ಅನುಗ್ರಹ ಯೋಜನೆಗೆ ಸರ್ಕಾರದ ಅನುಗ್ರಹವಿಲ್ಲ, ಕುರಿ-ಮೇಕೆಗಳ ಸಾವು: ₹1.86 ಕೋಟಿ ಪರಿಹಾರ ಬಾಕಿ!
- ಅನುಗ್ರಹ ಯೋಜನೆಗೆ ಸರ್ಕಾರದ ಅನುಗ್ರಹವಿಲ್ಲ
- - ಕುರಿ-ಮೇಕೆಗಳ ಸಾವು: .1.86 ಕೋಟಿ ಪರಿಹಾರ ಬಾಕಿ
- - ಹೊಸ ಅರ್ಜಿ ಸ್ವೀಕರಿಸದಂತೆ ಸರ್ಕಾರದ ಅದೇಶ
ಮಂಡ್ಯ ಮಂಜುನಾಥ
ಮಂಡ್ಯ (ಜೂ.22) ಕುರಿ-ಮೇಕೆ ಸಾವನ್ನಪ್ಪಿದರೆ ಪರಿಹಾರ ನೀಡುವ ಅನುಗ್ರಹ ಯೋಜನೆಗೆ ಸರ್ಕಾರ ಅನುಗ್ರಹ ತೋರುತ್ತಿಲ್ಲ. ವರ್ಷದಿಂದ ಸಾವಿರಾರು ಕುರಿ-ಮೇಕೆಗಳು ಸಾವನ್ನಪ್ಪಿದ್ದರೂ ಬಿಡುಗಾಸು ಪರಿಹಾರದ ಹಣವನ್ನು ಬಿಡುಗಡೆ ಮಾಡಿಲ್ಲ. ಬಿಜೆಪಿ ಸರ್ಕಾರ ಪರಿಹಾರದ ಹಣ ಬಿಡುಗಡೆ ಮಾಡದೆ ಬಾಕಿ ಉಳಿಸಿದ್ದರೆ, ಹೊಸದಾಗಿ ರಚನೆಯಾಗಿರುವ ಕಾಂಗ್ರೆಸ್ ಸರ್ಕಾರ ಅರ್ಜಿಗಳನ್ನೇ ಸ್ವೀಕರಿಸದಂತೆ ತಡೆಹಿಡಿದಿದೆ.
ಜಿಲ್ಲೆಯಲ್ಲಿ 3481 ಕುರಿ-ಮೇಕೆಗಳು ಹಾಗೂ 343 ಕುರಿ-ಮೇಕೆ ಮರಿಗಳು ಸಾವನ್ನಪ್ಪಿವೆ. ಇವುಗಳ ಒಟ್ಟು ಪರಿಹಾರ ಹಣ 1.86 ಕೋಟಿ ರು. ಬಾಕಿ ಇದ್ದರೂ ಕಳೆದೊಂದು ವರ್ಷದಿಂದ ಹಣ ಬಿಡುಗಡೆ ಮಾಡಿಲ್ಲ. ಇದರಿಂದ ಕುರಿ-ಮೇಕೆ ಸಾಕಣೆದಾರರು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.
ಅಸಹಜವಾಗಿ ಮೃತಪಡುವ ಕುರಿಗಳ ಪರಿಹಾರ ಮೊತ್ತ ಹೆಚ್ಚಳ: ಪ್ರಭು ಚವ್ಹಾಣ್
ರಾಜ್ಯ ಸರ್ಕಾರದ ಅನುಗ್ರಹ ಯೋಜನೆಯಡಿ 3ರಿಂದ 6 ತಿಂಗಳ ಕುರಿ-ಮೇಕೆ ಮರಿಗಳು ಸಾವನ್ನಪ್ಪಿದರೆ 3 ಸಾವಿರ ರು. ಹಾಗೂ 6 ತಿಂಗಳ ಮೇಲ್ಪಟ್ಟು ಕುರಿ-ಮೇಕೆಗಳು ಸಾವನ್ನಪ್ಪಿದರೆ 5 ಸಾವಿರ ರು. ಪರಿಹಾರ ನೀಡಲಾಗುತ್ತಿತ್ತು. 2022ರ ಬಜೆಟ್‌ನಲ್ಲಿ ಅನುಗ್ರಹ ಯೋಜನೆಗೆ ಒಪ್ಪಿಗೆ ದೊರೆತಿದ್ದರೂ ಹಣ ಮಾತ್ರ ಇದುವರೆಗೂ ಬಿಡುಗಡೆಯಾಗಿಲ್ಲ. ಪರಿಹಾರ ಹಣಕ್ಕಾಗಿ 3407 ಫಲಾನುಭವಿಗಳು ಚಾತಕ ಪಕ್ಷಿಗಳಂತೆ ಎದುರುನೋಡುತ್ತಿದ್ದಾರೆ.
1 ಏಪ್ರಿಲ್ 2022ರಿಂದ 30 ಮಾಚ್‌ರ್ 2023ರವರೆಗೆ ಜಿಲ್ಲೆಯಲ್ಲಿ 1862 ಕುರಿಗಳು, 1619 ಮೇಕೆಗಳು, 100 ಕುರಿ ಮರಿಗಳು, 243 ಮೇಕೆ ಮರಿಗಳು ಸಾವನ್ನಪ್ಪಿವೆ. ಪರಿಹಾರ ಹಣ ಬಾರದಿರುವುದು ಹಾಗೂ ಕಳೆದ ಮಾಚ್‌ರ್‍ನಿಂದ ಕುರಿ-ಮೇಕೆಗಳು ಸಾವನ್ನಪ್ಪಿದ್ದರೂ ಅವುಗಳಿಗೆ ಅರ್ಜಿ ಸ್ವೀಕರಿಸದಂತೆ ತಡೆಹಿಡಿದಿರುವುದರಿಂದ ಸಾಕಣೆದಾರರು ನಷ್ಟಅನುಭವಿಸುತ್ತಿದ್ದಾರೆ.
ನಾಯಿಗಳು-ಚಿರತೆಗಳ ದಾಳಿ:
ಗ್ರಾಮೀಣ ಪ್ರದೇಶದಲ್ಲಿ ಅತಿ ಹೆಚ್ಚು ಕುರಿ-ಮೇಕೆಗಳು ಬೀದಿ ನಾಯಿಗಳು, ಚಿರತೆಗಳ ದಾಳಿಗೆ ಬಲಿಯಾಗುತ್ತಿವೆ. ಕೆಲವು ಬಾರಿ ಸಿಡಿಲು ಬಡಿದು ಮೃತಪಟ್ಟಿರುವ ಉದಾಹರಣೆಗಳೂ ಇವೆ. ಕೆಲವೇ ಕೆಲವು ಮಾತ್ರ ರೋಗಗಳಿಂದ ಸಾವನ್ನಪ್ಪುತ್ತಿವೆ.
ಹಳ್ಳಿಗಾಡಿನಲ್ಲಿ ಬೀದಿ ನಾಯಿಗಳ ದಾಳಿಯಿಂದ ಕುರಿ-ಮೇಕೆಗಳನ್ನು ರಕ್ಷಣೆ ಮಾಡುವುದು ಸವಾಲಾಗಿದೆ. ನಾಯಿಗಳ ಹಿಂಡೇ ಕುರಿ-ಮೇಕೆ ಮಂದೆಗಳ ಮೇಲೆ ದಾಳಿ ನಡೆಸುವುದರಿಂದ ಸಾಕಣೆದಾರರು ನಾಯಿಗಳ ಭಯದಲ್ಲೇ ಕುರಿ-ಮೇಕೆಗಳನ್ನು ಕಾಯುವಂತಹ ಪರಿಸ್ಥಿತಿ ಸೃಷ್ಟಿಯಾಗಿದೆ.
ಚಿರತೆಗಳ ಹಾವಳಿಯೂ ಹೆಚ್ಚಾಗಿದ್ದು, ರಾತ್ರಿ ವೇಳೆ ಕೊಟ್ಟಿಗೆಗೆ ನುಗ್ಗಿ ಕುರಿ-ಮೇಕೆಗಳ ರಕ್ತ ಹೀರುತ್ತಿವೆ. ಚಿರತೆಗಳ ದಾಳಿಯಿಂದಲೂ ಸಾಕಣೆದಾರರು ಕುರಿ-ಮೇಕೆಗಳನ್ನು ಕಳೆದುಕೊಂಡು ನಷ್ಟಅನುಭವಿಸಿದ್ದಾರೆ. ಸರ್ಕಾರದಿಂದ ಸಿಗುವ ಅಲ್ಪಸ್ವಲ್ಪ ಪರಿಹಾರ ಹಣ ಕುರಿ-ಮೇಕೆಗಳ ಸಾವಿನಿಂದ ಉಂಟಾಗುವ ಸಂಪೂರ್ಣ ನಷ್ಟವನ್ನು ತುಂಬಿಕೊಡಲಾಗದಿದ್ದರೂ ಆ ಸಮಯಕ್ಕೆ ಸಾಕಣೆ ಮಾಡುವವರಿಗೆ ಸ್ವಲ್ಪವಾದರೂ ನೆರವಿಗೆ ಬರುತ್ತಿತ್ತು. ಈಗ ಅದಕ್ಕೂ ಸರ್ಕಾರ ಬ್ರೇಕ್ ಹಾಕಿ ಸಾಕಣೆದಾರರನ್ನು ಬರಿಗೈ ಮಾಡಿ ಕೂರಿಸಿದೆ.
ಕುಂಟುತ್ತಾ ಸಾಗುತ್ತಾ ಬಂದ ಯೋಜನೆ:
2013ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಅನುಗ್ರಹ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಆರಂಭದ ಒಂದಷ್ಟುವರ್ಷ ಯೋಜನೆ ಉತ್ತಮವಾಗಿ ನಡೆಯಿತು. ಆ ನಂತರದಲ್ಲಿ ಬಿಟ್ಟು ಬಿಟ್ಟು ಯೋಜನೆಯನ್ನು ಮುನ್ನಡೆಸಿಕೊಂಡು ಬರಲಾಯಿತು.
ಸಿದ್ದರಾಮಯ್ಯ ನಂತರ ರಚನೆಯಾದ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರೂ ಯೋಜನೆ ಮುನ್ನಡೆಸಿಕೊಂಡು ಬಂದರು. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದಾಗಲೂ ಯೋಜನೆ ಜಾರಿಯಲ್ಲಿತ್ತು. ಆದರೆ, ಕಳೆದ ವರ್ಷ ಮಾತ್ರ ಈ ಯೋಜನೆಯಡಿ ಫಲಾನುಭವಿಗಳಿಗೆ ನೀಡಬೇಕಾದ 1.86 ಕೋಟಿ ರು. ಪರಿಹಾರ ಹಣವನ್ನು ಬಿಡುಗಡೆ ಮಾಡದೆ ಸರ್ಕಾರ ಬಾಕಿ ಉಳಿಸಿದೆ.
ಮಳೆಯಿಂದ ತಪ್ಪಿಸಿಕೊಳ್ಳಲು ಆಸರೆಗೆ ನಿಂತ ಕುರಿಗಳ ಮೇಲೆ ಹರಿದ ರೈಲು, 96 ಕುರಿ ಸಾವು
ಅರ್ಜಿ ಸ್ವೀಕರಿಸಬೇಡಿ:
ನೂತನವಾಗಿ ರಚನೆಯಾಗಿರುವ ಕಾಂಗ್ರೆಸ್ ಸರ್ಕಾರ ಕುರಿ-ಮೇಕೆ ಸಾವಿಗೆ ಸಂಬಂಧಿಸಿದಂತೆ ಹೊಸದಾಗಿ ಯಾವುದೇ ಅರ್ಜಿ ಸ್ವೀಕರಿಸಬೇಡಿ ಎಂದು ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧಿಕಾರಿಗಳಿಗೆ ಆದೇಶಿಸಿದೆ. ಅದರಂತೆ ಹೊಸದಾಗಿ ಯಾವುದೇ ಅರ್ಜಿ ಸ್ವೀಕರಿಸುತ್ತಿಲ್ಲ. ಹಳೆ ಬಾಕಿಯನ್ನೂ ಬಿಡುಗಡೆ ಮಾಡಿಲ್ಲ.
ಪ್ರತಿ ತಿಂಗಳು ನೂರಾರು ಕುರಿ-ಮೇಕೆಗಳು ವಿವಿಧ ಕಾರಣಗಳಿಂದ ಸಾವನ್ನಪ್ಪುತ್ತಿವೆ. ಸಾಕಣೆದಾರರು ಆರ್ಥಿಕವಾಗಿ ನಷ್ಟಅನುಭವಿಸುತ್ತಿದ್ದರೂ ಸರ್ಕಾರ ಅವರ ನೆರವಿಗೆ ನಿಲ್ಲುವ ಪ್ರಯತ್ನವನ್ನೇ ಮಾಡುತ್ತಿಲ್ಲ. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದಿದ್ದ ಅನುಗ್ರಹ ಯೋಜನೆಗೆ ಈಗ ಅವರೇ ಮುಖ್ಯಮಂತ್ರಿಯಾಗಿದ್ದರೂ ತಡೆಹಿಡಿದಿರುವುದು ವಿಪರ್ಯಾಸದ ಸಂಗತಿ.
ಜಿಲ್ಲೆಯಲ್ಲಿ ಕುರಿ-ಮೇಕೆಗಳ ಸಾವಿನ ವಿವರ
ತಿಂಗಳು ಅರ್ಜಿಗಳು ಕುರಿಗಳು ಮೇಕೆಗಳು ಒಟ್ಟು ಕುರಿಮರಿ ಮೇಕೆಮರಿ ಒಟ್ಟು ಮೊತ್ತ
- ಏಪ್ರಿಲ್-22 177 124 77 201 04 08 12 1047000
- ಮೇ 180 108 76 184 11 06 17 979500
- ಜೂನ್ 240 121 123 244 08 23 31 1328500
- ಜುಲೈ 278 156 108 264 12 31 43 1470500
- ಆಗಸ್ಟ್ 301 175 145 320 14 39 53 1785500
- ಸೆಪ್ಟೆಂಬರ್ 382 191 190 381 12 34 46 2066000
- ಅಕ್ಟೋಬರ್ 303 164 150 314 07 16 23 1650500
- ನವೆಂಬರ್ 345 170 178 348 03 26 29 1841500
- ಡಿಸೆಂಬರ್ 380 210 186 396 06 21 27 2074500
- ಜನವರಿ -23 316 168 141 309 12 17 29 1646500
- ಫೆಬ್ರವರಿ 252 128 117 245 04 09 13 1279500
- ಮಾಚ್‌ರ್ 253 147 128 275 07 13 20 1445000
- ಒಟ್ಟು 3407 1862 1619 3481 100 243 343 18605500
ಅನುಗ್ರಹ ಯೋಜನೆಯಡಿ ಕಳೆದೊಂದು ವರ್ಷದಿಂದ ಕುರಿ-ಮೇಕೆಗಳ ಸಾವಿಗೆ ಪರಿಹಾರ ಹಣ ಬಿಡುಗಡೆಯಾಗಬೇಕಿದೆ. ಸುಮಾರು 1.86 ಕೋಟಿ ರು. ಪರಿಹಾರ ವಿತರಿಸುವುದು ಬಾಕಿ ಇದೆ. ಸರ್ಕಾರದಿಂದ ಇದುವರೆಗೆ ಹಣ ಬಿಡುಗಡೆಯಾಗಿಲ್ಲ. ಹೊಸ ಅರ್ಜಿಗಳನ್ನು ಸ್ವೀಕರಿಸದಂತೆ ಸರ್ಕಾರ ಆದೇಶಿಸಿದೆ.
- ಡಾ.ಸಿದ್ದರಾಮು, ಸಹಾಯಕ ನಿರ್ದೇಶಕರು, ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ