ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ವಿವಿಧ ಕ್ಷೇತ್ರಗಳ ಸಾಧಕರಿಗೆ 188 ಬಿಡಿ ನಿವೇಶನಗಳ ಹಂಚಿಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ ಎಂದು ಎಂಡಿಎ ಅಧ್ಯಕ್ಷ ಯಶಸ್ವಿ ಎಸ್‌. ಸೋಮಶೇಖರ್‌ ತಿಳಿಸಿದರು.

ಮೈಸೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ವಿವಿಧ ಕ್ಷೇತ್ರಗಳ ಸಾಧಕರಿಗೆ 188 ಬಿಡಿ ನಿವೇಶನಗಳ ಹಂಚಿಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ ಎಂದು ಎಂಡಿಎ ಅಧ್ಯಕ್ಷ ಯಶಸ್ವಿ ಎಸ್‌. ಸೋಮಶೇಖರ್‌ ತಿಳಿಸಿದರು.

ಎಂಡಿಎ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವನೂರ 3ನೇ ಹಂತ ಬಡಾವಣೆಯಲ್ಲಿ ಎಚ್‌ ಶ್ರೇಣಿಯ 188 ನಿವೇಶನ ಗುರುತಿಸಲಾಗಿದೆ. ರಾಜ್ಯದಲ್ಲಿರುವ ಸಾಧಕರು ಅರ್ಜಿ ಸಲ್ಲಿಸಬಹುದು. ಕ್ರೀಡಾಪಟುಗಳಿಗೆ ಶೇ.5, ಕಲೆ, ವಿಜ್ಞಾನ, ಸಾಹಿತ್ಯ, ವೈದ್ಯ, ಆಡಳಿತ, ರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದ ವ್ಯಕ್ತಿಗಳಿಗೆ ಶೇ.5, ಮಾಜಿ ಸೈನಿಕರು, ಸೈನಿಕ ಸಿಬ್ಬಂದಿಗೆ ಶೇ.2, ಎಂಡಿಎ ವ್ಯಾಪ್ತಿಯಲ್ಲಿರುವ ಸ್ವಾತಂತ್ರ್ಯ ಯೋಧರಿಗೆ ಶೇ.2, ಕರ್ತವ್ಯದಲ್ಲಿದ್ದು ನಿಧನ ಹೊಂದಿದ ರಾಜ್ಯ ಸರ್ಕಾರ ನೌಕರರ ಅವಲಂಬಿತರಿಗೆ ಶೇ.1 ಮೀಸಲಿಡಲಾಗಿದೆ ಎಂದು ವಿವರಿಸಿದರು.

ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿರುವ ಬ್ಯಾಂಕ್‌ ಆಫ್‌ ಬರೋಡ ಕಚೇರಿಯಲ್ಲಿ ಅರ್ಜಿ ವಿತರಣೆ ಮಾಡಲಾಗುತ್ತದೆ. ಅರ್ಜಿ ಶುಲ್ಕ . 500, ನೋಂದಣಿ ಶುಲ್ಕ . 1 ಸಾವಿರ ಪಾವತಿಸಬೇಕು. ನಿವೇಶನದ ಮೊತ್ತ ಶೇ.10 ಇಎಂಡಿ ಮೊತ್ತವನ್ನು ಅರ್ಜಿಯೊಂದಿಗೆ ಸೇರಿಸಿ ಫೆ.28ರ ಒಳಗೆ ಬ್ಯಾಂಕ್‌ ಆಫ್‌ ಬರೋಡ ಕಚೇರಿಗೆ ಸಲ್ಲಿಸಬೇಕು ಎಂದರು.

ಅರ್ಜಿದಾರರಿಗೆ 18 ವರ್ಷ ತುಂಬಿರಬೇಕು. ಕರ್ನಾಟಕದಲ್ಲಿ 10 ವರ್ಷ ವಾಸ ಮಾಡಿರಬೇಕು. ಅರ್ಜಿದಾರರ ಕುಟುಂಬದ ಸದಸ್ಯರು ಎಂಡಿಎ ವ್ಯಾಪ್ತಿಯಲ್ಲಿ ಸ್ವಂತ ಮನೆ ಹೊಂದಿರಬಾರದು. ಈ ಬಗ್ಗೆ ನೋಟರಿಯಿಂದ ದೃಢೀಕರಿಸಿದ ಪ್ರಮಾಣ ಪತ್ರ ಸಲ್ಲಿಸಬೇಕು. 3 ವರ್ಷದೊಳಗೆ ಮನೆ ಕಟ್ಟಬೇಕು ಎಂಬಿತ್ಯಾದಿ ಷರತ್ತುಗಳನ್ನು ವಿಧಿಸಲಾಗಿದೆ ಎಂದು ಅವರು ಹೇಳಿದರು.

ವಸಂತನಗರ ಮತ್ತು ಆರ್‌.ಟಿ. ನಗರ ಸೇರಿದಂತೆ 350 ಹೆಚ್ಚು ನಿವೇಶನಗಳಿವೆ. ಅವುಗಳನ್ನು ಹಂತ ಹಂತವಾಗಿ ಸಾಧಕರಿಗೆ ಹಂಚಿಕೆ ಮಾಡುತ್ತೇವೆ. ಗುಂಪು ಮನೆ ಸಚಿವ ಸಂಪುಟ ಒಪ್ಪಿಗೆ ದೊರೆಯಬೇಕಿದೆ ಎಂದರು.

195 ಸಿಎ ನಿವೇಶನ ಹಂಚಿಕೆ

2021ರ ಸೆಂಪ್ಟಬರ್‌ ತಿಂಗಳಲ್ಲಿ 312 ಸಿಎ ನಿವೇಶನ ಹಂಚಿಕೆಗೆ ಅರ್ಜಿ ಕರೆಯಲಾಗಿತ್ತು. 220 ನಿವೇಶಗಳಿಗೆ ಅರ್ಜಿ ಸಲ್ಲಿಸಿದ್ದು, ಫೆ.28 ರಂದು ನಡೆಯುವ ಸಭೆಯಲ್ಲಿ ಒಪ್ಪಿಗೆ ಪಡೆದು ಹಂಚಿಕೆ ಮಾಡುತ್ತೇವೆ. ಉಳಿಕೆ 92 ನಿವೇಶನ ಹಂಚಿಕೆಗೆ ಅರ್ಜಿ ಆಹ್ವಾನಿಸುತ್ತೇವೆ. 3 ವರ್ಷಗಳ ಆಡಿಟ್‌ ವರದಿ ಇರುವ, ಕಟ್ಟಡ ಕಟ್ಟುವ ಸಾಮರ್ಥ್ಯವಿರುವ ಸಂಘ ಸಂಸ್ಥೆಯವರು ಅರ್ಜಿ ಸಲ್ಲಿಸಬಹುದು. ಸಮುದಾಯ ಭವನ, ಆಸ್ಪತ್ರೆ, ಶಾಲೆ ನಿರ್ಮಾಣಕ್ಕೆ ಆದ್ಯತೆ ಇದೆ. ಸಾತಗಳ್ಳಿ ಬಸ್‌ ನಿಲ್ದಾಣದ ಎದುರಿನ ಖಾಲಿ ಜಾಗದಲ್ಲಿ ಆಸ್ಪತ್ರೆ ನಿರ್ಮಿಸಿದರೆ ಅನುಕೂಲವಾಗುತ್ತದೆ ಎಂದು ಅವರು ತಿಳಿಸಿದರು.

ಅಂತಾರಾಷ್ಟ್ರೀಯ ಕ್ರೀಡಾಂಗಣ

ಸಾತಗಳ್ಳಿಯಲ್ಲಿ ಅಂತಾರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣದ ಪ್ರಸ್ತಾವನೆಯೂ ಸಚಿವ ಸಂಪುಟದ ಮುಂದಿದೆ. ಮುಂದಿನ ಕ್ಯಾಬಿನೆಟ್‌ನಲ್ಲಿ ಅನುಮೋದನೆ ದೊರೆಯುವ ನಿರೀಕ್ಷೆಯಿದೆ. 20 ಎಕರೆ ಪ್ರದೇಶದಲ್ಲಿ ಜಂಗಲ್‌ ಕಟ್ಟಿಂಗ್‌ ಮತ್ತು ಶುಚಿತ್ವ ಕಾರ್ಯಕ್ಕೆ ಟೆಂಡರ್‌ ಕರೆಯಲಾಗಿದೆ. ಇದೇ ಸ್ಥಳದಲ್ಲಿರು ಕಟ್ಟೆಬಗ್ಗೆ ಮಾಹಿತಿ ನೀಡುವಂತೆ ಕಂದಾಯ ಇಲಾಖೆಗೆ ಕೋರಲಾಗಿದೆ. ಶೀಘ್ರ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಗೆ ಹಸ್ತಾಂತರಿಸುತ್ತೇವೆ ಎಂದು ಅವರು ಹೇಳಿದರು.

ಮೇಲ್ಸುತುವೆ, ಕೆಳಸೇತುವೆ ನಿರ್ಮಾಣ

ನಗರದಲ್ಲಿ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ನಾಲ್ಕು ಕಡೆ ಕೆಳಸೇತುವೆ, ಮೇಲ್ಸುತುವೆ ನಿರ್ಮಾಣಕ್ಕೆ ಕ್ರಮ ವಹಿಸಲಾಗಿದೆ. ಮಣಿಪಾಲ್‌ ಆಸ್ಪತ್ರೆ ಬಳಿ ರಾಜ್ಯ ಸರ್ಕಾರ ಮೇಲ್ಸುತುವೆ ನಿರ್ಮಿಸುತ್ತಿದೆ. ಜೆ.ಪಿ. ನಗರ ಮತ್ತು ಬೋಗಾದಿ ಜಂಕ್ಷನ್‌ನಲ್ಲಿ ಕೆಳಸೇತುವೆ, ವಿಜಯನಗರ 4ನೇ ಹಂತದಲ್ಲಿ ಮೇಲುತ್ಸುವೆ ನಿರ್ಮಿಸಲಾಗುವುದು ಎಂದರು.

ಎಂಡಿಎ ಆಯುಕ್ತ ಜಿ.ಟಿ. ದಿನೇಶ್‌ಕುಮಾರ್‌, ಕಾರ್ಯದಶಿ ಡಾ. ವೆಂಕಟರಾಜು, ಸದಸ್ಯರಾದ ಎಸ್‌ಬಿಎಂ ಮಂಜು, ಲಕ್ಷ್ಮಿದೇವಿ, ಕೆ. ಮಾದೇಶ್‌, ಜಿ. ಲಿಂಗಯ್ಯ, ನವೀನ್‌ಕುಮಾರ್‌ ಇದ್ದರು.

ಮೈಸೂರು ತಾಲೂಕಿನ ಬೊಮ್ಮೇನಹಳ್ಳಿ, ಕರಕನಹಳ್ಳಿಯಲ್ಲಿ 50:50ರ ಅನುಪಾತದಂತೆ ಸಾವಿರ ಎಕರೆಯಲ್ಲಿ ಬಡಾವಣೆ ನಿರ್ಮಿಸುವ ಗುರಿಯಿದೆ. ಈಗ 250 ರೈತರು ಭೂಮಿ ಕೊಡಲು ಒಪ್ಪಿದ್ದಾರೆ. ಎಕೆರೆಗೆ 18 ನಿವೇಶನದಂತೆ 4 ಸಾವಿರ ನಿವೇಶನ ಹಂಚಿಕೆ ಮಾಡಬಹುದು. ಎಂಡಿಎ ಬಡಾವಣೆ ಅಭಿವೃದ್ಧಿ ವೆಚ್ಚವನ್ನು ಭರಿಸಲಿದೆ. ಎಕರೆಯಲ್ಲಿ 18 ನಿವೇಶನಗಳಾದರೆ 9 ನಿವೇಶನ ರೈತರಿಗೆ ದೊರೆಯಲಿದೆ.

- ಯಶಸ್ವಿ ಎಸ್‌. ಸೋಮಶೇಖರ್‌, ಎಂಡಿಎ ಅಧ್ಯಕ್ಷ