ರಾಮಮೂರ್ತಿ ನವಲಿ

ಗಂಗಾವತಿ(ಜ.09): ವಿಜಯನಗರ ರಾಜಧಾನಿಯಾಗಿದ್ದ ಆನೆಗೊಂದಿ ಉತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು ಸಿದ್ಧತೆ ಅಂತಿಮ ಹಂತ ತಲುಪಿದೆ. ಐದು ವರ್ಷಗಳ ಬಳಿಕ ಉತ್ಸವ ನಡೆಯುತ್ತಿದ್ದು ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಜ.9.10ರಂದು ನಡೆಯುವ ಉತ್ಸವವನ್ನು ಹಂಪಿ ಉತ್ಸವ ಮೀರಿಸುವಂತೆ ಆಚರಿಸಲು ಉತ್ಸುಕರಾಗಿದ್ದಾರೆ.

ಕ್ರಿಶ 1336ರಲ್ಲಿ ವಿಜಯನಗರ ಸಾಮ್ರಾಜ್ಯ ಸ್ಥಾಪನೆಯಾದಾಗ ಆನೆಗೊಂದಿಯೇ ಮೊದಲ ರಾಜಧಾನಿ. ವಿಜಯನಗರ ಅರಸರು ತಮ್ಮ ಸೈನ್ಯದ ಆನೆಗಳಿಗೆ ತುಂಗಭದ್ರಾ ನದಿ ದಂಡದಲ್ಲಿ ವಾಸದ ನೆಲೆ ಮಾಡಿದ್ದರು. ಈ ಕಾರಣಕ್ಕೆ ಆನೆಗೊಂದಿ ಎಂಬ ಹೆಸರು ಬಂದಿದೆ ಎಂಬ ಉಲ್ಲೇಖ. ಆನೆಗೊಂದಿಗೆ ಕುಂಜರ ಕೋಣ, ಹಸ್ತಿನಾಪುರ ಎಂಬ ಹೆಸರುಗಳಿವೆ.

ಶ್ರೀಕೃಷ್ಣ ದೇವರಾಯ ವೇದಿಕೆ ಸಿದ್ಧ:

ಆನೆಗೊಂದಿ-ತಳವಾರ ಘಟ್ಟದ ಮಾರ್ಗದ ವಿಶಾಲವಾದ ಪ್ರದೇಶದಲ್ಲಿ ಶ್ರೀಕೃಷ್ಣದೇವರಾಯ ವೇದಿಕೆ ಸಿದ್ಧಗೊಂಡಿದೆ. ವೇದಿಕೆಯನ್ನು ಆನೆಗೊಂದಿಯ ಗಗನ್‌ ಮಹಲ್‌ ಮಾದರಿಯಲ್ಲಿ ನಿರ್ಮಾಣಗೊಂಡಿದ್ದು, ಹಿಂದಿನ ಭಾಗದಲ್ಲಿ ವಿದ್ಯುತ್‌ ದೀಪಗಳು ಪ್ರಜ್ವಲಿಸುತ್ತಿವೆ. ವೇದಿಕೆ ಹಿಂಭಾಗದಲ್ಲಿ ಬೆಟ್ಟ, ಗುಡ್ಡಗಳಿದ್ದು ವಿದ್ಯುತ್‌ ದೀಪ ಹಾಕಿರುವುದು ನೋಡುಗರ ಸೆಳೆಯುತ್ತಿದೆ. ವೇದಿಕೆ ಮುಂಭಾಗದಲ್ಲಿ ಕಾರ್ಯಕ್ರಮ ವೀಕ್ಷಿಸಲು ಬರುವ ಪ್ರೇಕ್ಷಕರಿಗೆ 10 ಸಾವಿರಕ್ಕೂ ಹೆಚ್ಚು ಆಸನಗಳ ವ್ಯವಸ್ಥೆ ಮಾಡಲಾಗಿದೆ. ಮಹಿಳೆಯರಿಗಾಗಿ ವಿಶೇಷ ಆಸನಗಳ ವ್ಯವಸ್ಥೆ ಇದ್ದು, ವಿಐಪಿಗಳಿಗೆ ಪ್ರತ್ಯೇಕ ಆಸನಗಳ ವ್ಯವಸ್ಥೆ ಮಾಡಲಾಗಿದೆ.

ಸ್ಮಾರಕಗಳಿಗೂ ವಿದ್ಯುತ್‌ ದೀಪ:

ಆನೆಗೊಂದಿಯ ಸುತ್ತಮುತ್ತಲಿರುವ ಸ್ಮಾರಕಗಳು, ಗುಡಿ ಗೋಪುರಗಳಿಗೂ ವಿದ್ಯುತ್‌ ದೀಪ ಅಳವಡಿಸಲಾಗಿದೆ. ರಂಗನಾಥ ದೇವಸ್ಥಾನ, ಗವಿ ರಂಗನಾಥ, 60 ಕಾಲಿನ ಮಂಟಪ, ದುರ್ಗಾ ಬೆಟ್ಟ, ಹುಚ್ಚಪ್ಪಯ್ಯನಮಠ, ಪಂಪಾಸರೋವರ, ಅಂಜನಾದ್ರಿ ಪರ್ವತ, ನವ ವೃಂದಾವನ ಗಡ್ಡೆ, ಕಿಷ್ಕಿಂಧೆ ಸೇರಿದಂತೆ ಸ್ಮಾರಕಗಳಿಗೂ ವಿದ್ಯುತ್‌ ದೀಪ ಅಳವಡಿಸಲಾಗಿದೆ. ಈಗಾಗಲೇ ಆನೆಗೊಂದಿ ಗ್ರಾಮದಲ್ಲಿ ಹಬ್ಬದ ವಾತವರಣ ಸೃಷ್ಟಿಯಾಗಿದೆ.

ವಿದ್ಯಾರಣ್ಯ ವೇದಿಕೆ ಸಿದ್ಧ:

ಆನೆಗೊಂದಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ವಿದ್ಯಾರಣ್ಯ ವೇದಿಕೆ ಸಿದ್ಧಗೊಂಡಿದೆ. ಈ ವೇದಿಕೆಯಲ್ಲಿ 50ಕ್ಕೂ ಹೆಚ್ಚು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು ಯುವ ಗೋಷ್ಠಿ, ಮಹಿಳಾ ಗೋಷ್ಠಿ, ಕವಿಗೋಷ್ಠಿ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಈ ವೇದಿಕೆ ಮುಂಭಾಗದಲ್ಲಿ 2 ಸಾವಿರಕ್ಕೂ ಹೆಚ್ಚು ಆಸನಗಳ ವ್ಯವಸ್ಥೆ ಮಾಡಲಾಗಿದೆ.

ಊಟದ ವ್ಯವಸ್ಥೆ:

ಎರಡು ದಿನಗಳ ಕಾಲ ನಡೆಯುವ ಉತ್ಸವದಲ್ಲಿ ಬರುವ ಕಲಾವಿದರಿಗೆ, ಅತಿಥಿಗಳು ಮತ್ತು ಪ್ರೇಕ್ಷಕರಿಗೆ ಸೇರಿದಂತೆ 10 ಸಾವಿರ ಜನರಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಹುಚ್ಚಪ್ಪಯ್ಯನ ಮಠ, ಚಿಂತಾಮಣಿ ಅಲ್ಲದೇ ಕಲಾವಿದರಿಗೆ ವೇದಿಕೆ ಹತ್ತಿರ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ.

ಪೊಲೀಸ್‌ ಬಿಗಿ ಭದ್ರತೆ:

ಉತ್ಸವದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯಬಾರದು ಎಂಬ ಉದ್ದೇಶದಿಂದ ಪೊಲೀಸ್‌ ಬೀಗಿ ಭದ್ರತೆ ಒದಗಿಸಲಾಗಿದೆ. 3 ಜನ ಡಿವೈಎಸ್ಪಿ, 12 ಸಿಪಿಐ, 6 ಜಿಲ್ಲಾ ಪೊಲೀಸ್‌ ತುಕಡಿಗಿಳು, ಸಾವಿರಕ್ಕು ಹೆಚ್ಚು ಪೇದೆಗಳನ್ನು ನಿಯೋಜಿಸಲಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಆನೆಗೊಂದಿ ಉತ್ಸವ ಜನೋತ್ಸವವಾಗಬೇಕೆಂಬ ಉದ್ದೇಶದಿಂದ ಸರ್ಕಾರ ಉತ್ಸವ ನಡೆಸಲು ಸಹಕಾರ ನೀಡಿದೆ. ಗತವೈಭವ ಸಾರುವ ಈ ಎರಡು ದಿನಗಳ ಉತ್ಸವದಲ್ಲಿ ವಿವಿಧ ಕಲಾವಿದರು, ಸಾಹಿತಿಗಳು ಭಾಗವಹಿಸಲಿದ್ದಾರೆ. ವಿಜಯನಗರ ರಾಜಧಾನಿ ಮುಂದಿನ ಪೀಳಿಗಿಗೆ ಗುರುತಿಸುವ ಮತ್ತು ಕಲೆ, ಸಂಸ್ಕೃತಿ ಉಳಿವಿಗಾಗಿ ಈ ಉತ್ಸವ ಮಾದರಿಯಾಗಬೇಕಾಗಿದೆ ಎಂದು ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಅವರು ಹೇಳಿದ್ದಾರೆ. 
ಈ ಬಗ್ಗೆ ಮಾತನಾಡಿದ ಕೊಪ್ಪಳ ಜಿಲ್ಲಾಧಿಕಾರಿ ಸುನೀಲ್‌ಕುಮಾರ ಅವರು, ಗತವೈಭವ ಸಾರುವ ಆನೆಗೊಂದಿ ಉತ್ಸವವನ್ನು ಅದ್ಧೂರಿಯಾಗಿ ನಡೆಸಲು ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಪ್ರಸಿದ್ಧ ಕಲಾವಿದರು ಸೇರಿದಂತೆ ಸ್ಥಳೀಯ ಕಲಾವಿದರಿಗೂ ಅವಕಾಶ ನೀಡಲಾಗಿದ್ದು, ಎರಡು ವೇದಿಕೆಗಳಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ. 

ಹಂಪಿ ಉತ್ಸವ ಮೀರಿದ ಆನೆಗೊಂದಿ ಉತ್ಸವ ಸಂಭ್ರಮ

ಹಂಪಿ ಉತ್ಸವವನ್ನು ನೆನಪಿಸಿಕೊಳ್ಳುವಂತೆ ಆನೆಗೊಂದಿ ಉತ್ಸವ ಸಂಭ್ರಮ ಮುಗಿಲು ಮುಟ್ಟಿದೆ. ಜಿಲ್ಲಾಧಿಕಾರಿ ಪಿ. ಸುನೀಲ್‌ಕುಮಾರ ಅವರ ಇಚ್ಛಾಶಕ್ತಿಯಿಂದ ಆನೆಗೊಂದಿಯ ಗತವೈಭವವನ್ನು ಮರುಕಳಿಸುವಂತೆ ಮಾಡಲಾಗಿದೆ. ಆನೆಗೊಂದಿ ಉತ್ಸವದ ವೈಭವ ಹಿಂದಿನ ಎಲ್ಲ ಉತ್ಸವವನ್ನೂ ಮೀರಿದೆ.

ಸರ್ಕಾರ ಕೊಟ್ಟಿದ್ದು ಕೇವಲ ಒಂದು ಕೋಟಿ ರುಪಾಯಿ ಆಗಿದ್ದರೆ ಇನ್ನು ಸ್ಥಳೀಯ ಸಂಪನ್ಮೂಲಗಳ ಕ್ರೋಡೀಕರಣದ ಒಂದು ಕೋಟಿ ರುಪಾಯಿ ಸೇರಿ ಕೇವಲ 2 ಕೋಟಿ ಸಂಗ್ರಹಿಸಲಾಗಿದೆ. ಆದರೂ 10 ಕೋಟಿ ವೆಚ್ಚ ಮಾಡಿದರೂ ಆಗದಷ್ಟು ಕಾರ್ಯಕ್ರಮಗಳ ಆಯೋಜನೆ, ಸಂಭ್ರಮ, ಪಾರಂಪರಿಕತೆಯನ್ನಿಟ್ಟುಕೊಂಡು ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ.

ಹಗಲಿರಳು ಕೆಲಸ:

ಜಿಲ್ಲಾಧಿಕಾರಿ ಪಿ. ಸುನೀಲ್‌ಕುಮಾರ ಅವರು ಹಗಲಿರುಳು ಉತ್ಸವದ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ. ತಡರಾತ್ರಿವರೆಗೂ ಕೆಲಸ ಮಾಡುವ ಅವರು ಬೆಳಗ್ಗೆಯೇ 6 ಗಂಟೆಗೆ ಆನೆಗೊಂದಿಯಲ್ಲಿ ಇರುತ್ತಾರೆ. ಇದಕ್ಕಾಗಿ ಸತತ ಶ್ರಮಿಸುತ್ತಿರುವ ಅವರ ಆನೆಗೊಂದಿ ಗತವೈಭವವನ್ನು ಮತ್ತೊಮ್ಮೆ ನೆನಪಿಸುವಂತೆ ಮಾಡುತ್ತಿದ್ದಾರೆ.

ಆನೆಗೊಂದಿ ಉತ್ಸವದ ಹಿನ್ನೆಲೆಯಲ್ಲಿ ಯಾವ ಅಧಿಕಾರಿಗೂ ರಜೆ ನೀಡಲಾಗುತ್ತಿಲ್ಲ. ಎಲ್ಲರನ್ನೂ ಸಮಯದ ಪರಿವೆ ಇಲ್ಲದಂತೆ ಕೆಲಸಕ್ಕೆ ಅಣಿಗೊಳಿಸಿದ್ದಾರೆ. ಹೀಗಾಗಿ, ಅಧಿಕಾರಿಗಳು ಬೆಳಗ್ಗೆಯೇ ಆನೆಗೊಂದಿ ಉತ್ಸವದ ಕೆಲಸದಲ್ಲಿ ತೊಡಗಿರುವುದು ಕಂಡುಬರುತ್ತಿದೆ.

ವಾರಪೂರ್ತಿ ಕಾರ್ಯಕ್ರಮ:

ಜ. 2ರಿಂದಲೇ ಆನೆಗೊಂದಿ ಉತ್ಸವ ನಿಮಿತ್ತ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ. ಸೈಕಲ್‌ ಜಾಥಾ, ಪಾರಂಪರಿಕ ನಡಿಗೆ, ಅಡುಗೆ ರಾಣಿ, ಹಗ್ಗಜಗ್ಗಾಟ, ಕೆಸರುಗದ್ದೆ ಓಟ, ಕುಸ್ತಿ, ಕಬಡ್ಡಿ ಸೇರಿದಂತೆ ಅನೇಕ ಕ್ರೀಡಾಕೂಟಗಳನ್ನು ಹಮ್ಮಿಕೊಂಡಿದ್ದಾರೆ. ಇದರಲ್ಲಿಯೂ ಪುರುಷ ಮತ್ತು ಮಹಿಳೆಯರಿಗೆ ಸಮಾನ ಆದ್ಯತೆ ನೀಡಿದ್ದಾರೆ.

ಮೊದಲ ಬಾರಿಗೆ:

ಹಿಂದೆಂದೂ ಆನೆಗೊಂದಿ ಉತ್ಸವವನ್ನು ಇಷ್ಟೊಂದು ಅರ್ಥಪೂರ್ಣವಾಗಿ ಆಚರಣೆ ಮಾಡಿದ ಉದಾಹರಣೆ ಇಲ್ಲ ಎಂದೇ ಹೇಳಲಾಗುತ್ತದೆ. 2014ರಲ್ಲಿಯೂ ಅದ್ಧೂರಿಯಾಗಿ ಮಾಡಲಾಗಿತ್ತಾದರೂ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹಾಗೂ ವಾರಪೂರ್ತಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿರಲಿಲ್ಲ. ಕೇವಲ ಉತ್ಸವ ಎಂದರೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವುದು ಹಾಗೂ ದೊಡ್ಡ ದೊಡ್ಡ ಸಿನಿಮಾ ನಟರನ್ನು ಕರೆಸಿ, ಅದ್ಧೂರಿಯಾಗಿ ಮಾಡಲಾಗಿತ್ತು. ಆದರೆ, ಇದೇ ಮೊದಲ ಬಾರಿಗೆ ಗಂಗಾವತಿ ತಾಲೂಕಿನ ಜನರು ಉತ್ಸವ ಎಂದರೆ ಹೇಗಿರುತ್ತದೆ ಎನ್ನುವುದನ್ನು ನೋಡಿದ್ದಾರೆ. ವಾರಪೂರ್ತಿಯೂ ಹಬ್ಬದ ವಾತಾವರಣ ಮನೆಮಾಡಿದೆ. ತಳಿರು-ತೋರಣದ ಮೂಲಕ ಭಾರಿ ಮನೆಯನ್ನು ಸಿಂಗಾರ ಮಾಡಿಕೊಂಡು, ಜನರು ಸಹ ಅಷ್ಟೇ ಉತ್ಸಾಹದಿಂದ ಭಾಗಿಯಾಗುತ್ತಿದ್ದಾರೆ.

ಆನೆಗೊಂದಿ ಉತ್ಸವವನ್ನು ಅತ್ಯಂತ ಅರ್ಥಪೂರ್ಣವಾಗಿ ಮತ್ತು ವೈಭಯುತವಾಗಿ ಆಚರಣೆ ಮಾಡಲಾಗುತ್ತಿದೆ. ಎಲ್ಲವೂ ಅಚ್ಚುಕಟ್ಟಾಗಿಯೇ ನಡೆಯುತ್ತಿರುವುದು ಸಂತೋಷ ತಂದಿದೆ ಎಂದು ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಅವರು ಹೇಳಿದ್ದಾರೆ.

ಇರುವ ದುಡ್ಡಿನಲ್ಲಿಯೇ ಅರ್ಥಪೂರ್ಣವಾಗಿ ಆಚರಣ ಮಾಡುವ ಉದ್ದೇಶದಿಂದ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ. ವಾರಪೂರ್ತಿ ಕಾರ್ಯಕ್ರಮಗಳು, ಕ್ರೀಡೆಗಳನ್ನು ಆಯೋಜನೆ ಮಾಡಲಾಗಿದೆ. ಅತ್ಯುತ್ತಮ ಆಚರಣೆಗಾಗಿ ಶಕ್ತಿಮೀರಿ ಶ್ರಮಿಸಲಾಗುತ್ತದೆ ಎಂದು ಕೊಪ್ಪಳ ಡಿಸಿ ಪಿ. ಸುನಿಲ್‌ಕುಮಾರ ಅವರು ತಿಳಿಸಿದ್ದಾರೆ.