ಕೊರೋನಾ ನಿರ್ವಹಣೆಗೆ ಎಂಬಿಬಿಎಸ್‌ ವಿದ್ಯಾರ್ಥಿಗಳ ಬಳಕೆಗೆ ಕೇಂದ್ರ ಚಿಂತನೆ| ದೇಶದಲ್ಲಿ ಮಾನವ ಸಂಪನ್ಮೂಲದ ಲಭ್ಯತೆ ಕುರಿತಂತೆ ಮೋದಿ ಸಭೆ

ನವದೆಹಲಿ(ಮೇ. 03): ಕೊರೋನಾ ಸಾಂಕ್ರಾಮಿಕವನ್ನು ನಿಭಾಸಲು ಮಾನವ ಸಂಪನ್ಮೂಲದ ಲಭ್ಯತೆಯ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಸಚಿವರು ಹಾಗೂ ಅಧಿಕಾರಿಗಳ ಜೊತೆ ಸಭೆ ನಡೆಸಿದರು.

ಈ ವೇಳೆ ಎಂಬಿಬಿಎಸ್‌ ಹಾಗೂ ನರ್ಸಿಂಗ್‌ ಕೋರ್ಸ್‌ಗಳನ್ನು ಪಾಸ್‌ ಆದ ವೈದ್ಯಕೀಯ ವಿದ್ಯಾರ್ಥಿಗಳನ್ನು ಕೊರೋನಾ ಕರ್ತವ್ಯಕ್ಕೆ ನಿಯೋಜಿಸುವ ನಿಟ್ಟಿನಲ್ಲಿಯೂ ಚರ್ಚೆ ನಡೆಸಲಾಗಿದೆ. ಅಲ್ಲದೇ ಅಂತಿಮ ವರ್ಷದ ಎಂಬಿಬಿಎಸ್‌ ವಿದ್ಯಾರ್ಥಿಗಳನ್ನು ಸೇವೆಯನ್ನು ಬಳಸಿಕೊಂಡು, ಸರ್ಕಾರಿ ಉದ್ಯೋಗಕ್ಕೆ ಇವರ ಸೇವೆಯನ್ನು ಪರಿಗಣಿಸುವ ಕುರಿತಂತೆಯೂ ಚರ್ಚೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

"

ದೇಶದ ಕೆಲವು ಭಾಗಗಳಲ್ಲಿ ಕೊರೋನಾ ಪ್ರಕರಣಗಳ ಏರಿಕೆಯಿಂದಾಗಿ ಪರಿಸ್ಥಿತಿಯನ್ನು ನಿಭಾಯಿಸಲು ಹಾಗೂ ಕೊವಿಡ್‌ ಪರೀಕ್ಷೆಗಳನ್ನು ನಡೆಸಲು ಮಾನವ ಸಂಪನ್ಮೂಲದ ಕೊರತೆ ಉಂಟಾಗಿರುವ ಬೆನ್ನಲ್ಲೇ ಈ ಸಭೆಯನ್ನು ಆಯೋಜಿಸಲಾಗಿದೆ. ಇದಕ್ಕೂ ಮುನ್ನ ನಡೆದ ಸಭೆಯ ವೇಳೆ ಮೋದಿ, ಸೇನೆಯಿಂದ ತಾತ್ಕಾಲಿಕ ಆಸ್ಪತ್ರೆಗಳನ್ನು ಆರಂಭಿಸುವ ಬಗ್ಗೆ ಹಾಗೂ ಸೇನಾ ಪಡೆಯ ಆರೋಗ್ಯ ಸಿಬ್ಬಂದಿಯನ್ನು ಕೊರೋನಾ ಕರ್ತವ್ಯಕ್ಕೆ ನಿಯೋಜಿಸುವ ನಿಟ್ಟಿನಲ್ಲಿ ಚರ್ಚೆ ನಡೆಸಿದ್ದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona