Asianet Suvarna News Asianet Suvarna News

ವಿಜಯಪುರ: ಕೊರೋನಾಗೆ ಇಬ್ಬರು ಬಲಿ, ಮತ್ತೆ 39 ಪಾಸಿಟಿವ್‌ ಕೇಸ್‌ ಪತ್ತೆ

ಇಬ್ಬರು ಕೋವಿಡ್‌-19 ರೋಗಿಗಳ ಸಾವು| 9 ಕ್ಕೇರಿದ ಸಾವಿನ ಸಂಖೆ: ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಮಾಹಿತಿ| ಜಿಲ್ಲೆಯಲ್ಲಿ ಇದುವರೆಗೆ 36,949 ಮಂದಿ ಮೇಲೆ ನಿಗಾ| ಇದುವರೆಗೆ ಒಟ್ಟು 27,914 ಜನರ ಗಂಟಲ ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ರವಾನೆ| ಈ ಪೈಕಿ 26,843 ಮಂದಿ ವರದಿ ನೆಗಟಿವ್‌, 399 ಮಂದಿ ಪಾಸಿಟಿವ್‌, 672 ಮಂದಿ ಪರೀಕ್ಷೆ ವರದಿ ಇನ್ನೂ ಬರಬೇಕಿದೆ|

39 New Coronavirus Cases in Vijayaypura District
Author
Bengaluru, First Published Jul 1, 2020, 11:46 AM IST

ವಿಜಯಪುರ(ಜು. 01):  ಜಿಲ್ಲೆಯಲ್ಲಿ ಇಬ್ಬರು ಕೋವಿಡ್‌-19 ರೋಗಿಗಳು ಮೃತಪಟ್ಟಿದ್ದಾರೆ. ಮೃತರ ಸಂಖ್ಯೆ 9ಕ್ಕೇರಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ತಿಳಿಸಿದ್ದಾರೆ. 85 ವರ್ಷದ ಕೋವಿಡ್‌-19 ಪಾಸಿಟಿವ್‌ ರೋಗಿ ಸಂಖ್ಯೆ 10,320 ಹಾಗೂ 52 ವರ್ಷದ ವ್ಯಕ್ತಿ ರೋಗಿ ಸಂಖ್ಯೆ 14497 ಇವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದರು.

ನಗರದ ಹವೇಲಿ ಗಲ್ಲಿ ನಿವಾಸಿಯಾದ 52 ವರ್ಷದ ಕೋವಿಡ್‌ ಪಾಸಿಟಿವ್‌ ವ್ಯಕ್ತಿಯು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಸಿಬ್ಬಂದಿಯಾಗಿದ್ದು, ಜೂ. 22ರಂದು ತೀವ್ರ ಉಸಿರಾಟ ತೊಂದರೆ, ಜ್ವರ ಮತ್ತು ನಿಶ್ಯಕ್ತಿ, ಸಕ್ಕರೆ ಕಾಯಿಲೆ, ತೀವ್ರ ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲಿ ನಿಗದಿತ ಆಸ್ಪತ್ರೆಗೆ ದಾಖಲಾಗಿದ್ದರು. ಅದೇ ದಿನ ಈ ರೋಗಿಯನ್ನು ಐಸಿಯುದಲ್ಲಿ ಇಡಲಾಗಿತ್ತು. ಟ್ರೂನ್ಯಾಟ್‌, ಆರ್‌ಟಿಡಿಸಿಆರ್‌ ಅಡಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ಕೋವಿಡ್‌ -19 ಸೋಂಕು ತಗುಲಿರುವುದು ದೃಢಪಟ್ಟಿತು. ತೀವ್ರ ರಕ್ತದೊತ್ತಡ, ಟೈಪ್‌ಟು ಸಕ್ಕರೆ ಕಾಯಿಲೆ, ಐಎಚ್‌ಡಿಗಳಿಂದ ಬಳಲುತ್ತಿದ್ದರು. ಅಪಾಯಕಾರಿ ಕೋವಿಡ್‌ -19 ಪ್ರದೇಶಗಳಿಗೆ ಪ್ರಯಾಣ ಬೆಳೆಸಿದ ಹಿನ್ನೆಲೆ ಹೊಂದಿಲ್ಲ. ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಜೂ. 26 ರಂದು ಮೃತಪಟ್ಟಿದ್ದಾರೆ. ಶಿಷ್ಟಾಚಾರದಂತೆ ಶವ ಸಂಸ್ಕಾರವನ್ನು ನೆರವೇರಿಸಲಾಗಿದೆ ಎಂದು ತಿಳಿಸಿದರು.

ಕೊರೋನಾದಿಂದ ಪಾರಾಗಲು ಪೊಲೀಸರ ಹೊಸ ಐಡಿಯಾ: ಸಾರ್ವಜನಿಕರಿಂದ ಭಾರೀ ಮೆಚ್ಚುಗೆ

ಈ ವ್ಯಕ್ತಿಯು ವಿಶ್ವವಿದ್ಯಾನಿಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ನಿಗದಿತ ವಿಭಾಗವನ್ನು ಶುಚಿಗೊಳಿಸಿ, ಸ್ಯಾನಿಟೈಜ್‌ ಮಾಡಲಾಗಿದೆ. 200 ಸಿಬ್ಬಂದಿಗಳ ಸ್ವ್ಯಾಬ್‌ನ್ನು ಸಂಗ್ರಹಿಸಿ ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ಸಂಬಂಧಪಟ್ಟವರನ್ನು ಹೋಂ ಕ್ವಾರಂಟೈನ್‌ ಮಾಡಲಾಗಿದೆ ಎಂದರು.

ನೆಗೆಡಿ, ಕೆಮ್ಮು, ಜ್ವರ ಲಕ್ಷಣಗಳನ್ನು ಹೊಂದಿದ್ದ 85 ವರ್ಷದ ವೃದ್ಧೆಯು ಕೋವಿಡ್‌-19 ಪಾಸಿಟಿವ್‌ ಎಂದು ದೃಢಪಟ್ಟು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ನಂತರ ಅವರ ಕುಟುಂಬದ ಒತ್ತಾಯದ ಮೇರೆಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಈ ರೋಗಿಯು ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಈ ರೋಗಿ ಸಂಖ್ಯೆ : 10320 ಜೂ. 22ರಂದು ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದರು. ಇವರ ಸ್ವಾ್ಯಬ್‌ ಪರೀಕ್ಷಿಸಲಾಗಿ ಕೋವಿಡ್‌ 19 ಪಾಸಿಟಿವ್‌ ಎಂದು ದೃಢಪಟ್ಟಿತ್ತು. ಹೃದಯ ಸಂಬಂಧಿ ಕಾಯಿಲೆ, ರಕ್ತದೊತ್ತಡ, ಸಕ್ಕರೆ ಕಾಯಿಲೆಗಳಿಂದ ಬಳಲುತ್ತಿದ್ದರು. ಕೋವಿಡ್‌ ಆಸ್ಪತ್ರೆಗೆ ದಾಖಲಾಗಿದ್ದ ವೃದ್ದೆಯ ಆರೋಗ್ಯ ಜೂನ್‌ 17 ರವರೆಗೆ ಸ್ಥಿರವಾಗಿತ್ತು. ಜೂನ್‌ 27 ರಂದು ಆರೋಗ್ಯ ಚೇತರಿಕೆ ನಿಂತಿದ್ದರಿಂದ ಐಸಿಯುಗೆ ಸ್ಥಳಾಂತರಿಸಲಾಗಿತ್ತು. ಜೂನ್‌ 29 ರಂದು ಅವರ ಕುಟುಂಬಸ್ಥರ ಒತ್ತಾಯದ ಮೇರೆಗೆ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಿಸಲಾಗಿತ್ತು. ಆ ಆಸ್ಪತ್ರೆಯಲ್ಲಿ ಅವರು ಮೃತಪಟ್ಟಿದ್ದಾರೆಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ ಕೋವಿಡ್‌-19 ರೋಗದಿಂದ ಸತ್ತವರ ಸಂಖ್ಯೆ 9ಕ್ಕೇರಿದೆ ಎಂದೂ ತಿಳಿಸಿದರು.

39 ಪಾಸಿಟಿವ್‌ ಕೇಸ್‌ ಪತ್ತೆ: 399ಕ್ಕೇರಿದ ಸೋಂಕಿತರು

ಜಿಲ್ಲೆಯಲ್ಲಿ ಮಂಗಳವಾರ ಕೊರೋನಾ ಅಟ್ಟಹಾಸ ಮೆರೆದಿದ್ದು, ಒಂದೇ ದಿನ 39 ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿವೆ. ಕಳೆದ ಕೆಲ ದಿನಗಳಿಂದ ಜಿಲ್ಲೆಯಲ್ಲಿ ಒಂದೇ ಸವನೆ ಪಾಸಿಟಿವ್‌ ಸಂಖ್ಯೆ ಹೆಚ್ಚಳವಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು ಕೊರೋನಾ ಸೋಂಕಿತರ ಸಂಖ್ಯೆ 399ಕ್ಕೇರಿದೆ. 52 ವರ್ಷದ ವ್ಯಕ್ತಿ (ಪಿ 14497) ಹಾಗೂ ಕಂಟೈನ್ಮೆಂಟ್‌ ಝೋನ್‌ನ 85 ವರ್ಷದ ವೃದ್ಧೆ (ಪಿ 10320) ಸೇರಿದಂತೆ ಇಬ್ಬರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 9 ಕ್ಕೆ ಏರಿಕೆಯಾಗಿದೆ. ಈ ಸೋಂಕಿತರು ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದರು. 15 ಜನರು ಗುಣಮುಖಗೊಂಡು ಮಂಗಳವಾರ ಜಿಲ್ಲಾ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದುವರೆಗೆ 305 ಸೋಂಕಿತರು ಗುಣಮುಖಗೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇನ್ನುಳಿದ 85 ಸಕ್ರಿಯ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಜಿಲ್ಲೆಯಲ್ಲಿ ಇದುವರೆಗೆ 36,949 ಮಂದಿ ಮೇಲೆ ನಿಗಾ ವಹಿಸಲಾಗಿದೆ. 29,513 ಮಂದಿ 28ದಿನಗಳ ಐಸೋಲೇಶನ್‌ ಅವಧಿ ಮುಗಿಸಿದ್ದಾರೆ. 7,122 ಜನರು 1ರಿಂದ 28 ದಿನಗಳ ರಿಪೋರ್ಟಿಂಗ್‌ ಅವಧಿಯಲ್ಲಿದ್ದಾರೆ. ಇದುವರೆಗೆ ಒಟ್ಟು 27,914 ಜನರ ಗಂಟಲ ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಪೈಕಿ 26,843 ಮಂದಿ ವರದಿ ನೆಗಟಿವ್‌ ಬಂದಿದೆ. 399 ಮಂದಿ ಪಾಸಿಟಿವ್‌ ಬಂದಿದೆ. 672 ಮಂದಿ ಪರೀಕ್ಷೆ ವರದಿ ಇನ್ನೂ ಬರಬೇಕಿದೆ.
 

Follow Us:
Download App:
  • android
  • ios