ಬಳ್ಳಾರಿಗೆ ಮತ್ತೆ ಆನಂದ ಸಿಂಗ್ ಗತಿ..!
* ಬಳ್ಳಾರಿ ಜಿಲ್ಲೆಯ ಶಾಸಕ ಜಿಎಸ್ಸಾರ್, ಎಂಎಸ್‌ಎಸ್‌ಗೆ ಸಿಗಲಿಲ್ಲ ಮಂತ್ರಿಪಟ್ಟ
* ಕಾರ್ಯಕರ್ತರು ಬೇಸರಗೊಳ್ಳದಂತೆ ಮನವಿ ಮಾಡಿಕೊಂಡಿರುವೆ: ಸೋಮಶೇಖರ ರೆಡ್ಡಿ
* ಬಳ್ಳಾರಿ ಕಮಲ ನಾಯಕರಿಗೆ ಮಣೆ ಹಾಕದ ಕೇಂದ್ರದ ವರಿಷ್ಠರು
ಕೆ.ಎಂ. ಮಂಜುನಾಥ್
ಬಳ್ಳಾರಿ(ಆ.05): ವಿಭಜಿತ ಜಿಲ್ಲೆ ಬಳ್ಳಾರಿಗೆ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲಿ ಸಚಿವ ಸಂಪುಟದಲ್ಲಿ ಸ್ಥಾನ ಸಿಗುವ ನಿರೀಕ್ಷೆ ಹುಸಿಯಾಗಿದೆ.
ಸ್ಥಳೀಯ ಬಿಜೆಪಿ ಶಾಸಕ ಜಿ. ಸೋಮಶೇಖರ ರೆಡ್ಡಿ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂಬ ಬೆಂಬಲಿಗರ ಒತ್ತಾಯಕ್ಕೆ ಮುಖ್ಯಮಂತ್ರಿ ಮಣಿದಿಲ್ಲ. ಹೀಗಾಗಿ, ಬಳ್ಳಾರಿ-ವಿಜಯನಗರ ಎರಡು ಜಿಲ್ಲೆಗಳಲ್ಲಿಗೆ ಆನಂದಸಿಂಗ್ ಉಸ್ತುವಾರಿಯಾಗಿ ಮುಂದುವರಿಯುವುದು ನಿಚ್ಚಳವಾಗಿದೆ.
ಬಳ್ಳಾರಿ ಜಿಲ್ಲೆ ವಿಭಜನೆಯ ಬಳಿಕ ವಿಜಯನಗರ ಪ್ರತ್ಯೇಕವಾಗಿದ್ದರಿಂದ ಬಳ್ಳಾರಿ ಜಿಲ್ಲೆಗೆ ಸಚಿವ ಸ್ಥಾನ ನೀಡಬೇಕು ಎಂಬ ಕೂಗು ಕೇಳಿ ಬಂದಿತ್ತು. ಬಳ್ಳಾರಿ ಅಥವಾ ಸಿರುಗುಪ್ಪ ಶಾಸಕರ ಬೆಂಬಲಿಗರು ಸಚಿವ ಸ್ಥಾನದ ಬೇಡಿಕೆ ಇಟ್ಟು ಕೇಂದ್ರದ ನಾಯಕರನ್ನು ಭೇಟಿ ಮಾಡಿದ್ದರು. ನಗರದಲ್ಲಿ ಶಾಸಕ ಸೋಮಶೇಖರ ರೆಡ್ಡಿ ಬೆಂಬಲಿಗರು ಪಕ್ಷದ ಕಚೇರಿ ಮುಂದೆ ತಮ್ಮ ನಾಯಕನ ಪರ ಘೋಷಣೆ ಕೂಗಿ ಮುಖ್ಯಮಂತ್ರಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷರಿಗೆ ಮನವಿಪತ್ರ ಕಳಿಸಿಕೊಟ್ಟಿದ್ದರು. ಏತನ್ಮಧ್ಯೆ ಬಳ್ಳಾರಿ ಹಾಗೂ ಸಿರುಗುಪ್ಪ ಶಾಸಕರು ಮಂತ್ರಿಸ್ಥಾನಕ್ಕಾಗಿ ತೆರೆಮರೆಯಲ್ಲಿ ಸಾಕಷ್ಟು ಪ್ರಯತ್ನಿಸಿದ್ದರು. ಆದರೆ, ಕೇಂದ್ರದ ವರಿಷ್ಠರು ಬಳ್ಳಾರಿ ಕಮಲ ನಾಯಕರಿಗೆ ಮಣೆ ಹಾಕಲಿಲ್ಲ.
ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲ ಶ್ರೀರಾಮುಲುಗೆ ಮಂತ್ರಿ ಭಾಗ್ಯ..!
ಎರಡು ಜಿಲ್ಲೆಗಳ ಜನರ ನಿರೀಕ್ಷೆಯಂತೆಯೇ ಆನಂದ ಸಿಂಗ್ ಅವರು ಸಿಎಂ ಬೊಮ್ಮಾಯಿ ಅವರ ಸಂಪುಟದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ನಾಲ್ಕನೇ ಬಾರಿಗೆ ಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿರುವ ಸಚಿವ ಬಿ.ಶ್ರೀರಾಮುಲುಗೆ ಡಿಸಿಎಂ ಸ್ಥಾನ ಸಿಗುತ್ತದೆ ಎಂಬ ನಿರೀಕ್ಷೆ ಬೆಂಬಲಿಗರಲ್ಲಿ ಜೀವಂತವಾಗಿದೆ.
ನಿರಾಸೆಗೊಳ್ಳದಿರಿ:
ಸಚಿವ ಸಂಪುಟದಲ್ಲಿ ಸ್ಥಾನ ಕೈ ತಪ್ಪಿತು ಎಂದು ಗೊತ್ತಾಗುತ್ತಿದ್ದಂತೆಯೇ ನಗರ ಬಿಜೆಪಿ ಶಾಸಕ ಜಿ.ಸೋಮಶೇಖರ ರೆಡ್ಡಿ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಬೆಂಬಲಿಗರು ನಿರಾಸೆಗೊಳ್ಳದಿರಿ ಎಂದು ಧೈರ್ಯ ತುಂಬಿದ್ದಾರೆ. ಪಕ್ಷ ನನಗೆ ತಾಯಿ ಸಮಾನ. ಪಕ್ಷ ಹಾಗೂ ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧನಾಗಿದ್ದೇನೆ. ನನ್ನ ಸಂಪೂರ್ಣ ಜೀವನನ್ನು ಬಳ್ಳಾರಿ ಜನರ ಸೇವೆಗೆ ಮುಡಿಪಿಟ್ಟಿದ್ದು, ಪಕ್ಷದ ಕಾರ್ಯಕರ್ತರು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.
ಬಳ್ಳಾರಿ ಜಿಲ್ಲೆಗೆ ಸಚಿವ ಸ್ಥಾನ ಸಿಗುವ ನಿರೀಕ್ಷೆ ಇತ್ತು. ಕೇಂದ್ರದ ನಾಯಕರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧ. ಬೆಂಬಲಿಗರು, ಕಾರ್ಯಕರ್ತರು ಬೇಸರಗೊಳ್ಳದಂತೆ ಮನವಿ ಮಾಡಿಕೊಂಡಿರುವೆ. ಪಕ್ಷ ಸಂಘಟಿಸುವ ಕೆಲಸ ಮುಂದುವರಿಸುತ್ತೇವೆ ಎಂದು ಬಳ್ಳಾರಿ ನಗರ ಶಾಸಕ ಜಿ. ಸೋಮಶೇಖರ ರೆಡ್ಡಿ ತಿಳಿಸಿದ್ದಾರೆ.
ಕಲ್ಯಾಣ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಬಳ್ಳಾರಿಗೆ ಸಚಿವ ಸ್ಥಾನ ನೀಡಬೇಕಿತ್ತು. ಇದರಿಂದ ಐದು ತಾಲೂಕುಗಳಲ್ಲಿ ಪಕ್ಷ ಸಂಘಟನೆಗೆ ಅವಕಾಶವಾಗುತ್ತಿತ್ತು. ಜತೆಗೆ ಮುಂಬರುವ ಚುನಾವಣೆಯಲ್ಲಿ ಎಲ್ಲ ಸ್ಥಾನಗಳಲ್ಲಿ ಬಿಜೆಪಿ ಗೆಲ್ಲಲು ಸಾಧ್ಯವಾಗುತ್ತಿತ್ತು. ನಗರ ಶಾಸಕರು ಪಕ್ಷದ ಪ್ರಗತಿಗೆ ಸಾಕಷ್ಟುಕೆಲಸ ಮಾಡಿದ್ದರು. ಪರಿಗಣಿಸಲಿಲ್ಲ ಎಂಬ ಬೇಸರವಿದೆ ಎಂದು ಬಿಜೆಪಿ ಪಾಲಿಕೆ ಸದಸ್ಯ ಶ್ರೀ ನಿವಾಸ ಮೋತ್ಕರ್ ಹೇಳಿದ್ದಾರೆ.