* ಶಾಸಕ ರವೀಂದ್ರ ವಿರುದ್ಧ ಅಭಿಮಾನಿಗಳಿಂದ ಸಭೆ, ಆಕ್ರೋಶ* ಗಣಿಗಾರಿಕೆ ವಿಷಯವಾಗಿ ಅಂಬರೀಷ್‌ ಹೆಸರು ಬಳಕೆ ಖಂಡನೀಯ* ಮಂಡ್ಯ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಸ್ಥಗಿತಕ್ಕೆ ಜಿಲ್ಲಾಡಳಿತ ಮುಂದಾಗಬೇಕು

ಶ್ರೀರಂಗಪಟ್ಟಣ(ಜು.10): ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಗೆ ದಿ.ಅಂಬರೀಷ್‌ ಹೆಸರನ್ನು ಥಳಕು ಹಾಕಿರುವ ಶಾಸಕ ರವೀಂದ್ರ ಶ್ರೀಕಂಠಯ್ಯ ವಿರುದ್ಧ ಅಂಬರೀಷ್‌ ಅಭಿಮಾನಿಗಳು ಶುಕ್ರವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಅಂಬರೀಷ್‌ ಸಂಸದರಾಗಿದ್ದ ಅವಧಿಯಲ್ಲೇ ಅಕ್ರಮ ಗಣಿಗಾರಿಕೆ ನಡೆಯುತ್ತಿತ್ತು ಎಂಬ ಹೇಳಿಕೆ ಖಂಡಿಸಿ ಪಟ್ಟಣದ ಪ್ರವಾಸಿ ಮಂದಿರದ ಬಳಿ ಶುಕ್ರವಾರ ಅಂಬರೀಷ್‌ ಅಭಿಮಾನಿಗಳು ಸಭೆ ನಡೆಸಿದರು. ಶಾಸಕ ರವೀಂದ್ರ ಶ್ರೀಕಂಠಯ್ಯ ವಿರುದ್ಧ ಕಿಡಿಕಾರಿದರು. ಶ್ರೀಕಂಠಯ್ಯ ಅವರು ಅಂಬರೀಷ್‌ ಹೆಸರು ಎಳೆತರುವುದನ್ನು ನಿಲ್ಲಿಸಬೇಕು. ತಮ್ಮ ವರ್ತನೆ ಬದಲಿಸಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

KRS ಸಮರ ಮತ್ತು ಅಂಬರೀಶ್ ಅಂತಿಮ ಸಂಸ್ಕಾರ! ಮಾತಿನ ಯುದ್ಧ

ಅಂಬರೀಷ್‌ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಬೇಲೂರು ಸೋಮಶೇಖರ್‌ ಮಾತನಾಡಿ, ಗಣಿಗಾರಿಕೆ ವಿಷಯವಾಗಿ ಅಂಬರೀಷ್‌ ಹೆಸರು ಬಳಕೆ ಖಂಡನೀಯ. ಸಂಸದೆ ಸುಮಲತಾ ಅಂಬರೀಷ್‌ ಬಗ್ಗೆ ಲಘುವಾಗಿ ಮಾತನಾಡುವುದನ್ನು ಶಾಸಕರು ಬಿಡಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಅಂಬರೀಷ್‌ ಅಭಿಮಾನಿಗಳಿಂದ ಶಾಸಕರಿಗೆ ಘೇರಾವ್‌ ಹಾಕಬೇಕಾಗುತ್ತದೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಸ್ಥಗಿತಕ್ಕೆ ಜಿಲ್ಲಾಡಳಿತ ಮುಂದಾಗಬೇಕು. ಈ ಸಂಬಂಧ ಸಿಬಿಐ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.