ಅರಸೀಕೆರೆ [ಜ.04]:  ಪ್ರಯಾಣಿಕರ ಹಿತದೃಷ್ಟಿಯಿಂದ ರೈತ ಸಂಘ ಸೇರಿದಂತೆ ಪ್ರಗತಿಪರ ಸಂಘಟನೆಗಳು ನಡೆಸಿದ ಹೋರಾಟಕ್ಕೆ ಕೊನೆಗೂ ಮಣಿದಿರುವ ರೈಲ್ವೆ ಇಲಾಖೆ ಶಿವಮೊಗ್ಗ ಹಾಗೂ ಯಶವಂತಪುರ ನಡುವೆ ಸಂಚರಿಸುವ ಜನಶತಾಬ್ದಿ ರೈಲುಗಾಡಿಯನ್ನು ನಗರದ ರೈಲು ನಿಲ್ದಾಣದಲ್ಲಿ ಕೆಲ ನಿಮಿಷಗಳ ಕಾಲ ನಿಲುಗಡೆಗೆ ಅವಕಾಶ ನೀಡಿರುವುದು ಪ್ರಯಾಣಿಕರ ಸಂತಸಕ್ಕೆ ಕಾರಣವಾದರೆ ಮತ್ತೊಂದೆಡೆ ಹೋರಾಟಗಾರರಲ್ಲಿ ಸಾರ್ಥಕ ಮನೋಭಾವ ಮೂಡಿದೆ.

ಶುಕ್ರವಾರ ಮುಂಜಾನೆ 6.50ಕ್ಕೆ ಸರಿಯಾಗಿ ನಗರದ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ ಜನಶತಾಬ್ದಿ ರೈಲನ್ನು ನಿಲ್ದಾಣದ ಅಧೀಕ್ಷಕ ಶಿವಾನಂದ್‌ ಪಾಂಡೇ ಜಿಲ್ಲಾ ರೈತ ಸಂಘದ ಸಂಚಾಲಕ ಕನಕೆಂಚನಹಳ್ಳಿ ಪ್ರಸನ್ನಕುಮಾರ್‌ ಸೇರಿದಂತೆ ಜನರು ಬರಮಾಡಿಕೊಂಡರಲ್ಲದೆ, ರೈಲಿನ ಇಂಜಿನಿಂಗ್‌ಗೆ ತಳಿಲು ತೋರಣಗಳನ್ನ ಕಟ್ಟಿನೆರೆದಿದ್ದ ಪ್ರಯಾಣಿಕರಿಗೆ ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ರೈತ ಸಂಘದ ಸಂಚಾಲಕ ಕನಕೆಂಚೇನಹಳ್ಳಿ ಪ್ರಸನ್ನಕುಮಾರ್‌ ಮಾತನಾಡಿ, ರಾಜ್ಯದಲ್ಲಿ ಮೊದಲ ಬಾರಿಗೆ ರೈಲು ಸೇವೆ ಆರಂಭವಾಗಿದ್ದು ಮೈಸೂರು-ಅರಸೀಕೆರೆ ನಡುವೆ. ಇಂತಹ ಐತಿಹಾಸಿಕ ಹಿನ್ನೆಲೆ ಹೊಂದಿರುವ ನಗರದ ರೈಲು ನಿಲ್ದಾಣದ ಮುಕೇನ ಪ್ರತಿದಿನ ನೂರಾರು ರೈಲುಗಾಡಿಗಳು ಸಂಚರಿಸುವುದರಿಂದ ಸಹಸ್ರಾರು ಸಂಖ್ಯೆಯಲ್ಲಿ ಜನತೆ ರೈಲು ಪ್ರಯಾಣದ ಮೇಲೆ ಅವಲಂಬಿತರಾಗಿರುವುದರಿಂದ ರೈಲ್ವೆ ಇಲಾಖೆಗೂ ಲಾಭವಿದೆ ಎಂದರು.

ಶಿವಮೊಗ್ಗ-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್..!...

ಕಳೆದ ಒಂದು ವರ್ಷದಿಂದ ಆರಂಭಗೊಂಡಿದ್ದ ಶಿವಮೊಗ್ಗ-ಯಶವಂತಪುರ ಜನಶತಾಬ್ದಿ ರೈಲು ಗಾಡಿಗೆ ಅರಸೀಕೆರೆಯಲ್ಲಿ ನಿಲುಗಡೆಗೆ ಅನುಮತಿ ನೀಡದ ಕಾರಣ ಪ್ರಯಾಣಿಕರ ಹಿತದೃಷ್ಟಿಯಿಂದ ರೈತ ಸಂಘ ಸಂಭಂದಪಟ್ಟರೈಲ್ವೆ ಸಚಿವರಿಗೆ ಪತ್ರ ಮುಖೇನ ಮನವಿ ಹಾಗೂ ಅಧಿಕಾರಿಗಳಿಗೆ ಕುದ್ದು ಭೇಟಿ ಮಾಡಿ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಸ್ಪಂದಿಸಿರುವ ರೈಲ್ವೆ ಸಚಿವರಿಗೂ ಹಾಗೂ ಹಿರಿಯ ಅಧಿಕಾರಿಗಳಿಗೂ ರೈತ ಸಂಘ ತಾಲೂಕಿನ ಜನತೆ ಮತ್ತು ರೈಲು ಪ್ರಯಾಣೀಕರ ಪರವಾಗಿ ಅಭಿನಂದಿಸುತ್ತದೆ ಎಂದು ಹೇಳಿದರು.

ರೈಲು ನಿಲ್ದಾಣದ ಅಧೀಕ್ಷಕ ಶಿವಾನಂದ್‌ ಪಾಂಡೇ ಮಾತನಾಡಿ, ಪ್ರತಿದಿನ ಮುಂಜಾನೆ 5.30ಕ್ಕೆ ಶಿವಮೊಗ್ಗದಿಂದ ಹೊರಡುವ ಜನಶತಾಬ್ದಿ ರೈಲು ಗಾಡಿಯು ನಗರದ ನಿಲ್ದಾಣಕ್ಕೆ 6.50ಕ್ಕೆ ಬಂದು ತಲುಪಲಿದೆ. 6.55ಕ್ಕೆ ಅರಸೀಕೆರೆಯಿಂದ ಹೊರಟು 9.50ಕ್ಕೆ ಯಶವಂತಪುರ ತಲುಪುವ ಜನಶತಾಬ್ದಿ ಸಂಜೆ 5.45ಕ್ಕೆ ಯಶವಂತಪುರದಿಂದ ಹೊರಟು ರಾತ್ರಿ 8.50ಕ್ಕೆ ಅರಸೀಕೆರೆಗೆ ಆಗಮಿಸುತ್ತದೆ ಎಂದು ಮಾಹಿತಿ ನೀಡಿದರು.

ಶಿವಮೊಗ್ಗ - ಬೆಂಗಳೂರು ಜನಶತಾಬ್ದಿ ರೈಲು ಸಮಯ ಬದಲು...

ಅರಸೀಕೆರೆ ರೈಲ್ವೆ ಜಂಕ್ಷನ್‌ ಮುಕೇನ ರಾಜ್ಯದ ನಾನಾ ನಗರಗಳು ಸೇರಿದಂತೆ ಹೊರ ರಾಜ್ಯಗಳಿಗೆ ನಗರದಿಂದ ನೇರ ರೈಲು ಸಂಪರ್ಕದ ವ್ಯವಸ್ಥೆ ಇರುವುದರಿಂದ ತಾಲೂಕಿನ ಜನತೆ ಅಷ್ಟೆಅಲ್ಲದೇ, ಅಕ್ಕ ಪಕ್ಕದ ತಾಲೂಕು ಮತ್ತು ಜಿಲ್ಲೆಯ ಜನತೆ ನಗರದ ರೈಲು ನಿಲ್ದಾಣದ ಮೂಲಕ ತಮ್ಮ ಪ್ರಯಾಣ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ಜನಶತಾಬ್ದಿ ರೈಲು ಗಾಡಿ ನಿಲುಗಡೆಗೆ ಅನುಮತಿ ನೀಡಬೇಕೆಂದು ಒತ್ತಾಯಿಸಿ ಕೇಂದ್ರ ರೈಲ್ವೆ ಸಚಿವ ಸುರೇಶ್‌ ಅಂಗಡಿ ಅವರಿಗೆ ಈ ಹಿಂದೆ ಭೇಟಿ ಮಾಡಿ ಮನವಿ ಮಾಡಿದ್ದೆ. ಅಲ್ಲದೇ ಗುರುವಾರ ತುಮಕೂರಿನಲ್ಲಿ ನಡೆದ ನರೇಂದ್ರ ಮೋದಿ ಅವರ ಸಮಾವೇಶದಲ್ಲಿ ಪಾಲ್ಗೊಳ್ಳಲು ಹೋಗಿದ್ದ ವೇಳೆ ಪುನಃ ಸುರೇಶ್‌ ಅಂಗಡಿ ಅವರ ಗಮನ ಸೆಳೆದ ಹಿನ್ನೆಲೆಯಲ್ಲಿ ಕ್ರಮಕೈಗೊಂಡಿರುವ ಸಚಿವರಿಗೆ ತಾಲೂಕಿನ ಜನತೆ ಪರವಾಗಿ ಧನ್ಯವಾದ ಸಮರ್ಪಿಸುತ್ತೇನೆ.

-ಎ.ಎಸ್‌.ಬಸವರಾಜು ಮಾಜಿ ಶಾಸಕ