ಮಂಗಳೂರು[ಜು.30]  ಉತ್ತರ ಕರ್ನಾಟಕದಲ್ಲಿ ಪ್ರತ್ಯೇಕ‌ ರಾಜ್ಯದ ಕೂಗು ಕೇಳಿಬಂದ ಬೆನ್ನಲ್ಲೇ ಇದೀಗ ಕರಾವಳಿಯಲ್ಲೂ ಪ್ರತ್ಯೇಕ‌ ತುಳುನಾಡಿಗಾಗಿ ಹೋರಾಟ ನಡೆಸುವ ಎಚ್ಚರಿಕೆ ಕೇಳಿಬಂದಿದೆ.

ತುಳುನಾಡು ಕರ್ನಾಟಕದ ಭಾಗವಾಗಿದ್ದರೂ ಈ ಪ್ರದೇಶವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಪ್ರತ್ಯೇಕ ರೈಲ್ವೇ ವಲಯ, ತುಳುಭಾಷೆಯನ್ನು ರಾಜ್ಯದ ಅಧಿಕೃತ ಭಾಷೆಯನ್ನಾಗಿ ಘೋಷಿಸಿ, ಎಂಟನೇ ಪರಿಚ್ಛೇಧಕ್ಕೆ ಸೇರಿಸಬೇಕು ಎಂದು ಒತ್ತಾಯ ಮಾಡಲಾಗಿದೆ.

ನೇತ್ರಾವತಿ ನದಿ ವಿಚಾರ, ಕಂಬಳ ವಿಚಾರ, ಸಂಸ್ಕೃತಿ ಉಳಿವಿಗಾಗಿ ಹೋರಾಟ ನಡೆಸಲಾಗಿತ್ತು. ಕೃಷಿ, ಮೀನುಗಾರಿಕೆ, ವೈದ್ಯಕೀಯ ಕ್ಷೇತ್ರದಲ್ಲೂ ತುಳುನಾಡಿನ‌ ಜನರು ಸಾಕಷ್ಟು ಕೊಡುಗೆ ನೀಡಿದ್ದಾರೆ. ಆದರೆ, ಐಟಿ ಬಿಟಿ ಕಂಪೆನಿಗಳನ್ನು ತರಿಸಿ ಇಲ್ಲಿ ಉದ್ಯೋಗ ಒದಗಿಸಲು ಸರಕಾರಗಳು ವಿಫಲವಾಗಿವೆ. ತುಳುನಾಡಿಗೆ ಸಾಕಷ್ಟು ಅನ್ಯಾಯವಾಗಿದ್ದು, ಅದಕ್ಕಾಗಿ ಪ್ರತ್ಯೇಕ ರಾಜ್ಯ ಬೇಡಿಕೆಯ ಬಗ್ಗೆ ಹೋರಾಟ ನಡೆಸುವ ಎಚ್ಚರಿಕೆ ನೀಡುತ್ತಿದ್ದೇವೆ ಎಂದು ತುಳುನಾಡು ರಕ್ಷಣಾ ವೇದಿಕೆಯ ಅಧ್ಯಕ್ಷ ಯೋಗೀಶ್ ಕುಮಾರ್ ಜೆಪ್ಪು ಹೇಳಿದ್ದಾರೆ.