ಬ್ಯಾಂಕಲ್ಲಿ ಅಡವಿಟ್ಟಿದ್ದ ಸಾವಿರ ವರ್ಷ ಹಳೆಯ ಕೋಟಿ ರು.ಮೌಲ್ಯದ ಪಚ್ಚೆ ಲಿಂಗಕ್ಕೆ ಮುಕ್ತಿ
ಸಾವಿರ ವರ್ಷ ಹಳೆಯ ಕೊಟ್ಯಂತರ ರು. ಮೌಲ್ಯದ ಪಚ್ಚೆಲಿಂಗದ ದರ್ಶನದ ಅವಕಾಶ ಇನ್ನುಮುಂದೆ ಭಕ್ತರಿಗೆ ಸಿಗಲಿದೆ.
ಶಿವಮೊಗ್ಗ [ಅ.06]: ಅತ್ಯಪರೂಪದ, ಬಂದಗದ್ದೆ ಹಿರೇಮಠಕ್ಕೆ ಸೇರಿದ, 1 ಸಾವಿರ ವರ್ಷಗಳಷ್ಟು ಹಳೆಯ ಪಚ್ಚೆ ಶಿವಲಿಂಗ ತನ್ನ 22 ವರ್ಷಗಳ ಅಜ್ಞಾತವಾಸದ ಬಳಿಕ ಸಾರ್ವಜನಿಕ ದರ್ಶನಕ್ಕೆ ಮುಕ್ತವಾಗಲಿದೆ.
ಸ್ಟೇಟ್ ಬ್ಯಾಂಕ್ ಆಫ್ ಮೈಸೂರಲ್ಲಿ ಸಾಲಕ್ಕೆ ಒತ್ತೆಯಾಗಿಟ್ಟಿದ್ದ, ಸಾಲದಿಂದ ಮುಕ್ತವಾದರೂ ವಿವಾದಗಳಿಂದಾಗಿ ಬ್ಯಾಂಕ್‌ನ ಲಾಕರ್‌ನಲ್ಲೇ ಉಳಿದು ಹೋಗಿದ್ದ ಈ ‘ಪಚ್ಚೆಶಿವ’ ಈ ಬಾರಿಯ ವಿಜಯದಶಮಿಯಂದು 1 ದಿನ ಮಠದಲ್ಲಿ ಸಾರ್ವಜನಿಕರ ದರ್ಶನಕ್ಕೆ ಲಭ್ಯವಾಗಲಿದೆ.
ಸುಮಾರು 1 ಕೋಟಿ ರು. ಮೌಲ್ಯದ ಐದಿಂಚು ಎತ್ತರದ, 1 ಕೆಜಿ ತೂಕದ ಈ ಪಚ್ಚೆಲಿಂಗ ಕೆಳದಿ ಅರಸರ ಬಳಿಯಲ್ಲಿತ್ತು. ಅದನ್ನು 600 ವರ್ಷಗಳ ಹಿಂದೆ ಸಂಸ್ಥಾನದ ಗುರುಪೀಠವಾಗಿದ್ದ ಬಂದಗದ್ದೆ ಹಿರೇಮಠಕ್ಕೆ ನೀಡಲಾಗಿತ್ತು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಅಂದಿನಿಂದ ಇದಕ್ಕೆ ಮಠದಲ್ಲಿ ಪೂಜೆ ನಡೆಯುತ್ತಿತ್ತು. ನವರಾತ್ರಿ ಉತ್ಸವದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುತ್ತಿತ್ತು. ಆದರೆ, ಮಠದ ಹಿಂದಿನ ಶ್ರೀಗಳು ಈ ಲಿಂಗವನ್ನು ಬ್ಯಾಂಕಲ್ಲಿ ಅಡವಿಟ್ಟು ಸಾಲ ಪಡೆದಿದ್ದರು. ನಂತರ ಶ್ರೀಗಳು-ಭಕ್ತರ ಮಧ್ಯೆ ತಿಕ್ಕಾಟವಾಗಿ, ನಾನಾ ವಿವಾದಗಳು ಸೃಷ್ಟಿಯಾಗಿ ಈ ಲಿಂಗ ಬ್ಯಾಂಕ್ ಲಾಕರ್‌ನಲ್ಲೇ ಉಳಿದಿತ್ತು. ಇತ್ತೀಚೆಗೆ ಮಠದ ಭಕ್ತರು ಸಿಎಂ ಯಡಿಯೂರಪ್ಪರನ್ನು ಭೇಟಿಯಾಗಿ ಪಚ್ಚೆಲಿಂಗ ದರ್ಶನಕ್ಕೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದ್ದರು. ಸಿಎಂ ಸೂಚನೆಯಂತೆ ಅಧಿಕಾರಿಗಳು ಈಗ ಈ ಲಿಂಗವನ್ನು ವಿಶೇಷ ಭದ್ರತೆಯಲ್ಲಿ ಮಠದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಿದ್ದಾರೆ.