ಮಹಾಲಕ್ಷ್ಮಿ ಲೇಔಟ್‌ನಲ್ಲಿ ಮಂಗಳವಾರ ಜಲಮಂಡಳಿ ನೀರಿನ ಪೈಪ್‌ ಸೋರಿಕೆಯಿಂದಾಗಿ ರಸ್ತೆ ಕುಸಿದು ಅವಾಂತರ ಸೃಷ್ಟಿಯಾಗಿದೆ. ವೆಲ್ಲಾರ ಜಂಕ್ಷನ್‌ನಲ್ಲಿ ಮೆಟ್ರೋ ಕಾಮಗಾರಿ ಹಾಗೂ ನೀರು ಸೋರಿಕೆಯಿಂದಾಗಿ ರಸ್ತೆ ಕುಸಿದು ಅವಾಂತರ ಸೃಷ್ಟಿಯಾಗಿದೆ.

ಬೆಂಗಳೂರು (ಜ.18): ಮಹಾಲಕ್ಷ್ಮಿ ಲೇಔಟ್‌ನಲ್ಲಿ ಮಂಗಳವಾರ ಜಲಮಂಡಳಿ ನೀರಿನ ಪೈಪ್‌ ಸೋರಿಕೆಯಿಂದಾಗಿ ರಸ್ತೆ ಕುಸಿದು ಅವಾಂತರ ಸೃಷ್ಟಿಯಾಗಿದೆ. ವೆಲ್ಲಾರ ಜಂಕ್ಷನ್‌ನಲ್ಲಿ ಮೆಟ್ರೋ ಕಾಮಗಾರಿ ಹಾಗೂ ನೀರು ಸೋರಿಕೆಯಿಂದಾಗಿ ರಸ್ತೆ ಕುಸಿದು ಅವಾಂತರ ಸೃಷ್ಟಿಯಾಗಿ ಒಂದು ವಾರ ಕಳೆಯುವುದರೊಳಗೆ ಜಲಮಂಡಳಿ ನೀರಿನ ಪೈಪ್‌ನಲ್ಲಿ ಸೋರಿಕೆ ಉಂಟಾಗಿ ಮಹಾಲಕ್ಷ್ಮಿ ಲೇಔಟ್‌ ಮುಖ್ಯರಸ್ತೆಯ ಸಪ್ತಗಿರಿ ಕಲ್ಯಾಣ ಮಂಟಪದ ಬಳಿ ರಸ್ತೆ ಕುಸಿದು, 3 ಅಡಿಗೂ ಹೆಚ್ಚಿನ ಆಳದ ಗುಂಡಿ ಸೃಷ್ಟಿಯಾಗಿತ್ತು. ಈ ಗುಂಡಿಯಲ್ಲಿ ಲಾರಿ ಸಿಕ್ಕಿ ಹಾಕಿಕೊಂಡು ಕೆಲಕಾಲ ಸಂಚಾರ ದಟ್ಟಣೆಗೆ ಅಡಚಣೆ ಉಂಟಾಗುವಂತಾಗಿತ್ತು.

ಗುಂಡಿ ಸೃಷ್ಟಿಯಾದ ರಸ್ತೆಯಲ್ಲಿ ಕಳೆದ ಮೂರು ದಿನಗಳ ಹಿಂದಷ್ಟೇ ಮರು ಡಾಂಬರೀಕರಣ ಮಾಡಲಾಗಿತ್ತು. ಈ ವೇಳೆ ರಸ್ತೆಯ ಕೆಳಭಾಗದಲ್ಲಿನ ಪರಿಸ್ಥಿತಿಯನ್ನು ಗಮನಿಸುವಲ್ಲಿ ಬಿಬಿಎಂಪಿ ವಿಫಲವಾಗಿದೆ. ಜತೆಗೆ ಜಲಮಂಡಳಿ ಕೂಡ ನೀರಿನ ಪೈಪ್‌ ದುರಸ್ತಿಗೆ ನಿರ್ಲಕ್ಷ್ಯವಹಿಸಿದೆ. ಇದರಿಂದ ರಸ್ತೆ ಕುಸಿಯುವಂತಾಗಿದೆ. ರಸ್ತೆ ಕುಸಿದ ಗಂಟೆಗಳಾದರೂ ಜಲಮಂಡಳಿ ಅಥವಾ ಬಿಬಿಎಂಪಿ ಅಧಿಕಾರಿಗಳು ಮಾತ್ರ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ, ದುರಸ್ತಿ ಕಾರ್ಯ ಕೈಗೊಂಡಿರಲಿಲ್ಲ. ಅಂತಿಮವಾಗಿ ಜಲಮಂಡಳಿ ಸಿಬ್ಬಂದಿ ಸ್ಥಳಕ್ಕೆ ಬಂದು ರಸ್ತೆ ಅಗೆದು ಪೈಪ್‌ ಬದಲಿಸುವ ಕಾರ್ಯ ಆರಂಭಿಸಿದ್ದಾರೆ.

ಸಿಎಂ ಬೊಮ್ಮಾಯಿಯದ್ದು ದೇಶದ ಅತೀ ಭ್ರಷ್ಟ ಸರ್ಕಾರ: ರಣದೀಪ್‌ ಸಿಂಗ್‌ ಸುರ್ಜೇವಾಲಾ

ಭಯದಲ್ಲಿ ವಾಹನ ಚಲಾಯಿಸುವ ಪರಿಸ್ಥಿತಿ: ನಗರದ ರಸ್ತೆಗಳಲ್ಲಿ ಭಯದಲ್ಲಿಯೇ ವಾಹನ ಚಲಾಯಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಆರೇಳು ತಿಂಗಳಿನಿಂದ ಒಂದಿಲ್ಲೊಂದು ಕಡೆ ರಸ್ತೆಗಳು ಕುಸಿದು ವಾಹನ ಅಪಘಾತ ಉಂಟಾಗುತ್ತಿದೆ. ನಗರದಲ್ಲಿ ಪದೇ ಪದೇ ರಸ್ತೆ ಕುಸಿತದ ಘಟನೆಗಳು ಹೆಚ್ಚುತ್ತಿವೆ.

7 ತಿಂಗಳಲ್ಲಿ 5 ಕಡೆ ರಸ್ತೆ ಕುಸಿತ
-2022ರ ಜುಲೈನಲ್ಲಿ ಪ್ರಧಾನಿ ನರೇಂದ್ರ ಮೋದಿ ನಗರಕ್ಕಾಗಮಿಸಿದಾಗ ದುರಸ್ತಿ ಮಾಡಲಾದ ರಸ್ತೆಗಳ ಪೈಕಿ ಅಂಬೇಡ್ಕರ್‌ ಅರ್ಥಶಾಸ್ತ್ರ ಕಾಲೇಜು ಸಮೀಪದ ರಸ್ತೆಯಲ್ಲಿ ಜಲಮಂಡಳಿ ನೀರಿನ ಪೈಪ್‌ ಸೋರಿಕೆಯಿಂದ ರಸ್ತೆ ಕುಸಿದಿತ್ತು.

-2022ರ ಅಕ್ಟೋಬರ್‌ 11ರಂದು ಜಲಮಂಡಳಿ ನೀರಿನ ಪೈಪ್‌ ಅಳವಡಿಕೆ ಕಾಮಗಾರಿಯಲ್ಲಿನ ಲೋಪದಿಂದಾಗಿ ಮಾರತಹಳ್ಳಿ ಸಮೀಪದ ಕುಂದಲಹಳ್ಳಿ ಜಂಕ್ಷನ್‌ ಸಮೀಪ 200 ಮೀ. ಹೆಚ್ಚಿನ ಉದ್ದದ ರಸ್ತೆ ಕುಸಿದು ಅವಾಂತರ ಸೃಷ್ಟಿಯಾಗಿತ್ತು.

-2022ರ ಅಕ್ಟೋಬರ್‌ 17ರಂದು ಸ್ಯಾಂಕಿ ಕೆರೆ ರಸ್ತೆಯಲ್ಲಿ 6 ಅಡಿ ಆಳದಷ್ಟುಕಂದಕ ಸೃಷ್ಟಿಯಾಗಿತ್ತು. ಈ ರಸ್ತೆ ದುರಸ್ತಿಗೆ ಬಿಬಿಎಂಪಿ ಮೂರ್ನಾಲ್ಕು ದಿನ ತೆಗೆದುಕೊಂಡಿತ್ತು.

-ಮಳೆ ಪ್ರಮಾಣ ಹೆಚ್ಚಾದ ಕಾರಣ 2022ರ ಅಕ್ಟೋಬರ್‌ 20 ರಂದು ಪಟ್ಟಗಾರಪಾಳ್ಯ ಮುಖ್ಯರಸ್ತೆ ಕುಸಿದು ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಗಿತ್ತು.

Managaluru: ಮುಳುಗಿದ ಚೀನಾ ಹಡಗಿನಿಂದ ತೈಲ ತೆರವು ಕಾರ್ಯ ಶುರು!

-ಜನವರಿ 12ರಂದು ಬ್ರಿಗೇಡ್‌ ರಸ್ತೆಯಿಂದ ವೆಲ್ಲಾರ ಜಂಕ್ಷನ್‌ ಮಾರ್ಗದಲ್ಲಿನ ನಡೆಯುತ್ತಿರುವ ಮೆಟ್ರೋ ಸುರಂಗ ಕಾಮಗಾರಿ ಹಾಗೂ ಜಲಮಂಡಳಿ ನೀರಿನ ಪೈಪ್‌ ಸೋರಿಕೆಯಿಂದ ವೆಲ್ಲಾರ ಜಂಕ್ಷನ್‌ ಬಳಿ ರಸ್ತೆ ಕುಸಿದಿತ್ತು. ಇದರಿಂದ ಬೈಕ್‌ ಸವಾರನೊಬ್ಬ ಗಾಯಗೊಂಡಿದ್ದ.