ಆ್ಯಪ್‌ ಆಟೋ ಸೇವಾ ಶುಲ್ಕ ಶೇ.10ಕ್ಕೆ ಹೆಚ್ಚಿಸಲು ಅವಕಾಶ: ಹೈಕೋರ್ಟ್‌

ಪರವಾನಗಿ ಪಡೆದ ಅಗ್ರಿಗೇಟರ್‌ ಸಂಸ್ಥೆಗಳು ಒದಗಿಸುವ ಆ್ಯಪ್‌ ಆಧಾರಿತ ಆಟೋರಿಕ್ಷಾ ಸೇವೆಗೆ ಶೇಕಡ 5 ಸೇವಾ ಶುಲ್ಕ ಹಾಗೂ ಜಿಎಸ್‌ಟಿ ಸೇರಿಸಿ ದರ ನಿಗದಿಪಡಿಸುವಂತೆ ರಾಜ್ಯದ ಎಲ್ಲ ಪ್ರಾದೇಶಿಕ ಸಾರಿಗೆ ಪ್ರಾಧಿಕಾರಗಳಿಗೆ ಸೂಚಿಸಿ ಸಾರಿಗೆ ಇಲಾಖೆಯು 2022ರ ನ.25ರಂದು ಹೊರಡಿಸಿದ್ದ ಅಧಿಸೂಚನೆಗೆ ಹೈಕೋರ್ಟ್‌ ಬುಧವಾರ ತಡೆಯಾಜ್ಞೆ ನೀಡಿದೆ.

app based auto high court stayed for govt order on fixing 5 per cent hike order gvd

ಬೆಂಗಳೂರು (ಜ.05): ಪರವಾನಗಿ ಪಡೆದ ಅಗ್ರಿಗೇಟರ್‌ ಸಂಸ್ಥೆಗಳು ಒದಗಿಸುವ ಆ್ಯಪ್‌ ಆಧಾರಿತ ಆಟೋರಿಕ್ಷಾ ಸೇವೆಗೆ ಶೇಕಡ 5 ಸೇವಾ ಶುಲ್ಕ ಹಾಗೂ ಜಿಎಸ್‌ಟಿ ಸೇರಿಸಿ ದರ ನಿಗದಿಪಡಿಸುವಂತೆ ರಾಜ್ಯದ ಎಲ್ಲ ಪ್ರಾದೇಶಿಕ ಸಾರಿಗೆ ಪ್ರಾಧಿಕಾರಗಳಿಗೆ ಸೂಚಿಸಿ ಸಾರಿಗೆ ಇಲಾಖೆಯು 2022ರ ನ.25ರಂದು ಹೊರಡಿಸಿದ್ದ ಅಧಿಸೂಚನೆಗೆ ಹೈಕೋರ್ಟ್‌ ಬುಧವಾರ ತಡೆಯಾಜ್ಞೆ ನೀಡಿದೆ. ಸಾರಿಗೆ ಇಲಾಖೆ ಹೊರಡಿಸಿದ್ದ ಈ ಅಧಿಸೂಚನೆ ರದ್ದು ಕೋರಿ ಎಎನ್‌ಐ ಟೆಕ್ನಾಲಜೀಸ್‌ ಪ್ರೈ.ಲಿ. (ಓಲಾ), ಉಬರ್‌ ಇಂಡಿಯಾ ಟೆಕ್ನಾಲಜೀಸ್‌ ಪ್ರೈ.ಲಿ. ಹಾಗೂ ರೊಪ್ಪೆನ್‌ ಟ್ರಾನ್ಸ್‌ಪೊರ್ಟೇಷನ್‌ ಸವೀರ್‍ಸಸ್‌ (ರಾರ‍ಯಪಿಡೋ) ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಿ.ಎಂ.ಪೂಣಚ್ಚ ಅವರ ನ್ಯಾಯಪೀಠ ಈ ಆದೇಶ ಮಾಡಿದೆ.

ಇದರಿಂದಾಗಿ ತಡೆಯಾಜ್ಞೆ ಜಾರಿಯಲ್ಲಿ ಇರುವ ಅವಧಿಯಲ್ಲಿ ಅಗ್ರಿಗೇಟರ್‌ ಸಂಸ್ಥೆಗಳು ಈ ಆದೇಶಕ್ಕೂ ಮುಂಚಿನ ಆದೇಶ (ಸರ್ಕಾರ ನಿಗದಿ ಮಾಡಿದ ದರಕ್ಕಿಂತ ಶೇ.10ರಷ್ಟು ಹೆಚ್ಚುವರಿ ದರ ಹಾಗೂ ಜಿಎಸ್‌ಟಿಯನ್ನು ಪ್ರಯಾಣಿಕರಿಂದ ವಸೂಲಿ ಮಾಡಬಹುದು ಎಂದು ಹೊರಡಿಸಿದ್ದ 2022 ಅ.14 ಆದೇಶ) ದಂತೆ ದರ ವಸೂಲಿ ಮಾಡಬಹುದಾಗಿದ್ದು, ಇದರಿಂದಾಗಿ ಹಾಲಿ ದರಕ್ಕಿಂತ ಶೇ.5ರಷ್ಟು ಹೆಚ್ಚು ದರವನ್ನು ಸಂಸ್ಥೆಗಳು ಪ್ರಯಾಣಿಕರಿಂದ ವಸೂಲಿ ಮಾಡಬಹುದಾಗಿದೆ.

ಹಣಕ್ಕಾಗಿ ಸ್ನೇಹಿತನ ಕೊಂದಿದ್ದ ನಾಲ್ವರಿಗೆ ಜೀವಾವಧಿ ಕಾಯಂ: ಹೈಕೋರ್ಟ್‌ ಆದೇಶ

ಪ್ರಕರಣವೇನು?: ಆ್ಯಪ್‌ ಆಧಾರಿತ ಆಟೋರಿಕ್ಷಾ ಸೇವೆ ಸ್ಥಗಿತಗೊಳಿಸುವಂತೆ ಸೂಚಿಸಿ ಅ.11ರಂದು ಸಾರಿಗೆ ಇಲಾಖೆ ಆದೇಶ ಹೊರಡಿಸಿತ್ತು. ಅದನ್ನು ಪ್ರಶ್ನಿಸಿ ಅಗ್ರಿಗೇಟರ್‌ ಸಂಸ್ಥೆಗಳು ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದವು. ಅವುಗಳ ವಿಚಾರಣೆ ವೇಳೆ ಹೈಕೋರ್ಟ್‌ ಸಲಹೆಯಂತೆ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸುವುದಾಗಿ ಸರ್ಕಾರ ತಿಳಿಸಿತ್ತು.

ನಂತರ ಆಟೋರಿಕ್ಷಾ ಅಗ್ರಿಗೇಟರ್‌ ಸೇವೆ ಒದಗಿಸಲು ಪರವಾನಗಿ ಹೊಂದಿರುವ ಸಂಸ್ಥೆಗಳಿಗೆ ರಾಜ್ಯದ ಎಲ್ಲ ಪ್ರಾದೇಶಿಕ ಸಾರಿಗೆ ಪ್ರಾಧಿಕಾರಗಳು ಕಾಲಕಾಲಕ್ಕೆ ನಿಗದಿಪಡಿಸಿರುವ ಆಟೋರಿಕ್ಷಾ ಪ್ರಯಾಣ ದರಗಳ ಮೇಲೆ ಶೇ.5 ಸೇವಾ ಶುಲ್ಕ ಹಾಗೂ ಅನ್ವಯಿಸುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸೇರಿಸಿ ಅಂತಿಮ ಪ್ರಯಾಣ ದರ ನಿಗದಿಪಡಿಸುವಂತೆ ನಿರ್ದೇಶಿಸಿ ಸಾರಿಗೆ ಇಲಾಖೆ ನ.25ರಂದು ಅಧಿಸೂಚನೆ ಹೊರಡಿಸಿತ್ತು.

ಯೆಜ್ಡಿ ಟ್ರೇಡ್‌ ಮಾರ್ಕ್‌ಗೆ ನಿರ್ಬಂಧ ಹೇರಿ ಹೈಕೋರ್ಟ್‌ ಆದೇಶ

ಈ ಅಧಿಸೂಚನೆಯನ್ನು ಪ್ರಶ್ನಿಸಿ ಮತ್ತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿರುವ ಅಗ್ರಿಗೇಟರ್‌ ಸಂಸ್ಥೆಗಳು, ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಪ್ರಯಾಣಿಕರಿಂದ ಪಡೆಯುವ ಶುಲ್ಕದ ಶೇ.20ರವರೆಗೆ ಸೇವಾ ಶುಲ್ಕ ಪಡೆಯಲು ಅವಕಾಶವಿದೆ. ಸೇವಾ ಶುಲ್ಕವನ್ನು ಪ್ರಯಾಣ ದರವೆಂದು ಅರ್ಥೈಸಲಾಗುವುದಿಲ್ಲ. ಆದ್ದರಿಂದ, ದರ ನಿಗದಿಪಡಿಸಲು ಅಥವಾ ನಿಯಂತ್ರಿಸಲು ರಾಜ್ಯ ಸರ್ಕಾರ ಸಕ್ಷಮ ಪ್ರಾಧಿಕಾರವಲ್ಲ ಎಂದು ತಿಳಿಸಿದ್ದವು.

Latest Videos
Follow Us:
Download App:
  • android
  • ios