ಗದಗದ ಐತಿಹಾಸಿಕ ತಾಣ ಲಕ್ಕುಂಡಿಯಲ್ಲಿ ನಡೆಯುತ್ತಿರುವ ಪುರಾತತ್ವ ಉತ್ಖನನದ 12ನೇ ದಿನದಂದು ಅಡಿಕೆ ಆಕಾರದ ಶಿಲೆ ಪತ್ತೆಯಾಗಿದೆ. ಈವರೆಗೆ ಶಿವಲಿಂಗದ ಪೀಠ, ನಾಗರ ಕಲ್ಲುಗಳು ಸೇರಿದಂತೆ 40ಕ್ಕೂ ಹೆಚ್ಚು ಪ್ರಾಚ್ಯಾವಶೇಷಗಳು ದೊರೆತಿದ್ದು, ಚಾಲುಕ್ಯರ ಕಾಲದ ವೈಭವವನ್ನು ಅನಾವರಣಗೊಳಿಸುವ ನಿರೀಕ್ಷೆ ಹೆಚ್ಚಿಸಿದೆ.

ಗದಗ: ಐತಿಹಾಸಿಕ ತಾಣವಾದ ಲಕ್ಕುಂಡಿಯಲ್ಲಿ ಕೇಂದ್ರ ಪುರಾತತ್ವ ಇಲಾಖೆ ಹಾಗೂ ಇತಿಹಾಸ ತಜ್ಞರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಉತ್ಖನನ ಕಾರ್ಯ ಗುರುವಾರ 12ನೇ ದಿನಕ್ಕೆ ಕಾಲಿಟ್ಟಿದೆ. ಉತ್ಖನನ ಕಾರ್ಯ ಆರಂಭವಾಗ್ತಿದ್ದಂತೆ ಎ ಬ್ಲಾಕ್ ಗುಂಡಿಯಲ್ಲಿ ಅಡಿಕೆ ಆಕಾರದ ಶಿಲೆ ಪತ್ತೆಯಾಗಿದೆ. ಕಿರೀಟ ಅಥವಾ, ಶಿಲೆಯ ಮೇಲ್ಭಾಗದ ಭಗ್ನ ಅವಶೇಷದ ರೀತಿಯ ವಸ್ತು ಇದಾಗಿದ್ದು, ಕುತೂಹಲ ಮೂಡಿಸಿದೆ. ಇನ್ನು 11ನೇ ದಿನವಾದ ಬುಧವಾರ ಯಾವುದೇ ಅವಶೇಷಗಳು ಪತ್ತೆಯಾಗಿಲ್ಲ.

ಗ್ರಾಮದ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಅಂಗಳದ ಸುಮಾರು 10x10 ಚದರ ಮೀಟರ್ ವಿಸ್ತೀರ್ಣದಲ್ಲಿ ನಾಲ್ಕು ಬ್ಲಾಕ್‌ಗಳನ್ನು ಮಾಡಿಕೊಂಡು ಉತ್ಖನನ ನಡೆಸಲಾಗುತ್ತಿದೆ. ಸದ್ಯ ನಾಲ್ಕು ಬ್ಲಾಕ್‌ಗಳ ಮಧ್ಯದ ಎರಡು ಗೋಡೆಗಳನ್ನು ತೆರವುಗೊಳಿಸಲಾಗಿದ್ದು, ಉತ್ಖನನ ಕಾರ್ಯವು ಮತ್ತಷ್ಟು ತೀವ್ರಗೊಂಡಿದೆ. ನೆಲದಾಳದಲ್ಲಿರುವ ಪ್ರಾಚ್ಯಾವಶೇಷಗಳಿಗೆ ಹಾನಿಯಾಗದಂತೆ ಕೆಲಸ‌ ಮಾಡಲು ಕಾರ್ಮಿಕರಿಗೆ ಕಟ್ಟಿಗೆಯ ವಸ್ತುಗಳನ್ನು ನೀಡಲಾಗಿದ್ದು, ಅತ್ಯಂತ ಸೂಕ್ಷ್ಮವಾಗಿ ಮಣ್ಣು ತೆಗೆಯುವ ಕೆಲಸ ನಡೆಯುತ್ತಿದೆ.

40ಕ್ಕೂ ಹೆಚ್ಚು ಪ್ರಾಚ್ಯಾವಶೇಷಗಳು ಪತ್ತೆ

ಕಳೆದ 11 ದಿನಗಳಿಂದ ನಡೆದ ಕಾರ್ಯಾಚರಣೆಯಲ್ಲಿ ಸರಿಸುಮಾರು 40ಕ್ಕೂ ಹೆಚ್ಚು ಪ್ರಾಚ್ಯಾವಶೇಷಗಳು ಪತ್ತೆಯಾಗಿವೆ. ಅವುಗಳಲ್ಲಿ ಪ್ರಮುಖವಾಗಿ ​ಅಪರೂಪದ ಶಿವಲಿಂಗದ ಪೀಠಗಳು, ​ಕಲಾತ್ಮಕವಾಗಿ ಕೆತ್ತಲಾದ ನಾಗರ ಕಲ್ಲುಗಳು, ​ಪ್ರಾಚೀನ ಕಟ್ಟಡದ ಸ್ತಂಬಗಳು ಹಾಗೂ ಶಿಲ್ಪಕಲೆಯ ಭಾಗಗಳು, ಎಲುಬುಗಳು ಪ್ರಮುಖವಾಗಿವೆ.

​ತಜ್ಞರ ಭೇಟಿ: 

ಉತ್ಖನನ ನಡೆಯುತ್ತಿರುವ ಸ್ಥಳಕ್ಕೆ ಪ್ರತಿದಿನ ಪುರಾತತ್ವ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಇತಿಹಾಸ ತಜ್ಞರು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ಲಕ್ಕುಂಡಿಯ ಚಾಲುಕ್ಯರ ಕಾಲದ ವೈಭವವನ್ನು ಮರುಸೃಷ್ಟಿಸುವಲ್ಲಿ ಈ ಸಂಶೋಧನೆ ಪೂರಕವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.