ಕಾಸರಕೋಡ ಬಂದರು ಅಭಿವೃದ್ಧಿಗೆ ಸರ್ವ ಪಕ್ಷ ಸಭೆ: ಶಿವರಾಮ ಹೆಬ್ಬಾರ
* ಅಭಿವೃದ್ಧಿ ವಿಚಾರದಲ್ಲಿ ಅಹಂಕಾರ ತೋರುವುದಿಲ್ಲ
* ಮೀನುಗಾರರ ಹಿತಕ್ಕೆ ಬದ್ಧನಿದ್ದೇನೆ
* ಅಭಿವೃದ್ಧಿಯಲ್ಲಿ ಸಾಂಪ್ರದಾಯಕ ಮೀನುಗಾರಿಕೆಗೆ ಅಡಚಣೆಯಾಗದಂತೆ ಕ್ರಮ
ಶಿರಸಿ(ಜು.14): ಅಭಿವೃದ್ಧಿ ವಿಷಯದಲ್ಲಿ ಎಲ್ಲ ಪಕ್ಷಗಳ ಸಹಕಾರ ಪಡೆದು ಮುನ್ನೆಡೆಯುತ್ತೇನೆ. ಕಾಸರಕೋಡ ಬಂದರು ಅಭಿವೃದ್ಧಿ ಕುರಿತಂತೆ ಸರ್ವ ಪಕ್ಷ ಸಭೆ ನಡೆಸಿಯೇ ಮುಂದಿನ ಕಾರ್ಯ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು.
ನಗರದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅಭಿವೃದ್ಧಿ ವಿಚಾರದಲ್ಲಿ ಅಹಂಕಾರ ತೋರುವುದಿಲ್ಲ. ಎಲ್ಲ ಪಕ್ಷಗಳ ಸಹಕಾರ ಅಗತ್ಯವಿದೆ. ಎಲ್ಲರ ಜತೆ ಒಂದು ವೇದಿಕೆಯಲ್ಲಿ ವಿಷಯ ಚರ್ಚಿಸಿ ಮೀನುಗಾರರ ಹಿತಕ್ಕೆ ಬದ್ಧನಿದ್ದೇನೆ ಎಂದರು.
ಕಾಸರಕೋಡ ಬಂದರು ವಿಚಾರದಲ್ಲಿ ಸರ್ಕಾರದ ನಿಲುವೆ ನನ್ನ ನಿಲುವು. ಮುಖ್ಯಮಂತ್ರಿ ನಿಲುವಿಗೆ ನನ್ನ ಬೆಂಬಲ. ಅಭಿವೃದ್ಧಿಗೆ ಅನೇಕ ಅಡೆತಡೆಗಳು ಬರುತ್ತವೆ. ಎಲ್ಲ ಯೋಜನೆ ಅನುಷ್ಠಾನ ಮಾಡುವಾಗ ಸಾಕಷ್ಟು ವಿರೋಧ ಎದುರಾಗಿದೆ. ಅವನ್ನು ಮೀರಿ ಅಭಿವೃದ್ಧಿ ಆಗಬೇಕು ಎಂದರು.
ಉತ್ತರ ಕನ್ನಡ: ಅಂತ್ಯಸಂಸ್ಕಾರಕ್ಕಾಗಿ ರಾಜ್ಯ ಸರ್ಕಾರದಿಂದ ತುರ್ತು ನಿಧಿ ಬಿಡುಗಡೆ
ಕಾಸರಕೋಡ ಟೊಂಕದಲ್ಲಿ 700 ಕೋಟಿ ಯೋಜನೆ ಬಂದಾಗ ಅಲ್ಲಿಯ ಜನಕ್ಕಿರುವ ಆತಂಕ ದೂರ ಮಾಡುವ ಕೆಲಸ ನಮ್ಮಿಂದಾಗಬೇಕಿದೆ. ಮೀನುಗಾರಿಕೆ ಮಾಡುವ ಜಾಗದಲ್ಲಿ ಹೂಳು ತೆಗೆದು ಅನುಕೂಲ ಮಾಡಿಕೊಡಬೇಕೆಂದು ತೀರ್ಮಾನ ಮಾಡಲಾಗಿದೆ. ದೋಣಿ ನಿಲ್ಲಿಸುವ ಜಾಗ ಗುರುತಿಸುವ ಜತೆ ಮೀನುಗಾರರ ಹಿತಕಾಯುವ ಕಾರ್ಯ ಆಗಬೇಕು. ಅಭಿವೃದ್ಧಿಯಲ್ಲಿ ಸಾಂಪ್ರದಾಯಕ ಮೀನುಗಾರಿಕೆಗೆ ಅಡಚಣೆಯಾಗದಂತೆ ಜಿಲ್ಲಾಡಳಿತ ಕ್ರಮಕೈಗೊಳ್ಳುತ್ತದೆ ಎಂದು ಹೇಳಿದರು.
ಈ ಯೋಜನೆಗೆ ಬಿಜೆಪಿ ಹಾಗೂ ಕಾಂಗ್ರೆಸ್ ಪಾಲುದಾರರು. ಈ ಜಿಲ್ಲೆಯಲ್ಲಿ ಎಲ್ಲ ಯೋಜನೆಯಲ್ಲಿ ಜನ ನಿರಾಶ್ರಿತರಾಗಿದ್ದಾರೆ. ಮೀನುಗಾರರ ವಿಶ್ವಾಸಗಳಿಸಿ ಯೋಜನೆ ಅನುಷ್ಠಾನ ಮಾಡಲಾಗುವುದು. ಮೀನುಗಾರರ ರಕ್ಷಣೆ ಜಿಲ್ಲಾಡಳಿತದ ಜವಾಬ್ದಾರಿಯಾಗಿದೆ. ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಎಲ್ಲ ಪಕ್ಷದ ಸಹಕಾರ ಬಯಸುತ್ತೇನೆ ಎಂದರು. ಬಿಜೆಪಿ ಮುಂಬರುವ ತಾಪಂ ಹಾಗೂ ಜಿಪಂ ಚುನಾವಣೆಗೆ ಅಗತ್ಯ ತಯಾರಿ ನಡೆಸಿದ್ದು, ಚುನಾವಣೆಗಾಗಿ ಕಾಯುತ್ತಿದ್ದೇವೆ ಎಂದರು.