ಕಣಿಮಿಣಿಕೆ, ಕೊಮ್ಮಘಟ್ಟ ಬಿಡಿಎ ಅಪಾರ್ಟ್‌ಮೆಂಟ್‌ನಲ್ಲಿ ಫ್ಲ್ಯಾಟ್‌ ಖರೀದಿಗೆ ಆಫರ್‌, ನೋಂದಣಿ ಶುಲ್ಕದಲ್ಲೂ ಶೇ.3 ರಷ್ಟು ಇಳಿಕೆ ಮಾಡಿದ ಬಿಡಿಎ 

ಬೆಂಗಳೂರು(ಮಾ.30): ಸಾರಿಗೆ ಸಂಪರ್ಕದ ಕೊರತೆ ಸೇರಿದಂತೆ ವಿವಿಧ ಕಾರಣಗಳಿಂದ ಮಾರಾಟವಾಗದೇ ಉಳಿದಿರುವ ಕಣಿಮಿಣಿಕೆ ಮತ್ತು ಕೊಮ್ಮಘಟ್ಟ ಬಿಡಿಎ ಬಹುಮಹಡಿ ವಸತಿ ಕಟ್ಟಡದ ಫ್ಲ್ಯಾಟ್‌ಗಳ ಖರೀದಿದಾರರಿಗೆ ಶೇಕಡ 10ರಷ್ಟು ರಿಯಾಯಿತಿ ಘೋಷಿಸಲಾಗಿದ್ದು, ನೋಂದಣಿ ಶುಲ್ಕದಲ್ಲೂ ಶೇ.3ರಷ್ಟು ಇಳಿಕೆ ಮಾಡಲಾಗಿದೆ.

ಈ ಹಿಂದೆ ಒಮ್ಮೆಗೆ 10ಕ್ಕಿಂತ ಹೆಚ್ಚು ಫ್ಲ್ಯಾಟ್‌ಗಳನ್ನು ಖರೀದಿಸುವವರಿಗೆ ಪ್ರತಿ ಫ್ಲ್ಯಾಟ್‌ಗೆ ಶೇ.5ರಿಂದ 10ರಷ್ಟು ರಿಯಾಯಿತಿ ನೀಡಲಾಗುತ್ತಿತ್ತು. ಇತ್ತೀಚೆಗೆ ಫ್ಲ್ಯಾಟ್‌(ಬಲ್ಕ್‌) ಖರೀದಿಗೆ ಯಾವುದೇ ಸಂಘ-ಸಂಸ್ಥೆಗಳು ಆಸಕ್ತಿ ತೋರುತ್ತಿಲ್ಲ. ಜೊತೆಗೆ ಕಣಿಮಿಣಿಕೆ ಅಪಾರ್ಟ್‌ಮೆಂಟ್‌ಗೆ ಹೋಗಲು ರಸ್ತೆ, ಮೆಟ್ರೋ ರೈಲು ಮತ್ತು ಬಸ್‌ ಸಂಚಾರದ ಸೌಲಭ್ಯ ಸಮರ್ಪಕವಾಗಿ ಇಲ್ಲದ ಕಾರಣ ಗ್ರಾಹಕರು ಫ್ಲ್ಯಾಟ್‌ಗಳ ಖರೀದಿಗೆ ಮನಸ್ಸು ಮಾಡುತ್ತಿಲ್ಲ.

ಬಿಡಿಎ, ಬಿಬಿಎಂಪಿ ಆಸ್ತಿ ರಕ್ಷಣೆಗೆ ಕ್ರಮ: ಸಿಎಂ ಬೊಮ್ಮಾಯಿ

ಈ ಕಾರಣದಿಂದಾಗಿ ಕಣಿಮಿಣಿಕೆ ಸೇರಿದಂತೆ ಕೆಲವೆಡೆ ಬಿಡಿಎ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳಲ್ಲಿ 1078ಕ್ಕೂ ಹೆಚ್ಚು ಫ್ಲ್ಯಾಟ್‌ಗಳು ಮಾರಾಟವಾಗಿಲ್ಲ. ಆದ್ದರಿಂದ ಗ್ರಾಹಕರನ್ನು ಸೆಳೆಯಲು ಬಿಡಿಎ ಫ್ಲ್ಯಾಟ್‌ ಖರೀದಿಸುವ ಗ್ರಾಹಕರಿಗೆ 2 ಬಿಎಚ್‌ಕೆಗೆ ಶೇ.10ರಷ್ಟು ಮತ್ತು 3 ಬಿಎಚ್‌ಕೆಗೆ ಶೇ.5ರಷ್ಟು ರಿಯಾಯಿತಿ ನೀಡುವುದಾಗಿ ಘೋಷಿಸಿದೆ. ಹಾಗೆಯೇ ನೋಂದಣಿ ಶುಲ್ಕದಲ್ಲೂ ಶೇ.3ರಷ್ಟು ವಿನಾಯಿತಿಯೂ ಸಿಗಲಿದೆ. ಈ ರಿಯಾಯಿತಿ ಜೂ.30ರವರೆಗೆ ಮುಂದುವರಿಯಲಿದೆ ಎಂದು ಬಿಡಿಎ ಮೂಲಗಳು ತಿಳಿಸಿವೆ.

ಫ್ಲ್ಯಾಟ್‌ಗಳ ದರಗಳು ಇಂತಿವೆ

ಚಲ್ಲಘಟ್ಟ ಮೆಟ್ರೋ ನಿಲ್ದಾಣದಿಂದ 2.5 ಕಿ.ಮೀ. ದೂರದಲ್ಲಿರುವ ಕಣಿಮಿಣಿಕೆಯಲ್ಲಿ 2, 3 ಮತ್ತು 4ನೇ ಹಂತದಲ್ಲಿ ನಿರ್ಮಾಣಗೊಂಡಿರುವ 870 ಚದರ ಅಡಿ ವಿಸ್ತೀರ್ಣದ 2 ಬಿಎಚ್‌ಕೆ ಫ್ಲ್ಯಾಟ್‌ಗಳ ದರ .25 ಲಕ್ಷ ಇದ್ದರೆ, 1,060 ಚದರ ಅಡಿ ವಿಸ್ತೀರ್ಣದ 2 ಬಿಎಚ್‌ಕೆ ಫ್ಲ್ಯಾಟ್‌ಗಳು .30 ಲಕ್ಷ ಹಾಗೂ 1,430 ಚದರ ಅಡಿ ವಿಸ್ತೀರ್ಣದ 3 ಬಿಎಚ್‌ಕೆ ಫ್ಲ್ಯಾಟ್‌ಗಳ ದರ .40 ಲಕ್ಷ ಇದೆ.

ನೈಸ್‌ ರಸ್ತೆ ಜಂಕ್ಷನ್‌ನಿಂದ 0.75 ಕಿ.ಮೀ. ದೂರದಲ್ಲಿರುವ ಕೊಮ್ಮಘಟ್ಟದಲ್ಲಿ 830 ಚದರ ಅಡಿ ವಿಸ್ತೀರ್ಣದ 2 ಬಿಎಚ್‌ಕೆ ಫ್ಲ್ಯಾಟ್‌ಗಳು .25 ಲಕ್ಷ, 1060 ಚದರ ಅಡಿ ವಿಸ್ತೀರ್ಣದ ಫ್ಲ್ಯಾಟ್‌ಗಳು .32 ಲಕ್ಷಕ್ಕೆ ದೊರೆಯುತ್ತಿವೆ. ಐಟಿಪಿಎಲ್‌ನಿಂದ 4 ಕಿ.ಮೀ. ದೂರದಲ್ಲಿರುವ ದೊಡ್ಡಬನಹಳ್ಳಿ 830 ಚದರ ಅಡಿ ವಿಸ್ತೀರ್ಣದ 2 ಬಿಎಚ್‌ಕೆ ಫ್ಲ್ಯಾಟ್‌ಗಳು .25 ಲಕ್ಷ, ವಲಗೇರಹಳ್ಳಿಯಲ್ಲಿ 850 ಚ.ಅಡಿ ವಿಸ್ತೀರ್ಣದ 2 ಬಿಎಚ್‌ಕೆ ಮನೆಗಳು .44 ಲಕ್ಷಕ್ಕೆ ಸಿಗಲಿವೆ.

Bengaluru: ಬಿಡಿಎ ಕಚೇರಿ ಮೇಲೆ ಲೋಕಾಯುಕ್ತ ದಾಳಿ: ಬ್ರೋಕರ್‌ಗಳ ಬಂಧನ

ಹುಣ್ಣಿಗೆರೆ ವಿಲ್ಲಾ ಮಾರಾಟಕ್ಕೆ ಸಿದ್ಧ

ತುಮಕೂರು ರಸ್ತೆಯ ದಾಸನಪುರ ಹೋಬಳಿಯ ಹುಣ್ಣಿಗೆರೆಯಲ್ಲಿ ಬಿಡಿಎ ವಿಲ್ಲಾ ಯೋಜನೆಗೆಂದು 31 ಎಕರೆ ಜಾಗವನ್ನು ಬಳಕೆ ಮಾಡಿಕೊಳ್ಳಲಾಗಿದೆ. ಇದರಲ್ಲಿ 170 ನಾಲ್ಕು ಬಿಎಚ್‌ಕೆ ವಿಲ್ಲಾ (35/50 ಅಳತೆ), 31 ಮೂರು ಬಿಎಚ್‌ಕೆ ವಿಲ್ಲಾ (35/50 ಅಳತೆ) ಮತ್ತು 121 ಮೂರು ಬಿಎಚ್‌ಕೆ ವಿಲ್ಲಾಗಳು (30/40 ಅಳತೆ) ಮತ್ತು 320 ಒಂದು ಬಿಎಚ್‌ಕೆ (ಆರ್ಥಿಕವಾಗಿ ಹಿಂದುಳಿದವರಿಗಾಗಿ-ಇಡಬ್ಲ್ಯೂಎಸ್‌) ಫ್ಲ್ಯಾಟ್‌ಗಳಿರುವ ಮೂರು ಅಂತಸ್ತಿನ ಅಪಾರ್ಟ್‌ಮೆಂಟ್‌ ನಿರ್ಮಾಣ ಮಾಡಲಾಗಿದೆ.

ಸುಮಾರು .271.46 ಕೋಟಿಗಳನ್ನು ಯೋಜನೆಗೆ ವೆಚ್ಚ ಮಾಡಲಾಗಿದ್ದು, 2018 ಸೆಪ್ಟೆಂಬರ್‌ 25ರಂದು ಹೊಂಬಾಳೆ ಕನ್‌ಸ್ಟ್ರಕ್ಷನ್ಸ್‌ ಆ್ಯಂಡ್‌ ಎಸ್ಟೇಟ್‌ ಪ್ರೈ.ಲಿ. ಕಂಪನಿಗೆ ಕಾಮಗಾರಿ ಆರಂಭಿಸಲು ಕಾರ್ಯಾದೇಶ ನೀಡಲಾಗಿತ್ತು. ಸಾರ್ವತ್ರಿಕ ಚುನಾವಣೆ ಮುಗಿದ ಬಳಿಕ ಹುಣ್ಣಿಗೆರೆ ವಿಲ್ಲಾಗಳನ್ನು ಆನ್‌ಲೈನ್‌ ಮೂಲಕ ಮಾರಾಟ ಮಾಡಲು ಬಿಡಿಎ ನಿರ್ಧರಿಸಿದೆ ಎಂದು ಹಿರಿಯ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.