ಬೆಳಗಾವಿ(ಜ.18):  ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ದಿ.ಸುರೇಶ ಅಂಗಡಿ ಅಕಾಲಿಕ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಅವರ ಕುಟುಂಬಕ್ಕೆ ಟಿಕೆಟ್‌ ಸಿಗುವುದು ಕಷ್ಟಎಂಬ ಅನುಮಾನ ಇದೀಗ ಮೂಡಲಾರಂಭಿಸಿದೆ.

"

ಒಂದೆಡೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಪದಾಧಿಕಾರಿಗಳ ಸಭೆಯಲ್ಲಿ ಬಿಜೆಪಿಯಲ್ಲಿ ಕುಟುಂಬ ರಾಜಕಾರಣಕ್ಕೆ ಬ್ರೇಕ್‌ ಹಾಕುವಂತೆ ಹೇಳಿದ್ದರೆ, ಇನ್ನೊಂದೆಡೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಬೆಳಗಾವಿ ಲೋಕಸಭೆ ಉಪಚುನಾವಣೆಯಲ್ಲಿ ಯಾರಿಗೆ ಟಿಕೆಟ್‌ ನೀಡಿದರೂ ಅವರನ್ನು ಎರಡೂವರೆ ಲಕ್ಷ ಮತಗಳ ಅಂತರದಿಂದ ಗೆಲ್ಲಿಸುವಂತೆ ಕರೆ ನೀಡಿದ್ದಾರೆ. ಈ ಇಬ್ಬರು ನಾಯಕರ ಹೇಳಿಕೆಗಳು ಕುಟುಂಬ ರಾಜಕಾರಣಕ್ಕೆ ಬಿಜೆಪಿ ಮಣೆ ಹಾಕುವುದಿಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸುವಂತಿದೆ.

ಶಾ ಭೇಟಿ ಬೆನ್ನಲ್ಲೇ ಬೆಳಗಾವಿ ಬೈ ಎಲೆಕ್ಷನ್ ಟಿಕೆಟ್‌ ಫೈಟ್ ಜೋರು..!

ಸುರೇಶ್‌ ಅಂಗಡಿ ಅವರ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭೆ ಕ್ಷೇತ್ರದ ಮೇಲೆ ರಾಜ್ಯಸಭಾ ಮಾಜಿ ಸದಸ್ಯ ಡಾ.ಪ್ರಭಾಕರ ಕೋರೆ ಸೇರಿ 70ಕ್ಕೂ ಅಧಿಕ ಆಕಾಂಕ್ಷಿಗಳು ಕಣ್ಣಿಟ್ಟಿದ್ದಾರೆ. ಈ ನಡುವೆ ಅಂಗಡಿ ಅಭಿಮಾನಿಗಳೂ ಅಂಗಡಿ ಅವರ ಪತ್ನಿ ಮಂಗಲಾ ಅಥವಾ ಮಕ್ಕಳಿಗೆ ಟಿಕೆಟ್‌ ನೀಡುವಂತೆ ಆಗ್ರಹಿಸುತ್ತಲೇ ಬಂದಿದ್ದಾರೆ. ಈ ಮಧ್ಯೆ, ಅಂಗಡಿ ಕಿರಿಯ ಪುತ್ರಿ, ಸಚಿವ ಜಗದೀಶ ಶೆಟ್ಟರ್‌ ಸೊಸೆ ಶ್ರದ್ಧಾ ಶೆಟ್ಟರ್‌ ಅವರೂ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ ಎಂದು ಹೇಳಲಾಗಿದೆ. ಇತ್ತೀಚೆಗೆ ಪಕ್ಷದ ಸಭೆ, ಸಮಾರಂಭಗಳಲ್ಲೂ ಅವರು ಹೆಚ್ಚಾಗಿ ಕಾಣಿಸಿಕೊಳ್ಳಲಾರಂಭಿಸಿದ್ದರು.

ನಾನು ರಾಜಕೀಯದಿಂದ ನಿವೃತ್ತಿ ಆಗಿಲ್ಲ. ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಪಕ್ಷವು ಅವಕಾಶ ನೀಡಿದರೆ ಸ್ಪರ್ಧಿಸಲು ಸಿದ್ಧನಿದ್ದೇನೆ ಎಂದು ಮಾಜಿ ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ ತಿಳಿಸಿದ್ದಾರೆ.