ಶಿವಮೊಗ್ಗ [ಅ.06]:  ಮುಖ್ಯಮಂತ್ರಿಗಳ ಆದೇಶದ ಮೇರೆಗೆ, ಅಧಿಕಾರಿಗಳ, ಮಾಧ್ಯಮಗಳ, ಸಂಘಸಂಸ್ಥೆಗಳ ಪ್ರಯತ್ನದಿಂದಾಗಿ ಹೊಸ ಮನೆ ಗೃಹ ಪ್ರವೇಶ ಮಾಡಿದ್ದ ಬರ್ಮಾ ಮೂಲದ ಗಂಗಮ್ಮಜ್ಜಿಗೆ ಹಠಾತ್ತನೇ ಗಂಡಾಂತರವೊಂದು ಎದುರಾಗಿತ್ತು. ತನಗೆ ಮಂಜೂರಾಗಿದೆ ಎಂದುಕೊಂಡಿದ್ದ ಮನೆ ತಮ್ಮದು ಎಂದು ಬೇರೊಬ್ಬರು ಬಂದು ಗೃಹ ಪ್ರವೇಶಕ್ಕೆ ಸಜ್ಜಾಗಿದ್ದನ್ನು ಕಂಡು ಗಂಗಮ್ಮಜ್ಚಿ ಕಂಗಾಲಾಗಿದ್ದರು. ಆದರೆ ತಹಶೀಲ್ದಾರ್‌ ಬಿ.ಎನ್‌. ಗಿರೀಶ್‌ ಕೊನೆಗೂ ಇದನ್ನು ಸುಖಾಂತ್ಯಗೊಳಿಸಿದರು.

ಸರ್ಕಾರ ಬೊಮ್ಮನಕಟ್ಟೆಯಲ್ಲಿ ಗಂಗಮ್ಮಜ್ಜಿಗೆ ಮಂಜೂರು ಮಾಡಿದ ಆಶ್ರಯ ಮನೆಗೆ ಶುಕ್ರವಾರ ತಹಸೀಲ್ದಾರ್‌ ಗೃಹ ಪ್ರವೇಶ ಮಾಡಿಸಿ ಸಿಹಿ ಹಂಚಿಸಿದ್ದರು. ಆದರೆ ರಾತ್ರಿ ಬೇರೊಂದು ಕುಟುಂಬ ಬಂದು ಇದು ತಮ್ಮದು, ನಮಗೆ ಮಂಜೂರಾಗಿದ್ದು ಎಂದು ಆ ಮನೆಯ ಬೀಗ ಒಡೆದು ಒಳ ಪ್ರವೇಶಿಸಿದ್ದರು.

2010-11ನೇ ಸಾಲಿನಲ್ಲಿ ಮಹಾನಗರ ಪಾಲಿಕೆ ಆಶ್ರಯ ಸಮಿತಿ ವತಿಯಿಂದ ಮಲವಗೊಪ್ಪದ ಗಿರಿಜಮ್ಮ ಎಂಬುವವರಿಗೆ ಗಂಗಜ್ಜಿಗೆ ಹಂಚಲಾದ ಮನೆ ನೀಡಲಾಗಿತ್ತು. ಹಂಚಿಕೆಯಾದ ಮನೆಗೆ ಸುಮಾರು 8-9 ವರ್ಷ ಗಿರಿಜಮ್ಮ ಬಂದಿರಲಿಲ್ಲ. ಮೂರು ತಿಂಗಳ ಹಿಂದೆ ನೋಟೀಸ್‌ ನೀಡಿದರೂ ಉತ್ತರಿಸಿರಲಿಲ್ಲ. ಹೀಗಾಗಿ ಇದನ್ನು ಜಿಲ್ಲಾಡಳಿತ ವಾಪಸ್ಸು ಪಡೆದು ಮರು ಹಂಚಿಕೆಗೆ ಇಟ್ಟುಕೊಂಡಿತ್ತು. ಆದರೆ ಯಾವಾಗ ಮಾಧ್ಯಮಗಳಲ್ಲಿ ಗಂಗಮ್ಮಜ್ಜಿಗೆ ಹಂಚಿಕೆಯಾದ ಸುದ್ದಿ ಪ್ರಕಟಗೊಂಡಿತೊ, ತಕ್ಷಣವೇ ಈ ಮನೆ ತಮ್ಮದು ಎಂದು ಹಕ್ಕು ಚಲಾಯಿಸಲು ಬಂದಿದ್ದರು.

ಬ್ಯಾಂಕಲ್ಲಿ ಅಡವಿಟ್ಟಿದ್ದ ಸಾವಿರ ವರ್ಷ ಹಳೆಯ ಕೋಟಿ ರು.ಮೌಲ್ಯದ ಪಚ್ಚೆ ಲಿಂಗಕ್ಕೆ ಮುಕ್ತಿ...

ಇತ್ತ ಶುಕ್ರವಾರವಷ್ಟೇ ಗೃಹ ಪ್ರವೇಶ ಮಾಡಿ, ತಮ್ಮ ಹಳೆ ಮನೆಯಿಂದ ಇದ್ದ ಅಲ್ಲಸ್ವಲ್ಪ ಸಾಮಾನು ತಂದಿಡುವ ಪ್ರಯತ್ನದಲ್ಲಿದ್ದ ಗಂಗಮ್ಮಜ್ಜಿಗೆ ಈ ಹೊಸ ಬೆಳವಣಿಗೆ ಶಾಕ್‌ ನೀಡಿತ್ತು.

ತಕ್ಷಣವೇ ಸುದ್ದಿ ತಹಶೀಲ್ದಾರ್‌ ಗಿರೀಶ್‌ ಅವರಿಗೆ ಮುಟ್ಟಿತು. ಸ್ಥಳಕ್ಕೆ ಬಂದ ಅವರು ತಮಗೆ ಮಂಜೂರಾಗಿದ್ದ ಮನೆಗೆ ವಾಸ ಮಾಡಲು ಬಂದಿರದ ಕಾರಣ ಇದನ್ನು ರದ್ದು ಮಾಡಲಾಗಿದೆ ಎಂದು ತಿಳಿಸಿದರಲ್ಲದೆ, ಮನೆ ಬೀಗ ಒಡೆದಿದ್ದಕ್ಕೆ ಪೊಲೀಸರಿಗೆ ದೂರು ಸಲ್ಲಿಸಲು ಮುಂದಾದರು. ತಕ್ಷಣವೇ ಗಿರಿಜಮ್ಮ ಕಡೆಯವರು ತಪ್ಪನ್ನು ಒಪ್ಪಿಕೊಂಡು ಜಾಗ ಖಾಲಿ ಮಾಡಿದರು. ಮತ್ತೆ ಗಂಗಮ್ಮಜ್ಜಿಯ ಕಣ್ಣಲ್ಲಿ ಸಂತಸ.