ಮಳೆಯಿಂದ ತಪ್ಪಿಸಿಕೊಳ್ಳಲು ಆಸರೆಗೆ ನಿಂತ ಕುರಿಗಳ ಮೇಲೆ ಹರಿದ ರೈಲು, 96 ಕುರಿ ಸಾವು
ಮಳೆಯಿಂದ ರಕ್ಷಿಸಿಕೊಳ್ಳಲು ಬ್ರಿಡ್ಜ್ ಕೆಳಗಿನ ರೈಲ್ವೇ ಟ್ರ್ಯಾಕ್ ಬಳಿ ಬಚ್ಚಿಕೊಂಡಿದ್ದ ಕುರಿಗಳ ಮೇಲೆ ರೈಲು ಹರಿದಿದ್ದು, ಕುರಿಗಳು ಸಾವನ್ನಪ್ಪಿವೆ. ಕುರಿಗಳನ್ನು ಕಳೆದುಕೊಂಡ ಕುರಿಗಾರರು ಕಣ್ಣೀರು ಹಾಕುತ್ತಿದ್ದಾರೆ.
ವರದಿ: ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ, (ಜುಲೈ16): ಮಳೆ ಸುರಿಯುತ್ತಿದ್ದ ವೇಳೆ ರೈಲ್ವೆ ಮೇಲ್ಸೇತುವೆ ಕೆಳಗಿನ ಟ್ರ್ಯಾಕ್ ಬಳಿ ನಿಂತಿದ್ದ ನೂರಕ್ಕೂ ಅಧಿಕ ಕುರಿಗಳ ಮೇಲೆ ಎಕ್ಸಪ್ರೆಸ್ ರೈಲು ಹರಿದು ಹೋಗಿದೆ. ಪರಿಣಾಮ 96 ಕುರಿಗಳು ಸ್ಥಳದಲ್ಲೇ ಸಾವಿಗೀಡಾಗಿ 10 ಕುರಿಗಳು ಗಂಭೀರವಾಗಿ ಗಾಯಗೊಂಡಿವೆ. ಈ ಮನಕಲಕುವ ಘಟನೆ ತಾಲ್ಲೂಕಿನ ಕೂಡಗಿ ರೈಲ್ವೇ ನಿಲ್ದಾಣದ ಬಳಿಯ ಮೇಲ್ಸೇತುವೆ ಕೆಳಗೆ ಶನಿವಾರ ಸಂಜೆ ಸಂಭವಿಸಿದೆ.
ಮಳೆಯಿಂದ ತಪ್ಪಿಸಿಕೊಳ್ಳಲು ಆಸರೆಗೆ ನಿಂತ ಕುರಿಗಳು
ಮಳೆಯಾಗುತ್ತಿದ್ದ ಕಾರಣ ಕುರಿಗಾಹಿಗಳು ಕೂಡಗಿ ರೈಲ್ವೇ ಮೇಲ್ಸೇತುವೆ ಕೆಳಗೆ ತಮ್ಮ ಕುರಿಗಳನ್ನು ನಿಲ್ಲಿಸಿದ್ದ ವೇಳೆ ತೆಲಗಿ ಕಡೆಯಿಂದ ವಿಜಯಪುರ ಮಾರ್ಗವಾಗಿ ಹೋಗುತ್ತಿದ್ದ ಎಕ್ಸಪ್ರೆಸ್ ರೈಲಿಗೆ ಕುರಿಗಳು ಸಿಲುಕಿ ಸಾವನಪ್ಪಿ ಹಳಿಗಳ ಅಕ್ಕಪಕ್ಕ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.
ವಿಜಯಪುರ: ಇಬ್ಬರು ಹೆಣ್ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ, ಕಾರಣ ಕೇಳಿದ್ರೆ ಹೌಹಾರ್ತಿರಿ..!
ಕೊಲ್ಹಾರ ತಾಲ್ಲೂಕಿನ ತಳೇವಾಡ ಗ್ರಾಮದ ಕುರಿಗಾಹಿಗಳಾದ ಶಿವಪ್ಪ ಕಲ್ಲಪ್ಪ ಮೂಕನೂರ ಅವರ 25 ಕುರಿಗಳು, ಚಂದ್ರಪ್ಪ ಕರಿಯಪ್ಪ ಕರಿಗಾರ ಅವರ 43 ಕುರಿಗಳು, ಶೇಖು ಕಲ್ಲಪ್ಪ ಮೂಕನೂರ ಅವರ 18 ಕುರಿಗಳು ಮತ್ತು ಮಲ್ಲಪ್ಪ ಮಹಾದೇವಪ್ಪ ಕಾಡಸಿದ್ದ ಅವರ 20 ಕುರಿಗಳು ದುರ್ಘಟನೆಯಲ್ಲಿ ರೈಲಿಗೆ ಸಿಲುಕಿ ಸ್ಥಳದಲ್ಲೇ ಸಾವನಪ್ಪಿ 10 ಕುರಿಗಳು ತೀವ್ರ ಗಾಯಗೊಂಡಿವೆ. ಇದರಿಂದ ಕುರಿ ಮಾಲೀಕರಿಗೆ ಭಾರೀ ನಷ್ಟವಾಗಿದೆ.ಇದರಿಂದ ಕುರಿಗಾಹಿಗಳು ಕಣ್ಣೀರು ಹಾಕುತ್ತಿದ್ದಾರೆ.
ಸ್ಥಳಕ್ಕೆ ಮಾಜಿ ಸಚಿವ ಬೆಳ್ಳುಬ್ಬು ಭೇಟಿ
ಘಟನೆ ವಿಷಯ ತಿಳಿಯುತಿದ್ದಂತೆ ಸ್ಥಳಕ್ಕೆ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ, ತಹಶೀಲ್ದಾರ ಪಿ.ಜಿ.ಪವಾರ, ಉಣ್ಣೆ ಮತ್ತು ಕುರಿ ಅಭಿವೃದ್ಧಿ ನಿಗಮದ ಜಿಲ್ಲಾ ಅಧಿಕಾರಿ ಪದ್ಮಾವತಿ ದೊಡ್ಡಮನಿ, ಪಶು ವೈದ್ಯಾಧಿಕಾರಿಗಳಾದ ವಸಂತ ಮೂಲಿಮನಿ, ಮಲ್ಲಿಕಾರ್ಜುನ ಹತ್ತರಕಿಹಾಳ, ಪಿಎಸ್ಐ ಸಂಗಾಪುರ ಸೇರಿದಂತೆ ರೈಲ್ವೆ ಅಧಿಕಾರಿಗಳು ದೌಡಾಯಿಸಿದರು.
ಸಚಿವರ ಪ್ರಭು ಚವ್ಹಾಣ್ ಜೊತೆಗೆ ಬೆಳ್ಳುಬ್ಬಿ ಮಾತು
ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಪಶುಸಂಗೋಪನೆ ಸಚಿವರ ಆಪ್ತ ಕಾರ್ಯದರ್ಶಿ ಹಾಗೂ ವಿಜಯಪುರ ಡಿಸಿ ವಿಜಯಮಹಾಂತೇಶ ದಾನಮ್ಮನವರ ಅವರೊಂದಿಗೆ ಕರೆ ಮಾಡಿ ಮಾತನಾಡಿ ಘಟನೆ ಕುರಿತು ವಿವರಿಸಿ ಕುರಿಗಾಹಿಗಳಿಗೆ ಸೂಕ್ತ ಪರಿಹಾರಧನ ನೀಡುವಂತೆ ಕೋರಿದರು. ಜೀವನಾಧಾರವಾಗಿದ್ದ ಕುರಿಗಳನ್ನು ಕಳೆದುಕೊಂಡ ಕುರಿಗಾಹಿಗಳಿಗೆ ಸಾಂತ್ವಾನ ಹೇಳಿ ಧೈರ್ಯ ತುಂಬಿದರು.
ಅಧಿಕಾರಿಗಳ ಭೇಟಿ, ಸಹಾಯದ ಭರವಸೆ.
ತಹಶೀಲ್ದಾರ್ ಪಿ.ಜಿ.ಪವಾರ ಮಾತನಾಡಿ, ರೈಲ್ವೆ ಹರಿದು ಕುರಿಗಳನ್ನು ಕಳೆದುಕೊಂಡ ಕುರಿಗಾಹಿಗಳಿಗೆ ಕುರು ಮತ್ತು ಉಣ್ಣೆ ಅಭಿವೃದ್ಧಿ ನಿಗಮ ಮತ್ತು ರೈಲ್ವೆ ಇಲಾಖೆ ಹೀಗೆ ಸಂಬಂಧಿಸಿದ ಇಲಾಖೆಗಳಿಂದ ಶೀಘ್ರ ಹಾಗೂ ಸೂಕ್ತ ಪರಿಹಾರ ಕೊಡಿಸಲು ಕ್ರಮವಹಿಸುವುದಾಗಿ ಹೇಳಿದರು.