ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ, ಸಚಿವ ಆರ್ ಅಶೋಕ್ ಉತ್ತರಕನ್ನಡ ವಾಸ್ತವ್ಯದ ಒಂದು ಝಲಕ್
ರಾಜ್ಯ ಕಂದಾಯ ಸಚಿವ ಆರ್.ಅಶೋಕ್ ಇಂದು(ಏ.15) ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಮೂಲಕ ಉತ್ತರಕನ್ನಡ ಜಿಲ್ಲೆಯಾದ್ಯಂತ ಪ್ರವಾಸ ನಡೆಸಿದ್ದಾರೆ. ಜಿಲ್ಲೆಯ ಕುಮಟಾ ಹಾಗೂ ಅಂಕೋಲಾದ ಅಚಿವೆಯಲ್ಲಿ ನಡೆದ "ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ" ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಚಿವರು, ಅರ್ಹ ಫಲಾನುಭವಿಗಳಿಗೆ ಹಕ್ಕು ಪತ್ರ ಹಾಗೂ ಇತರ ದಾಖಲೆಗಳನ್ನು ವಿತರಿಸಿದರು. ಅಲ್ಲದೇ, ಪದವೀಧರ ಯುವತಿಗೆ ಉದ್ಯೋಗ ಹಾಗೂ ಪದವಿ ಪಡೆದ ಇತರ ವಿದ್ಯಾರ್ಥಿನಿಯರಿಗೆ ಲ್ಯಾಪ್‌ಟಾಪ್ ವಿತರಿಸಿದರು. ಕಂದಾಯ ಸಚಿವರು ಗ್ರಾಮ ವಾಸ್ತವ್ಯದ ಒಂದು ಝಲಕ್ ಇಲ್ಲಿದೆ ನೋಡಿ.
ರಾಜ್ಯದೆಲ್ಲೆಡೆ ಪ್ರವಾಸ ಬೆಳೆಸಿರುವ ಕಂದಾಯ ಸಚಿವ ಆರ್. ಅಶೋಕ್ ಇಂದು ಉತ್ತರಕನ್ನಡ ಜಿಲ್ಲೆಯ ವಿವಿಧೆಡೆ ತಿರುಗಾಟ ನಡೆಸಿದ್ದಾರೆ. "ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ" ಶೀರ್ಷಿಕೆಯ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಭಾಗಿಯಾಗುವ ನಿಟ್ಟಿನಲ್ಲಿ ನಿನ್ನೆ ರಾತ್ರಿಯೇ ಜಿಲ್ಲೆಗೆ ಭೇಟಿ ನೀಡಿದ ಸಚಿವರು, ಭಟ್ಕಳದಲ್ಲಿ ತಂಗಿದ್ದರು. ಇಂದು(ಶುಕ್ರವಾರ) ಬೆಳಗ್ಗೆ ಭಟ್ಕಳದಿಂದ ನೇರವಾಗಿ ಕುಮಟಾಕ್ಕೆ ಪ್ರಯಾಣ ಬೆಳೆಸಿದ ಅವರು, ಕುಮಟಾ ಹೊಲನಗದ್ದೆ ಹರಿಕಂತ್ರ ಕೇರಿಯಲ್ಲಿ ಆಯೋಜಿಸಲಾಗಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ತುಳಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿದರು.
ಈ ವೇಳೆ ಸಚಿವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕ ದಿನಕರ ಶೆಟ್ಟಿ ಸಾಥ್ ನೀಡಿದರು. ಬಳಿಕ ಜನರ ಸಮಸ್ಯೆಗಳಿಗೆ ಆಲಿಸಿದ ಕಂದಾಯ ಸಚಿವರು, ಅರ್ಹ ಫಲಾನುಭವಿಗಳಿಗೆ ಹಕ್ಕು ಪತ್ರ, ಪೆನ್ಶನ್, ವಿಧವಾ ವೇತನ ಹಾಗೂ ಇತರ ಸವಲತ್ತುಗಳನ್ನು ವಿತರಿಸಿದರು.
ಕಾರ್ಯಕ್ರಮದ ಬಳಿಕ ಸಚಿವ ಕೆ.ಎಸ್.ಈಶ್ವರಪ್ಪ ರಾಜೀನಾಮೆ ವಿಚಾರ ಸಂಬಂಧಿಸಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಇದು ಗ್ರಾಮ ವಾಸ್ತವ್ಯ, ಇದರ ಬಿಟ್ಟು ಬೇರೇನೂ ಮಾತನಾಡಲ್ಲ.ಈಶ್ವರಪ್ಪ ವಿಚಾರ ಸಂಬಂಧಿಸಿ ಉತ್ತರಿಸಲು ಸಿಎಂ ಇದ್ದಾರೆ ಎಂದು ಕೈ ಮುಗಿದು ತೆರಳಿದರು. ಕುಮಟಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ನೇರವಾಗಿ ಅಂಕೋಲಾದ ಅಚಿವೆಗೆ ತೆರಳಿದ ಕಂದಾಯ ಸಚಿವರಿಗೆ ಭರ್ಜರಿ ಸ್ವಾಗತ ದೊರಕಿದೆ. ಸುಮಾರು 200 ಮೀಟರ್ ನಡೆದ ಮೆರವಣಿಗೆಯಲ್ಲಿ ಟ್ರ್ಯಾಕ್ಟರ್ ಮೇಲೆ ನಿಂತುಕೊಂಡು ಕಾರ್ಯಕ್ರಮದ ಸ್ಥಳಕ್ಕೆ ಸಚಿವರು ಆಗಮಿಸಿದರು. ಸಚಿವರಿಗೆ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್, ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ದಿನಕರ ಶೆಟ್ಟಿ, ರೂಪಾಲಿ ನಾಯ್ಕ್, ಎಂಎಲ್‌ಸಿ ಶಾಂತರಾಮ ಸಿದ್ಧಿ, ಜಿಲ್ಲಾಧಿಕಾರಿ ಮುಲೈ ಮುಹಿಲನ್, ಸಿಇಒ ಪ್ರಿಯಾಂಗಾ, ಎಸಿ ರಾಹುಲ್ ಪಾಂಡೆ ಸಾಥ್ ನೀಡಿದರು.
ಅಂದಹಾಗೆ, ಗಣ್ಯರನ್ನು ಸ್ವಾಗತಿಸಲು ಗೊಂಬೆ ಕುಣಿತ, ಸಿದ್ಧಿ ಕುಣಿತ, ಗುಮಟೆ ಪಾಂಗ್, ಡೊಳ್ಳು, ತಮಟೆ, ಯಕ್ಷಗಾನ ಕುಣಿತ ಮುಂತಾದ ಕಲಾವಿದರಿಂದ ಆಕರ್ಷಕ ಪ್ರದರ್ಶನ ನಡೆಯಿತು. ಬಳಿಕ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸರುವ ಮೂಲಕ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಸಚಿವರು ಚಾಲನೆ ನೀಡಿದರು. ಈ ವೇಳೆ ಸರಕಾರದ ಸಾಧನೆಯ ವಿವರಣೆಯೊಂದಿಗೆ ಜನರ ಸಮಸ್ಯೆ ಪರಿಹಾರದ ಆಶ್ವಾಸನೆ ನೀಡಿದ ಸಚಿವರು, ಒಂದು ಕರೆಯಲ್ಲಿ 72 ಗಂಟೆಯೊಳಗೆ ಮನೆ ಬಾಗಿಲಿಗೆ ಪೆನ್ಶನ್ ಬರುವ ಯೋಜನೆ ಜಾರಿಗೊಳಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಸುಮಾರು 10-12 ಸಾವಿರ ಜನರು ಭಾಗಿಯಾಗಿದ್ದರು. ಅಚಿವೆಯಲ್ಲಿ ಗ್ರಾಮ ವಾಸ್ತವ್ಯದ ಸಭಾ ಕಾರ್ಯಕ್ರಮದ ಬಳಿಕ ಅಂಗಡಿ ಬೈಲ್‌ಗೆ ತೆರಳಿದ ಸಚಿವರು, ಸುಬ್ರಾಯ ಸಿದ್ಧಿಯವರ ಮನೆಗೆ ಭೇಟಿ ನೀಡಿದ್ದಾರೆ. ಕಂದಾಯ ಸಚಿವರು ಆಗಮನದ ವೇಳೆ ಡಮಾಮಿ, ಪುಗುಡಿ ಪಾಂಗ್ ನೃತ್ಯದ ಮೂಲಕ ಸಿದ್ಧಿ ಮಹಿಳೆಯರು ಸಚಿವರನ್ನು ಸ್ವಾಗತಿಸಿದ್ದಾರೆ.
ಸಿದ್ಧಿ ಸಾಂಪ್ರದಾಯಿಕ ಕುಣಿತ ನೋಡಿ ಸಚಿವರು ನಿಂತಲ್ಲಿಯೇ ಹೆಜ್ಜೆ ಹಾಕಿ ಸಂತೋಷಪಟ್ಟರು. ನಂತರ ಜೇನುತುಪ್ಪ ಸವಿದು, ಅಡಿಕೆ ಸುಲಿಯುವ ಯಂತ್ರ ವೀಕ್ಷಣೆ ಮಾಡಿದರು. ಈ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಎಂಎಸ್‌ಡಬ್ಲ್ಯೂ ಪದವೀಧರೆ ಯುವತಿ ಭಾಗೀರಥಿಗೆ ನಾಳೆ ಬೆಳಗ್ಗಿನೊಳಗೆ ಗ್ರಾಮ ಸಹಾಯಕಿ ಹುದ್ದೆ ನೀಡುವಂತೆ ಜಿಲ್ಲಾಧಿಕಾರಿ ಮುಲೈ ಮುಹಿಲನ್ ಅವರಿಗೆ ಸಚಿವರು ಆದೇಶ ನೀಡಿದರು. ಅಲ್ಲದೇ, ಸಿದ್ಧಿ ಜನಾಂಗದ ಯುವತಿರಾದ ಸೈಕಾಲಿಜಿಯಲ್ಲಿ ಎಂಎಸ್ಸಿ ಮಾಡ್ತಿರುವ ಪೂಜಾ ಹಾಗೂ ಬಿಕಾಂ ಪದವೀಧರೆ ಕಾವ್ಯ ಅವರಿಗೆ ಸಚಿವರು ಲ್ಯಾಪ್‌ಟಾಪ್ ವಿತರಿಸಿದರು.
ಕಾರ್ಯಕ್ರಮದ ಸ್ಥಳದಲ್ಲೇ ಕಂದಾಯ ಸಚಿವರು ಯುವತಿ ಭಾಗೀರಥಿಗೆ ಗ್ರಾಮ ಸಹಾಯಕಿ ಹುದ್ದೆ ನೀಡಲು ಆದೇಶ ಮಾಡಿದ್ದರಿಂದ ಯುವತಿ ಸಾಕಷ್ಟು ಸಂತೋಷಗೊಂಡಿದ್ದು, ಏಷಿಯಾನೆಟ್ ಸುವರ್ಣ ನ್ಯೂಸ್ ಜತೆ ಹರ್ಷ ವ್ಯಕ್ತಪಡಿಸಿದ್ದಾಳೆ. ಅಲ್ಲದೇ, ಸಚಿವರಿಗೆ ಧನ್ಯವಾದ ಅರ್ಪಿಸಿದ್ದಾಳೆ. ಕಾರ್ಯಕ್ರಮದ ಮುನ್ನ ಮಾಧ್ಯಮದ ಜತೆ ಮಾತನಾಡಿದ ಸಚಿವರು, ಕಾಂಗ್ರೆಸ್ ವಿರುದ್ಧ ಚಾಟಿ ಬೀಸಿದ್ದಲ್ಲದೇ, ಮುಂದಿನ ಬಾರಿಯೂ ಬಿಜೆಪಿ ಸರಕಾರ ಆಡಳಿತಕ್ಕೆ ಬರೋದಾಗಿ ತಿಳಿಸಿದರು. ಜಿಲ್ಲೆಯ ಕುಮಟಾ ಹಾಗೂ ಅಂಕೋಲಾದ ಅಚಿವೆಯಲ್ಲಿ ಗ್ರಾಮ ವಾಸ್ತವ್ಯದಲ್ಲಿ ಭಾಗವಹಿಸಿದ ಸಚಿವರು ರಾತ್ರಿ ವೇಳೆ ಅಚಿವೆಯಲ್ಲೇ ಆಯೋಜಿಸಲಾದ ಸಾಂಸ್ಕೃತಿಕ ಮನೋರಂಜನಾ ಕಾರ್ಯಕ್ರಮವನ್ನು ವೀಕ್ಷಿಸಿದರು. ನಂತರ ಹಿಲ್ಲೂರಿನ ಬಿಸಿಎಂ ಹಾಸ್ಟೆಲ್‌ನಲ್ಲಿ ಇಂದು ರಾತ್ರಿ ವಾಸ್ತವ್ಯ ಹೂಡಲಿದರು. ನಾಳೆ ಬೆಳಗ್ಗೆ 9.15ಕ್ಕೆ ಹಿಲ್ಲೂರಿನಿಂದ ಹೊರಟು ಬೆಳಗ್ಗೆ 10ಕ್ಕೆ ಮತ್ತೆ ಯಲ್ಲಾಪುರ ಕಿರುವತ್ತಿಯ ಗೌಳಿ ಕಾಲೋನಿಗೆ ಭೇಟಿ ನೀಡಿ ಉಪಹಾರ ಸ್ವೀಕರಿಸಲಿದ್ದಾರೆ. ಬಳಿಕ ಬೆಳಗ್ಗೆ 11ಕ್ಕೆ ಯಲ್ಲಾಪುರದ ಹೊಸಹಳ್ಳಿಗೆ ಭೇಟಿ ನೀಡಿ, ಮುಂದಿನ ಪ್ರಯಾಣ ಬಳ್ಳಾರಿಯತ್ತ ಬೆಳಸಲಿದ್ದಾರೆ. ಒಟ್ಟಿನಲ್ಲಿ ಕಂದಾಯ ಸಚಿವರು ಉಪಸ್ಥಿತಿಯಲ್ಲಿ ನಡೆದ ಗ್ತಾಮ ವಾಸ್ತವ್ಯ ಕಾರ್ಯಕ್ರಮ ಯಶಸ್ವಿಯಾಗಿದ್ದು, ಜನರಂತೂ ಸಾಕಷ್ಟು ಸಂತೋಷ ವ್ಯಕ್ತಪಡಿಸಿದರು.