ಕಾರವಾರ(ಅ.30): ಅಭಿವೃದ್ಧಿಯ ಷರತ್ತಿನೊಂದಿಗೆ ನಗರಸಭೆ ಚುಕ್ಕಾಣಿ ಹಿಡಿಯಲು ಬಿಜೆಪಿಗೆ ಬೆಂಬಲ ನೀಡುವುದಾಗಿ ಮಾಜಿ ಸಚಿವ, ಜೆಡಿಎಸ್‌ ಮುಖಂಡ ಆನಂದ ಅಸ್ನೋಟಿಕರ್‌ ತಿಳಿಸಿದ್ದಾರೆ. 

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇದು ಕೇವಲ ಒಂದು ವರ್ಷದ ಬಾಹ್ಯ ಬೆಂಬಲವಾಗಿದೆ. ತಮ್ಮ ಬೇಡಿಕೆ ಈಡೇರಿಸದೇ ಇದ್ದಲ್ಲಿ ಬೆಂಬಲ ವಾಪಸ್‌ ಪಡೆಯುವ ಅಥವಾ ಬೇರೆ ರೀತಿ ತೀರ್ಮಾನ ತೆಗೆದುಕೊಳ್ಳುವ ನಿರ್ಧಾರ ಮಾಡಲಾಗುತ್ತದೆ. ಪ್ರಮುಖವಾಗಿ ಕೋಣೆನಾಲಾ ಅಭಿವೃದ್ಧಿ, ಸುಸಜ್ಜಿತ ಆಸ್ಪತ್ರೆ, ಬಡವರಿಗೆ ಮನೆ ನಿರ್ಮಾಣ, ಮಾಲಾದೇವಿ ಕ್ರೀಡಾಂಗಣ ಅಭಿವೃದ್ಧಿ ಷರತ್ತುಗಳನ್ನು ಹಾಕಲಾಗಿದೆ. ಮುಂದಿನ ಒಂದು ವರ್ಷದ ಒಳಗೆ ಕನಿಷ್ಠ ಎರಡು ಬೇಡಿಕೆಯನ್ನಾದರೂ ಪೂರೈಸಬೇಕು ಎಂದು ತಿಳಿಸಿದರು.

ಇಲ್ಲಿನ ನಗರಸಭಾ ವ್ಯಾಪ್ತಿಯಲ್ಲಿ ಮನೆರಹಿತ ಕುಟುಂಬಗಳು, ಕಚ್ಚಾ ಮನೆಯಲ್ಲಿ ವಾಸಿಸುತ್ತಿರುವ ಕುಟುಂಬಗಳಿದ್ದು, ಸರ್ಕಾರದ ವಸತಿ ಯೋಜನೆ ಮೂಲಕ ಮುಂದಿನ 1 ವರ್ಷದೊಳಗೆ ಕನಿಷ್ಠ 500 ಕುಟುಂಬಕ್ಕಾದರೂ ಮನೆ ನೀಡಬೇಕು. ನಗರದಲ್ಲಿ ಇರುವ ಮಾಲಾದೇವಿ ಕ್ರೀಡಾಂಗಣ ಸುಸಜ್ಜಿತವಾಗಿ ನಿರ್ಮಾಣವಾಗಬೇಕು. ಕೆಲವು ತಿಂಗಳ ಹಿಂದೆ ಶಾಸಕರು ಕ್ರೀಡಾಂಗಣ ಅಭಿವೃದ್ಧಿಗೆ .10 ಕೋಟಿ ಮಂಜೂರಾಗಿದೆ ಎಂದು ತಿಳಿಸಿದ್ದಾರೆ. ಈ ವಿಷಯದಲ್ಲಿ ಕೇವಲ ಪತ್ರ ವ್ಯವಹಾರವಾಗಿದೆ. ಅನುದಾನ ಮಂಜೂರಾತಿಗೆ ಸರ್ಕಾರ ಮಟ್ಟದಲ್ಲಿ ಪ್ರಯತ್ನಿಸಿ ಅಭಿವೃದ್ಧಿ ಪಡಿಸಬೇಕು ಎಂದು ಷರತ್ತು ಹಾಕಿದರು.

ಬಿಜೆಪಿ- ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ವಾಗ್ವಾದ

ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅಸ್ನೋಟಿಕರ, ಅಧಿಕಾರ ಹಿಡಿಯುವುದು ಮುಖ್ಯವಲ್ಲ. ಅಭಿವೃದ್ಧಿ ಕೆಲಸ ಆಗಬೇಕು. ಜನರಿಗೆ ನ್ಯಾಯ ಸಿಗಬೇಕು. ನಗರದ ಜನರಿಗಾಗಿ ತ್ಯಾಗ ಮಾಡಿದ್ದೇವೆ. ಎರಡು ವರ್ಷದ ಹಿಂದೆಯೇ ಚುನಾವಣೆಯಾಗಿ ಸದಸ್ಯರು ಆಯ್ಕೆಯಾಗಿದ್ದರು ಜನರ ಸೇವೆಗೆ, ಅಭಿವೃದ್ಧಿಗೆ ಸಹಕಾರ ನೀಡಲು ಸಾಧ್ಯವಾಗದೇ ಇರುವುದು ಬೇಸರ ತಂದಿದೆ. ವೈಯಕ್ತಿಕ ಲಾಭದ ವಿಚಾರ ಇಲ್ಲ. ಅಭಿವೃದ್ಧಿ ಆಗಬೇಕು. 25 ವರ್ಷ ಕೈಗಾರಿಕಾ ಮಂತ್ರಿಯಾದವರು, 6 ಸಲ ಸಂಸದರಾದವರು ಇದ್ದಾರೆ. ಅವರು ಏನು ಸಾಧನೆ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಬಿಜೆಪಿಯವರೊಂದಿಗೆ ಮಾತನಾಡಿದ್ದೀರಾ ಎಂದು ಕೇಳಿದಾಗ, ತಾವು ನೇರವಾಗಿ ಬಿಜೆಪಿ ಶಾಸಕರೊಂದಿಗೆ, ಮುಖಂಡರೊಂದಿಗೆ ಮಾತನಾಡಿಲ್ಲ. ಜೆಡಿಎಸ್‌ ಬೆಂಬಲಿತ ಸದಸ್ಯರು ಮಾತುಕತೆ ನಡೆಸಿದ್ದಾರೆ. ಜೆಡಿಎಸ್‌ನ ನಾಲ್ವರು ಹಾಗೂ ಜೆಡಿಎಸ್‌ ಬೆಂಬಲಿತ ಇಬ್ಬರು ಪಕ್ಷೇತರರು ಬಿಜೆಪಿಗೆ ಬಾಹ್ಯ ಬೆಂಬಲ ನೀಡಲಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಜೆಡಿಎಸ್‌ ತೊರೆಯುವ ವಿಚಾರ ಮಾಡಿದ್ದೀರಾ ಎನ್ನುವ ಪ್ರಶ್ನೆಗೆ, ದೇವೇಗೌಡ, ಕುಮಾರಸ್ವಾಮಿ ನೇತೃತ್ವದಲ್ಲಿ ಮುಂದುವರಿಯುತ್ತಿದ್ದೇನೆ. ವಿಧಾನಸಭಾ ಉಪಚುನಾವಣೆ ಬಳಿಕ ಕುಮಾರಸ್ವಾಮಿ ಜತೆಗೆ ಚರ್ಚೆ ಮಾಡಿ ಜಿಲ್ಲೆಯಲ್ಲಿ ಪಕ್ಷ ಕಟ್ಟುವ ತೀರ್ಮಾನ ಮಾಡಿದ್ದೇನೆ ಎಂದ ಅವರು, ಮಧು ಬಂಗಾರಪ್ಪ ಬೇರೆ ಪಕ್ಷಕ್ಕೆ ಹೋಗುವುದು ಗೊತ್ತಿಲ್ಲ. ಅವರ ವೈಯಕ್ತಿಕ ವಿಚಾರ. ಅವರೇ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.

ಮಾಜಿ ಶಾಸಕ ಸತೀಶ ಸೈಲ್‌ ಬೆಂಬಲಿಗರು ತಮ್ಮ ಬಗ್ಗೆ ಟೀಕೆ ಮಾಡಿದ್ದರು. ಹೀಗಾಗಿ ಪ್ರಕರಣ ದಾಖಲಿಸಲು ತೀರ್ಮಾನಿಸಲಾಗಿತ್ತು. ತಮ್ಮ ತಾಯಿ ಹಾಗೂ ಹಿತೈಷಿಗಳ ಜತೆಗೆ ಮಾತನಾಡಿದ ಬಳಿಕ ದಾಖಲಿಸಲು ಮುಂದಾಗಿಲ್ಲ. ಅವರು ತಮ್ಮ ತಂದೆ ದಿ. ವಸಂತ ಅಸ್ನೋಟಿಕರ ಅಭಿಮಾನಿಗಳಾದ್ದರಿಂದ ಕಾನೂನು ಕ್ರಮ ತೆಗೆದುಕೊಳ್ಳದೇ ಬಿಟ್ಟಿದ್ದೇನೆ. ಮುಂದೆ ಈ ರೀತಿ ಆದಲ್ಲಿ ಸೈಲ… ಮತ್ತು ಅವರ ಬೆಂಬಲಿಗರ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿದರು. ಮನೋಜ ಬಾಡಕರ, ಸಂಧ್ಯಾ ಬಾಡಕರ, ಸ್ನೇಹಾ ಮಾಂಜ್ರೇಕರ, ರಾಜೇಶ ಮಾಜಾಳಿಕರ ಇದ್ದರು.

ಬಿಜೆಪಿಗೆ ಗದ್ದುಗೆ ನಿಶ್ಚಿತ

ಬಿಜೆಪಿಗೆ ಜೆಡಿಎಸ್‌ ಬಾಹ್ಯ ಬೆಂಬಲ ನೀಡುವುದರೊಂದಿಗೆ ಕಾರವಾರ ನಗರಸಭೆಯ ಅಧ್ಯಕ್ಷ ಉಪಾಧ್ಯಕ್ಷ ಹುದ್ದೆಯ ಕಗ್ಗಂಟು ಬಗೆಹರಿದಂತಾಗಿದೆ. ಬಿಜೆಪಿ ಅಧಿಕಾರಕ್ಕೇರುವುದು ನಿಚ್ಚಳವಾಗಿದೆ. ಒಟ್ಟು 31 ಸದಸ್ಯ ಬಲದ ನಗರಸಭೆಯಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿಯ ತಲಾ 11 ಸದಸ್ಯರು, ಜೆಡಿಎಸ್‌ನ 4 ಹಾಗೂ 5 ಪಕ್ಷೇತರರು ಆಯ್ಕೆಯಾಗಿದ್ದರು. ತರುವಾಯ ಇಬ್ಬರು ಪಕ್ಷೇತರರು ಬಿಜೆಪಿಗೆ ಸೇರ್ಪಡೆಯಾಗಿದ್ದರು. ಉಳಿದಿರುವ ಮೂವರು ಪಕ್ಷೇತರರಲ್ಲಿ ಇಬ್ಬರು ಜೆಡಿಎಸ್‌ ಬೆಂಬಲಿತರು. ಇವರು ಹಾಗೂ ಜೆಡಿಎಸ್‌ನ ನಾಲ್ವರು ಸೇರಿ ಒಟ್ಟು ಸದಸ್ಯರು ಬಿಜೆಪಿಗೆ ಬಾಹ್ಯ ಬೆಂಬಲ ನೀಡಲು ತೀರ್ಮಾನಿಸಿದ್ದಾರೆ. ಇದರಿಂದ ಬಿಜೆಪಿಯ ಬಲ 19ಕ್ಕೇರಿದೆ. ಶಾಸಕರು ಹಾಗೂ ಸಂಸದರ ಮತ ಸೇರಿ ಒಟ್ಟು 21 ಮತಗಳಾಗಲಿದ್ದು, ಬಿಜೆಪಿ ಅಧಿಕಾರಕ್ಕೇರುವುದು ನಿಶ್ಚಿತವಾಗಿದೆ.