Asianet Suvarna News

ಲಾಕ್‌ಡೌನ್‌ ಸಡಿಲಿಕೆ: ಏರಿಕೆ ಕಾಣದ ವಹಿವಾಟಿನ ಗ್ರಾಫ್‌, ವ್ಯಾಪಾರಿಗಳಲ್ಲಿ ಕಾಣದ ಉತ್ಸಾಹ

ಎಫ್‌ಎಂಸಿಜಿ ವ್ಯಾಪಾರ ಕೂಡ ಅಷ್ಟಕ್ಕಷ್ಟೆ| ಬಟ್ಟೆ, ಪಾತ್ರೆ ವ್ಯಾಪಾರ, ಹೋಟೆಲ್‌ ಉದ್ಯಮ, ಕೈಗಾರಿಕೆ ಕ್ಷೇತ್ರದಲ್ಲಿ ಕಾಣದ ಚೇತರಿಕೆ| ಕಾರ್ಮಿಕರ ಬರ ಎದುರಿಸುತ್ತಿರುವ ಕೈಗಾರಿಕೆಗಳು ಉತ್ಪನ್ನಗಳ ಬೇಡಿಕೆಯ ಕೊರತೆಯನ್ನೂ ಕಾಣುತ್ತಿವೆ| ಉತ್ಪನ್ನಗಳಿಗೆ ಬೇಡಿಕೆ ಕಡಿಮೆ ಹೀಗಾಗಿ ಉತ್ಪಾದನೆ ಪ್ರಮಾಣ ಕೂಡ ಇಳಿಮುಖ|

No Business in Hubballi After Unlock
Author
Bengaluru, First Published May 22, 2020, 7:17 AM IST
  • Facebook
  • Twitter
  • Whatsapp

ಮಯೂರ ಹೆಗಡೆ

ಹುಬ್ಬಳ್ಳಿ(ಮೇ.22): ಕೊರೋನಾ ಕಾರಣದಿಂದ ವಾಣಿಜ್ಯ ನಗರಿಯ ವ್ಯಾಪಾರದ ಬಾಗಿಲಿಗೆ ಬಿದ್ದಿದ್ದ ಲಾಕ್‌ ತೆರೆದು ಎರಡು ವಾರ ಕಳೆದಿದೆ. ಆದರೆ, ವಹಿವಾಟಿನ ಗ್ರಾಫ್‌ ಮೇಲ್ಮುಖ ಕಾಣುತ್ತಿಲ್ಲ. ಈಗಿನ ಸವಾಲು, ಸಮಸ್ಯೆಗಳ ಮೀರಿ ಹಿಂದಿನ ಸ್ಥಿತಿಗೆ ಮರಳಲು ಇನ್ನೂ ಕನಿಷ್ಠ ಎರಡು ತಿಂಗಳು ತಗುಲಬಹುದು ಎಂಬ ದುಗುಡ ವ್ಯಾಪಾರಿಗಳು, ಉದ್ಯಮಿಗಳಲ್ಲಿ ಮೂಡಿದೆ.

ವರ್ಷದ ಪ್ರಮುಖ ಸೀಸನ್‌ ಕಳೆದುಕೊಂಡು ಬಟ್ಟೆ, ಪಾತ್ರೆ ಅಂಗಡಿ ಮುಂಗಟ್ಟುಗಳು ತೆರೆದಿವೆ. ಆದರೆ, ಗ್ರಾಹಕ ಮಳಿಗೆಯೆದುರು ಬರುತ್ತಿಲ್ಲ. ಕೈಗಾರಿಕೆಗಳು ತೆರೆದಿದ್ದರೂ ಸರಕು ಉತ್ಪಾದನೆ ಆಗುತ್ತಿಲ್ಲ. ಎಫ್‌ಎಂಸಿಜಿ ( ಫಾಸ್ಟ್‌ ಮೂವಿಂಗ್‌ ಕನ್ಸೂಮರ್‌ ಗೂಡ್ಸ್‌) ವ್ಯಾಪಾರ ಕೂಡ ಅಷ್ಟಕ್ಕಷ್ಟೆ ಎಂಬಂತಿದೆ. ಹೋಟೆಲ್‌ ಉದ್ಯಮ ಪಾರ್ಸೆಲ್‌ ಸೇವೆಯಿಂದ ಮೇಲೇಳಲು ಸಾಧ್ಯವಿಲ್ಲ. ವಹಿವಾಟು ಚೇತರಿಕೆ ಕಾಣದ ಕಾರಣ ವ್ಯಾಪಾರಸ್ಥರು ಕಂಗೆಟ್ಟಿದ್ದಾರೆ. ಅಂಗಡಿ ಬಾಡಿಗೆ, ಸಾಲ ಮರುಪಾವತಿ, ಕಾರ್ಮಿಕರಿಗೆ ವೇತನ, ಮಕ್ಕಳ ಶಿಕ್ಷಣ, ದಿನನಿತ್ಯದ ಜೀವನ ಹೀಗೆ ಎಲ್ಲವನ್ನೂ ನಿರ್ವಹಿಸುವ ಚಿಂತೆಯ ಗೆರೆ ವ್ಯಾಪಾರಿಗಳ ಮುಖದಲ್ಲಿದೆ.

ಎಫ್‌ಎಂಸಿಜಿ ಅಷ್ಟಕ್ಕಷ್ಟೆ:

ಹುಬ್ಬಳ್ಳಿಯಲ್ಲಿ ಎಫ್‌ಎಂಸಿಜಿ, ದಿನಬಳಕೆ ಸೇರಿ ಸಣ್ಣ, ಮಧ್ಯಮ, ದೊಡ್ಡ ವ್ಯಾಪಾರಿಗಳ ಸಂಖ್ಯೆ 25 ಸಾವಿರ ಮೀರುತ್ತದೆ. ಲಾಕ್‌ಡೌನ್‌ ಬಳಿಕ ಇದೊಂದೆ ವ್ಯಾಪಾರ ನಿಧಾನವಾಗಿ ಚೇತರಿಕೆ ಕಾಣುವ ಹಂತದಲ್ಲಿದೆ. ಆದರೆ, ಇದರ ಗ್ರಾಫ್‌ ಕೂಡ ಮೇಲೇರಲು ಕಾಲಾವಕಾಶ ಬೇಕು. ಬೆಳಗ್ಗೆ 7ರಿಂದ ಸಂಜೆ 7ರ ವರೆಗೆ ನಿಗದಿತ ವೇಳೆಯಲ್ಲಿ ವ್ಯಾಪಾರ ಮಾಡಬೇಕಿದೆ. ಹಿಂದಿನಷ್ಟು ವ್ಯಾಪಾರ ನಡೆಯದೆ ಕಷ್ಟವಾಗಿದೆ ಎನ್ನುತ್ತಾರೆ ಸ್ಟೇಷನರಿ ವ್ಯಾಪಾರಿ ಕೃಷ್ಣ ಆಚಾರ್‌.
ಹುಬ್ಬಳ್ಳಿ ಮೆಟಲ್‌ ಮರ್ಚಂಟ್ಸ್‌ ಅಸೋಸಿಯೇಶನ್‌ ಅಂಕಿ-ಅಂಶದ ಪ್ರಕಾರ 200 ಪಾತ್ರೆ ವ್ಯಾಪಾರಸ್ಥರಿದ್ದಾರೆ. ಈ ಸೀಸನ್‌ನಲ್ಲಿ ಕನಿಷ್ಠ 3 ರಿಂದ 5 ಕೋಟಿ ವಹಿವಾಟು ಆಗಬೇಕಿತ್ತು. ಲಾಕ್‌ಡೌನ್‌ನಿಂದ ಪಾತ್ರೆ ವ್ಯಾಪಾರ ಧರಾಶಾಹಿಯಾಗಿದೆ. ಲಾಕ್‌ಡೌನ್‌ ಸಡಿಲಗೊಂಡು ವಾರಗಳು ಕಳೆದರೂ ಅಹ್ಮದಾಬಾದ್‌, ಚೆನ್ನೈ, ಮುಂಬೈನಿಂದ ಸರಕುಗಳು ಬರುತ್ತಿಲ್ಲ. ಹೀಗಾಗಿ ನಾವು ಸಂಕಷ್ಟದಲ್ಲಿದ್ದೇವೆ ಎನ್ನುತ್ತಾರೆ ಪಾತ್ರೆ ವ್ಯಾಪಾರಿ ಬ್ರಹ್ಮಾನಂದ ಬಿಳಗಿ.

ಹುಬ್ಬಳ್ಳಿ: ತವರಿನತ್ತ ಉತ್ತರ ಪ್ರದೇಶದ ಕಾರ್ಮಿಕರು

ಜವಳಿ ವ್ಯಾಪಾರಿಗಳ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಬಟ್ಟೆಅಂಗಡಿಗಳು ತೆರೆದಿದ್ದರೂ ಖರೀದಿಗೆಂದು ಪರ ಊರಿನವರು ಬಾರದ ಕಾರಣ, ಸ್ಥಳೀಯ ಗ್ರಾಹಕರು ಸುಳಿಯದ ಹಿನ್ನೆಲೆಯಲ್ಲಿ ಮಳಿಗೆಯಲ್ಲಿನ ಸರಕುಗಳು ಹಾಗೇ ಇವೆ. ಸಣ್ಣ ವ್ಯಾಪಾರಿಗಳು ಸಾಲ ಮಾಡಿಯೂ ಬಟ್ಟೆಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಮಳೆಗಾಲದ ಬಳಿಕವೆ ವ್ಯಾಪಾರ ನಡೆಯಬಹುದು ಎಂಬ ನಿರೀಕ್ಷೆ ಜವಳಿ ವ್ಯಾಪಾರಸ್ಥರದ್ದು.

ಪಾರ್ಸೆಲ್‌ ವ್ಯಾಪಾರವೂ ಇಲ್ಲ

ಹುಬ್ಬಳ್ಳಿ ಹೋಟೆಲ್‌ ಅಸೋಸಿಯೇಶನ್‌ ಗೌರವಾಧ್ಯಕ್ಷ ಕೃಷ್ಣ ಉಚಿಲ ಮಾತನಾಡಿ, ಹೋಟೆಲ್‌ ಉದ್ಯಮ ಚೇತರಿಕೆಯಲ್ಲ, ದಿನದಿಂದ ದಿನಕ್ಕೆ ಇಳಿಮುಖ ಕಾಣುತ್ತಿದೆ. ನಮ್ಮಲ್ಲಿ ಉಳಿದಷ್ಟುಅಡುಗೆಯವರು, ಕಾರ್ಮಿಕರನ್ನು ಉಳಿಸಿಕೊಂಡು ಪಾರ್ಸೆಲ್‌ ಒದಗಿಸುತ್ತಿದ್ದೇವೆ. ಈಗ ಡಬ್ಬಿ ಅಂಗಡಿಗಳಿಗೆ ತೆರೆಯಲು ಪರವಾನಗಿ ನೀಡಿ, ನೋಂದಣಿ ಆದ ಹೋಟೆಲ್‌ಗಳಲ್ಲಿ ಪೂರ್ಣ ಪ್ರಮಾಣದ ವ್ಯಾಪಾರಕ್ಕೆ ಅನುವು ಮಾಡಿಕೊಡದಿರುವುದು ಸಮಸ್ಯೆ ಆಗಿದೆ. ಮೊದಲ ವಾರ ಇದ್ದಷ್ಟು ಪಾರ್ಸೆಲ್‌ ವ್ಯಾಪಾರ ಈ ವಾರ ಇಲ್ಲ ಎನ್ನುತ್ತಾರೆ.

ಇನ್ನು ಕಾರ್ಮಿಕರ ಬರ ಎದುರಿಸುತ್ತಿರುವ ಕೈಗಾರಿಕೆಗಳು ಉತ್ಪನ್ನಗಳ ಬೇಡಿಕೆಯ ಕೊರತೆಯನ್ನೂ ಕಾಣುತ್ತಿವೆ. ಉತ್ಪನ್ನಗಳಿಗೆ ಬೇಡಿಕೆ ಕಡಿಮೆಯಾಗಿದೆ. ಹೀಗಾಗಿ ಉತ್ಪಾದನೆ ಪ್ರಮಾಣ ಕೂಡ ಇಳಿಮುಖವಾಗಿದೆ. ಜನರ ಬಳಿ ಹಣವಿದ್ದರೂ, ಸರ್ಕಾರ ಒಂದಿಷ್ಟುವಲಯಗಳ ಚೇತರಿಕೆಗೆ ಪ್ಯಾಕೇಜ್‌ ಘೋಷಿಸಿದ್ದರೂ ಭೀತಿ ಕಳೆದಿಲ್ಲ. ಹೀಗಾಗಿ ವಸ್ತುಗಳ ಖರೀದಿ ಆಗುತ್ತಿಲ್ಲ. ಚೇತರಿಕೆಗೆ ಸಮಯ ಅಗತ್ಯ ಎನ್ನುತ್ತಿದ್ದಾರೆ ಕೈಗಾರಿಕೋದ್ಯಮಿಗಳು.

ಎಫ್‌ಎಂಸಿಜಿ ವ್ಯಾಪಾರ ನಿಧಾನವಾಗಿ ಮೇಲೆಳುತ್ತಿದೆ. ಆದರೆ, ಇದು ಕೂಡ ಹಿಂದಿನ ಸ್ಥಿತಿಗೆ ಮರಳಲು ಒಂದು ತಿಂಗಳು ಬೇಕು. ಉಳಿದಂತೆ ಹುಬ್ಬಳ್ಳಿ-ಧಾರವಾಡದ ಸಂಪೂರ್ಣ ವ್ಯಾಪಾರ, ಕೈಗಾರಿಕೆ ವಹಿವಾಟು ಹಿಂದಿನಂತಾಗಲು ಎರಡು ತಿಂಗಳು ಬೇಕು ಎಂದು ಹುಬ್ಬಳ್ಳಿ ವಾಣಿಜ್ಯೋದ್ಯಮ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಮಹೇಂದ್ರ ಲದ್ದಡ ಅವರು ಹೇಳಿದ್ದಾರೆ. 

ಜವಳಿ ವ್ಯಾಪಾರ ಆರಂಭವಾಗಿ ಎರಡು ವಾರ ಕಳೆದರೂ ತಳಮಟ್ಟದಿಂದ ಮೇಲಕ್ಕೆ ಎದ್ದಿಲ್ಲ. ಹಲವೆಡೆಗಳಿಂದ ಬರಬೇಕಾದ ಸರಕು ಕೂಡ ಬರುತ್ತಿಲ್ಲ. ಶಾಲಾ-ಕಾಲೇಜು ಆರಂಭವಾದ ಬಳಿಕ ಸ್ವಲ್ಪ ಚೇತರಿಸಿಕೊಳ್ಳಬಹುದು ಎಂದು  ಹಿಂಗರ್‌ ಜವಳಿ ಮತ್ತು ಅರಿವೆ ವ್ಯಾಪಾರಸ್ಥರ ಸಂಘ ಜಂಟಿ ಕಾರ್ಯದರ್ಶಿ ಮುಖೇಶ ತಿಳಿಸಿದ್ದಾರೆ. 

ಪಾತ್ರೆ ವ್ಯಾಪಾರ ಶೂನ್ಯ ಎನ್ನಬಹುದು. ಮದುವೆ ಬಳುವಳಿ, ಶಾಮಿಯಾನಾಗೆಂದೆ ಈ ವೇಳೆ ಶೇ. 50ರಷ್ಟುವ್ಯಾಪಾರ ಆಗಿರುತ್ತಿತ್ತು. ಲಾಕ್‌ಡೌನ್‌ ಸಡಿಲಗೊಂಡು ಅಂಗಡಿ ತೆರೆದು ಸುಮ್ಮನೆ ಕುಳಿತಿದ್ದೇವೆ ಎಂದು ಹುಬ್ಬಳ್ಳಿ ಮೆಟಲ್‌ ಮರ್ಚಂಟ್ಸ್‌ ಅಸೋಸಿಯೇಶನ್‌ ಅಧ್ಯಕ್ಷ ಶಿವಾಜಿ ಡಿ. ಮಧೂರಕರ ಹೇಳಿದ್ದಾರೆ. 

ಕೈಗಾರಿಕೆ ತೆರೆದಿದ್ದರೂ ಇಲ್ಲಿನ ಉತ್ಪನ್ನಗಳ ಬೇಡಿಕೆ ಇರೋದೆ ಮುಂಬೈ, ಪುಣೆ, ಅಹ್ಮದಾಬಾದ್‌, ನೋಯಡಾಗಳಲ್ಲಿ. ಆದರೆ, ಅಲ್ಲಿ ಕಠಿಣ ಸೀಲ್‌ಡೌನ್‌ ಇದೆ. ಬೇಡಿಕೆ ಸೃಷ್ಟಿಯಾಗುತ್ತಿಲ್ಲ. ಕಾರ್ಮಿಕರ ಅಸಮತೋಲನ ಇದೆ ಎಂದು ಹುಬ್ಬಳ್ಳಿ ಕೈಗಾರಿಕೋದ್ಯಮಿ ಜಗದೀಶ ಹಿರೇಮಠ ತಿಳಿಸಿದ್ದಾರೆ. 
 

Follow Us:
Download App:
  • android
  • ios