ಸುಬ್ರಹ್ಮಣ್ಯ(ಆ.11): ಕಡಬ ತಾಲೂಕಿನಲ್ಲಿರುವ ರಾಜ್ಯದ ಪ್ರಸಿದ್ಧ ನಾಗಾರಾಧನೆಯ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿ ಅನುಷ್‌ ಎ.ಎಲ್‌. ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಪಡೆದು ರಾಜ್ಯದ ಟಾಪರ್‌ಗಳ ಪೈಕಿ ಓರ್ವನಾಗಿದ್ದಾರೆ.

ಈತನಿಗೆ ಪರಿಸರದ ಬಗ್ಗೆ ಹೆಚ್ಚು ಆಸಕ್ತಿ ಇದ್ದು, ಮುಂದೆ ಐ.ಎಫ್‌.ಎಸ್‌. ಮಾಡಿ ಅರಣ್ಯಾಧಿಕಾರಿಯಾಗುವ ಮೂಲಕ ಪರಿಸರ ಸಂರಕ್ಷಣೆಗೆ ಹೆಚ್ಚು ಒತ್ತು ನೀಡುವ ಧ್ಯೇಯವನ್ನು ಹೊಂದಿರುವುದಾಗಿ ಹೇಳಿದ್ದಾರೆ. ಅವರು ಆದರ್ಶ ಗ್ರಾಮ ಬಳ್ಪದ ಎಣ್ಣೆಮಜಲು ನಿವಾಸಿ ಲೋಕೇಶ್‌ ಮತ್ತು ಉಷಾ ದಂಪತಿಯ ಪುತ್ರ.

ಮನೆಯಲ್ಲಿ ಸಂಭ್ರಮಾಚರಣೆ:

ವಿಷಯ ತಿಳಿದು ಮನೆಯವರು ಅತೀವ ಸಂತಸಗೊಂಡರು. ತಂದೆ ತಾಯಿ ಮತ್ತು ಸಹೋದರ ಆಕಾಶ್‌ ಹಾಗೂ ಅಜ್ಜಿ ಸಹಿ ತಿನಿಸಿ ಸಂಭ್ರಮಾಚರಿಸಿದರು. ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಸಂಸದ ನಳಿನ್‌ ಕುಮಾರ್‌ ಕಟೀಲ್‌, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸುಳ್ಯ ಶಾಸಕ ಎಸ್‌.ಅಂಗಾರ, ಗ್ರಾಮೀಣ ವಿದ್ಯಾರ್ಥಿ ಅನುಷ್‌ಗೆ ದೂರವಾಣಿ ಕರೆ ಮಾಡಿ ಅಭಿನಂದಿಸಿದರು.

ವಿದ್ಯಾಲಯದಲ್ಲಿ ಅಭಿನಂದನೆ:

ಕುಮಾರಸ್ವಾಮಿ ವಿದ್ಯಾಲಯಕ್ಕೆ ಆಗಮಿಸಿದ ಅನುಷ್‌ಗೆ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಗಣೇಶ್‌ ಪ್ರಸಾದ್‌ ಎನ್‌., ಸಂಚಾಲಕ ಚಂದ್ರಶೇಖರ ನಾಯರ್‌ ಮತ್ತು ಮುಖ್ಯೋಪಾಧ್ಯಾಯಿನಿ ವಿದ್ಯಾರತ್ನಾ ಎಚ್‌. ಸಿಹಿ ತಿನಿಸು ನೀಡಿ ಅಭಿನಂದಿಸಿದರು.

ಯಾವುದೇ ಕೋಚಿಂಗ್‌ ಇಲ್ಲ

ಯಾವುದೇ ಕೋಚಿಂಗ್‌ ಕ್ಲಾಸ್‌ಗೆ ಹೋಗಿಲ್ಲ. ಶಾಲೆಯಲ್ಲಿ ಶಿಕ್ಷಕರು ಏನು ಹೇಳಿಕೊಡುತ್ತಿದ್ದರೋ ಅದನ್ನು ಗಮನವಿಟ್ಟು ಕೇಳುತ್ತಿದ್ದೆ. ಅದನ್ನು ಮನೆಯಲ್ಲಿ ಬಂದು ಪುನರ್‌ ಮನನ ಮಾಡುತ್ತಿದ್ದೆ. ಶಾಲೆಯಲ್ಲಿ ಮುಖ್ಯೋಪಾಧ್ಯಾಯರು, ಶಿಕ್ಷಕರು ಮತ್ತು ಶಾಲಾ ಆಡಳಿತ ಮಂಡಳಿ ಓದಿಗೆ ಹೆಚ್ಚಿನ ಉತ್ತೇಜನ ನೀಡುತ್ತಿದ್ದರು. ಕೊರೋನಾ ಲಾಕ್‌ಡೌನ್‌ ಸಮಯದಲ್ಲಿ ಕೂಡಾ ಶಿಕ್ಷಕರು ದೂರವಾಣಿ ಮೂಲಕ ನಮಗೆ ಬೋಧನೆ ಮಾಡಿ ಉತ್ತೇಜನ ನೀಡಿದ್ದಾರೆ. ಏಕಾಗ್ರತೆ, ಕಠಿಣ ಪರಿಶ್ರಮದಿಂದ ಮನೆಯಲ್ಲಿ ದಿನ ನಿತ್ಯದ ಪಾಠವನ್ನು ದಿನನಿತ್ಯ ಓದುತ್ತಿದ್ದೆ. ಬಾಯಿ ಪಾಠ ಮಾಡದೆ ಓದಿದನ್ನು ಮನಸಿನಲ್ಲಿ ಇರಿಸಿಕೊಳ್ಳುತ್ತಿದ್ದೆ ಇದು ಪರೀಕ್ಷಾ ಸಮಯದಲ್ಲಿ ಸುಲಭವಾಯಿತು ಎನ್ನುತ್ತಾರೆ ಅವರು.

ಲಾಕ್‌ಡೌನ್‌ನಲ್ಲಿ ಅಧ್ಯಯನ:

ಲಾಕ್‌ಡೌನ್‌ ಕಾಲದಲ್ಲಿ ಪರೀಕ್ಷೆ ಮುಂದೆ ಹೋದುದರಿಂದ ಓದುವಿಕೆ ಕಡಿಮೆ ಆಗಿತ್ತು. ಶಿಕ್ಷಕರ ಸಂಪರ್ಕವೂ ಇರಲಿಲ್ಲ. ಆದರೆ ನಾನು ಲಾಕ್‌ಡೌನ್‌ ರಜಾ ಅವಧಿಯಲ್ಲಿ ಸುಮ್ಮನೆ ಕುಳಿತುಕೊಳ್ಳದೆ ನಿತ್ಯ ಅಧ್ಯಯನದಲ್ಲಿ ತೊಡಗಿಸಿಕೊಂಡಿದ್ದೆ ಎಂದು ತಿಳಿಸಿದ್ದಾರೆ.

SSLC ರಿಸಲ್ಟ್: ದಕ್ಷಿಣ ಕನ್ನಡ 12 ಸ್ಥಾನಕ್ಕೆ ಕುಸಿದ್ರೂ, ಅನುಷ್ ಸಾಧನೆಯಿಂದ ಬೆಳಗಿತು ಜಿಲ್ಲೆಯ‌ ಕೀರ್ತಿ

ವಾಲಿಬಾಲ್‌ ಆಟಗಾರನಾಗಿದ್ದೇನೆ. ವಿಜ್ಞಾನ ಮಾದರಿ ರಚನೆ, ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿದ್ದೇನೆ. ವಿದ್ಯಾರ್ಥಿಗಳು ಏಕಾಗ್ರತೆ ಮತ್ತು ಪರಿಶ್ರಮದಿಂದ ಪಾಠ ಮತ್ತು ಶಾಲೆಯಲ್ಲಿ ಪಾಠಗಳನ್ನು ಆಸಕ್ತಿಯಿಂದ ಕೇಳಬೇಕು. ದಿನನಿತ್ಯದ ಪಾಠಗಳನ್ನು ದಿನಿತ್ಯ ಓದಬೇಕು. ಹಾಗಾದರೆ ಹೆಚ್ಚಿನ ಅಂಕ ಗಳಿಕೆಯ ಸಾಧನೆ ಮಾಡಬಹುದು ಎಂದು ಅನುಷ್‌ ಹೇಳಿದರು.