ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಬಿಬಿಎಂಪಿ ಮೈದಾನಗಳಲ್ಲಿ ತಾತ್ಕಾಲಿಕ ಚಿಲ್ಲರೆ ಪಟಾಕಿ ಮಾರಾಟ ಮಳಿಗೆ ತೆರೆಯಲು ಆಸಕ್ತ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಲಾಗಿದೆ.
ಬೆಂಗಳೂರು (ಅ.16): ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಬಿಬಿಎಂಪಿ ಮೈದಾನಗಳಲ್ಲಿ ತಾತ್ಕಾಲಿಕ ಚಿಲ್ಲರೆ ಪಟಾಕಿ ಮಾರಾಟ ಮಳಿಗೆ ತೆರೆಯಲು ಆಸಕ್ತ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಸೇವಾ ಸಿಂಧು ಅಥವಾ ಆನ್‌ಲೈನ್ ಮುಖಾಂತರ ಬೆಂಗಳೂರು ಒನ್ ಕೇಂದ್ರಗಳಲ್ಲಿ ಅ.17ರಿಂದ 18ರವರೆಗೆ ಸಂಜೆ 5.30ರೊಳಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಪ್ರಕ್ರಿಯೆ ಶುಲ್ಕವಾಗಿ 5 ಸಾವಿರವನ್ನು ಆನ್‌ಲೈನ್‌ನಲ್ಲಿ ಪಾವತಿಸಬೇಕು. ‘ಡೆಪ್ಯೂಟಿ ಕಮಿಷನರ್ ಆಫ್ ಪೊಲೀಸ್, ಅಡ್ಮಿನಿಸ್ಪ್ರೇಷನ್ ಬೆಂಗಳೂರು ಸಿಟಿ’ ಹೆಸರಿನಲ್ಲಿ 25 ಸಾವಿರಕ್ಕೆ ಡಿ.ಡಿ. ಪಡೆದು, ಆ ಡಿಡಿ ಪ್ರತಿಯನ್ನು ಆನ್‌ಲೈನ್ ಪೋರ್ಟಲ್‌ನಲ್ಲಿ ಅಪ್ಲೋಡ್ ಮಾಡಬೇಕು. ‘ಡಿಜಿಪಿ ಮತ್ತು ಡಿಜಿ ಕರ್ನಾಟಕ ಫೈರ್ ಆ್ಯಂಡ್ ಎಮರ್ಜನ್ಸಿ ಸರ್ವಿಸಸ್ ಬೆಂಗಳೂರು’ ಹೆಸರಿನಲ್ಲಿ .5 ಸಾವಿರಕ್ಕೆ ಡಿ.ಡಿ. ಪಡೆದು ಪೋರ್ಟಲ್‌ನಲ್ಲಿ ಅಪ್ಲೋಡ್ ಮಾಡಬೇಕು. ಡಿಡಿಯಲ್ಲಿ ಅರ್ಜಿದಾರರ ಹೆಸರು ಹೊರತುಪಡಿಸಿ ಬೇರೆಯವರ ಹೆಸರಿದ್ದಲ್ಲಿ ಅಂತಹ ಡಿಡಿ ಪರಿಗಣಿಸುವುದಿಲ್ಲ.
ಡಿ.ಡಿ. ಸೇರಿದಂತೆ ಅಗತ್ಯ ದಾಖಲೆಗಳನ್ನು ಅ.18ರ ಸಂಜೆ 7.30ರೊಳಗೆ ಖುದ್ದು ಕಚೇರಿಗೆ ಸಲ್ಲಿಸಬೇಕು. ಅನುಮತಿ ಬೇಕಾದ ಮೈದಾನಗಳ ಮಾಹಿತಿಯನ್ನು ನಗರ ಪೊಲೀಸ್ ಆಯುಕ್ತರ ಕಚೇರಿ ಪ್ರಕಟಣಾ ಫಲಕ ಅಥವಾ ಪೊಲೀಸ್ ಆಯುಕ್ತರ ಕಚೇರಿಯ ಅಂತರ್ಜಾಲದಲ್ಲಿ ಪಡೆಯಬಹುದು. ಅ.20ರಂದು ಬೆಳಗ್ಗೆ 11ಕ್ಕೆ ಮೈಸೂರು ರಸ್ತೆಯ ಸಿಎಆರ್ ಕೇಂದ್ರಸ್ಥಾನದ ಆವರಣದಲ್ಲಿ ಸಾರ್ವಜನಿಕರ ಸಮ್ಮುಖದಲ್ಲಿ ಲಾಟರಿ ಪ್ರಕ್ರಿಯೆ ನಡೆಸಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 080 22942373, 080 22943553 ಅಥವಾ 080 22942358.

ದೀಪಾವಳಿ ರಜೆ ಸಖತ್ತಾಗಿ ಎಂಜಾಯ್ ಮಾಡಲು ಈ ತಾಣಗಳಿಗೊಮ್ಮೆ ಭೇಟಿ ನೀಡಿ
ಪಟಾಕಿ ನಿಷೇಧ ಕೋರಿದ್ದ ಅರ್ಜಿ ತುರ್ತು ವಿಚಾರಣೆ ಇಲ್ಲ: ದೀಪಾವಳಿ ಹಬ್ಬ ಸಮೀಪಿಸುತ್ತಿರುವಾಗ ಪಟಾಕಿ ಉದ್ಯಮದಲ್ಲಿ ಸಾಕಷ್ಟುಜನರು ಹೂಡಿಕೆ ಮಾಡಿರುವ ಸಾಧ್ಯತೆಯನ್ನು ಪರಿಗಣಿಸಿ ಪಟಾಕಿಗಳ ಮೇಲೆ ನಿಷೇಧ ಹೇರುವ ಅರ್ಜಿಯ ತುರ್ತು ವಿಚಾರಣೆಗೆ ಕೈಗೆತ್ತಿಕೊಳ್ಳಲು ಸುಪ್ರೀಂಕೋರ್ಟ್ ಶುಕ್ರವಾರ ನಿರಾಕರಿಸಿದೆ. ದೆಹಲಿಯಲ್ಲಿ ಜ.1, 2023ರವರೆಗೆ ಎಲ್ಲ ರೀತಿಯ ಪಟಾಕಿಗಳ ಸಂಗ್ರಹ, ಮಾರಾಟ ಹಾಗೂ ಬಳಕೆಯನ್ನು ನಿಷೇಧಿಸಬೇಕು ಎಂಬ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ತುರ್ತು ವಿಚಾರಣೆಗೆ ಕೈಗೆತ್ತಿಕೊಳ್ಳಲು ನಿರಾಕರಿಸಿದ ಸುಪ್ರೀಂಕೋರ್ಟ್, ಈ ಬಗ್ಗೆ ದೆಹಲಿ ಹೈಕೋರ್ಟ್ ಅನ್ನು ಸಂಪರ್ಕಿಸುವಂತೆ ಸೂಚಿಸಿದೆ. ‘ದೀಪಾವಳಿ ಹತ್ತಿರದಲ್ಲಿದ್ದಾಗ ಪಟಾಕಿ ನಿಷೇಧದ ಅರ್ಜಿಯನ್ನು ತುರ್ತು ವಿಚಾರಣೆಗೆ ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ. ಪಟಾಕಿ ಉದ್ಯಮದಲ್ಲಿ ಹಲವರು ಈಗಾಗಲೇ ಹೂಡಿಕೆ ಮಾಡಿರುತ್ತಾರೆ. ನೀವು ಕನಿಷ್ಠ 2 ತಿಂಗಳ ಮೊದಲೇ ಇದಕ್ಕಾಗಿ ಅರ್ಜಿ ಸಲ್ಲಿಸಬೇಕಿತ್ತು’ ಎಂದು ಮುಖ್ಯ ನ್ಯಾಯಾಧೀಶ ಯು.ಯು. ಲಲಿತ್ ಹಾಗೂ ನ್ಯಾ.ಹೇಮಂತ್ ಗುಪ್ತಾ ಅವರ ಪೀಠ ತುರ್ತು ವಿಚಾರಣೆಗೆ ಅರ್ಜಿ ಸಲ್ಲಿಸಿದ ವಕೀಲರಿಗೆ ಹೇಳಿದೆ.
ಅನಾಹುತ ತಪ್ಪಿಸಲು ಪಟಾಕಿ ನಿಷೇಧಿಸಿ: ಪರಿಸರ ಮಾಲಿನ್ಯ, ಶಬ್ದಮಾಲಿನ್ಯ ಮತ್ತು ಬೆಂಕಿ ಅನಾಹುತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾದ್ಯಂತ ಪಟಾಕಿ ನಿಷೇಧಿಸುವಂತೆ ಬಹುಜನ ಸಮಾಜ ಪಕ್ಷ ಜಿಲ್ಲಾಡಳಿತವನ್ನು ಒತ್ತಾಯಿಸಿದೆ. ಅಪರ ಜಿಲ್ಲಾಧಿಕಾರಿ ಬಿ.ಆರ್.ರೂಪಾ ಅವರನ್ನು ಶನಿವಾರ ಭೇಟಿ ಮಾಡಿದ ಪಕ್ಷದ ಪದಾಧಿಕಾರಿಗಳು ಈ ಸಂಬಂಧ ಮನವಿ ಸಲ್ಲಿಸಿ ಪಟಾಕಿ ಬದಲು ದೀಪ ಹಚ್ಚುವ ವ್ಯವಸ್ಥೆ ಜಾರಿಗೆ ತರುವಂತೆ ಸಲಹೆ ಮಾಡಿದರು. ಪ್ರತಿವರ್ಷ ದೀಪಾವಳಿ ಹಬ್ಬದ ಸಂದರ್ಭದಲ್ಲಿ ದೊಡ್ಡ ಪ್ರಮಾಣದಲ್ಲಿ ಪಟಾಕಿ ಸಿಡಿಸಲಾಗುತ್ತಿದೆ. ಇದರಿಂದಾಗಿ ವಾಯುಮಾಲಿನ್ಯ, ಶಬ್ದ ಮಾಲಿನ್ಯ, ಪರಿಸರ ಮಾಲಿನ್ಯ ಉಂಟಾಗುತ್ತಿದ್ದು, ಜಿಲ್ಲೆಯ ಜನತೆ ಆರೋಗ್ಯ ಹಾಳಾಗುತ್ತಿದೆ ಎಂದು ಹೇಳಿದರು.
ನರಕ ಚತುರ್ದಶಿ ಯಾವಾಗ? ಶುಭ ಸಮಯ, ಪೂಜಾ ವಿಧಾನ ಮತ್ತು ಮಹತ್ವ ಇಲ್ಲಿದೆ..
ಪ್ರತಿ ವರ್ಷ ಪಟಾಕಿ ಸಿಡಿಸುವ ವೇಳೆ ಅನಾಹುತ ಸಂಭವಿಸಿ ರಾಜ್ಯಾದ್ಯಂತ ಸಾವಿರಾರು ಮಕ್ಕಳು ಸುಟ್ಟಗಾಯಗಳಿಂದ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ, ಬಹಳಷ್ಟುಜನ ಕಣ್ಣು ಮತ್ತು ಅಂಗಾಂಗಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಪಟಾಕಿ ತಯಾರಿಸುವ ಕಂಪನಿಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಮಹಿಳೆಯರು ಮತ್ತು ಮಕ್ಕಳು ದುಡಿಯುತ್ತಿದ್ದು, ಅವರೆಲ್ಲರೂ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು. ಇತ್ತೀಚಿನ ವರ್ಷಗಳಲ್ಲಿ ದೀಪಾವಳಿಯ ಜೊತೆಗೆ ಬಹುತೇಕ ಶುಭಕಾರ್ಯ ಸೇರಿದಂತೆ ಎಲ್ಲಾ ಕಾರ್ಯಗಳಲ್ಲೂ ಪಟಾಕಿ ಸಿಡಿಸಲಾಗುತ್ತಿದೆ, ಇದರಿಂದಾಗಿ ಸಾರ್ವಜನಿಕರ ಹಣ ಪೋಲಾಗುವುದರ ಜೊತೆಗೆ ಅನೇಕ ರೋಗ ರುಜಿನಗಳು ಸಮಾಜವನ್ನು ಕಾಡುತ್ತಿವೆ. ಇವುಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಜಿಲ್ಲಾದ್ಯಂತ ಪಟಾಕಿ ನಿಷೇಧಿಸಬೇಕು ಅದರ ಬದಲಿಗೆ ಮನೆ ಮುಂದೆ ದೀಪ ಹಚ್ಚುವ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
