* ವೇತನ ಏರಿಕೆಗೆ ಅಂಗನವಾಡಿ  ಸಿಬ್ಬಂದಿ ಬೃಹತ್‌ ಹೋರಾಟ* ಅಂಗನವಾಡಿ ಕಾರ್ಯಕರ್ತೆಯರಿಗೆ 18 ಸಾವಿರ ರು.ಕನಿಷ್ಠ ವೇತನ ಕೊಡಬೇಕು* ಮತ್ತೆ ಅನಿವಾರ್ಯವಾಗಿ ಪ್ರತಿಭಟನೆ ದಾರಿ ಹಿಡಿದಿದ್ದೇವೆ

ಬೆಂಗಳೂರು(ಫೆ. 22) ಸೇವಾ ಹಿರಿತನದ ಆಧಾರದಲ್ಲಿ ವೇತನ ಮತ್ತು ನಿವೃತ್ತರಿಗೆ ಪಿಂಚಣಿ (Pension)ಕೊಡಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರು (Anganwadi Workers) ಮತ್ತು ಸಹಾಯಕರು ಬೃಹತ್‌ ಪ್ರತಿಭಟನೆ ನಡೆಸಿದರು.

ಸೋಮವಾರ ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ನಗರದ ಸಿಟಿ ರೈಲ್ವೆ ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ‘ಬೆಂಗಳೂರು ಚಲೋ’ ಪ್ರತಿಭಟನೆ ನಡೆಸಿದರು.

ರಾಜ್ಯ ಸರ್ಕಾರದ ನಿಯಮಾವಳಿ ಪ್ರಕಾರ ಅಂಗನವಾಡಿ ಕಾರ್ಯಕರ್ತೆಯರಿಗೆ 18 ಸಾವಿರ ರು.ಕನಿಷ್ಠ ವೇತನ ಕೊಡಬೇಕು. ಆದರೆ, ಈಗಲೂ 10 ಸಾವಿರ ರೂ.ಗಳಿಗೆ ದುಡಿಸಲಾಗುತ್ತಿದೆ. ರಾಜ್ಯದಲ್ಲಿ 62 ಸಾವಿರ ಅಂಗನವಾಡಿಗಳಲ್ಲಿ 1.24 ಲಕ್ಷ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಕಾರ್ಯನಿರ್ವಹಿಸುತ್ತಿದ್ದಾರೆ. 2017ರಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಸತ್ಯಾಗ್ರಹ ನಡೆಸಿದಾಗ ಸರ್ಕಾರ ವೇತನ ಹೆಚ್ಚಿಸುವ ಆಶ್ವಾಸನೆ ನೀಡಿತ್ತು. ಅದನ್ನು ನಂಬಿ ನಾವು ಹೋರಾಟ ನಿಲ್ಲಿಸಿದ್ದೆವು. ಇದಾಗಿ ಐದು ವರ್ಷವಾದರೂ ಯಾವುದೇ ಸೌಲಭ್ಯ ಸಿಕ್ಕಿಲ್ಲ. ಕೋವಿಡ್‌ ಕಾರಣದಿಂದಾಗಿ ಕಳೆದೆರಡು ವರ್ಷ ಸುಮ್ಮನಿದ್ದೆವು. ಈ ಬಾರಿ ಅನಿವಾರ್ಯವಾಗಿ ಬೀದಿಗಿಳಿದಿದ್ದೇವೆ ಎಂದು ಪ್ರತಿಭಟನಾನಿರತರು ಹೇಳಿದರು.

ಅಂಗನವಾಡಿ ಕಾರ್ಯಕರ್ತೆ ಆತ್ಮಹತ್ಯೆಗೆ ಯತ್ನ, ಸ್ವಲ್ಪದರಲ್ಲೇ ಉಳಿಯಿತು ಜೀವ

2006ಕ್ಕೂ ಮೊದಲು ಸೇರ್ಪಡೆಯಾದವರು, ನಿವೃತ್ತರಾದವರಿಗೆ ಪಿಂಚಣಿ ಸವಲತ್ತು ನೀಡಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಸಿಐಟಿಯು ಮುಖಂಡರಾದ ವರಲಕ್ಷ್ಮೇ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಈ ಹಿಂದೆ ಅಂಗನವಾಡಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾಗ ಸರ್ಕಾರ ಅವರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸುವ ವಾಗ್ದಾನ ನೀಡಿತ್ತು. ಆದರೆ ಪರಿಸ್ಥಿತಿಯಲ್ಲಿ ಯಾವುದೆ ಬದಲಾವಣೆ ಆಗದ ಕಾರಣ ಮತ್ತೆ ಪ್ರತಿಭಟನೆ ಹಾದಿ ಹಿಡಿದಿದ್ದಾರೆ.

ಅಂಗನವಾಡಿ ಕಾರ್ಯಕರ್ತೆ ವರ್ಗಾವಣೆಯಲ್ಲಿ ಅಧಿಕಾರಿಗಳ ಯಾವುದೇ ತಪ್ಪಿಲ್ಲ: ಮೈಸೂರು ತಾಲೂಕಿನ ದೊಡ್ಡಮಾರಗೌಡಹಳ್ಳಿಯ ಅಂಗನವಾಡಿ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದ ಸುಮತಿ ಅವರು ಸರ್ಕಾರದ ಸೌಲಭ್ಯಗಳನ್ನು ಸರಿಯಾಗಿ ಜನರಿಗೆ ತಲುಪಿಸದ ಕಾರಣ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಇದರಲ್ಲಿ ಅಧಿಕಾರಿಗಳ ಯಾವುದೇ ತಪ್ಪಿಲ್ಲ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ (ಸಿಐಟಿಯು ಸಂಯೋಜಿತ) ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪುಷ್ಪಲತಾ ಸ್ಪಷ್ಪಡಿಸಿದರು.

ಅಂಗನವಾಡಿ ಕಾರ್ಯಕರ್ತೆ ಸುಮತಿ ತಮ್ಮೂರಿಗೆ ಬೇಡ ಎಂದು ಗ್ರಾಮಸ್ಥರು ದೂರು ನೀಡಿದ್ದರು. ಜೊತೆಗೆ ಡಿಜಿಎಂ ಹಳ್ಳಿಯಿಂದ ಮರಯ್ಯನಹುಂಡಿಗೆ ನಿತ್ಯವೂ ಓಡಾಡುತ್ತಿದ್ದ ಲಲಿತಾರಾಣಿ ಸಹ ಸ್ಥಾನಪಲ್ಲಟ ಕೇಳಿದ್ದರು. ಇದೇ ವೇಳೆ ಸುಮತಿ ಅವರ ಅಸಮರ್ಪಕ ಕಾರ್ಯ ನಿರ್ವಹಣೆ ಕುರಿತು ಗ್ರಾಮಸ್ಥರು ಅಸಮಾಧನಗೊಂಡಿದ್ದರು. ಕೋವಿಡ್‌ ಸಂದರ್ಭದಲ್ಲಿ ಮನೆ ಮನೆಗೆ ಪಡಿತರವನ್ನು ಪೂರೈಸಿರಲಿಲ್ಲ. ಆದರೆ, ಗ್ರಾಮದ ಎಲ್ಲರಿಂದಲೂ ಸುಮತಿ ಸಹಿ ಪಡೆದಿದ್ದರು. ಹೀಗಾಗಿ ಅವರನ್ನು ವರ್ಗಾವಣೆ ಮಾಡಲಾಗಿದೇ ಹೊರತು ಯಾವೊಬ್ಬ ಅಧಿಕಾರಿಯ ದ್ವೇಷದಿಂದ ಅಲ್ಲ ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸುಮತಿ ಅವರು ರಾಜಕೀಯ ಮಾಡುತ್ತ ಅಧಿಕಾರಿಗಳ ವಿರುದ್ಧ ಆರೋಪ ಮಾಡುತ್ತಿರುವುದು ಸರಿಯಲ್ಲ. ಅಂಗನವಾಡಿ ಮಕ್ಕಳ ನಡುವೆಯೇ ವಿಷ ಸೇವಿಸಿರುವುದು ಸಹ ತಪ್ಪು. ಹೀಗಾಗಿ, ಅಧಿಕಾರಿಗಳು ಸರ್ಕಾರದ ಆದೇಶ, ನಿಯಮವನ್ನು ಪಾಲಿಸದ್ದಾರೆ ಎಂದರು. ಸಂಘದ ಪದಾಧಿಕಾರಿಗಳಾದ ಲತಾ, ಕೆ. ಸುಜಾತಾ, ಲೀಲಾವತಿ, ಮಂಗಳಗೌರಿ, ಜಯಂತಿ, ಗೌರಮ್ಮ ಇದ್ದರು.

ಕೆಲಸ ಖಾಲಿ ಇದೆ: ತುಮಕೂರು ಜಿಲ್ಲೆಯ (Tumakuru District) ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿ (Women and Children Welfare Department) ಬರುವ 11 ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಗೆ ಒಳಪಟ್ಟ ಅಂಗನವಾಡಿ ಕೇಂದ್ರ (Anganwadi Centers) ಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 41 ಅಂಗನವಾಡಿ ಕಾರ್ಯಕರ್ತೆ (Anganwadi Workers - ಮಿನಿ ಅಂಗನವಾಡಿ ಕಾರ್ಯಕರ್ತೆ ಸೇರಿ), ಮತ್ತು 139 ಅಂಗನವಾಡಿ ಸಹಾಯಕಿ (Anganwadi Helpers) ಹುದ್ದೆಗಳು ಖಾಲಿ ಇದ್ದು, ಒಟ್ಟು 180 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಆಸಕ್ತರು ಮಾರ್ಚ್ 19 ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್ https://anganwadirecruit.kar.nic.in/ ಗೆ ಭೇಟಿ ನೀಡಬಹುದು.