ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು(ಫೆ.14): ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್‌ ಸೋಂಕಿನಿಂದ ಈವರೆಗೆ ಬರೋಬ್ಬರಿ 4,411 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ ಶೇ.80 ರಷ್ಟು ಅಂದರೆ 3,553 ಮಂದಿ ಐವತ್ತು ವರ್ಷ ಮೇಲ್ಪಟ್ಟವರಾಗಿದ್ದಾರೆ.

ಕೋವಿಡ್‌ ಸೋಂಕಿನ ಆತಂಕ ಆರಂಭಗೊಂಡು ಬಹುತೇಕ ಒಂದು ವರ್ಷ ಪೂರ್ಣಗೊಂಡಿದೆ. ಇದೀಗ ಸೋಂಕಿನ ತೀವ್ರತೆ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗುತ್ತಿದೆ. ಆದರೆ, ನಗರದಲ್ಲಿ ಈವರೆಗೆ ಕೋವಿಡ್‌ನಿಂದ ಮೃತಪಟ್ಟವರ ಪೈಕಿ 858 ಮಂದಿ ಮಾತ್ರ ಮಕ್ಕಳು ಹಾಗೂ ಮಧ್ಯ ವಯಸ್ಕರಾಗಿದ್ದಾರೆ. ಉಳಿದ ಎಲ್ಲರೂ ಹಿರಿಯ ನಾಗರಿಕರಾಗಿದ್ದಾರೆ. ಒಂಭತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನ 10 ಮಕ್ಕಳು, 10ರಿಂದ 19 ವರ್ಷದೊಳಗಿನ 16 ಮಕ್ಕಳು, 20ರಿಂದ 29 ವರ್ಷದೊಳಗಿನ 86 ಮಂದಿ, 30ರಿಂದ 39 ವರ್ಷದೊಳಗಿನ 214 ಮಂದಿ ಹಾಗೂ 40ರಿಂದ 49 ವರ್ಷದ 497 ಮಂದಿ ಮಧ್ಯ ವಯಸ್ಕರಾಗಿದ್ದಾರೆ. ಇನ್ನುಳಿದಂತೆ 50ರಿಂದ 59 ವರ್ಷದೊಳಗಿನ 961 ಮಂದಿ, 60ರಿಂದ 69 ವರ್ಷದೊಳಗಿನ 1,191 ಮಂದಿ ಹಾಗೂ 70 ವರ್ಷ ಮೇಲ್ಪಟ್ಟ1,414 ಮಂದಿ ಮೃತಪಟ್ಟಿದ್ದಾರೆ ಎಂದು ಬಿಬಿಎಂಪಿ ಬುಲೆಟಿನ್‌ನಲ್ಲಿ ಮಾಹಿತಿ ನೀಡಿದೆ.

70 ವರ್ಷ ಮೇಲ್ಪಟ 1,413 ಮಂದಿ ಸಾವು:

ಒಟ್ಟಾರೆ ನಗರದಲ್ಲಿ ಕೋವಿಡ್‌ ಮೃತರ ಪೈಕಿ ಅತಿ ಹೆಚ್ಚು ಮೃತಪಟ್ಟರು 70 ವರ್ಷ ಮೇಲ್ಪಟ್ಟವರೇ ಆಗಿದ್ದಾರೆ. ನಗರದಲ್ಲಿ 70 ವರ್ಷ ಮೇಲ್ಪಟ್ಟ989 ಮಂದಿ ಪುರುಷರು ಹಾಗೂ 415 ಮಹಿಳೆಯರು ಸೇರಿದಂತೆ 1,414 ಮಂದಿ ಮೃತಪಟ್ಟಿದ್ದಾರೆ. ಒಟ್ಟಾರೆ ಕೋವಿಡ್‌ ಸಾವಿನ ಪ್ರಮಾಣದ ಶೇ.32.07 ರಷ್ಟಾಗಿದೆ.

ಕರ್ನಾಟಕದಲ್ಲಿ ಕೊರೋನಾ: ಫೆ.10ರ ಅಂಕಿ-ಸಂಖ್ಯೆ ತಿಳಿದುಕೊಳ್ಳಿ

ಪುರುಷರೇ ಹೆಚ್ಚು ಸಾವು:

ಇನ್ನು ಒಟ್ಟಾರೆ ಮೃತಪಟ್ಟವರ ಸಂಖ್ಯೆಯಲ್ಲಿಯೂ ಪುರುಷ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. 4,411 ಮಂದಿಯ ಪೈಕಿ 2,991 ಮಂದಿ ಪುರುಷರು ಹಾಗೂ 1,420 ಮಂದಿ ಮಹಿಳಾ ಸೋಂಕಿತರಾಗಿದ್ದಾರೆ. ಇನ್ನು 50 ವರ್ಷ ಮೇಲ್ಪಟ್ಟು ಮೃತಪಟ್ಟವರಲ್ಲಿಯೂ ಪುರುಷ ಸಾವಿನ ಸಂಖ್ಯೆ ಹೆಚ್ಚಾಗಿದೆ. 2,414 ಮಂದಿ ಪುರುಷರು ಹಾಗೂ 1,139 ಮಂದಿ ಮಹಿಳಾ ಸೋಂಕಿತರು ಮೃತಪಟ್ಟಿದ್ದಾರೆ.

ಹಿರಿಯರ ಹೆಚ್ಚು ಸಾವಿಗೆ ಕಾರಣ...

ಕೋವಿಡ್‌ ಸೋಂಕು ದೃಢಪಟ್ಟಹಿರಿಯ ವಯಸ್ಕರರು ದೀರ್ಘಾವಧಿ ಕಾಯಿಲೆ ಮತ್ತು ವಯಸ್ಸಿನ ಹಿನ್ನೆಲೆಯಲ್ಲಿ ಹೆಚ್ಚು ಮೃತಪಟ್ಟಿದ್ದಾರೆ. ನಗರದಲ್ಲಿ 2020ರ ಜುಲೈನಿಂದ ಸೆಪ್ಟಂಬರ್‌ ಅವಧಿಯಲ್ಲಿ ಹೆಚ್ಚಿನ ಸಾವಿನ ಸಂಖ್ಯೆಯ ವರದಿಯಾಗಿವೆ. ಈ ಅವಧಿಯಲ್ಲಿ ಜನರು ಸೋಂಕಿನ ಲಕ್ಷಣ ಕಾಣಿಸಿಕೊಂಡ ತಕ್ಷಣ ಬೇಗ ಚಿಕಿತ್ಸೆ ಪಡೆದುಕೊಳ್ಳದ್ದರಿಂದ ಸಾವಿನ ಸಂಖ್ಯೆ ಹೆಚ್ಚಾಗಿದೆ. ಇದೀಗ ಜನರಲ್ಲಿ ಜಾಗೃತಿ ಬಂದಿದ್ದು, ತ್ವರಿತವಾಗಿ ಚಿಕಿತ್ಸೆಗೆ ಆಗಮಿಸುತ್ತಿದ್ದಾರೆ. ಹಾಗಾಗಿ, ಸಾವಿನ ಸಂಖ್ಯೆಯಲ್ಲಿ ಇಳಿಕೆಯಾಗಿದೆ ಎಂದು ರಾಜ್ಯ ಕೋವಿಡ್‌-19 ಟೆಲಿ ಐಸಿಯು ಕೇಂದ್ರಗಳ ವಿಶೇಷ ಅಧಿಕಾರಿ ಡಾ. ಕೆ.ವಿ.ತ್ರಿಲೋಕಚಂದ್ರ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

4,411 ಮಂದಿ ಸಾವಿರ ವಿವರ

ವಯಸ್ಸು ಒಟ್ಟು ಸಾವು ಗಂಡು ಹೆಣ್ಣು ಶೇಕಡ

70 ಪ್ಲಸ್‌ 1,414 989 415 32.07
60-69 1,191 793 396 27.18
50-59 961 630 332 21.95
40-49 497 352 144 11.35
30-39 214 143 71 4.89
20-29 86 60 26 1.96
10-19 16 12 4 0.37
0-9 6 4 0.23