ತುಮ​ಕೂರು (ನ.02): ಶಿರಾ ಉಪ​ಚು​ನಾ​ವಣೆ ಹಿನ್ನೆ​ಲೆ​ಯಲ್ಲಿ ಆಯೋಜಿಸಿದ್ದ ಬೃಹತ್‌ ಸಮಾ​ವೇ​ಶ​ ಜೆಡಿ​ಎಸ್‌ ಅಭ್ಯರ್ಥಿ ಅಮ್ಮಾ​ಜಮ್ಮ ಅವರು ಸೆರ​ಗೊಡ್ಡಿ ಮತ​ಯಾ​ಚಿ​ಸಿದ ಪ್ರಸಂಗಕ್ಕೆ ಭಾನುವಾರ ಸಾಕ್ಷಿಯಾಯಿತು. ಇದೇ ವೇಳೆ, ಅಮ್ಮಾಜಮ್ಮ ಅವರು ಉರಿಬಿಸಿಲು ಹಾಗೂ ಕಡಿಮೆ ರಕ್ತದೊತ್ತಡದಿಂದಾಗಿ ವೇದಿಕೆಯಲ್ಲೇ ಕುಸಿದು ಬಿದ್ದು ಕೆಲಕಾಲ ಆತಂಕ ಸೃಷ್ಟಿಸಿದ ಘಟನೆಯೂ ನಡೆಯಿತು. ಕೂಡಲೇ ಅವ​ರನ್ನು ಪ್ರಾಥ​ಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಯಿತು. ನಂತರ ಚೇತರಿಸಿಕೊಂಡ ಅವರನ್ನು ಮತ್ತೆ ವೇದಿ​ಕೆಗೆ ಕರೆ ತರ​ಲಾ​ಯಿ​ತು.

ಶಿರಾದ ಬರ​ಗೂರು ರಾಮ​ಚಂದ್ರಪ್ಪ ಬಯಲು ರಂಗ​ಮಂದಿ​ರ​ದಲ್ಲಿ ಜೆಡಿಎಸ್‌ನ ಘಟಾನುಘಟಿ ನಾಯಕರಿದ್ದ ಸಮಾವೇಶದಲ್ಲಿ ಕಾರ್ಯ​ಕ​ರ್ತ​ರ ಮುಂದೆ ಮತ​ಯಾ​ಚನೆ ವೇಳೆ ತಮ್ಮ ಸೆರ​ಗೊಡ್ಡಿ ಮತ ಹಾಕು​ವಂತೆ ಮನವಿ ಮಾಡಿ​ದರು.

ಬಳಿಕ ಮಾತ​ನಾ​ಡಿದ ಅವರು ರಾಜ​ಕೀಯ ನನಗೆ ಗೊತ್ತಿ​ಲ್ಲ. ​ಆ​ದರೆ ರೈತರ ಕಷ್ಟಗೊತ್ತಿದೆ. ನಾನು ಆಯ್ಕೆ​ಯಾ​ದ​ರೆ ಅಭಿ​ವೃದ್ಧಿ ಕೆಲ​ಸ​ಗಳಿಗೆ ಒತ್ತು ಕೊಡು​ತ್ತೇನೆ. ಆಸ್ಪ​ತ್ರೆ, ​ಸ್ಕೂಲು, ಕಾಲೇ​ಜು ಸ್ಥಾಪ​ನೆಗೆ ಕ್ರಮ ಕೈಗೊ​ಳ್ಳು​ತ್ತೇನೆ. ಸಾಗು​ವಳಿ ಚೀಟಿ ಕೊಡಿ​ಸು​ವುದೂ ಸೇರಿ​ ಬಡ​ವರ, ರೈತರ ಕಾರ್ಮಿ​ಕರ ಪರ ಕೆಲಸ ಮಾಡು​ತ್ತೇನೆ ಎಂದರು.

ಜೆಡಿಎಸ್‌ ಅಭ್ಯರ್ಥಿ ಅಮ್ಮಾಜಮ್ಮ ಗಂಡನಿಗಿಂತ ಶ್ರೀಮಂತೆ ..

ನಮ್ಮ ಯಜ​ಮಾ​ನ​ರಿಗೆ ತುಂಬಾ ಕೆಲಸ ಮಾಡ​ಬೇಕು ಎಂಬ ಆಸೆ ಇತ್ತು. ಆದರೆ ದೇವರು ಅವ​ರನ್ನು ಕರೆ​ದು​ಕೊಂಡು ಹೋದರು. ಹಿರಿ​ಯ​ರೆಲ್ಲ ಸಹ​ಕಾರ ಕೊಟ್ಟಿ​ದ್ದಾರೆ. ನನ್ನ ಸೆರ​ಗಿಗೆ ಮತ ಹಾಕಿ ಎಂದು ಮನವಿ ಮಾಡಿ​ದರು.

ಅಸ್ವ​ಸ್ಥ​ರಾ​ದ ಅಮ್ಮಾ​ಜಮ್ಮ: ದಣಿವರಿಯದ ಪ್ರಚಾರ, ಕಡಿಮೆ ರಕ್ತದೊತ್ತಡ ಮತ್ತು ಉರಿಬಿಸಿಲಿಂದಾಗಿ ಬಳಲಿದಂತೆ ಕಂಡ ಅಮ್ಮಾ​ಜಮ್ಮ ವೇದಿಕೆಯಲ್ಲೇ ಕುಸಿದು ಬಿದ್ದು ಕೆಲಕಾಲ ಆತಂಕದ ಸ್ಥಿತಿ ನಿರ್ಮಾಣವಾಯಿತು. ಈ ವೇಳೆ ಜೆಡಿಎಸ್‌ ನಾಯಕರಾದ ಎಚ್‌.ಡಿ.ದೇವೇಗೌಡ, ಎಚ್‌.ಡಿ.ಕುಮಾರಸ್ವಾಮಿ, ಎಚ್‌.ಡಿ.ರೇವಣ್ಣ ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು.