ವರ್ಷಗಳಿಂದ ಅಡಕೆ ಸಂಸ್ಕರಣೆಗೆ ಕೂಲಿಯಾಳುಗಳು ಕೊರತೆ ಎದುರಾಗುತ್ತಿದ್ದು, ಬೆಳೆಗಾರರು(Growers) ಸಮಸ್ಯೆಗೆ ಸಿಲುಕಿದ್ದರು. ಸರಿಯಾದ ವೇಳೆಯಲ್ಲಿ ಸಂಸ್ಕರಣೆಯಾಗದೇ ಆದಾಯದಲ್ಲಿ ಖೋತಾ ಆಗುತ್ತಿತ್ತು. 

ಕಳೆದ ದಶಕದಿಂದೀಚೆ ಅಡಕೆ ತೋಟಗಳಲ್ಲಿ ಹೊಸ ಹೊಸ ಸಂಶೋಧನೆಗಳು ನಡೆದು ರೈತರ(Farmers) ಕೆಲಸವನ್ನು ಹಗುರಗೊಳಿಸತೊಡಗಿತು. ಅಡಕೆ ಸುಲಿಯಲು ಯಂತ್ರ, ಕೊನೆ ತೆಗೆಯಲು ಹಗುರವಾದ ಫೈಬರ್ ದೋಟಿ, ಬೆಟ್ಟೆ ಸುಲಿಯಲು ಕೂಡ ಯಂತ್ರ, ಗೊನೆಯಿಂದ ಬಿಡಿಸಲು ಯಂತ್ರ.. ಹೀಗೆ ಹಲವು ಸಂಶೋಧನೆಗಳು ಇಲ್ಲಿ ನಡೆದಿವೆ. ಈ ಎಲ್ಲ ಸಂಶೋಧನೆಗಳ ನಡುವೆಯೂ ಕೂಲಿಯಾಳುಗಳ  ಕೊರತೆ ಎದುರಾದಾಗ ಅಡಕೆ ಸುಲಿಯುವ ಯಂತ್ರಗಳು ಬಾಡಿಗೆ ರೂಪದಲ್ಲಿ ರೈತರ ಮನೆ ಬಾಗಿಲಿಗೆ ಬರತೊಡಗಿತ್ತು.

Chikkamagaluru : ಮಲೆನಾಡಿನಲ್ಲಿ ಮುಗಿದಿಲ್ಲ ಮಳೆಗಾಲ, ಅಡಿಕೆ ಒಣಗಿಸಲು ಇದೆಂಥಾ ಐಡಿಯಾ ನೋಡಿ..!

ಕೆಲವರು ತಮ್ಮ ವಾಹನದಲ್ಲಿ ಅಡಕೆ ಸುಲಿಯುವ ಯಂತ್ರಗಳನ್ನು ಇಟ್ಟುಕೊಂಡು ಮನೆ ಮನೆಗೆ ತೆರಳಿ ಗಂಟೆಗಳ ಲೆಕ್ಕದಲ್ಲಿ ಅಲ್ಲಿಯೇ ಅಡಕೆ ಸುಲಿದುಕೊಡತೊಡಗಿದರು. ಇದು ನಿಧಾನವಾಗಿ ರೂಪಾಂತರವಾಗಿ ತಮ್ಮ ವ್ಯಾಪಾರಿ ಸ್ಥಳದಲ್ಲಿ ಒಂದು ಅಥವಾ ಎರಡು ಅಡಕೆ ಸುಲಿಯುವ ಯಂತ್ರಗಳನ್ನು ಇಟ್ಟುಕೊಂಡು ಮಿಲ್ ರೂಪದಲ್ಲಿ ನಡೆಸತೊಡಗಿದರು. ಸಣ್ಣಪುಟ್ಟ ಅಡಕೆ ಬೆಳೆಗಾರರು ಇಲ್ಲಿಗೆ ತಮ್ಮ ಹಸಿ ಅಡಕೆ ತಂದು ಸುಲಿದುಕೊಂಡು ಹೋಗುತ್ತಿದ್ದರು.

ಅಡಕೆ ಮಿಲ್: 

ಈ ವ್ಯಾಪಾರವನ್ನು(Business) ಇನ್ನಷ್ಟು ದೊಡ್ಡದಾಗಿಸಿಕೊಂಡಿರುವ ಮಾದರಿಯೇ ಅಡಕೆ ಮಿಲ್. ಶಿವಮೊಗದಿಂದ(Shivamogga) ಸಾಗರಕ್ಕೆ(sagara) ಹೋಗುವಾಗ ತುಪ್ಪೂರು ಎಂಬ ಗ್ರಾಮದಲ್ಲಿ ಹೆದ್ದಾರಿಯ ಪಕ್ಕದಲ್ಲಿಯೇ ಈ ರೀತಿಯ ಮಿಲ್ ಒಂದನ್ನು ಮೂರು ತಿಂಗಳಿಂದ ಬೆಳೆಗಾರರೊಬ್ಬರು ಸ್ಥಾಪಿಸಿದ್ದಾರೆ. ಚನ್ನಗಿರಿ ಸೇರಿದಂತೆ ಒಂದೆರಡು ಕಡೆಗಳಲ್ಲಿ ಈ ರೀತಿಯ ಮಿಲ್ ಗಳಿವೆ. 

ಇಲ್ಲಿ ಇನ್ನಷ್ಟು ಹೆಚ್ಚು ತಾಂತ್ರಿಕತೆಯನ್ನು(New Technology) ಅಳವಡಿಸಲಾಗಿದೆ. 40/120 ಅಡಿ ಉದ್ದದ ಶೆಡ್‌ನಲ್ಲಿ ಈ ಮಿಲ್ ಸ್ಥಾಪಿಸಲಾಗಿದೆ. ಇಲ್ಲಿಗೆ ಹಸಿ ಅಡಕೆಯನ್ನು ತಂದು ತೂಕ ಮಾಡಿ ಭತ್ತದ ಮಿಲ್‌ನಲ್ಲಿ ಹಾಕುವ ರೀತಿಯಲ್ಲಿಯೇ ನೆಲದಲ್ಲಿನ ಗುಂಡಿಗೆ ಹಾಕಬೇಕು. ಅಲ್ಲಿಂದ ಕನ್ವೇರ್ ಬೆಲ್ಟ್‌ ಮೂಲಕ ಮೇಲಕ್ಕೆ ಹೋಗಿ ನೀರು ತುಂಬಿದ ಡ್ರಮ್‌ಗೆ ಬೀಳುತ್ತದೆ. ಇದಕ್ಕೆ ಮುನ್ನ ಅಡಕೆ ರಾಶಿಯಲ್ಲಿರುವ ಕಸ, ಯೋಗ್ಯವಲ್ಲದ ಚಿಕ್ಕ ಮಾಣಿ ಅಡಕೆಯು ಸೋಸಿ ಕೆಳಗೆ ಬೀಳುತ್ತದೆ. ಅನಂತರ ಡ್ರಮ್‌ನಲ್ಲಿ ಹಸಿ ಅಡಕೆ ಉದುರಿಗೆ ಅಂಟಿರುವ ಮಣ್ಣು ಇತ್ಯಾದಿಗಳನ್ನು ಸ್ವಚ್ಛವಾಗಿ ತೊಳೆಯಲ್ಪಡುತ್ತದೆ. ಇದೇ ವೇಳೆ ಹಸಿ ಅಡಕೆ ಮುಳುಗಿದರೆ, ಗೋಟಡಕೆ ತೇಲುತ್ತದೆ. ಹೀಗೆ ತೇಲುವ ಗೋಟಡಕೆ ಮತ್ತೊಂದು ಕಡೆ ಹೋಗುತ್ತದೆ. ಸುಲಿಯಲು ಯೋಗ್ಯವಾದ ಹಸಿ ಅಡಕೆಯು ಇನ್ನೊಂದು ಕನ್ವೇರ್ ಬೆಲ್‌ಟ್ ಮೂಲಕ ಅಡಕೆ ಸುಲಿಯುವ ಯಂತ್ರದತ್ತ ಹೋಗುತ್ತದೆ. ಇಲ್ಲಿ ಮೂರು ವಿವಿಧ ಅಳತೆಯ ಅಡಕೆ ವರ್ಗೀಕರಣಗೊಂಡು ಯಂತ್ರಗಳತ್ತ ಹೋಗುತ್ತದೆ. ಈ ಮೂರು ಯಂತ್ರಗಳು(machines) ಅಡಕೆಯನ್ನು ಸುಲಿಯುತ್ತದೆ. ಬಳಿಕ ಅಡಕೆಯ ಮುಗುಟನ್ನು ಇನ್ನೊಂದು ಯಂತ್ರ ಸ್ವಚ್ಛಗೊಳಿಸುತ್ತದೆ. 

ಇತ್ತ ಪೂರ್ಣವಾಗಿ ಸುಲಿಯದೇ ಉಳಿದ ಅಡಕೆ ಪ್ರತ್ಯೇಕಗೊಂಡು ಬೀಳುತ್ತದೆ. ಹೀಗೆ ಬಿದ್ದ ಅಡಕೆಯನ್ನು ಇನ್ನೊಂದು ಯಂತ್ರಕ್ಕೆ ವರ್ಗಾಯಿಸಿ ಅಲ್ಲಿ ಸುಲಿಸಲ್ಪಡಲಾಗುತ್ತದೆ. ಅತ್ತ ಅಡಕೆ ಸಿಪ್ಪೆ ನೇರವಾಗಿ ಕೊಳವೆಯೊಂದರ ಮೂಲಕ ಮಿಲ್‌ನ ಹೊರಗೆ ಹೋಗಿಬೀಳುತ್ತದೆ. 

Areca Nut Mills Starts in Malenadu Region in Karnataka grg

ಈ ರೈತನ ಸಾಧನೆಗೆ ಗೂಗಲ್, ಫೇಸ್‌ಬುಕ್ ಸ್ಪೂರ್ತಿ..!

ಸುಮಾರು 50 ಲಕ್ಷ ರು. ವೆಚ್ಚದಲ್ಲಿ ಶಾಂತಪ್ಪ ಮತ್ತು ಅವರ ಪುತ್ರ ಪುನೀತ್ ಸ್ಥಾಪಿಸಿದ್ದಾರೆ. ಮೂರು ತಿಂಗಳ ಹಿಂದೆ ಸ್ಥಾಪಿಸಿದ್ದು, ನಿತ್ಯ ಸರಾಸರಿ 100 ಕ್ವಿಂಟಾಲ್ ಸುಲಿದ ಅಡಕೆಯನ್ನು ಇಲ್ಲಿ ಮಿಲ್ ಮಾಡುತ್ತಾರೆ. 4-5 ತಿಂಗಳ ಕಾಲ ಮಾತ್ರ ಈ ಮಿಲ್ ನಡೆಯುತ್ತದೆ. ಆದರೆ, ಈ ಯಂತ್ರದಿಂದಾಗಿ ಸುತ್ತಮುತ್ತಲಿನ ರೈತರು ನೆಮ್ಮದಿಯಾಗಿದ್ದಾರೆ. ತೋಟದಿಂದ ನೇರವಾಗಿ ಇಲ್ಲಿಗೆ ಹಸಿ ಅಡಕೆ ತಂದು ಮಿಲ್ ಮಾಡಿಸಿಕೊಂಡು ಹೋಗುತ್ತಾರೆ. ಪ್ರತಿ ಕ್ವಿಂಟಲ್ ಸುಲಿದ ಅಡಕೆಗೆ 750 ರು. ದರ ವಿಧಿಸಲಾಗುತ್ತದೆ. ಸೀಜನ್‌ನಲ್ಲಿ ದಿನದ 24 ಗಂಟೆಯೂ ಈ ಮಿಲ್ ನಡೆಯುತ್ತದೆ. ಪ್ರತಿ ಶಿಫ್ಟ್‌ನಲ್ಲಿ ತಲಾ ಕನಿಷ್ಠ 15 ಜನ ಇಲ್ಲಿ ಕೆಲಸ ಮಾಡುತ್ತಾರೆ.  ಒಟ್ಟಾರೆ ಮಲೆನಾಡು ಭತ್ತದಿಂದ ಅಡಕೆ ಕೃಷಿಗೆ(Agriculture) ಹೊರಳಿಕೊಳ್ಳುತ್ತಿರುವಂತೆಯೇ ರೈಸ್‌ಮಿಲ್ ಮುಚ್ಚಿ ಅಡಕೆ ಮಿಲ್‌ಗಳು ಕಾಣಿಸತೊಡಗಿದೆ.

ಅಡಕೆ ಸಂಸ್ಕರಣಾ ಘಟಕ

ಇನ್ನು ಕೆಲವು ಕಡೆ ಅಡಕೆ ಸಂಸ್ಕರಣಾ ಘಟಕಗಳು(Areca Nut Processing Plants) ಸ್ಥಾಪನೆಯಾಗಿದ್ದು, ಇಲ್ಲಿಗೆ ಹಸಿ ಅಡಕೆ ತಂದರೆ ಸುಲಿದು, ಬೇಯಿಸಿ, ಒಣಗಿಸಿ ಕೊಡಲಾಗುತ್ತದೆ. ಅಡಕೆ ಬೆಳೆಗಾರರಿಗೆ ಯಾವುದೇ ಕೆಲಸ ಇಲ್ಲ. ಆ ರೀತಿಯ ವ್ಯವಸ್ಥೆಗಳು ಆರಂಭವಾಗಿದೆ. ತಮ್ಮ ಅಡಕೆಯೇ ಬೇಡ, ಯಾವುದಾದರೂ ಆದೀತು ಎನ್ನುವವರಿಗೆ ಹಸಿ ಅಡಕೆ ತಂದಾಗ ಪ್ರತಿ 100 ಕ್ವಿಂಟಲ್ ಹಸಿ ಅಡಕೆಗೆ 11-12 ಕ್ವಿಂಟಲ್ ಒಣ ಅಡಕೆ (ರಾಶಿಇಡಿ ಮಾದರಿ)ಯನ್ನು ತಕ್ಷಣವೇ ಕೊಟ್ಟು ಕಳುಹಿಸುವ ಪದ್ಧತಿ ಕೂಡ ಇದೆ.
 

Follow Us:
Download App:
  • android
  • ios