ಹುಬ್ಬಳ್ಳಿ(ಮೇ.22): ಪವಿತ್ರ ರಂಜಾನ್‌ ಹಿನ್ನೆಲೆಯಲ್ಲಿ ಮುಸ್ಲಿಂ ಬಾಂಧವರಿಗೆ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಮಾಡಿಕೊಡವಂತೆ ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಪೌರಕಾರ್ಮಿಕರ ಮತ್ತು ನೌಕರರ ಸಂಘ ತಹಸೀಲ್ದಾರ್‌ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದೆ.

ಈ ಕುರಿತು ಮಾತನಾಡಿದ ಸಂಘಟನೆ ಅಧ್ಯಕ್ಷ ಡಾ. ವಿಜಯ ಗುಂಟ್ರಾಳ, ದೇಶಾದ್ಯಂತ ಲಾಕ್‌ಡೌನ್‌ ಸಡಿಲಿಸಲಾಗಿದೆ. ಮುಸ್ಲಿಂ ಸಮುದಾಯದವರು ತಿಂಗಳ ಪೂರ್ತಿ ಉಪವಾಸ ಕೈಗೊಂಡು ಮೇ 24 ಅಥವಾ 25ರಂದು ರಂಜಾನ್‌ ಹಬ್ಬವನ್ನು ಆಚರಣೆ ಮಾಡಲಿದ್ದಾರೆ. ಪ್ರತಿ ವರ್ಷ ರಂಜಾನ್‌ ಹಬ್ಬವನ್ನು ಈದ್ಗಾ ಮೈದಾನದಲ್ಲಿ ಆಚರಿಸುತ್ತಾ ಬಂದಿದ್ದಾರೆ. ರಾಜ್ಯ ಸರ್ಕಾರ ಹಾಗೂ ವಕ್ಫ್ ಬೋರ್ಡ್‌ ಆದೇಶದಂತೆ ಮುಸ್ಲಿಂ ಬಾಂಧವರು ಈ ಬಾರಿ ಮಸೀದಿಯ ಬದಲು ಮನೆಯಲ್ಲಿಯೆ ಪ್ರಾರ್ಥನೆಯನ್ನು ಮಾಡಿದ್ದಾರೆ. ಹೀಗಾಗಿ ರಂಜಾನ್‌ ಹಬ್ಬದಂದು ಆಯಾ ಮಸೀದಿಯ ಮೌಲಾನಾಗಳ ಉಪಸ್ಥಿತಿಯಲ್ಲಿ ಮಸೀದಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರಾರ್ಥನೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದರು.

ಲಾಕ್‌ಡೌನ್‌ ಸಡಿಲಿಕೆ: ಏರಿಕೆ ಕಾಣದ ವಹಿವಾಟಿನ ಗ್ರಾಫ್‌, ವ್ಯಾಪಾರಿಗಳಲ್ಲಿ ಕಾಣದ ಉತ್ಸಾಹ

ಒಂದು ವೇಳೆ ಹಬ್ಬ ಭಾನುವಾರ ಆಚರಣೆಯಾಗುವುದಾಗಿ ಘೋಷಣೆಯಾದರೆ ಅಂದು ವಿಧಿಸಿರುವ ಸಂಪೂರ್ಣ ಲಾಕ್‌ಡೌನ್‌ ಅನ್ನು ಸಡಿಲಿಸಬೇಕು ಎಂದು ಅವರು ಮನವಿ ಮಾಡಿದರು. ಈ ವೇಳೆ ದಲಿತ ಮುಖಂಡರಾದ ಮೇಘರಾಜ ಹಿರೇಮನಿ, ಬಾಬಾಜಾನ್‌ ಮುಧೋಳ, ಫಾರೂಕ್‌ ಅಬ್ಬುನವರ, ಇಮ್ತಿಯಾಜ್‌ ಬಿಳಿಪಸಾರ, ಬಸವರಾಜ ದೊಡ್ಡಮನಿ, ಮಂಜುನಾಥ ನಾಗನೂರ, ಲಕ್ಷ್ಮವ್ವ ಸಿದ್ರಾಮಪುರ, ಬಸವರಾಜ ಬೈನಿ, ಎ.ಎಸ್‌.ಪೀರಜಾದೆ ಸೇರಿ ಹಲವರಿದ್ದರು.