ಬೆಂಗಳೂರು(ಅ.16): ಡಿ.ಜೆ ಹಳ್ಳಿ ಗಲಭೆ ಪ್ರಕರಣದ ಪೊಲೀಸರ ಚಾರ್ಜ್‌ಶೀಟ್‌ನಲ್ಲಿ ಸಂಪತ್‌ರಾಜ್‌ ಹೆಸರಿದೆ. ಹೀಗಾಗಿ ಕೂಡಲೇ ಮಾಜಿ ಮೇಯರ್‌ ಸಂಪತ್‌ರಾಜ್‌ ಅವರನ್ನು ಪಕ್ಷದಿಂದ ಉಚ್ಛಾಟಿಸಬೇಕು ಎಂದು ಕಾಂಗ್ರೆಸ್‌ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಕಾಂಗ್ರೆಸ್‌ ನಾಯಕರನ್ನು ಒತ್ತಾಯಿಸಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರೇ ಆಗಲಿ ತಪ್ಪು ಮಾಡಿದರೆ ಆತ ಅಪರಾಧಿಯೇ. ನಮ್ಮ ಮನೆಯನ್ನು ಒಡೆದು ಹಾಕಿದರು. ನಮ್ಮ ಸಹೋದರನ ಮನೆಯನ್ನೂ ಹಾಳು ಮಾಡಿದರು. ನನ್ನ ಹತ್ಯೆ ಯತ್ನ ಮಾಡಿದರು. ಶಾಸಕರ ಪ್ರಾಣವನ್ನೇ ತೆಗೆಯಲು ಯತ್ನಿಸಿದರು ಎಂದರೆ ಏನು ಅರ್ಥ. ಇಂತಹ ಪ್ರಯತ್ನ ಮಾಡಿದವರು ಯಾರೇ ಆಗಲಿ ಪಕ್ಷದಿಂದ ಉಚ್ಛಾಟಿಸಬೇಕು. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ದೂರು ನೀಡುತ್ತೇನೆ ಎಂದು ಹೇಳಿದ್ದಾರೆ. 

ನಾನು ಎಲ್ಲಾ ವಾರ್ಡ್‌ನ ಕಾರ್ಪೊರೇಟರ್‌ಗಳ ಜೊತೆಯೂ ಉತ್ತಮ ಒಡನಾಟ ಹೊಂದಿದ್ದೆ. ನನ್ನ ಹತ್ಯೆ ಯತ್ನ ಮಾಡುವಂತಹ ತಪ್ಪು ಏನು ಮಾಡಿದ್ದೆ. ನನ್ನ ಮೇಲೆ ಏಕೆ ದ್ವೇಷ ಸಾಧಿಸಿದರೋ ಗೊತ್ತಿಲ್ಲ. ಅಂದು ನಾನು ಮನೆಯಲ್ಲಿ ಇಲ್ಲದಿದ್ದರಿಂದ ಪಾರಾಗಿದ್ದೇನೆ. ಒಂದು ವೇಳೆ ನಾನು ಮನೆಯಲ್ಲಿ ಗಲಭೆಕೋರರ ಕೈಗೆ ಸಿಲುಕಿದ್ದರೆ ಏನಾಗುತ್ತಿತ್ತು? ನಮ್ಮ ಕುಟುಂಬ ಸದಸ್ಯರ ಸ್ಥಿತಿ ಏನಾಗುತ್ತಿತ್ತು? ಎಂದು ಪ್ರಶ್ನಿಸಿದ್ದಾರೆ.

ಬೆಂಗಳೂರು ಗಲಭೆ: ಶಾಸಕ ಅಖಂಡ ವಿರುದ್ಧ 3 ತಿಂಗಳಿಂದಲೇ ಮಸಲತ್ತು

ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಯಾರು ತಪ್ಪು ಮಾಡಿದ್ದಾರೋ ಅವರ ವಿರುದ್ಧ ಕ್ರಮವಾಗಲಿ. ತಪ್ಪು ಮಾಡಿದವರ ಮೇಲೆ ಕ್ರಮವಾಗಲೇಬೇಕು. ಸಂಪತ್‌ರಾಜ್‌ ಅವರ ಹೆಸರು ಇರುವುದರಿಂದ ಈ ಬಗ್ಗೆ ಪರಿಶೀಲಿಸಿ ಪಕ್ಷದಿಂದ ತೆಗೆಯುವಂತೆ ಶುಕ್ರವಾರ ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿ ಮಾಡಿ ಮನವಿ ಮಾಡುತ್ತೇನೆ. ಇಂತಹವರಿಂದ ಪಕ್ಷಕ್ಕೆ ತೊಂದರೆ ಇದೆ ಎಂದು ಹೇಳಿದರು.

ಪೊಲೀಸ್‌ ಆಯುಕ್ತರು ಸರ್ಕಾರದ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ. ಡಿ.ಜೆ ಹಳ್ಳಿ ಘಟನೆಯಲ್ಲಿ ನಮ್ಮ ಪಕ್ಷದವರು ಭಾಗಿಯಾಗಿಲ್ಲ. ಸುಳ್ಳು ಆರೋಪ ಹೊರಿಸಿದ್ದು ನಾವು ರಾಜಕೀಯ ಹಾಗೂ ಕಾನೂನಾತ್ಮಕವಾಗಿ ಹೋರಾಡುತ್ತೇವೆ. ಪ್ರತಿಯೊಬ್ಬ ಪ್ರಾಮಾಣಿಕ, ಅಮಾಯಕ ಕಾಂಗ್ರೆಸ್ಸಿಗನ ಪರ ನಿಲ್ಲುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ತಿಳಿಸಿದ್ದಾರೆ.