ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಮತ್ತೊಂದು ಬಾಣಂತಿ ಸಾವು!
ಹೊಸವರ್ಷದ ಆರಂಭದಲ್ಲಿಯೇ ಇಬ್ಬರು ಸೇರಿ ಕಳೆದ ಮೂರು ತಿಂಗಳ ಅವಧಿಯಲ್ಲಿ ರಾಯಚೂರು ಜಿಲ್ಲೆಯಲ್ಲಿ ಮೃತಪಟ್ಟ ಬಾಣಂತಿಯರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ.
ರಾಯಚೂರು(ಜ.07): ರಾಯಚೂರು ಜಿಲ್ಲೆಯಲ್ಲಿ ಬಾಣಂತಿಯರ ಸರಣಿ ಸಾವು ಮುಂದುವರಿದಿದ್ದು, ದೇವದುರ್ಗ ತಾಲೂಕಿನ ಹದ್ದಿನಾಳ ಗ್ರಾಮದ ಸರಸ್ವತಿ (24) ಎಂಬುವರು ಅಧಿಕ ರಕ್ತದೊತ್ತಡದಿಂದಾಗಿ ಭಾನುವಾರ ರಾತ್ರಿ ಮೃತಪಟ್ಟಿದ್ದಾರೆ. ಇದರಿಂದಾಗಿ ಹೊಸವರ್ಷದ ಆರಂಭದಲ್ಲಿಯೇ ಇಬ್ಬರು ಸೇರಿ ಕಳೆದ ಮೂರು ತಿಂಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಮೃತಪಟ್ಟ ಬಾಣಂತಿಯರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ.
ರಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟ ಬಾಣಂತಿಯರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ. ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜ.2ರಂದು ಸರಸ್ವತಿಯನ್ನು ರಿಮ್ಸ್ ಬೋಧಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗರ್ಭದಲ್ಲಿದ್ದ ಮಗು ಅಡ್ಡ ತಿರುಗಿದ್ದರಿಂದ ಸಿಸೇರಿಯನ್ ಮಾಡಲಾಗಿತ್ತು. ಅಧಿಕ ರಕ್ತದೊತ್ತಡ ಹಿನ್ನೆಲೆಯಲ್ಲಿ ಮೂರು ದಿನಗಳ ಬಳಿಕ, ಭಾನುವಾರ ರಾತ್ರಿ ಬಾಣಂತಿ ಮೃತಪಟ್ಟಿದ್ದು, ನವಜಾತ ಶಿಶುವನ್ನು ವೆಂಟಿಲೇಟರ್‌ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಸಾವಿನ ಭಾಗ್ಯವನ್ನೇ ನೀಡುತ್ತಿರುವ ಕಾಂಗ್ರೆಸ್ ಸರ್ಕಾರ: ಬಿ.ವೈ.ವಿಜಯೇಂದ್ರ ಆಕ್ರೋಶ
ಬಾಣಂತಿಯರ ಸರಣಿ ಸಾವಿಗೆ ಸರ್ಕರವೇ ಹೊಣೆ: ಶೈಲೇಂದ್ರ ಬೆಲ್ದಾಳೆ
ಸಿಂಧನೂರು: ಸರ್ಕಾರಿ ಆಸ್ಪತ್ರೆಯಲ್ಲಿ ಮೂರು ತಿಂಗಳ ಹಿಂದೆ ನಾಲ್ವರು ಬಾಣಂತಿಯರ ಸರಣಿ ಸಾವು ಹಾಗೂ ಮಕ್ಕಳ ತಾವುಗಳು ಒಂದೇ ತಿಂಗಳಲ್ಲಿ ಸಂಭವಿಸಿದ್ದು ಇದಕ್ಕೆ ಸರ್ಕಾರವೇ ಹೊಣೆ ಎಂದು ಬಿಜೆಪಿ ಸತ್ಯ ಶೋಧನಾ ತಂಡದ ಮುಖ್ಯಸ್ಥ ಡಾ. ಶೈಲೇಂದ್ರ ಬೆಲ್ದಾಳೆ ಆರೂಪಿಸಿದರು.
ಅವರು ಸೋಮವಾರ ಸರ್ಕಾರಿ ಆಸ್ಪತ್ರೆಗೆ ತಮ್ಮ ತಂಡದೊಂದಿಗೆ ಭೇಟಿ ನೀಡಿ ಆಸ್ಪತ್ರೆಯಲ್ಲಿನ ವೈದ್ಯಾಧಿಕಾರಿ ಗಳೊಂದಿಗೆ ಸಮಾಲೋಚಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಬಳ್ಳಾರಿಯಲಿ ನಡೆದ ಸರಣಿ ಬಾಣಂತಿ ಯರ ಸಾವಿಗೂ ಹಾಗೂ ಸಿಂಧನೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ಸಾವಿಗೂ ಒಂದಿಷ್ಟು ಸಾಮ್ಯತೆ ಕಂಡು ಬರುತ್ತದೆ. ಎರಡು ಕಡೆ ಬಾಣಂತಿಯರಿಗೆ ನೀಡಿದ ಆರ್.ಎಲ್.ಸಿರಿಂಜನ್ ಇಂಜೆಕ್ಷನ್‌ಗಳೇ ಈ ದುಷ್ಪರಿಣಾಮಕ್ಕೆ ಕಾರಣವೆಂದು ಹೇಳಲಾಗುತ್ತಿದೆ. ಈ ಬಗ್ಗೆ ಸರ್ಕಾರ ಕೂಡಲೇ ಉನ್ನತ ಅಧಿಕಾರಿಗಳಿಂದ ವರದಿ ತರಿಸಿಕೊಂಡು ಕಟ್ಟುನಿಟ್ಟಿನ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ತಾಲೂಕ ಆರೋಗ್ಯ ಅಧಿಕಾರಿ ಡಾಕ್ಟರ್ ಅಯ್ಯನಗೌಡಗೌಡ ಹಾಗೂ ಮುಖ್ಯ ವೈದ್ಯಾಧಿಕಾರಿ ಡಾ. ನಾಗರಾಜ್ ಕಾಟ್ಟ ಅವರು ಬಾಣಂತಿಯರು ಹಾಗೂ ಮಕ್ಕಳು ಅನಾರೋಗ್ಯದಿಂದ ಸತ್ತಿದ್ದಾರೆ ಎಂದು ಮಾಹಿತಿ ನೀಡುತ್ತಿರುವುದು ಸರಿಯಲ್ಲ. ಘಟನೆ ನಡೆದು ಎರಡು ತಿಂಗಳಾ ಇದುವರೆಗೂ ಸಮರ್ಪಕ ವರದಿ ಇಲಾಖೆ ಕೈ ಸೇರಿಲ್ಲ. ಇದು ಬೇಜವಾಬ್ದಾರಿ ಅಲ್ಲದೆ ಮತ್ತೇನು ಎಂದು ಬೆಲ್ದಾಳೆ ಪ್ರಶ್ನಿಸಿದರು.
ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ ಮಾತನಾಡಿ, ವೈದ್ಯರ ಸೋಮಾರಿತನವೇ ಬಳ್ಳಾರಿ ಹಾಗೂ ಸಿಂಧನೂರಿನ ಬಾಣಂತಿಯರು ಮತ್ತು ಮಕ್ಕಳ ಸಾವಿನ ಘಟನೆಗೆ ಕಾರಣವಾಗಿದೆ. ಕಳೆದ ವರ್ಷ ಅಕ್ಟೋಬರ್ ಹಾಗೂ ನವಂಬರ್ ತಿಂಗಳ ಮಧ್ಯೆ ನಾಲ್ವರು ಬಾಣಂತಿಯರು ಮೃತಪಟ್ಟಿದ್ದು, ನೋವಿನ ಸಂಗತಿ ಅಷ್ಟೇ ಅಲ್ಲ ಕಳೆದ ನವೆಂಬರ್‌ನಲ್ಲಿ ಇಬ್ಬರು ಮಕ್ಕಳು ಹಾಗೂ ಡಿಸೆಂಬರ್‌ನಲ್ಲಿ ಆರು ಜನ ಮಕ್ಕಳು ಸರಿಯಾದ ಚಿಕಿತ್ಸೆ ಇಲ್ಲದೆ ಆಸ್ಪತ್ರೆಯಲ್ಲಿ ಮರಣ ಹೊಂದಿದ್ದಾರೆ. ಹೊಂದಿದ್ದಾರೆ. ಒಂದು ವರ್ಷದಲ್ಲಿ ತಮಗೆ ಬಂದಿರುವ ಮಾಹಿತಿ ಪ್ರಕಾರ 43 ಮಕ್ಕಳು ಮೃತಪಟ್ಟಿದ್ದಾರೆ. ಈ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಬೇಕು ಎಂದರು.
ಗ್ಯಾರಂಟಿ ಜೊತೆಗೆ ಕಾಂಗ್ರೆಸ್ ಸರ್ಕಾರದಿಂದ ಸಾವಿನ ಗ್ಯಾರಂಟಿ: ಹೇಮಲತಾ ನಾಯಕ
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆರೋಗ್ಯ ಇಲಾಖೆಗೆ ಕೋಟಿಗಟ್ಟಲೆ ಅನುದಾನವನ್ನು ನೀಡುತ್ತಾ ಬಂದಿವೆ. ಆದರೆ, ವೈದ್ಯರ ಬೇಜವಾಬ್ದಾರಿತನದಿಂದ ಸರಣಿ ಸಾವಿನ ದುರ್ಘಟನೆಗಳು ನಡೆಯುತ್ತಿವೆ. ಈ ಬಗ್ಗೆ ಸರ್ಕಾರ ಉನ್ನತ ತನಿಖೆಗೆ ಆದೇಶಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಂಸದ ಕೆ ವಿರುಪಾಕ್ಷಪ್ಪ, ಬಿಜೆಪಿ ಮುಖಂಡರಾದ ಡಾ. ಬಸವರಾಜ್ ಡಾ .ಬಸವರಾಜ್ ಕ್ಯಾವಟರ್, ಕೆ .ಕರಿಯಪ್ಪ, ಮಧ್ವರಾಜ ಮುಂತಾದವರು ಪಾಲ್ಗೊಂಡಿದ್ದರು.