ಗ್ರಾಮ ವಾಸ್ತವ್ಯ: ಜನರ ಸಮಸ್ಯೆಗಳಿಗೆ ಧ್ವನಿಯಾಗಬೇಕು; ಡಾ.ಬಿ.ಸಿ.ಸತೀಶ
- ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಗ್ರಾಮ ವಾಸ್ತವ್ಯ’ ಕಾರ್ಯಕ್ರಮ
- ಜನರು ಸಮಸ್ಯೆಗಳನ್ನು ನೇರವಾಗಿ ಕಾರ್ಯಕ್ರಮದಲ್ಲಿ ಹೇಳಿಕೊಳ್ಳಲು ಇದೊಂದು ಸುವರ್ಣವಕಾಶ
- ಜನರ ಸಮಸ್ಯೆಗಳಿಗೆ ಧ್ವನಿಯಾಗಬೇಕು -ಡಿಸಿ ಡಾ.ಬಿ.ಸಿ.ಸತೀಶ
ಮಡಿಕೇರಿ (ಆ.21) : ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಗ್ರಾಮ ವಾಸ್ತವ್ಯ’ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳ ಜೊತೆಗೆ ಜಿಲ್ಲಾ ಮಟ್ಟದ ಅಧಿಕಾರಿಗಳು ಸೇರಿರುವುದರಿಂದ ತಮ್ಮ ಸಮಸ್ಯೆಗಳನ್ನು ನೇರವಾಗಿ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಹೇಳಿಕೊಳ್ಳಲು ಇದೊಂದು ಸುವರ್ಣವಕಾಶವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ತಿಳಿಸಿದರು. ಹಾಕತ್ತೂರು(Hakattooru) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕುವೆಂಪು ಶತಮಾನೋತ್ಸವ ಸಭಾಂಗಣದಲ್ಲಿ ಶನಿವಾರ ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗೂ ತಾಲೂಕಿನ ಎಲ್ಲ ಅಧಿಕಾರಿಗಳ ಸಹಯೋಗದೊಂದಿಗೆ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಗ್ರಾಮ ವಾಸ್ತವ್ಯ’ ಜನರ ಸಮಸ್ಯೆಗಳಿಗೆ ಧ್ವನಿಯಾಗುವ ಕಾರ್ಯಕ್ರಮವು ನಡೆಯಿತು.
ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ, ಸಚಿವ ಆರ್ ಅಶೋಕ್ ಉತ್ತರಕನ್ನಡ ವಾಸ್ತವ್ಯದ ಒಂದು ಝಲಕ್
ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುವುದರ ಜೊತೆಗೆ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಲು ಇದೊಂದು ಸುವರ್ಣಾವಕಾಶವಾಗಿದೆ ಎಂದು ಅವರು ಹೇಳಿದರು. ನಮ್ಮ ಮಟ್ಟದಲ್ಲಿ ಸಮಸ್ಯೆಗಳಿಗೆ ಪರಿಹಾರ ನೀಡಬಹುದಾದರೆ ಈ ಹಂತದಲ್ಲಿಯೇ ಪರಿಹರಿಸಿಕೊಡಲಾಗುವುದು ಎಂದು ತಿಳಿಸಿದರು. ಉಪ ವಿಭಾಗಾಧಿಕಾರಿ ಡಾ.ಯತೀಶ್ ಉಳ್ಳಾಲ್ ಅವರು ಮಾತನಾಡಿ ಮತದಾರರ ಗುರುತಿನ ಚೀಟಿ ಸಂಖ್ಯೆಗೆ ಆಧಾರ್ ಲಿಂಕ್ ಮಾಡಿಸಲು ಎಲ್ಲರೂ ಮುಂದಾಗಬೇಕು. ಆ ನಿಟ್ಟಿನಲ್ಲಿ ಗುರುತಿನ ಚೀಟಿ ಸಂಖ್ಯೆಗೆ ಆಧಾರ್ ಲಿಂಕ್ ಮಾಡಿಸಲು ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕು. ಶೇ. 100 ರಷ್ಟುಪ್ರಗತಿ ಸಾಧಿಸುವಂತೆ ಹಾಕತ್ತೂರು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಅವರು ತಿಳಿಸಿದರು.
ಸ್ಥಳೀಯರಾದ ಹರೀಶ್ ಅವರು ಮಾತನಾಡಿ, ಚೂರಿಕಾಡು ಪೈಸಾರಿಗೆ ಹೋಗುವ ರಸ್ತೆ ದುರಸ್ತಿಯಾಗಿದ್ದು ಅದನ್ನು ಸರಿಪಡಿಸಿ ಕೊಡುವಂತೆ ಮನವಿ ಮಾಡಿದರು. ಶೌಚಾಲಯಕ್ಕಾಗಿ ಅರ್ಜಿ ಸಲ್ಲಿಸಿ 7-8 ತಿಂಗಳಾದರೂ ಕೂಡ ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ಆರೋಪಿಸಿದರು. ನಡೆದಾಡುವ ರಸ್ತೆ ಮತ್ತು ಬೀದಿ ದೀಪದ ವ್ಯವಸ್ಥೆ ಮಾಡಿಕೊಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಮಡಿಕೇರಿ ತಾಲೂಕು ಪಂಚಾಯಿತಿ ಇಒ ಶೇಖರ್ ಮಾತನಾಡಿ, ಸ್ವಂತ ಮನೆ ಹೊಂದಿದ್ದರೆ ಶೌಚಾಲಯವನ್ನು ನಿರ್ಮಿಸಿ ಕೊಡಬಹುದು. ಮನೆ ಇಲ್ಲದೆ ಕೇವಲ ಶೌಚಾಲಯವನ್ನು ನಿರ್ಮಿಸಿ ಕೊಡಲು ಸಾಧ್ಯವಿಲ್ಲ ಎಂದರು.
ರಸ್ತೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅಧಿಕಾರಿಯೊಬ್ಬರು ಆರ್‌ಡಿಪಿಆರ್ ರಸ್ತೆಯಾಗಿದ್ದರೆ ಪಂಚಾಯತ್ ರಾಜ್ ಯೋಜನೆ ಅಡಿ ದುರಸ್ತಿ ಮಾಡಿಸಬಹುದು ಆ ನಿಟ್ಟಿನಲ್ಲಿ ಸ್ಥಳ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು. ಸುಕುಮಾರ್ ಅವರು ಮಾತನಾಡಿ, ತ್ರಿನೇತ್ರ ಯುವಕ ಸಂಘವು ಕಳೆದ 25 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು ಸಂಘದ ಕಟ್ಟಡಕ್ಕೆ ಯಾವುದೇ ರೀತಿಯಾದ ಭೂ ದಾಖಲೆಗಳು ಇರುವುದಿಲ್ಲ ಅ ನಿಟ್ಟಿನಲ್ಲಿ ಸಂಬಂಧಪಟ್ಟಅಧಿಕಾರಿಗಳು ಸಂಘದ ಹೆಸರಿಗೆ ಭೂ ದಾಖಲಾತಿಗಳನ್ನು ಮಾಡಿಕೊಡುವಂತೆ ಮನವಿ ಮಾಡಿದರು.
ಜಿಲ್ಲಾಧಿಕಾರಿ ಅವರು ಸರ್ಕಾರಿ ಜಾಗವನ್ನು ಖಾಸಗಿ ಒಡೆತನಕ್ಕೆ ನೀಡಲು ಆಗುವುದಿಲ್ಲ. ಒಂದು ವೇಳೆ ಆ ರೀತಿಯಾಗಿ ನೀಡಬೇಕೆಂದರೆ ಸರ್ಕಾರದಿಂದ ಮಾತ್ರ ನೀಡಲು ಸಾಧ್ಯ ಎಂದರು ಸ್ಥಳೀಯರಾದ ನಿತೀಶ್ ಮಾತನಾಡಿ, ಭಗವತಿ ದೇವಸ್ಥಾನದ ರಸ್ತೆಗೆ ಗುದ್ದಲಿ ಪೂಜೆ ನಡೆದರು ಕೂಡ ರಸ್ತೆ ಕಾಮಗಾರಿ ನಡೆದಿರುವುದಿಲ್ಲ ಎಂದು ಆರೋಪಿಸಿದರು. ಸಂಬಂಧಪಟ್ಟಅಧಿಕಾರಿ ಜವರೇಗೌಡ ಮಾತನಾಡಿ, ಆ ಭಾಗದ ರಸ್ತೆಯ ಕಾಮಗಾರಿಗೆ ಅನುದಾನ ಬಿಡುಗಡೆಯಾಗಿದೆ ಆದಷ್ಟುಬೇಗ ರಸ್ತೆ ಕಾಮಗಾರಿ ಮಾಡಲಾಗುವುದು ಎಂದು ತಿಳಿಸಿದರು.
Uttara Kannada: ಹೋಬಳಿ ಮಟ್ಟದಲ್ಲೂ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ: ರಾಜ್ಯದಲ್ಲೇ ಪ್ರಥಮ ಪ್ರಯೋಗ
ಸಾರ್ವಜನಿಕರಾದ ಯತೀಶ್ ಮಾತನಾಡಿ, 90 ಮನೆಯಿಂದ ಚೂರಿಕಾಡು ಮುಖ್ಯ ರಸ್ತೆಗೆ ಹೋಗುವ ದಾರಿ ಸಂಪೂರ್ಣವಾಗಿ ಹದಗೆಟ್ಟಿದೆ. ಇದನ್ನು ಸರಿಪಡಿಸಿ ಕೊಡುವಂತೆ ಮನವಿ ಮಾಡಿದರು. ನಿವೇಶನ ರಹಿತರಿಗೆ ನಿವೇಶನ ನೀಡುವಂತೆ ಈ ಸಂದರ್ಭದಲ್ಲಿ ಅಧಿಕಾರಿಗಳಿಗೆ ಮನವಿ ಮಾಡಿದರು. ಉಪ ವಿಭಾಗಾಧಿಕಾರಿ ಅವರು ಮಾತನಾಡಿ ನಿವೇಶನ ರಹಿತರ ಪಟ್ಟಿಸಿದ್ದಪಡಿಸಿ ಪ್ರಸ್ತಾವನೆ ಸಲ್ಲಿಸಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಗ್ರಾಮದಲ್ಲಿ ನಿವೇಶನ ರಹಿತರಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿವೇಶನ ರಹಿತರ ಸರ್ವೆ ಮಾಡಲಾಗಿದೆ. ಜಾಗ ಇದ್ದವರಿಗೆ ಮನೆ ನಿರ್ಮಾಣಕ್ಕೆ ಆದೇಶ ನೀಡಲಾಗುತ್ತದೆ. ಗ್ರಾಮಕ್ಕೆ ಸರ್ಕಾರಿ ಆಸ್ಪತ್ರೆ ಶಾಲೆ ಮುಂತಾದ ಸರ್ಕಾರಿ ಮತ್ತು ಸಾರ್ವಜನಿಕ ಉದ್ದೇಶಕ್ಕಾಗಿ ಇದ್ದ ಜಾಗವನ್ನು ಬಿಟ್ಟು. ಅತಿಕ್ರಮಣಕ್ಕೆ ಒಳಪಡದಿದ್ದರೆ ಮತ್ತು ಯಾರ ತಡೆ ಇಲ್ಲದಿದ್ದರೆ ಅವಶ್ಯಕತೆಗೆ ಅನುಗುಣವಾಗಿ ನಿವೇಶನ ರಹಿತರಿಗೆ ನಿವೇಶನ ಒದಗಿಸುವ ಕೆಲಸ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
ನರೇಗಾ ಜಾಬ್ ಕಾರ್ಡ್ ಹೊಂದಿರುವವರನ್ನು ಉದ್ಯೋಗ ಖಾತ್ರಿಯಲ್ಲಿ ಕೆಲಸ ಮಾಡಿಸಲು ಅವಕಾಶವಿದೆ ಎಂದು ಮಡಿಕೇರಿ ತಾಲೂಕು ಪಂಚಾಯಿತಿ ಇಒ ಶೇಖರ್ ಅವರು ತಿಳಿಸಿದರು. ಸ್ಥಳೀಯರೊಬ್ಬರು ಮಾತನಾಡಿ ಹಾಕತ್ತೂರು ಗ್ರಾಮ ಪಂಚಾಯಿತಿಗೆ ಸ್ವಂತ ಜಾಗ ಇರುವುದಿಲ್ಲ ಆ ನಿಟ್ಟಿನಲ್ಲಿ ಪಂಚಾಯಿತಿಗೆ ಶಾಶ್ವತವಾಗಿ ಜಾಗ ಒದಗಿಸುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಅವರು ಗ್ರಾಮ ಪಂಚಾಯಿತಿಗೆ ಸ್ವಂತ ಜಾಗ ನೀಡಲು ಸೂಕ್ತ ಕ್ರಮ ವಹಿಸಲಾಗುವುದು ಎಂದರು.
ಸ್ಥಳೀಯರಾದ ಲೋಕೇಶ್ ಮಾತನಾಡಿ, ಬಾರಿ ಮಳೆಯಿಂದಾಗಿ ಈ ಭಾಗದ ರಸ್ತೆಗಳೆಲ್ಲ ಸಂಪೂರ್ಣ ಹಾನಿಯಾಗಿದ್ದು ಇದನ್ನು ಸರಿಪಡಿಸಿ ಕೊಡುವಂತೆ ಮನವಿ ಮಾಡಿದರು. ಪೂಕಾಡು ಪೈಸಾರಿ ಜಾಗದಲ್ಲಿನ ಸ್ಮಶಾನದಲ್ಲಿ ಕೆಲವೊಂದು ಕಾಮಗಾರಿಗಳನ್ನು ಮಾಡಿಸುವಂತೆ ಮನವಿ ಮಾಡಿದರು. ಸಾರ್ವಜನಿಕರೊಬ್ಬರು ಮಾತನಾಡಿ ಬಿಪಿಎಲ್ ಪಡಿತರ ಕಾರ್ಡ್ ಎಪಿಲ್ ಆಗಿದೆ ಅದನ್ನು ಸರಿಪಡಿಸಿ ಕೊಡುವಂತೆ ಕೋರಿದರು. ಇದಕ್ಕೆ ಸ್ಪಂದಿಸಿದ ಅಧಿಕಾರಿಗಳು ಮೊದಲೇ ಇವರಿಗೆ ಎಪಿಲ್ ಕಾರ್ಡ್ ಸಿಕ್ಕಿದೆ ಕುಟುಂಬದ ಆದಾಯ 25 ಸಾವಿರ ರು. ಇದೆ. ದಾಖಲೆಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ವಹಿಸಲಾಗುವುದು ಎಂದು ಹೇಳಿದರು.
ಕಲಬುರಗಿ: ಸಚಿವ ಅಶೋಕ್ ಆಡಕಿ ಗ್ರಾಮವಾಸ್ತವ್ಯ ದಾಖಲೆ..!
ಸುನಿತಾ ಅವರು ಮಾತನಾಡಿ ನಾನು ಬಿಳಿಗಿರಿ ಗ್ರಾಮದ ನಿವಾಸಿಯಾಗಿದ್ದು ನನ್ನ ಗಂಡ ಕೋವಿಡ್‌ನಿಂದಾಗಿ ಮರಣ ಹೊಂದಿದ್ದಾರೆ. ಕೇಂದ್ರ ಸರ್ಕಾರದಿಂದ 50 ಸಾವಿರ ಪರಿಹಾರ ದೊರೆತಿದೆ. ಆದರೆ ರಾಜ್ಯ ಸರ್ಕಾರದಿಂದ ಯಾವುದೇ ರೀತಿಯಾದ ಪರಿಹಾರ ಸಿಗಲಿಲ್ಲ ಎಂದು ಅವರು ತಿಳಿಸಿದರು. ಜಿಲ್ಲಾಧಿಕಾರಿ ಅವರು ಮಾತನಾಡಿ ಬಿಪಿಎಲ್ ಕಾರ್ಡ್ ಇದ್ದರೆ ಅನುದಾನ ಸಿಗುತ್ತದೆ ಎಪಿಎಲ್ ಕಾರ್ಡ್ ಹೊಂದಿದ್ದರೆ ಯಾವುದೇ ರೀತಿಯಾದ ಅನುದಾನ ಸಿಗುವುದಿಲ್ಲ ಎಂದರು. ಗ್ರಾಮಸ್ಥರಾದ ಪಾರ್ವತಿ ಅವರು ಮಾತನಾಡಿ ಹಕ್ಕುಪತ್ರ ದೊರೆತರೂ ಕೂಡ ನನಗೆ ಇಲ್ಲಿಯವರೆಗೂ ಯಾವುದೇ ರೀತಿಯ ನಿವೇಶನ ದೊರೆತಿಲ್ಲ ಎಂದು ತಿಳಿಸಿದರು.
ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಅವರು 80/1 ಸರ್ವೆ ನಂಬರನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಫಲಾನುಭವಿಗಳಿಗೆ ಜಾಗವನ್ನು ಒದಗಿಸಲಾಗುವುದು ಎಂದರು. ಕಿರಣ್ ರವರು ಮಾತನಾಡಿ ವಿಭಾಗದಲ್ಲಿ ಪರಿಶಿಷ್ಟಜಾತಿ ಪರಿಶಿಷ್ಟಪಂಗಡದ ಜನರು ವಾಸಿಸುತ್ತಿದ್ದು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಅಂಬೇಡ್ಕರ್ ಭವನ ನಿರ್ಮಾಣ ಮಾಡಿಕೊಡುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಶೇಖರ್ ಅವರು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಅಂಬೇಡ್ಕರ್ ಭವನ ನಿರ್ಮಾಣಕ್ಕೆ 20 ಲಕ್ಷ ರು. ನೀಡಲಾಗುತ್ತದೆ. ಅದಕ್ಕೆ ಕೆಲವೊಂದು ನಿಯಮಗಳಿವೆ ಅಂಬೇಡ್ಕರ್ ಭವನದ ನಿರ್ಮಾಣದ ಜಾಗ ಸಮಾಜ ಕಲ್ಯಾಣ ಇಲಾಖೆಯ ಹೆಸರಿನಲ್ಲಿರಬೇಕು ಕಾಮಗಾರಿ ಪೂರ್ಣಗೊಂಡ ನಂತರ ಅದರ ಜವಾಬ್ದಾರಿಯನ್ನು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ನೀಡಲಾಗುವುದು ಎಂದು ಹೇಳಿದರು.
ಆದಾಯ ದೃಢೀಕರಣ ಪತ್ರ, ಪಿಂಚಣಿ ವ್ಯವಸ್ಥೆ, ಪಡಿತರ ಚೀಟಿ, ಸರ್ಕಾರಿ ಶಾಲೆಯ ಮೇಲ್ಚಾವಣಿಯ ಅಂಚುಗಳು ಹಾನಿಯಾಗಿರುವುದು, ತಡೆಗೋಡೆ ನಿರ್ಮಾಣ, ಕುಡಿಯುವ ನೀರು, ನಿವೇಶನ ರಹಿತರಿಗೆ ನಿವೇಶನ ಒದಗಿಸುವಂತೆ ಹಲವಾರು ಅರ್ಜಿ ಅಹವಾಲುಗಳನ್ನು ಜನರು ಜಿಲ್ಲಾಧಿಕಾರಿ ಅವರಿಗೆ ಸಾರ್ವಜನಿಕರು ನೀಡಿದರು. ತಹಸೀಲ್ದಾರ್ ಪಿ.ಎಸ್.ಮಹೇಶ್, ಗ್ರಾ.ಪಂ.ಅಧ್ಯಕ್ಷರಾದ ಸವಿತಾ, ನಾನಾ ಇಲಾಖೆ ಅಧಿಕಾರಿಗಳು ಇದ್ದರು.