ಶಿವಾನಂದ ಗೊಂಬಿ

ಹುಬ್ಬಳ್ಳಿ(ನ.20): ಉತ್ತರ ಕರ್ನಾಟಕದ ಬಡವರ ಪಾಲಿನ ಕಾಮಧೇನು ಎಂದೇ ಖ್ಯಾತಿಗಳಿಸಿರುವ ಇಲ್ಲಿನ ಕಿಮ್ಸ್‌ನಲ್ಲಿ ಮತ್ತೆ ಬಡ್ತಿ ವಿಷಯದಲ್ಲಿ ದೊಡ್ಡ ಗೋಲ್‌ಮಾಲ್‌ ನಡೆದಿದೆ!

ಅನರ್ಹರಿಗೆ ಬಡ್ತಿ ಕೊಡಲಾಗಿದೆ, ಇದನ್ನು ತಡೆ ಹಿಡಿಯಬೇಕು, ಬಡ್ತಿ ಕೊಟ್ಟು ಹೆಚ್ಚುವರಿಯಾಗಿ ನೀಡಿರುವ ಸಂಬಳವನ್ನು ವಸೂಲಿ ಮಾಡಬೇಕು ಎಂದು ವೈದ್ಯರ ಗುಂಪೊಂದು ವೈದ್ಯಕೀಯ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಹಾಗೂ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಹೀಗೆ ದೂರು ಕೊಟ್ಟ ವೈದ್ಯರಿಗೆ ಅಪರಿಚಿತರಿಂದ ಜೀವ ಬೆದರಿಕೆ ಕರೆ ಬಂದಿದ್ದು, ಅವರೀಗ ತಮಗೆ ರಕ್ಷಣೆ ನೀಡುವಂತೆ ಕೋರಿ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಕಿಮ್ಸ್‌ ಎಂದರೆ ದೊಡ್ಡ ಸಮುದ್ರವಿದ್ದಂತೆ. ಪ್ರತಿನಿತ್ಯ ಸಾವಿರಾರು ರೋಗಿಗಳು ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳಿಂದಲೂ ಬರುತ್ತಿರುತ್ತಾರೆ. ಒಂದಿಲ್ಲೊಂದು ಅವಾಂತರದಿಂದ ಕಿಮ್ಸ್‌ ಸದಾ ಸುದ್ದಿಯಲ್ಲಿರುವ ಸ್ವಾಯತ್ತ ಸಂಸ್ಥೆ. ನಿರ್ದೇಶಕರ ಹುದ್ದೆಗೆ ನೋಟಿಫಿಕೇಶನ್‌ನ್ನು ಸರ್ಕಾರ ಹೊರಡಿಸಿದೆ. ಇನ್ನೇನು ಕೆಲವೇ ದಿನಗಳಲ್ಲಿ ಅರ್ಹ ವೈದ್ಯರ ಸಂದರ್ಶನ ನಿರ್ದೇಶಕರ ಹುದ್ದೆಗೆ ನಡೆಯಲಿದೆ. ನಿರ್ದೇಶಕರು ಬದಲಾಗಲಿದ್ದಾರೆ. ಆ ಸಂದರ್ಶನ ನಡೆಯುವ ಮುನ್ನವೇ ಬಡ್ತಿ ನೀಡಿರುವುದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಬಡ್ತಿ ಅನುಮಾನವೇಕೆ?

2014ರ ಜೂನ್‌ 19 ರಂದು ಕಿಮ್ಸ್‌ನಲ್ಲಿ ಇಲಾಖಾ ಬಡ್ತಿ ಸಮಿತಿಯ ಸಭೆ ನಡೆದಿತ್ತು. ಅಲ್ಲಿ 9 ಜನ ವೈದ್ಯರು ಸೇರಿದಂತೆ ವಿವಿಧ ಹುದ್ದೆಗಳ ಕೆಲ ನೌಕರರಿಗೆ ಬಡ್ತಿ ನೀಡಲು ನಿರ್ಧರಿಸಲಾಗಿತ್ತು. ಆದರೆ ಇದನ್ನು ಸರ್ಕಾರದ ಮಟ್ಟದಲ್ಲಿ ನಡೆದ ಸಲಹಾ ಸಮಿತಿ ಸಭೆಯಲ್ಲಿ ತಿರಸ್ಕರಿಸಿತ್ತು. ಬಡ್ತಿ ಪಟ್ಟಿಯನ್ನು ಜೇಷ್ಠತೆ ಆಧಾರದ ಮೇಲೆ ಸಿದ್ಧಪಡಿಸಿಲ್ಲ. ಆದ ಕಾರಣ 9ಜನರಿಗೆ ಬಡ್ತಿ ಕೊಡುವುದು ಬೇಡ ಎಂದು ಸರ್ಕಾರವೇ ತಡೆ ನೀಡಿತ್ತು. ಪುನರ್‌ ಸಭೆ ನಡೆಸಿ ಜೇಷ್ಠತೆ ಆಧಾರದ ಮೇಲೆ ಪಟ್ಟಿತಯಾರಿಸಿಕೊಂಡು ಬರುವಂತೆ ಕಿಮ್ಸ್‌ ನಿರ್ದೇಶಕರಿಗೆ ಸಲಹಾ ಸಮಿತಿ ಸೂಚಿಸಿತ್ತು. ಆದರೆ ಆಗ ತಿರಸ್ಕಾರಗೊಂಡ 9 ಜನರ ಹೆಸರುಗಳನ್ನೇ ಈಗ ಮತ್ತೊಂದು ಪಟ್ಟಿ ತಯಾರಿಸಿಕೊಂಡು 2019 ರ ಜೂನ್‌ 4ರಂದು ಸರ್ಕಾರದ ಒಪ್ಪಿಗೆ ಪಡೆದು ಬಡ್ತಿ ನೀಡಲಾಗಿದೆ. 9 ಜನರು ಇದೀಗ ಬಡ್ತಿ ಪಡೆದು ಎರಡ್ಮೂರು ತಿಂಗಳ ಸಂಬಳವನ್ನು ಪಡೆದಿದ್ದಾರೆ. ಆದರೀಗ ಅದಕ್ಕೆ ಆಕ್ಷೇಪ ಕೇಳಿ ಬಂದಿದೆ.

ಕಿಮ್ಸ್‌ನ ಡಾ. ಅಶೋಕ ಭಜಂತ್ರಿ, ಡಾ. ಎಂ.ಎಂ. ಬಿಜಾಪುರ, ಡಾ. ನರ್ಮತಾ ನಂದಿಹಾಳ ಸೇರಿದಂತೆ ಮತ್ತಿತರ ವೈದ್ಯರು ಆಗ ತಿರಸ್ಕಾರಗೊಂಡಿರುವವರಿಗೆ ಈಗ ಬಡ್ತಿ ನೀಡಿರುವುದು ಯಾವ ಆಧಾರದ ಮೇಲೆ ಎಂದು ಪ್ರಶ್ನೆ ಎತ್ತಿದ್ದಾರೆ. ಈ ಬಗ್ಗೆ ವೈದ್ಯಕೀಯ ಶಿಕ್ಷಣ ಇಲಾಖೆಯ ಕಾರ್ಯದರ್ಶಿಗಳಿಗೆ ದೂರು ನೀಡಿದ್ದಾರೆ. ಬಡ್ತಿ ನೀಡಿರುವುದನ್ನು ಹಿಂಪಡೆಯಬೇಕು. ಜೇಷ್ಠತೆ ಆಧಾರದ ಮೇಲೆ ಮತ್ತೊಮ್ಮೆ ಸಭೆ ನಡೆಸಿ ಅರ್ಹರಿಗೇ ಬಡ್ತಿ ನೀಡಬೇಕು ಎಂಬ ಆಗ್ರಹ ಈ ವೈದ್ಯರದ್ದು.

ಠಾಣೆ ಏರಿದ ಪ್ರಕರಣ:

ಹೀಗೆ ಸರ್ಕಾರದವರೆಗೂ ಇಲ್ಲಿನ ಗೋಲ್‌ಮಾಲ್‌ ದೂರು ಹೋಗುತ್ತಿದ್ದಂತೆ ಇದರ ನೇತೃತ್ವ ವಹಿಸಿದ್ದ ಡಾ. ಅಶೋಕ ಭಜಂತ್ರಿ ಅವರಿಗೆ ದೂರವಾಣಿ ಮೂಲಕ ಬೆದರಿಕೆ ಹಾಕಲಾಗಿದೆ. ಬಡ್ತಿ ವಿಷಯದಲ್ಲಿ ತಲೆ ಹಾಕಬೇಡ ಎಂದು ಬೆದರಿಸಿದ್ದಾರೆ ಎಂದು ಹೇಳಲಾಗಿದೆ. 

ಈ ಹಿನ್ನೆಲೆಯಲ್ಲಿ ಅವರು ತಮಗೆ ಕಿಮ್ಸ್‌ನಲ್ಲಿನ ಬಡ್ತಿ ಹಾಗೂ ಅವ್ಯವಹಾರವನ್ನು ಸರ್ಕಾರದ ಮಟ್ಟದವರೆಗೆ ಒಯ್ದಿದ್ದರಿಂದ ಬೆದರಿಕೆ ಬರುತ್ತಿದೆ. ನನ್ನ ಜೀವಕ್ಕೆ ಅಪಾಯವಿದೆ. ನನಗೆ ರಕ್ಷಣೆ ನೀಡಬೇಕು. ನನಗೆ ಏನಾದರೂ ಆದರೆ ಅದಕ್ಕೆ ಇಂಥವರೇ ಕಾರಣ ಎಂದು ವಿದ್ಯಾನಗರ ಠಾಣೆಗೆ ದೂರು ಸಲ್ಲಿಸಿದ್ದಾರೆ. ಡಾ.ಅಶೋಕ ಭಜಂತ್ರಿ ಅವರಿಗೆ ಬೆದರಿಕೆ ಹಾಕಿದ್ದು ನಿಜವೇ ಆಗಿದ್ದರೆ, ಬಡ್ತಿ ವಿಷಯದಲ್ಲಿ ಸಾಕಷ್ಟುಗೋಲ್‌ಮಾಲ್‌ ನಡೆದಿದೆ ಎಂಬುದಕ್ಕೆ ಸಾಕ್ಷಿಯಾದಂತಾಗಿದೆ. ಆದಕಾರಣ ಬಡ್ತಿ ವಿಷಯದಲ್ಲಿ ಗೋಲ್‌ಮಾಲ್‌ ಆಗದಂತೆ ಜಿಲ್ಲಾ ಉಸ್ತುವಾರಿ ಸಚಿವರು, ವೈದ್ಯಕೀಯ ಶಿಕ್ಷಣ ಖಾತೆಯ ಸಚಿವರು ಕ್ರಮಕೈಗೊಳ್ಳಬೇಕು ಎಂಬುದು ಸಾರ್ವಜನಿಕ ವಲಯದ ಆಗ್ರಹ. ಒಟ್ಟಿನಲ್ಲಿ ಕಿಮ್ಸ್‌ನಲ್ಲೀಗ ಬಡ್ತಿಯಲ್ಲಿನ ಗೋಲ್‌ಮಾಲ್‌, ವೈದ್ಯರಿಗೆ ಬೆದರಿಕೆ ಹಾಕಿರುವ ವಿಷಯ ದೊಡ್ಡ ಚರ್ಚೆ ಹುಟ್ಟು ಹಾಕಿರುವುದು ಸತ್ಯ.

ಮತ್ತೊಂದು ಪಟ್ಟಿ ಸಿದ್ಧ:

ಈ ಎಲ್ಲ ಬೆಳವಣಿಗೆ 9 ಜನರಿಗೆ ಬಡ್ತಿ ನೀಡಿರುವುದಲ್ಲದೇ, ಮತ್ತೆ 40 ಜನರಿಗೆ ಬಡ್ತಿ ನೀಡಲು ಪಟ್ಟಿ ಸಿದ್ಧಪಡಿಸಿದೆ. ಈ 40 ಜನರಿಗೆ ಇನ್ನೂ ಪದೋನ್ನತಿಯ ಆದೇಶ ಪತ್ರ ನೀಡಿಲ್ಲ. ಈ ಪಟ್ಟಿಗೂ ತಡೆ ನೀಡಬೇಕೆಂಬ ಬೇಡಿಕೆ ಕಿಮ್ಸ್‌ ವಲಯದ ಸಿಬ್ಬಂದಿಯದ್ದು. ಈ ನಿಟ್ಟಿನಲ್ಲೂ ಸಂಬಂಧಪಟ್ಟಇಲಾಖೆಯ ಹಿರಿಯ ಅಧಿಕಾರಿಗಳು, ಸಚಿವರು ಕ್ರಮ ಕೈಗೊಳ್ಳಬೇಕು ಎಂಬುದು ನಾಗರಿಕರ ಆಗ್ರಹವಾಗಿದೆ. 

ಈ ಬಗ್ಗೆ ಮಾತನಾಡಿದ ಕಿಮ್ಸ್‌ ಆಸ್ಪತ್ರೆಯ ಶರೀರ ಕ್ರಿಯಾ ಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ. ಅಶೋಕ ಭಜಂತ್ರಿ ಅವರು, ನಾನು ಬಡ್ತಿಯಲ್ಲಿ ಗೋಲ್‌ಮಾಲ್‌ ಆಗುತ್ತಿರುವ ಬಗ್ಗೆ ಸರ್ಕಾರದ ಗಮನಕ್ಕೆ ತಂದಿದ್ದೇನೆ. ಈ ಹಿನ್ನೆಲೆಯಲ್ಲಿ ನನಗೆ ಬೆದರಿಕೆ ಬಂದಿದ್ದು ನಿಜ. ಈ ಕಾರಣಕ್ಕಾಗಿ ರಕ್ಷಣೆ ನೀಡುವಂತೆ ಕೋರಿ ವಿದ್ಯಾನಗರ ಠಾಣೆಯಲ್ಲಿ ದೂರು ನೀಡಿದ್ದೇನೆ ಎಂದು ತಿಳಿಸಿದ್ದಾರೆ.