ಬೆಂಗಳೂರು(ಫೆ.27): ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಗಲಭೆ ಪ್ರಕರಣದಲ್ಲಿ ಬಿಬಿಎಂಪಿ ಮೇಯರ್‌ ಸಂಪತ್‌ರಾಜ್‌ ಪಾತ್ರವಿಲ್ಲ ಎಂದಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿಕೆ ಹಾಗೂ ಮಾಜಿ ಶಾಸಕ ಪ್ರಸನ್ನ ಕುಮಾರ್‌ ಅವರ ಪಕ್ಷ ಸೇರ್ಪಡೆ ಕುರಿತು ಪುಲಿಕೇಶಿನಗರ ಕಾಂಗ್ರೆಸ್‌ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅಸಮಾಧಾನ ಹೊರ ಹಾಕಿದ್ದಾರೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಲಭೆ ಪ್ರಕರಣದಲ್ಲಿ ಸಂಪತ್‌ರಾಜ್‌ ಕೈವಾಡ ಇಲ್ಲ ಎಂದು ಡಿ.ಕೆ.ಶಿವಕುಮಾರ್‌ ಅವರು ಹೇಳಿದ್ದಾರೆ. ಕೈವಾಡ ಇಲ್ಲದಿದ್ದರೆ ಸಂಪತ್‌ರಾಜ್‌ ಏಕೆ ತಲೆ ಮರೆಸಿಕೊಂಡಿದ್ದರು. ಆಸ್ಪತ್ರೆಯಲ್ಲಿದ್ದು ಬಳಿಕ ಅಲ್ಲಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಏಕೆ ಮಾಡಿದರು ಎಂದು ಪ್ರಶ್ನಿಸಿದ್ದಾರೆ.

ನ್ಯೂಸ್ ಅವರ್;  ಸಂಪತ್‌ರಾಜ್‌ಗೆ ಡಿಕೆಶಿ ಅಭಯ.. ಪಂಚಮಸಾಲಿ ಮೀಸಲು ಬೆಲ್ಲದ್ ಲೆಕ್ಕಾಚಾರ

ಅಲ್ಲದೆ, ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್‌ ಶಾಸಕರ ರಕ್ಷಣೆಗೆ ಬರಬೇಕು. ಆದರೆ ಪಕ್ಷದ ಶಾಸಕರ ಮನೆಯ ಮೇಲೆ ಬೆಂಕಿ ಹಚ್ಚಿದವರ ವಿರುದ್ಧ ಶಿಸ್ತು ಕ್ರಮಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಪಕ್ಷದ ಅಧ್ಯಕ್ಷರಾಗಿ ಏಕೆ ಹೀಗೆ ಹೇಳಿಕೆ ನೀಡುತ್ತಿದ್ದಾರೆ ಎಂಬುದು ಗೊತ್ತಿಲ್ಲ. ಕೂಡಲೇ ಸಂಪತ್‌ರಾಜ್‌ ಅವರನ್ನು ಪಕ್ಷದಿಂದ ಉಚ್ಛಾಟಿಸಬೇಕು. ಈ ಬಗ್ಗೆ ಹಿರಿಯ ನಾಯಕರಿಗೂ ಸಹ ಮನವಿ ಸಲ್ಲಿಸಿದ್ದೇನೆ ಎಂದು ಹೇಳಿದರು.
ಪ್ರಸನ್ನ ಪಕ್ಷ ಸೇರ್ಪಡೆ ಬೇಡ ಎಂದಿದ್ದೆ:

ಪುಲಿಕೇಶಿನಗರ ಮಾಜಿ ಶಾಸಕ ಬಿ.ಪ್ರಸನ್ನಕುಮಾರ್‌ ಕಾಂಗ್ರೆಸ್‌ ಪಕ್ಷ ಸೇರ್ಪಡೆ ಕುರಿತು ಪ್ರತಿಕ್ರಿಯಿಸಿದ ಅವರು, ಪ್ರಸನ್ನ ಕುಮಾರ್‌ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಬಾರದು ಎಂದು ಹೇಳಿದ್ದೆ. ಆದರೂ ಅವರನ್ನು ಪಕ್ಷಕ್ಕೆ ಕರೆ ತರಲಾಗಿದೆ. ಇದು ಡಿ.ಕೆ.ಶಿವಕುಮಾರ್‌ ತೀರ್ಮಾನ. ಕ್ಷೇತ್ರದಲ್ಲಿ ಜನರ ಆಶೀರ್ವಾದ ನನ್ನ ಮೇಲಿದೆ. ಅವರ ಆಶೀರ್ವಾದ ಇರುವವರೆಗೂ ಯಾರೇ ಬಂದರೂ ನನಗೆ ತೊಂದರೆ ಇಲ್ಲ ಎಂದರು.