ದಾವಣಗೆರೆ: ವಾಲ್ಮೀಕಿ ಮಠಕ್ಕೆ ಆಡಳಿತಾಧಿಕಾರಿ ನೇಮಕ ಮಾಡಿ, ಮಲ್ಲಿಕಾರ್ಜುನಪ್ಪ ಗುಮ್ಮನೂರು
ಈಗ ಗ್ರಾಮ, ಜಿಲ್ಲಾ, ತಾಲೂಕು ಪಂಚಾಯತ್ ಚುನಾವಣೆ ದೃಷ್ಟಿಯಿಂದ ಈಗ ಸಭೆ ಕರೆಯಲಾಗಿದೆ ಎಂದು ದೂರಿದ ಕೆ.ಎಂ. ಮಲ್ಲಿಕಾರ್ಜುನಪ್ಪ ಗುಮ್ಮನೂರು
ವರದಿ: ವರದರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ದಾವಣಗೆರೆ
ದಾವಣಗೆರೆ(ಅ.07): ರಾಜ್ಯ ಸರ್ಕಾರ ಮತ್ತು ವಿಪಕ್ಷಗಳು ಎಸ್ಟಿ ಮೀಸಲಾತಿ ವಿಚಾರದ ಬಗ್ಗೆ ಚರ್ಚಿಸುವ ಉದ್ದೇಶದಿಂದ ಅ. 7 ರಂದು ಸರ್ವ ಪಕ್ಷಗಳ ಸಭೆ ಕರೆದಿರುವುದು ಕೇವಲ ಕಣ್ಣೊರೆಸುವ ತಂತ್ರ ಅಂತ ನ್ಯಾಯವಾದಿ ಕೆ.ಎಂ. ಮಲ್ಲಿಕಾರ್ಜುನಪ್ಪ ಗುಮ್ಮನೂರು ತಿಳಿಸಿದರು. ನಿನ್ನೆ(ಗುರುವಾರ) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು , ಕಳೆದ ಮೂವತ್ತು ವರ್ಷಗಳಿಂದ ಮೀಸಲಾತಿಗೆ ಒತ್ತಾಯಿಸಿ ಹೋರಾಟ ಮಾಡಲಾಗುತ್ತಿದೆ. ಈಗ ಗ್ರಾಮ, ಜಿಲ್ಲಾ, ತಾಲೂಕು ಪಂಚಾಯತ್ ಚುನಾವಣೆ ದೃಷ್ಟಿಯಿಂದ ಈಗ ಸಭೆ ಕರೆಯಲಾಗಿದೆ ಎಂದು ದೂರಿದರು.
ಎಸ್ಟಿ ಜನಾಂಗಕ್ಕೆ ಶೇ. 7.5 ಮೀಸಲಾತಿ ಸಂವಿಧಾನಬದ್ಧವಾಗಿ ದೊರೆಯುವ ತನಕ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಪುರಿ ಸ್ವಾಮೀಜಿ ಸತ್ಯಾಗ್ರಹ ಮುಂದುವರೆ ಸಬೇಕು. ಮೀಸಲಾತಿಗೆ ರಾಷ್ಟ್ರಪತಿ ಅಂಗೀಕಾರ ಅದ ನಂತರವೇ ಮೀಸಲಾತಿ ದೊರೆತಂತಾಗುತ್ತದೆ. ಹಾಗಾಗಿ ಸ್ವಾಮೀಜಿ ಸತ್ಯಾಗ್ರಹ ಮುಂದುವರೆಸಬೇಕು. ಸರ್ಕಾರದ ಆದೇಶ ಆದ ತಕ್ಷಣ ಮೀಸಲಾತಿ ದೊರೆತಂತೆ ಆಗೊಲ್ಲ ಎಂದರು.
ಶಾಸಕ ರೇಣುಕಾಚಾರ್ಯರದ್ದು ಆಧಾರ ರಹಿತ ಆರೋಪ; ಎಂ.ಎಲ್.ಸುರೇಶ್
ಮಠಕ್ಕೆ ಆಡಳಿತಾಧಿಕಾರಿ ನೇಮಕ ಮಾಡಿ ಎಂದು ಒತ್ತಾಯಿಸಿದ ವಕೀಲ ಗುಮ್ಮನೂರು ಮಲ್ಲಿಕಾರ್ಜುನ ಸ್ವಾಮೀಜಿಯವರು ಕಳೆದ ಹಲವಾರು ತಿಂಗಳಿನಿಂದ ಮೀಸಲಾತಿಗೆ ಒತ್ತಾಯಿಸಿ ಬೆಂಗಳೂರಲ್ಲಿ 239 ದಿನಗಳಿಂದ ಸತ್ಯಾಗ್ರಹ ನಡೆಸುತ್ತಿರುವುದರಿಂದ ಮಠದಲ್ಲಿ ಆಡಳಿತ, ಶಿಕ್ಷಣ ವ್ಯವಸ್ಥೆಗೆ ಧಕ್ಕೆ ಆಗುತ್ತಿದೆ. ಹಾಗಾಗಿ ಸರ್ಕಾರ ಮಠಕ್ಕೆ ಆಡಳಿತಾಧಿಕಾರಿ ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.
ಪರಿಶಿಷ್ಟ ಪಂಗಡದ ಅಭಿವೃದ್ಧಿ ಗೆ ಮೀಸಲಿಟ್ಟ 15 ಕೋಟಿಯನ್ನು ವಾಲ್ಮೀಕಿ ಜಾತ್ರೆಗೆ ಬಳಕೆ ಮಾಡಿಕೊಂಡಿದ್ದಾರೆ. ಸ್ವಾಮೀಜಿ ಆಗಿರುವ ಕಾರಣಕ್ಕೆ ಮಠದ ಆಸ್ತಿಯನ್ನು ತಮ್ಮ ಹೆಸರಿಗೆ ಮಾಡಿಕೊಂಡಿ ರುವುದರ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಆದರೆ, ಈವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಮಠದಲ್ಲಿ ನಡೆದಿರುವ ಹಗರಣ ಮರೆ ಮಾಚುವ ಉದ್ದೇಶದಿಂದ ಸತ್ಯಾಗ್ರಹ ನಡೆಸುತ್ತಿದ್ದಾರೆ. ಮೀಸಲಾತಿ ಗಾಗಿಯೇ ಅಲ್ಲ ಎಂದು ತಿಳಿಸಿದರು.