Asianet Suvarna News Asianet Suvarna News

ಭಾರತೀಯ ಭಾಷೆಗಳೆಲ್ಲವೂ ಶ್ರೀಮಂತ ಶಾಸಕ ಸಿ ಎಸ್‌ ಪುಟ್ಟರಾಜು

ಭಾರತೀಯ ಭಾಷೆಗಳೆಲ್ಲವೂ ಶ್ರೀಮಂತವಾಗಿವೆ. ಭಾರತೀಯರಾಗಿ ಎಲ್ಲರೂ ಭಾಷೆಯ ಬೇಧ ಭಾವ ತೊರೆದು ಎಲ್ಲ ಭಾಷೆಗಳ ಸಾರಭೂತ ಅಂಶಗಳನ್ನು ಅಧ್ಯಯನ ಮಾಡಬೇಕು ಎಂದು ಶಾಸಕ ಸಿ.ಎಸ್‌.ಪುಟ್ಟರಾಜು ಹೇಳಿದರು.

All Indian Languages Are Beautiful Says CS Puttaraju snr
Author
First Published Mar 6, 2023, 12:09 PM IST

 ಮೇಲುಕೋಟೆ :  ಭಾರತೀಯ ಭಾಷೆಗಳೆಲ್ಲವೂ ಶ್ರೀಮಂತವಾಗಿವೆ. ಭಾರತೀಯರಾಗಿ ಎಲ್ಲರೂ ಭಾಷೆಯ ಬೇಧ ಭಾವ ತೊರೆದು ಎಲ್ಲ ಭಾಷೆಗಳ ಸಾರಭೂತ ಅಂಶಗಳನ್ನು ಅಧ್ಯಯನ ಮಾಡಬೇಕು ಎಂದು ಶಾಸಕ ಸಿ.ಎಸ್‌.ಪುಟ್ಟರಾಜು ಹೇಳಿದರು.

ಮೇಲುಕೋಟೆಯ ಭಗವದ್‌ ರಾಮಾನುಜ ರಾಷ್ಟ್ರೀಯ ಸಂಶೋಧನ ಸಂಸತ್‌ನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಂಸ್ಕೃತ ಹಾಗೂ ಕನ್ನಡ ಭಾಷೆಗಳಿಗಿರುವ ಸಾಮ್ಯತೆ ಮತ್ತು ಮಹತ್ವ ಕುರಿತ ಎರಡು ದಿನಗಳ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಗ್ರಂಥ ಲೋಕಾರ್ಪಣೆ ಮಾಡಿ ಮಾತನಾಡಿದರು.

ಸಂಸ್ಕೃತ ಮತ್ತು ಕನ್ನಡ ಪ್ರಾಚೀನ ಭಾಷೆಗಳಾಗಿ ಭಾರತದ ಭಾಗವಾಗಿವೆ. ಸಂಸ್ಕೃತ ದೇವನಾಗರಿಯಾಗಿದ್ದು ಅಲ್ಲಿನ ಉಪಯುಕ್ತ ಮಾಹಿತಿಗಳು ಕನ್ನಡದಲ್ಲಿ ಪ್ರಕಾಶನ ಕಂಡಿವೆ. ಈ ನಿಟ್ಟಿನಲ್ಲಿ ಭಗವದ್‌ ರಾಮಾನುಜ ರಾಷ್ಟ್ರೀಯ ಸಂಶೋಧನ ಸಂಸತ್‌ನಲ್ಲಿ ಸಾಕಷ್ಟುಕಾರ್ಯಗಳು ಆಗಿವೆ. ಹಲವಾರು ಕನ್ನಡ ಅವತರಣಿಕೆಗಳು ಲೋಕಾರ್ಪಣೆಯಾಗಿವೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ಕನ್ನಡ ಮತ್ತು ಸಂಸ್ಕೃತ ಭಾಷೆಗಳಿಗಿರುವ ಸಾಮ್ಯತೆಯ ಅಧ್ಯಯನ ನಡೆಯಬೇಕು ಎಂದರು.

ಮೇಲುಕೋಟೆಯಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ 32 ಕೋಟಿ ರು. ವೆಚ್ಚದಲ್ಲಿ 108 ಕೊಳಗಳು ಮತ್ತು ಕಲ್ಯಾಣಿಯನ್ನು ಜೀರ್ಣೋದ್ಧಾರ ಮಾಡುವ ಕಾರ್ಯ ಆರಂಭವಾಗಿದೆ. ಮೊದಲ ಹಂತದಲ್ಲಿ ಸಂಸ್ಕೃತ ಸಂಶೋಧನಾ ಸಂಸ್ಥೆಯ ಆವರಣದ ಕೊಳಗಳನ್ನು ಜೀರ್ಣೋದ್ಧಾರ ಮಾಡುವ ಕಾಮಗಾರಿ ಆರಂಭಿಸಲಾಗಿದೆ ಎಂದರು.

ಮೇಲುಕೋಟೆ ವೈರಮುಡಿ ಬ್ರಹ್ಮೋತ್ಸವವನ್ನು ವೈಭವದಿಂದ ಆಚರಿಸುವ ಸಂಬಂಧ ಮಾ.9ರಂದು ಅಧಿಕಾರಿಗಳ ಪೂರ್ವಭಾವಿ ಸಭೆ ನಡೆಸಲು ಸೂಚಿಸಿದ್ದೇನೆ ಎಂದರು.

ಕರ್ನಾಟಕ ಸಂಸ್ಕೃತ ವಿವಿ ಕುಲಪತಿ ಪ್ರೊ.ವಿ.ಗಿರೀಶ್‌ಚಂದ್ರ ಮಾತನಾಡಿ, ಕನ್ನಡ ಮತ್ತು ಸಂಸ್ಕೃತ ಅತ್ಯಂತ ಪುರಾತನ ಭಾಷೆಯಾಗಿವೆ. ಎರಡೂ ಭಾಷೆಗಳಲ್ಲಿ ಒಂದೇ ರೀತಿಯ ಪದಗಳ ಬಳಕೆಯನ್ನು ಕಾಣಬಹುದು. ಭಾಷೆಗಳು ಪರಸ್ಪರ ಅಧ್ಯಯನ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಪೂರಕವಾಗಿರಬೇಕು. ಈ ನಿಟ್ಟಿನಲ್ಲಿ ಸರ್ಕಾರದ ಎರಡೂ ಸಂಸ್ಥೆಗಳ ಸಹಯೋಗದಲ್ಲಿ ನಡೆಯುತ್ತಿರುವ ವಿಚಾರ ಸಂಕಿರಣ ಮಹತ್ವದ ಕಾರ್ಯಕ್ರಮವಾಗಿದೆ ಎಂದರು.

ಇದೇ ವೇಳೆ ಹಂಪಿ ವಿಶ್ವವಿದ್ಯಾನಿಯದ ನಾಡೋಜ ಪ್ರಶಸ್ತಿಗೆ ಭಾಜನರಾದ ಡಾ.ಭಾಷ್ಯಂ ಸ್ವಾಮೀಜಿ ಅವರನ್ನು ಶಾಸಕರು ಮತ್ತು ಕುಲಪತಿಗಳು ಅಭಿನಂದಿಸಿದರು. ವೇದಿಕೆಯಲ್ಲಿ ಬೆಳ್ಳಾಳೆಯ ವೀರಶೈವ ಮುಖಂಡ ಮಲ್ಲೇಶ್‌, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ ಹಾನಗಲ್ಲ, ಕುಲಸಚಿವ ಎಸ್‌.ಕುಮಾರ್‌ ಇದ್ದರು. ವೇದಾಂತ ದರ್ಶನಕ್ಕೆ ಆಚಾರ್ಯತ್ರಯರ ಕೊಡುಗೆ ಎಂಬ ಗ್ರಂಥವನ್ನು ಶಾಸಕರು ಲೋಕಾರ್ಪಣೆ ಮಾಡಿದರು. 

ಮತ್ತೊಬ್ಬರಿಂದ ಬುದ್ದಿ ಹೇಳಿಸಿಕೊಳ್ಳುವ ಅಗತ್ಯವಿಲ್ಲ

 ಮೇಲುಕೋಟೆ ಕ್ಷೇತ್ರದ ಶಾಸಕನಾದ ಬಳಿಕ ಮಾದರಿ ಕ್ಷೇತ್ರವನ್ನಾಗಿ ಅಭಿವೃದ್ಧಿ ಪಡಿಸಿದ್ದೇನೆ. ಕ್ಷೇತ್ರ ಅಭಿವೃದ್ಧಿ ವಿಚಾರದಲ್ಲಿ ಮತ್ತೊಬ್ಬರಿಂದ ಬುದ್ಧಿ ಹೇಳಿಸಿಕೊಳ್ಳುವ ಅಗತ್ಯವಿಲ್ಲ ಎಂದು ಶಾಸಕ ಸಿ.ಎಸ್‌.ಪುಟ್ಟರಾಜು ಹೇಳಿದರು.

   ರೈತ ಸಭಾಂಗಣದಲ್ಲಿ ನಡೆದ ಪಂಚರತ್ನ ರಥ ಯಾತ್ರೆಯ ಪೂರ್ವಭಾವಿ ಹಾಗೂ ಪುನೀತೋತ್ಸವ ಯಶಸ್ಸಿನ ಕೃತಜ್ಞತಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ನಾನು 2004ರಲ್ಲಿ ಮೊದಲ ಬಾರಿಗೆ ಶಾಸಕನಾಗಿದ್ದ (MLA)  ವೇಳೆ ಕ್ಷೇತ್ರ ಹೇಗಿತ್ತು. ಇದೀಗ ಕ್ಷೇತ್ರ ಹೇಗಿದೆ ಎನ್ನುವುದನ್ನು ಕ್ಷೇತ್ರದ ಜನತೆಯೇ ಹೇಳುತ್ತಿದ್ದಾರೆ. ನಾನು ಶಾಸಕನಾಗ ಬಳಿಕ ಸರ್ಕಾರಗಳಿಂದ ನೂರಾರು ಕೋಟಿ ಅನುದಾನವನ್ನು ತಂದು ಜಿಲ್ಲೆಗೆ ಮಾದರಿ ಕ್ಷೇತ್ರವನ್ನಾಗಿ ಅಭಿವೃದ್ಧಿ ಪಡಿಸುವ ಕೆಲಸ ಮಾಡಿದ್ದೇನೆ ಎಂದರು

ನಾನು ಶಾಸಕನಾದ ಬಳಿಕ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಎಷ್ಟರ ಮಟ್ಟಿಗೆ ಕೆಲಸ ಮಾಡಿದ್ದೇನೆ. ಏನೇನು ಕೆಲಸ ಮಾಡಿದ್ದೇನೆ ಎನ್ನುವ ಅಂಕಿ ಅಂಶಗಳ ಮೂಲಕ ಮುಂದಿನ ದಿನಗಳಲ್ಲಿ ಪುಸ್ತಕ ರೀತಿಯಲ್ಲಿ ಹೊರತಂದು ಪಂಚಾಯ್ತಿ ಮಟ್ಟದಲ್ಲಿ ಹಂಚಿಕೆ ಮಾಡುತ್ತೇನೆ. ಅಭಿವೃದ್ಧಿ ವಿಚಾರವಾಗಿ ಇನ್ನೊಬ್ಬರಿಂದ ಬುದ್ಧಿ ಹೇಳಿಸಿಕೊಳ್ಳುವ ಅಗತ್ಯ ನನಗಿಲ್ಲ ಎಂದು ವಿರೋಧಿಗಳ ವಿರುದ್ಧ ಕಿಡಿಕಾರಿದರು.

ಸಂಸದನಾಗಿದ್ದಾಗ ಜಿಲ್ಲೆಗೆ ಕೇಂದ್ರೀಯ ವಿದ್ಯಾಲಯ ಮಂಜೂರು ಮಾಡಿಸಿದ್ದೇನೆ. ನಾಗಮಂಗಲದ ಬಳಿ ನೂರು ಕೋಟಿ ವೆಚ್ಚದಲ್ಲಿ ಆಯುವೇದ ಆಸ್ಪತ್ರೆ ಮಾಡಿಸಿದ್ದೇನೆ. ಶ್ರೀರಂಗಪಟ್ಟಣ-ಬೀದರ್‌ ರಸ್ತೆ ಅಭಿವೃದ್ಧಿ ಪಡಿಸಿದ್ದೇನೆ. ಸಣ್ಣ ನೀರಾವರಿ ಸಚಿವನಾಗಿದ್ದ ವೇಳೆ ನೂರಾರು ಕೋಟಿಯಲ್ಲಿ ಏತ ನೀರಾವರಿ ಯೋಜನೆಗಳು, ಕೆರೆಗಳ ನಿರ್ಮಾಣ ಮಾಡಿಸಿ ಪ್ರಗತಿಗೆ ಒತ್ತು ನೀಡಿದ್ದೇನೆ. ಗ್ರಾಮೀಣ ರಸ್ತೆಗಳು, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜುಗಳು, ತಾಲೂಕುಗೆ ಮೂರು ಪ್ರಥಮ ಧರ್ಜೆ ಕಾಲೇಜು, ಗ್ರಾಮೀಣ ರಸ್ತೆಗಳ ಅಭಿವೃದ್ಧಿ, ಹಲವಾರು ವಿದ್ಯುತ್‌ ಸಬ್… ಸ್ಟೇಷನ್‌ಗಳ ಮಂಜೂರು ಮಾಡಿಸಿದ್ದೇನೆ ಎಂದರು.

Follow Us:
Download App:
  • android
  • ios