ಯಾವುದೇ ತ್ಯಾಜ್ಯ ಉತ್ಪಾದನೆ ಇಲ್ಲದೇ ಪ್ರತಿದಿನ ಸುಮಾರು 70 ಸಾವಿರಕ್ಕೂ ಹೆಚ್ಚು ಊಟಗಳು ಈ ಅಡುಗೆ ಮನೆಯಲ್ಲಿ ತಯಾರಿಸಲಾಗುತ್ತದೆ: ಅದಮ್ಯ ಚೇತನ ಸಂಸ್ಥೆ ಹಾಗೂ ಅಡುಗೆ ಮನೆ ಬಗ್ಗೆ ವಿವರಿಸಿದ ಡಾ. ತೇಜಸ್ವಿನಿ ಅನಂತಕುಮಾರ್‌ 

ಬೆಂಗಳೂರು(ಜ.01): ಅದಮ್ಯ ಚೇತನ ಸಂಸ್ಥೆಯ ಶೂನ್ಯ ತ್ಯಾಜ್ಯ ಅಡುಗೆ ಮನೆ ವೀಕ್ಷಣೆ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಶ್ಲಾಘನೆ ವ್ಯಕ್ತಪಡಿಸಿದರು. ನಗರದ ಗವಿಪುರ ಗುಟ್ಟಳ್ಳಿಯ ಅದಮ್ಯ ಚೇತನ ಸಂಸ್ಥೆಯ ಶೂನ್ಯ ತ್ಯಾಜ್ಯ ಅಡುಗೆ ಮನೆಗೆ ಶನಿವಾರ ಭೇಟಿ ನೀಡಿದ ಅಮಿತ್‌ ಶಾ ಅವರು, ಅಡುಗೆ ಮನೆಯಲ್ಲಿ ಆಹಾರ ತಯಾರಿಯ ಕುರಿತು ಮಾಹಿತಿ ಪಡೆದರು.

ಅದಮ್ಯ ಚೇತನ ಸಂಸ್ಥೆ ಹಾಗೂ ಅಡುಗೆ ಮನೆ ಬಗ್ಗೆ ವಿವರಿಸಿದ ಡಾ. ತೇಜಸ್ವಿನಿ ಅನಂತಕುಮಾರ್‌, ಯಾವುದೇ ತ್ಯಾಜ್ಯ ಉತ್ಪಾದನೆ ಇಲ್ಲದೇ ಪ್ರತಿದಿನ ಸುಮಾರು 70 ಸಾವಿರಕ್ಕೂ ಹೆಚ್ಚು ಊಟಗಳು ಈ ಅಡುಗೆ ಮನೆಯಲ್ಲಿ ತಯಾರಿಸಲಾಗುತ್ತದೆ. ಜತೆಗೆ, ನೀರಿನ ಮರುಬಳಕೆಗೂ ಕ್ರಮ ವಹಿಸಲಾಗಿದೆ. ಪೆಟ್ರೋಲಿಯಂ ಉತ್ಪನ್ನಗಳನ್ನು ಬಳಸದೇ ಅಡುಗೆ ತಯಾರಿಸುವುದು ಈ ಅಡುಗೆ ಮನೆಯ ವಿಶೇಷವಾಗಿದೆ ಎಂದು ವಿವರಿಸಿದರು.

ಸಚಿವ ಸಂಪುಟ ವಿಸ್ತರಣೆ: ದೇಖೇಂಗೆ ಎಂದ ಅಮಿತ್‌ ಶಾ..!

ಅನಂತಕುಮಾರ್‌ ಪ್ರತಿಷ್ಠಾನದ ಮೂಲಕ ಯುವ ಜನತೆಯಲ್ಲಿ ನಾಯಕತ್ವ ಗುಣಗಳನ್ನು ಬೆಳಸುತ್ತಿರುವುದನ್ನೂ ಕೇಳಿ ಅಮಿತ್‌ ಶಾ ಸಂತಸ ಪಟ್ಟರು. ಬಳಿಕ ‘ಅನಂತ ಸೇವಾ ಉತ್ಸವ’ದಲ್ಲಿ ಭಾಗವಹಿಸಿ ‘ತೇಜಸ್‌ ಯುದ್ಧ ವಿಮಾನ ಅಭಿವೃದ್ಧಿಯ ಯಶೋಗಾಥೆ’ ಪುಸ್ತಕದ ಕನ್ನಡ ಅವತರಣಿಕೆಯನ್ನು ಅಮಿತ್‌ ಶಾ ಲೋಕಾರ್ಪಣೆ ಗೊಳಿಸಿದರು.

ಈ ವೇಳೆ ಬಿಜೆಪಿ ರಾಜ್ಯ ಪ್ರಭಾರಿ ಅರುಣ್‌ ಸಿಂಗ್‌, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಕಂದಾಯ ಸಚಿವ ಆರ್‌.ಅಶೋಕ, ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌, ಗೃಹ ಸಚಿವ ಅರಗ ಜ್ಞಾನೇಂದ್ರ, ಅದಮ್ಯ ಚೇತನ ಸಂಸ್ಥೆಯ ಟ್ರಸ್ಟಿಗಳಾದ ನಂದಕುಮಾರ್‌, ಪ್ರದೀಪ್‌ ಓಕ್‌, ಐಶ್ಚರ್ಯ ಅನಂತಕುಮಾರ್‌ ಉಪಸ್ಥಿತರಿದ್ದರು.