ಬೆಂಗಳೂರಿನಲ್ಲಿ ದಿನದಿನವೂ ಕೊರೋನಾ ಮಹಾಮಾರಿ ಅಟ್ಟಹಾಸ ಜೋರಾಗಿಯೇ ಇದೆ. ಸಾವಿನ ಸಂಖ್ಯೆಯೂ ಹೆಚ್ಚಳವಾಗುತ್ತಿದ್ದು ಚಿತಾಗಾರಗಳ ಮುಂದೆ ನಿಲ್ಲುವ ಆಂಬುಲೆನ್ಸ್‌ಗಳ ಸಾಲು ಮಾತ್ರ ಕಡಿಮೆಯಾಗಿಲ್ಲ. 

 ಬೆಂಗಳೂರು (ಮೇ.03): ಕೊರೋನಾದಿಂದ ಮೃತಪಟ್ಟವರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ನಗರದಲ್ಲಿ ಚಿತಾಗಾರಗಳ ಮುಂದೆ ಮೃತ ದೇಹಗಳ ಅಂತ್ಯಕ್ರಿಯೆಗಾಗಿ ಆ್ಯಂಬುಲೆನ್ಸ್‌ಗಳು ತಾಸುಗಟ್ಟಲೇ ಸರತಿ ಸಾಲಿನಲ್ಲಿ ಕಾದು ನಿಲ್ಲುವ ಸ್ಥಿತಿ ಭಾನುವಾರವೂ ಮುಂದುವರೆದಿತ್ತು.

ಮೇಡಿ ಅಗ್ರಹಾರ, ಬನಶಂಕರಿ, ಪೀಣ್ಯ, ಸುಮ್ಮನಹಳ್ಳಿ, ಬೊಮ್ಮನಹಳ್ಳಿ, ಚಾಮರಾಜಪೇಟೆ, ಕೆಂಗೇರಿ ಮತ್ತು ತಾವರೆಕರೆ ಚಿತಾಗಾರದ ಮುಂದೆ ಭಾನುವಾರವೂ ಬೆಳಗ್ಗೆ ಆರು ಗಂಟೆಯಿಂದಲೇ ಆ್ಯಂಬುಲೆನ್ಸ್‌ಗಳ ದೊಡ್ಡ ಸಾಲು ಕಂಡು ಬಂದಿತ್ತು. ಚಿತಾಗಾರದ ಸಿಬ್ಬಂದಿ ವಿಶ್ರಾಂತಿ ಇಲ್ಲದೇ ದಿನವಿಡೀ ಮೃತದೇಹಗಳ ಅಂತ್ಯಕ್ರಿಯೆ ನೆರವೇರಿಸುತ್ತಿದ್ದರೂ ಆ್ಯಂಬುಲೆನ್ಸ್‌ಗಳ ಸಾಲು ಮಾತ್ರ ಕರಗುತ್ತಿಲ್ಲ.

ಸುಮ್ಮನಹಳ್ಳಿ ವಿದ್ಯುತ್‌ ಚಿತಾಗಾರದಲ್ಲಿ ಭಾನುವಾರ 27 ಕೋವಿಡ್‌, ಪೀಣ್ಯದಲ್ಲಿ 30ಕ್ಕೂ ಹೆಚ್ಚು ಮೃತದೇಹ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ನಗರದ ಹೊರವಲಯದ ತಾವರೆಕೆರೆ ಹಾಗೂ ಗಿಡ್ಡೇನಹಳ್ಳಿಯ ಚಿತಾಗಾರದ ಎದುರು ಒಟ್ಟು 32 ಆ್ಯಂಬುಲೆನ್ಸ್‌ಗಳು ಸಾಲುಗಟ್ಟಿನಿಂತಿದ್ದವು. ಭಾನುವಾರ 13 ಕೋವಿಡ್‌ ಹಾಗೂ ಎರಡು ನಾನ್‌ ಕೋವಿಡ್‌ ಮೃತದೇಹಗಳ ಅಂತ್ಯಕ್ರಿಯೆ ನಡೆಸಲಾಗಿದೆ.

ಕೋವಿಡ್‌ ಸೇವೆಗೆ ಎಂಬಿಬಿಎಸ್‌ ವಿದ್ಯಾರ್ಥಿಗಳು: ಕೆಲಸಕ್ಕೆ ಬಂದ್ರೆ ಸಿಗುತ್ತೆ ಈ ಲಾಭ!

ಇನ್ನೂ ಇದೇ ಚಿತಾಗಾರದ ಸಿಬ್ಬಂದಿಯು ತಡರಾತ್ರಿಯಾದರೂ ಕೋವಿಡ್‌ನಿಂದ ಮೃತ ಪಟ್ಟವರ ಬಗ್ಗೆ ಮಾಹಿತಿ ದಾಖಲಿಸಿಕೊಳ್ಳುತ್ತಿದ್ದರು. ರಾತ್ರಿ 8 ಗಂಟೆ ವೇಳೆಗಾಗಲೇ ಒಟ್ಟು 40 ಮೃತದೇಹಗಳ ಅಂತ್ಯ ಸಂಸ್ಕಾರ ನಡೆಸಲು ನೋಂದಣಿ ಮಾಡಿಕೊಂಡಿದ್ದಾರೆ.

ಪೀಣ್ಯ ಚಿತಾಗಾರದಲ್ಲಿ ಭಾನುವಾರ ಮುಂಜಾನೆಯಿಂದಲೇ 25ಕ್ಕೂ ಹೆಚ್ಚು ಆ್ಯಂಬುಲೆನ್ಸ್‌ಗಳು ಸಾಲುಗಟ್ಟಿನಿಂತಿದ್ದವು. ಈ ಚಿತಾಗಾರದಲ್ಲಿ ಶನಿವಾರ ಸಂಜೆ ವೇಳೆಗೆ 14 ಮೃತದೇಹ ಅಂತ್ಯ ಸಂಸ್ಕಾರ ಮಾಡಿದ್ದ ಸಿಬ್ಬಂದಿ, ಭಾನುವಾರ ಬೆಳಗ್ಗೆಯಿಂದ ಸಂಜೆಯವರೆಗೆ 21 ಕೋವಿಡ್‌ ಮೃತದೇಹಗಳನ್ನು ಅಂತ್ಯ ಸಂಸ್ಕಾರ ನಡೆಸಿದ್ದಾರೆ. ಹಾಗೆಯೇ, ಮೇಡಿ ಅಗ್ರಹಾರ, ಬನಶಂಕರಿ, ವಿಲ್ಸನ್‌ ಗಾರ್ಡ್‌ನ್‌, ಬೊಮ್ಮನಹಳ್ಳಿ ಮತ್ತು ಚಾಮರಾಜಪೇಟೆ ಚಿತಾಗಾರದಲ್ಲಿ ತಲಾ 15ಕ್ಕೂ ಹೆಚ್ಚು ಮೃತದೇಹಗಳ ಅಂತ್ಯಕ್ರಿಯೆ ನಡೆಸಲಾಗಿದೆ.

ಈ ಮಧ್ಯೆ ಕೊರೋನೇತರ ಮೃತದೇಹಗಳ ಅಂತ್ಯಕ್ರಿಯೆಯೂ ಇದೇ ಚಿತಾಗಾರದಲ್ಲಿ ನಡೆಯುತ್ತಿದ್ದವು. ಕೋವಿಡ್‌ ಮೃತದೇಹಗಳನ್ನು ಆದ್ಯತೆ ಮೇರೆಗೆ ದಹನ ಮಾಡುತ್ತಿದ್ದರಿಂದ ಕೋವಿಡ್‌ಯೇತರ ಮೃತದೇಹಗಳ ಅಂತ್ಯಕ್ರಿಯೆ ಸಾಕಷ್ಟುವಿಳಂಬವಾಗುತ್ತಿತ್ತು. ಮೃತರ ಸಂಬಂಧಿಕರು ಐದಾರು ಗಂಟೆ ಚಿತಾಗಾರದ ಮುಂದೆ ಕಾದು ನಿಲ್ಲಿಸುವ ಸ್ಥಿತಿ ಉಂಟಾಗಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona