ವಿಜಯಪುರ(ಜು.02): ರಾಜ್ಯದ ಏಕೈಕ ಅಕ್ಕ ಮಹಾದೇವಿ ಮಹಿಳಾ ವಿವಿಯ ಅಟೆಂಡರ್‌ ಕೊರೋನಾ ವೈರಸ್‌ನಿಂದ ಸಾವನಪ್ಪಿದ್ದು ವಿವಿ ಸಿಬ್ಬಂದಿಯನ್ನು ತಲ್ಲಣಗೊಳಿಸಿದೆ.

ವಿವಿಯ ಶೈಕ್ಷಣಿಕ ವಿಭಾಗದಲ್ಲಿ ಸಿಪಾಯಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ವ್ಯಕ್ತಿಗೆ ಕೊರೋನಾ ಸೋಂಕು ತಗುಲಿ ಆರೋಗ್ಯದಲಿ ಚೇತರಿಕೆ ಕಾಣದೇ ಸಾವನಪ್ಪಿರುವುದು ವಿವಿಯ ಸಿಬ್ಬಂದಿಗಳಲ್ಲಿ ಭೀತಿ ಮೂಡಿಸಿದೆ. ವಿವಿಯಲ್ಲಿ ಬೋಧಕ ಹಾಗೂ ಬೋಧಕೇತರ ಸೇರಿ ಒಟ್ಟು 350 ಮಂದಿ ಸಿಬ್ಬಂದಿ ಇದ್ದಾರೆ. ಈ ಎಲ್ಲ ಸಿಬ್ಬಂದಿಗಳಿಗೆ ಈಗ ಕೊರೋನಾ ಭೀತಿ ಕಾಡುತ್ತಿದೆ. ಕಳೆದ ಎರಡು ದಿನಗಳಿಂದ 318 ಸಿಬ್ಬಂದಿಗಳ ಥ್ರೋಟ್‌ ಸ್ವ್ಯಾಬ್‌ ಸಂಗ್ರಹಿಸಲಾಗಿದೆ. ಇನ್ನು ಉಳಿದ ಸಿಬ್ಬಂದಿಗಳ ಸ್ವ್ಯಾಬ್‌ ಅನ್ನು ಜು.2ರಂದು ತೆಗೆದುಕೊಳ್ಳಲಾಗುತ್ತದೆ. ಸಾವನಪ್ಪಿದ ಕೊರೋನಾ ಸೋಂಕಿತ ವಿವಿ ಸಿಪಾಯಿ ಜೊತೆಗೆ ಸಂಪರ್ಕ ಹೊಂದಿದ 12 ಜನರ ಸಿಬ್ಬಂದಿಯ ಥ್ರೋಟ್‌ ಸ್ವ್ಯಾಬ್‌ ಪಡೆದು ಪರೀಕ್ಷೆಗೆ ಕಳುಹಿಸಲಾಗಿದೆ. ಇದಲ್ಲದೆ ಈ 12 ಸಿಬ್ಬಂದಿಯನ್ನು ಈಗಾಗಲೇ ಹೋಂ ಕ್ವಾರಂಟೈನ್‌ ಮಾಡಲಾಗಿದೆ.

ವಿಜಯಪುರ: ಕೊರೋನಾಗೆ ಇಬ್ಬರು ಬಲಿ, ಮತ್ತೆ 39 ಪಾಸಿಟಿವ್‌ ಕೇಸ್‌ ಪತ್ತೆ

ಸಿಪಾಯಿ ಕಾರ್ಯ ನಿರ್ವಹಿಸುತ್ತಿದ್ದ ಶೈಕ್ಷಣಿಕ ವಿಭಾಗವನ್ನು ಸೀಲ್‌ಡೌನ್‌ ಮಾಡಲಾಗಿದೆ. ಉಳಿದಂತೆ ಎಲ್ಲ ವಿಭಾಗಗಳನ್ನು ಸ್ಯಾನಿಟೈಸರ್‌ ಮಾಡಲಾಗಿದೆ. ಎಂದಿನಂತೆ ವಿವಿ ಸಿಬ್ಬಂದಿ ಸೇವೆಗೆ ಆಗಮಿಸುತ್ತಿದ್ದಾರೆ. ಕರ್ತವ್ಯಕ್ಕೆ ಹಾಜರಾಗುವ ಸಿಬ್ಬಂದಿಗಳಿಗೆ ಥರ್ಮಲ್‌ ಸ್ಕ್ರೀನಿಂಗ್‌, ಮಾಸ್ಕ್‌ ಹಾಗೂ ಸ್ಯಾನಿಟೈಸರ್‌ ಕಡ್ಡಾಯಗೊಳಿಸಲಾಗಿದೆ. ಪ್ರತಿಯೊಬ್ಬರನ್ನು ಪರೀಕ್ಷೆಗೆ ಒಳಪಡಿಸಿಯೇ ವಿವಿಯ ಒಳಗಡೆ ಬಿಡಲಾಗುತ್ತಿದೆ.

ಯಾವುದೇ ಭಯ ಪಡಬೇಕಿಲ್ಲ:

ಮಹಿಳಾ ವಿವಿಯಲ್ಲಿ ಕೊರೋನಾ ನಿಯಂತ್ರಣಕ್ಕೆ ಎಲ್ಲ ಅಗತ್ಯದ ಕ್ರಮಗಳನ್ನು ಕೈಗೊಳ್ಳಲಾಗಿದೆ. ಎಲ್ಲ ಸಿಬ್ಬಂದಿಗಳಿಗೆ ಥರ್ಮಲ್‌ ಸ್ಕ್ಯಾನಿಂಗ್‌, ಸ್ಯಾನಿಟೈಸರ್‌, ಮಾಸ್ಕ್‌ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಕಡ್ಡಾಯವಾಗಿ ಪಾಲಿಸಲಾಗುತ್ತದೆ. ಎಲ್ಲ ವಿವಿಯ ವಿಭಾಗಗಳಿಗೆ ಸ್ಯಾನಿಟೈಸರ್‌ ಮಾಡಲಾಗಿದೆ. ಯಾವುದೇ ಭಯವಿಲ್ಲ. ಎಲ್ಲ ಸಿಬ್ಬಂದಿ ಎಂದಿನಂತೆ ಸೇವೆಗೆ ಹಾಜರಾಗುತ್ತಿದ್ದಾರೆ. ಯಾವುದೇ ರೀತಿ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ವಿವಿ ಪ್ರಭಾರ ಕುಲಪತಿ ಪ್ರೊ. ಓಂಕಾರ ಕಾಕಡೆ ಅವರು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.