Ananda Devadiga murder case: ಕೊಲೆಗೂ ಮುನ್ನ ನಡೆದಿತ್ತು ಮೈಜುಮ್ಮೆನಿಸುವ ಮತ್ತೊಂದು ಘಟನೆ!

ಸುಶಿಕ್ಷಿತ, ಶಾಂತಸ್ವಭಾವದವರ ಜಿಲ್ಲೆಯೆನಿಸಿರುವ ಕರಾವಳಿಯಲ್ಲಿ ವರ್ಷದಿಂದ ವರ್ಷಕ್ಕೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದು ಕಸವಿಸಿಯುಂಟುಮಾಡಿದೆ. ಇದೀಗ ಕುಂದಾಪುರದಲ್ಲಿ ನಡೆದಿರುವ ಹೇನ್‌ಬೇರು ಕೊಲೆ ಪ್ರಕರಣ ಬೆಚ್ಚಿಬಿಳಿಸಿದೆ

Another shocking incident happened before murder of Ananda Devadiga Kundapura rav

ಕುಂದಾಪುರ(ಜು.17): ಇಡೀ ರಾಜ್ಯದ ಜನರ ಗಮನವನ್ನು ಬೈಂದೂರು ಕಡೆಗೆ ಸೆಳೆದಿದ್ದ, ಮಲೆಯಾಳಂನ ಕುರೂಪ್‌ ಸಿನಿಮಾದಂತೆ ನಡೆದಿದ್ದ ಒತ್ತಿನೆಣೆ ಬಳಿಯ ಹೇನ್‌ಬೇರು ಕೊಲೆ ಪ್ರಕರಣವನ್ನು ಕೇವಲ 24 ಗಂಟೆಯೊಳಗೆ ಭೇದಿಸಿದ ಪೊಲೀಸರು ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಈ ಮಧ್ಯೆ ಈ ಪ್ರಕರಣದ ಸುತ್ತ ಇನ್ನಷ್ಟುಅನುಮಾನಗಳು ಹುಟ್ಟಿಕೊಳ್ಳುತ್ತಿದ್ದು, ಆರೋಪಿಗಳು ನಡೆಸಿದ ಸಂಚು ದಿನಕ್ಕೊಂದು ಬಯಲಾಗುತ್ತಿದೆ.

ಸ್ವಲ್ಪದರಲ್ಲೇ ಬಚಾವಾದ ವರ್ತಕ: ಬೈಂದೂರಿನ ಒತ್ತಿನೆಣೆಯ ನಿರ್ಜನ ಪ್ರದೇಶದಲ್ಲಿ ದುರಂತ ನಡೆದ ಆ ರಾತ್ರಿ ಅಮಾಯಕ ವರ್ತಕರೊಬ್ಬರನ್ನು ಒತ್ತಿನೆಣಿ ಬಳಿಯಲ್ಲಿ ಅಪರಿಚಿತ ತಂಡವೊಂದು ಬಲವಂತವಾಗಿ ಎಳೆದೊಯ್ಯಲು ಯತ್ನಿಸಿರುವ ಆತಂಕಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಬೈಂದೂರಿನಿಂದ ಕೊಲ್ಲೂರಿಗೆ ತೆರಳುವ ದಾರಿಯ ಕಳವಾಡಿ ಎಂಬಲ್ಲಿನ ವ್ಯಕ್ತಿಯೊಬ್ಬರು ಶಿರೂರಿನಲ್ಲಿ ವ್ಯಾಪಾರ ನಡೆಸುತ್ತಿದ್ದರು. ಕೊಲೆ ನಡೆದ ರಾತ್ರಿ ಎಂದಿನಂತೆ ವ್ಯಾಪಾರ - ವಹಿವಾಟು ಮುಗಿಸಿ, ತಮ್ಮ ದ್ವಿಚಕ್ರ ವಾಹನದಲ್ಲಿ ಮನೆಗೆಂದು ಹೊರಟ್ಟಿದ್ದರು. ದಾರಿಯಲ್ಲಿ ಗಾಡಿ ಕೈಕೊಟ್ಟಿದ್ದರಿಂದ ಗಾಡಿಯನ್ನು ತಳ್ಳಿಕೊಂಡು ಹೆದ್ದಾರಿಯಲ್ಲಿ ಬರುತ್ತಿದ್ದರು ಎನ್ನಲಾಗಿದೆ. ಕತ್ತಲು ಆವರಿಸಿದ್ದ ಆ ರಾತ್ರಿ ಒತ್ತಿನೆಣೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಾಗುತ್ತಿದ್ದಾಗ, ರಸ್ತೆಯ ಪಕ್ಕ ಕಾರು ನಿಲ್ಲಿಸಿಕೊಂಡಿದ್ದ ಅಪರಿಚಿತ ವ್ಯಕ್ತಿಗಳ ತಂಡ, ವರ್ತಕನನ್ನು ಕಂಡು ಅಡ್ಡಗಟ್ಟಿದೆ. ಬಳಿಕ ವರ್ತಕನ ಕೈಹಿಡಿದು ಬಲವಂತವಾಗಿ ಎಳೆದು ಕಾರಿನೊಳಗೆ ನೂಕಲು ಯತ್ನಿಸಿದ್ದಾರೆ. ಈ ವೇಳೆ ರಕ್ಷಣೆಗಾಗಿ ಗಟ್ಟಿಯಾಗಿ ಕೂಗಿಕೊಂಡರೂ, ನಿರ್ಜನ ಪ್ರದೇಶವಾಗಿದ್ದರಿಂದ ಸ್ಥಳೀಯರ ಸಹಾಯ ದೊರಕಿರಲಿಲ್ಲ. ಆದರೆ ಭಗವಂತನ ಲೀಲೆ ಎನ್ನುವಂತೆ ಹೆದ್ದಾರಿಯಲ್ಲಿ ಸಾಗಿ ಬರುತ್ತಿದ್ದ ಕಾರೊಂದರ ಚಾಲಕ ಈ ದೃಶ್ಯ ನೋಡಿ ಕಾರಿನ ಹೆಡ್‌ಲೈಟ್‌ನ್ನು ಡಿಮ್‌ ಡಿಪ್‌ ಮಾಡಿದ್ದರಿಂದ, ಅಪರಚಿತ ತಂಡ ವರ್ತಕನನ್ನು ಬಿಟ್ಟು ಸ್ಥಳದಿಂದ ಪರಾರಿಯಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.

ಸುಟ್ಟುಕರಕಲಾದ ಕಾರು ಪತ್ತೆಯಾದ ದಿನವೇ ಹಿಂದಿನ ದಿನ ರಾತ್ರಿ ನಡೆದ ಘಟನೆಯ ಬಗ್ಗೆ ಕೆಲವರು ಅಲ್ಲಿ ಇಲ್ಲಿ ಹೇಳಿಕೊಂಡಿದ್ದರೂ, ಅದು ಸುದ್ದಿಯಾಗಿರಲಿಲ್ಲ. ಇದೀಗ ಹೇನ್‌ಬೇರು ಕೊಲೆ (Henberu case) ಪ್ರಕರಣ ಒತ್ತಿನೆಣೆಯ ಸಮೀಪವೇ ನಡೆದಿದೆ ಹಾಗೂ ಪೊಲೀಸರು (Police) ಮಹಿಳೆಯೊಬ್ಬರನ್ನು ಸೇರಿಸಿ ನಾಲ್ವರನ್ನು ಬಂಧಿಸಿದ್ದಾರೆ ಎನ್ನುವ ಮಾಹಿತಿಗಳು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದಂತೆ ವರ್ತಕನನ್ನು ಎಳೆದಾಡಿದ ತಂಡವೇ ಇದಾಗಿರುಬಹುದು ಎಂಬ ವದಂತಿ ಹಬ್ಬುತ್ತಿದೆ.

ಒಂದು ವೇಳೆ ಅಂದು ರಾತ್ರಿ ಈ ಘಟನೆ ನಡೆದಿರೋದು ನಿಜವಾಗಿದ್ದಲ್ಲಿ, ಕೊಲೆ ನಡೆಸಿದ್ದ ತಂಡವೇ ಈ ಪ್ರಯತ್ನವನ್ನೂ ನಡೆಸಿದ್ದರು ಎಂದಾಗಿದ್ದಲ್ಲಿ, ಆ ಮಾರ್ಗದಲ್ಲಿ ಅದೇ ವೇಳೆ ಕಾರೊಂದು ಬಾರದೆ ಹೋಗಿದ್ದರೆ ಕಾರ್ಕಳದ ಆನಂದ ದೇವಾಡಿಗ ಬದಲು ಬೈಂದೂರು ಮೂಲದ ವರ್ತಕ ಈ ದುರಂತದಲ್ಲಿ ಬಲಿಪಶುವಾಗುವ ಸಾಧ್ಯತೆಗಳಿತ್ತೆ ಎಂಬ ಅನುಮಾನ ಮೂಡಿದೆ. ಆನಂದ ದೇವಾಡಿಗ ಕೊಲೆ ಪ್ರಕರಣ ಹಾಗೂ ವರ್ತಕನನ್ನು ಎಳೆದಾಡಿದ ಘಟನೆಯ ಬಗ್ಗೆ ಪೊಲೀಸ್‌ ತನಿಖೆ ಕೂಲಂಕಷವಾಗಿ ನಡೆಯಬೇಕಿದೆ.

ಒತ್ತಿನೆಣೆ ನಿಸರ್ಗ ತಾಣ ಒಂದಿಲ್ಲೊಂದು ಅಹಿತಕರ ಘಟನೆಗಳಿಗೆ ಸಾಕ್ಷಿಯಾಗುತ್ತಿರುವುದರಿಂದ, ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ. ಈ ಪ್ರದೇಶ ನಿರ್ಜನ ಮಾತ್ರವಲ್ಲದೆ, ಕಗ್ಗತ್ತಲ ಆವರಿಸಿಕೊಂಡಿರುವುದರಿಂದ, ಇಂತಹ ಅಹಿತಕರ ಘಟನೆಗಳನ್ನು ನಡೆಸುವ ದುಷ್ಕರ್ಮಿಗಳಿಗೆ ಹೇಳಿ ಮಾಡಿಸಿದಂತಿದೆ. ಬೈಂದೂರು ಪೊಲೀಸರು ಶಕ್ತಿಮೀರಿ ಕೆಲಸ ಮಾಡುತ್ತಿದ್ದಾರೆ. ರಾತ್ರಿ ಗಸ್ತುಗಳನ್ನು ಈ ಭಾಗದಲ್ಲಿ ನಡೆಸಿದರೆ ಇಂತಹ ದುಷ್ಕ ೃತ್ಯಗಳಿಗೆ ಕಡಿವಾಣ ಹಾಕಬಹುದು

- ಸುಬ್ರಹ್ಮಣ್ಯ ಬಿಜೂರು, ಸಾಮಾಜಿಕ ಕಾರ್ಯಕರ್ತ

 

ಪ್ರವಾಸೋದ್ಯಮ ಇಲಾಖೆಯಿಂದ ಬೈಂದೂರು ಒತ್ತಿನೆಣೆ ನಿಸರ್ಗ ರಮಣೀಯ ಪ್ರವಾಸಿ ತಾಣವನ್ನು ಅಭಿವೃದ್ಧಿಗೊಳಿಸಲು ಈಗಾಗಲೇ 10 ಎಕರೆ ಜಾಗ ನೀಡುವಂತೆ ಅರಣ್ಯ ಇಲಾಖೆಗೆ ಪತ್ರ ಬರೆಯಲಾಗಿದೆ. ಈ ಬಗ್ಗೆ ಗ್ರೀನ್‌ ಸಿಗ್ನಲ್‌ ಸಿಕ್ಕರೆ ಅಭಿವೃದ್ಧಿಯ ಕುರಿತು ಡಿಪಿಆರ್‌ ತಯಾರು ಮಾಡಲಾಗುವುದು. ಸದ್ಯಕ್ಕೆ ಒತ್ತಿನೆಣೆ ವೀವ್‌ ಪಾಯಿಂಟ್‌ ಅಭಿವೃದ್ದಿ ಇಲಾಖೆಯ ಮುಂದಿಲ್ಲ

- ಕ್ಲಿಫರ್ಡ್‌ ಲೋಬೊ, ಸಹಾಯಕ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ ಉಡುಪಿ

ಪ್ರವಾಸಿಗರ ನೆಚ್ಚಿನ ತಾಣದಲ್ಲಿ ಇದೀಗ ಭಯದ ವಾತಾವರಣ: ರಾಜ್ಯದಲ್ಲೇ ತೀವ್ರ ಪ್ರತಿಭಟನೆಗೆ ಗ್ರಾಸವಾಗಿದ್ದ ರತ್ನಾ ಕೊಠಾರಿ, ಅಕ್ಷತಾ ದೇವಾಡಿಗ ಕೊಲೆ ಪ್ರಕರಣಗಳು, ಒತ್ತಿನೆಣೆಯ ಅರಣ್ಯ ಇಲಾಖೆಯ ಪ್ರವಾಸಿ ಮಂದಿರಕ್ಕೆ ತೆರಳುವ ರಸ್ತೆ ಬದಿಯಲ್ಲಿನ ಸಾರ್ವಜನಿಕ ಶೌಚಾಲಯದಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಯುವತಿಯ ಶವದ ಪ್ರಕರಣ, ಉಪ್ಪಿನಂಗಡಿಯ ನಟೋರಿಯಸ್‌ ರೌಡಿಯೊಬ್ಬನ ಎನ್‌ಕೌಂಟರ್‌ ಪ್ರಕರಣವೂ ಸೇರಿದಂತೆ ಇತ್ತೀಚಿನ ವರ್ಷಗಳಲ್ಲಿ ಈ ಪ್ರದೇಶದಲ್ಲಿ ನಡೆದಿರುವ ಹಲವಾರು ಅಪರಾಧ ಪ್ರಕರಣಗಳು ಜನರ ನಿದ್ದೆಗೆಡಿಸಿರುವುದು ಸುಳ್ಳಲ್ಲ.

ಒತ್ತಿನೆಣೆಯ ಸುತ್ತಮುತ್ತಲೂ ನಡೆದಿರುವ ಹಾಗೂ ನಡೆಯುತ್ತಿರುವ ಇಂತಹ ಕರಾಳ ರಾತ್ರಿಯ ಪ್ರಕರಣಗಳ ಕುರಿತು ಪೊಲೀಸರು ಇನ್ನಷ್ಟುವಿಸ್ತೃತ ತನಿಖೆ ನಡೆಸಿದ್ದಲ್ಲಿ ಹಾಗೂ ಪೊಲೀಸ್‌ ಗಸ್ತನ್ನು ಹೆಚ್ಚಿಸಿದ್ದಲ್ಲಿ ಇಂತಹ ಘಟನೆಗಳಿಗೆ ಬ್ರೇಕ್‌ ಬೀಳಬಹುದು ಹೆದ್ದಾರಿ ಮಧ್ಯೆ ವರ್ತಕರನ್ನು ಎಳೆದಾಡಿದ ಘಟನೆಯ ಬಗ್ಗೆ ಆ ರಾತ್ರಿಯೇ ಪೊಲೀಸರಿಗೆ ಮಾಹಿತಿ ದೊರಕಿದ್ದಲ್ಲಿ ಅಮಾಯಕರೊಬ್ಬರ ಪ್ರಾಣ ಉಳಿಸಬಹುದಿತ್ತೇನೋ ಎಂಬ ಮಾತೂ ಕೇಳಿಬರುತ್ತಿದೆ.

Latest Videos
Follow Us:
Download App:
  • android
  • ios