ಕೋವಿಡ್‌ ಸಂದರ್ಭದಲ್ಲಿ ಪರಿಸರ ಸ್ನೇಹಿ ಹಾಗೂ ಗಿಡವಾಗಿ ಬೆಳೆಯುವಂತಹ ಮಾಸ್ಕ್‌ ತಯಾರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದಿರುವ ನಿತಿನ್‌ ವಾಸ್‌ ಪಕ್ಷಿಕೆರೆ ನೇತೃತ್ವದ ಪೇಪರ್‌ ಸೀಡ್‌ ಸಂಸ್ಥೆ  75ನೇ ಸ್ವಾತಂತ್ರೋತ್ಸವ ಸಂದರ್ಭ ಅಡಕೆ ಹಾಳೆಯಿಂದ ರಾಖಿ ತಯಾರಿ

ಮೂಲ್ಕಿ (ಆ,05): ಕೋವಿಡ್‌ ಸಂದರ್ಭದಲ್ಲಿ ಪರಿಸರ ಸ್ನೇಹಿ ಹಾಗೂ ಗಿಡವಾಗಿ ಬೆಳೆಯುವಂತಹ ಮಾಸ್ಕ್‌ ತಯಾರಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದಿರುವ ನಿತಿನ್‌ ವಾಸ್‌ ಪಕ್ಷಿಕೆರೆ ನೇತೃತ್ವದ ಪೇಪರ್‌ ಸೀಡ್‌ ಸಂಸ್ಥೆ 75ನೇ ಸ್ವಾತಂತ್ರೋತ್ಸವ ಸಂದರ್ಭ ಅಡಕೆ ಹಾಳೆಯಿಂದ ತಯಾರಿಸಿ ಬಳಸಿದ ಬಳಿಕ ಗಿಡವಾಗಿ ಬೆಳೆಯುವಂತಹ ತ್ರಿವರ್ಣ ಬ್ಯಾಡ್ಜ್‌ ಗಳನ್ನು ಹಾಗೂ ರಾಖಿಯನ್ನು ಬಿಡುಗಡೆ ಮಾಡಿದೆ.

ಬುಡಕಟ್ಟು ಜನಾಂಗದ ಕಾಲನಿಯವರು ಈ ಉತ್ಪನ್ನಗಳನ್ನು ಗುಡಿ ಕೈಗಾರಿಕೆಯಾಗಿ ತಯಾರಿಸಿರುವುದು ವಿಶೇಷ.

ಹಸುವಿನ ಸಗಣಿಯ 'ಕೊರೋನಾ ರಾಖಿ' ಇದು ಒಳ್ಳೆಯದು!

ಕಳೆದ ಬಾರಿ ಕಾಗದದಿಂದ ಬ್ಯಾಡ್ಜ್‌ ಗಳನ್ನು ತಯಾರಿಸಿದ್ದು, ಕಾಗದವು ಒದ್ದೆಯಾಗುವುದರಿಂದ ಈ ಬಾರಿ ಅಡಕೆ ಹಾಳೆಯಲ್ಲಿ ಬ್ಯಾಡ್ಜ್‌ ತಯಾರಿಸಿ ಬ್ಯಾಡ್ಜ್‌ನ ಒಳಗಡೆ ಗಿಡಗಳ ಬೀಜಗಳನ್ನು ಹಾಕಿ ತಯಾರಿಸಲಾಗಿದೆ. ಬ್ಯಾಡ್ಜ್‌ ಗಳನ್ನು ಬಳಿಸದ ಬಳಿಕ ನೆಲದಲ್ಲಿ ಹೊಂಡ ತೋಡಿ ಹಾಕಿದಲ್ಲಿ ತರಕಾರಿ ಹಾಗೂ ಹೂವುಗಳ ಗಿಡ ಬೆಳೆಯುತ್ತದೆ.

ಅಂಗಿಯಲ್ಲಿ ಸಿಕ್ಕಿಸಿಕೊಳ್ಳಲು ಒಂದು ಬದಿಯಲ್ಲಿ ಪಿನ್‌ ಹಾಕಿದ್ದು ಪ್ರತಿ ಬ್ಯಾಡ್ಜ್‌ ನ ಬೆಲೆ 10 ರು. ರಕ್ಷಾ ಬಂಧನ ಪ್ರಯುಕ್ತ ಅಡಕೆ ಹಾಳೆಯಿಂದ ರಾಖಿಗಳನ್ನು ನಿರ್ಮಿಸಲಾಗಿದ್ದು ಅದಕ್ಕೆ ಕಾಟನ್‌ ದಾರ ಅಳವಡಿಸಲಾಗಿದೆ. ರಾಖಿಯ ದರ 35 ರು. ಆಗಿದೆ. ಆನ್‌ಲೈನ್‌ ಖರೀದಿಗೆ ಅವಕಾಶವಿದೆ.

ನಿರಂತರ ಪ್ರಯೋಗ ಮಾಡುತ್ತಿರುವ ನಿತಿನ್‌ ವಾಸ್‌ ಈಗಾಗಲೇ ಗೆರಟೆಯಿಂದ ಆಭರಣ, ಹಾಗೂ ಗಿಡವಾಗಿ ಬೆಳೆಯುವಂತಹ ಮಾಸ್ಕ್‌, ರಾಖಿ ಸೇರಿದಂತೆ ಹಲವಾರು ವಸ್ತುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿ ಯಶಸ್ವಿಯಾಗಿದ್ದಾರೆ. ಈ ಬಾರಿ ಸುಮಾರು 500 ಬ್ಯಾಡ್ಜ್‌ ಹಾಗೂ 3500 ರಾಖಿಗಳನ್ನು ತಯಾರಿಸಿದ್ದು ಕೋವಿಡ್‌ನ ಮೂರನೇ ಅಲೆಯ ಆತಂಕದಲ್ಲಿ ಆನ್‌ಲೈನ್‌ ಮಾರುಕಟ್ಟೆಕಲ್ಪಿಸಲಾಗಿದೆ.

ಮಾಹಿತಿಗೆ: 8550048684.

ಈ ಉತ್ಪನ್ನಗಳಿಗೆ ದೂರದ ಮಹಾರಾಷ್ಟ್ರ, ರಾಜಸ್ಥಾನ, ದೆಹಲಿ, ಬೆಂಗಳೂರು ಮತ್ತಿತರ ಕಡೆಗಳಿಂದ ಬೇಡಿಕೆ ಬಂದಿದೆ. ಯಾವುದೇ ಯಂತ್ರವನ್ನು ಉಪಯೋಗಿಸದೆ ಕೈಯಲ್ಲಿ ತಯಾರಿಸಲಾಗಿದೆ. ಪಕ್ಷಿಕೆರೆ ಸಮೀಪದ ಬುಡಕಟ್ಟು ಜನಾಂಗದವರ ಕಾಲೋನಿಯಲ್ಲಿನ ನಿವಾಸಿಗಳು ತಯಾರಿಸಿದ್ದು ಇದರಿಂದ ಅವರಿಗೆ ಉದ್ಯೋಗವೂ ದೊರೆತಿದೆ.

-ನಿತಿನ್‌ ವಾಸ್‌, ಪರಿಸರ ಸ್ನೇಹಿ ಉದ್ಯಮಿ.