Almatti reservoir height increase ಆಲಮಟ್ಟಿ ಜಲಾಶಯದ ಎತ್ತರವನ್ನು 524.256 ಮೀಟರ್‌ಗೆ ಹೆಚ್ಚಿಸುತ್ತಿರುವುದರಿಂದ ಬಬಲೇಶ್ವರ ಕ್ಷೇತ್ರದ 15 ಗ್ರಾಮಗಳು ಮುಳುಗಡೆಯಾಗಲಿವೆ. ಈ ಹಿನ್ನೆಲೆಯಲ್ಲಿ ಮೊದಲ ಹಂತದಲ್ಲಿ ಒಂದು ಸಾವಿರ ಎಕರೆಗೆ ಪರಿಹಾರ ನೀಡುವಂತೆ ಸಚಿವ ಎಂ.ಬಿ. ಪಾಟೀಲ್ ಮನವಿ ಮಾಡಿದ್ದಾರೆ.
ಬೆಂಗಳೂರು (ಅ.1): ಆಲಮಟ್ಟಿ ಜಲಾಶಯ(Almatti Reservoir) ಎತ್ತರ ಹೆಚ್ಚಳದಿಂದ ಬಬಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಮುಳುಗಡೆಯಾಗುವ 15 ಗ್ರಾಮಗಳ 5600 ಎಕರೆಗಳ ಪೈಕಿ ಮೊದಲ ಹಂತದಲ್ಲಿ ಒಂದು ಸಾವಿರ ಎಕರೆಗೆ ಪರಿಹಾರ ನೀಡುವಂತೆ ಜಲಸಂಪನ್ಮೂಲ ಸಚಿವ ಎನ್.ಚಲುವರಾಯಸ್ವಾಮಿ ಅವರಿಗೆ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಕೋರಿದ್ದಾರೆ.
ಆಲಮಟ್ಟಿ ಅಣೆಕಟ್ಟು 519.60 ಮೀ.ನಿಂದ 524.256 ಮೀ.ಗೆ ಎತ್ತರ
ಆಲಮಟ್ಟಿ ಅಣೆಕಟ್ಟು ಈಗಿರುವ 519.60 ಮೀ.ನಿಂದ 524.256 ಮೀ.ಗೆ ಎತ್ತರಿಸಲಾಗುತ್ತಿದೆ. ಅದರಿಂದ ಒಟ್ಟು 184 ಗ್ರಾಮಗಳ 75563 ಎಕರೆ ಮುಳುಗಡೆಯಾಗಲಿದೆ. ಅದರಲ್ಲಿ ವಿಜಯಪುರ ಜಿಲ್ಲೆಯ 31 ಗ್ರಾಮಗಳಿದ್ದು, ತಾವು ಪ್ರತಿನಿಧಿಸುವ ಬಬಲೇಶ್ವರ ವಿಧಾನಸಭಾ ಕ್ಷೇತ್ರದ 15 ಗ್ರಾಮಗಳಿವೆ ಎಂದು ಸಚಿವರು ತಿಳಿಸಿದ್ದಾರೆ.
ಎಂಬಿ ಪಾಟೀಲ್ ಮನವಿ ಪತ್ರದಲ್ಲೇನಿದೆ?
ಆ ಹಳ್ಳಿಗಳ ವ್ಯಾಪ್ತಿಯಲ್ಲಿ 5600 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಬೇಕಿದೆ. ಅದರಲ್ಲಿ ಮೊದಲ ಹಂತದಲ್ಲಿ 1 ಸಾವಿರ ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಬೇಕು. ಅಲ್ಲದೆ, ಜಲಸಂಪನ್ಮೂಲ ಇಲಾಖೆ ಪ್ರಸ್ತಾಪಿಸಿರುವ ಅಂದಾಜು ಮೂರು ಸಾವಿರ ಕೋಟಿ ರು. ಪಾವತಿ ಸಂದರ್ಭದಲ್ಲಿ ಬಬಲೇಶ್ವರ ಕ್ಷೇತ್ರ ವ್ಯಾಪ್ತಿಯ ಭೂಮಿಗಳಿಗಾಗಿ ಕನಿಷ್ಠ 500 ಕೋಟಿ ರು. ಮೀಸಲಿಡಬೇಕು ಎಂದು ಎಂ.ಬಿ. ಪಾಟೀಲ್ ಮನವಿ ಪತ್ರದಲ್ಲಿ ಮನವಿ ಮಾಡಿದ್ದಾರೆ.
500 ಕೋಟಿ ರು. ಪರಿಹಾರ ಮನವಿ
ಈಗಾಗಲೇ ಯೋಜನೆಯ ಕಾಮಗಾರಿ ಪ್ರಗತಿಯಲ್ಲಿರುವ ಚಿಕ್ಕಗಲಗಲಿ, ಶಿರಬೂರು, ಹೊಸೂರು, ಕಣಬೂರು ಗ್ರಾಮಗಳನ್ನು ಆದ್ಯತೆ ಮೇಲೆ ಪರಿಗಣಿಸಬೇಕು. ಮೊದಲ ಸುತ್ತಿನಲ್ಲೇ 500 ಕೋಟಿ ರು. ಪರಿಹಾರ ಕೊಡಬೇಕು. ಉಳಿದ 10 ಗ್ರಾಮಗಳಿಗೆ ಅಧಿಸೂಚನೆ ಹೊರಡಿಸಿ, ಪರಿಹಾರ ವಿತರಣೆಗೆ ತುರ್ತು ಕ್ರಮಕೈಗೊಳ್ಳಬೇಕು ಎಂದು ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.


