ಪರ್ಯಾಯ ಸಸಿ ನೆಟ್ಟಿದ್ದನ್ನು ತಿಳಿಸದ ಬಿಬಿಎಂಪಿ: ಹೈಕೋರ್ಟ್‌ ಅಸಮಾಧಾನ

ಬೆಂಗಳೂರು(ಸೆ.07): ಮೆಟ್ರೋ ರೈಲು ಯೋಜನೆಗೆ ನಗರದಲ್ಲಿ ಕತ್ತರಿಸಿರುವ ಮರಗಳಿಗೆ ಪರ್ಯಾಯವಾಗಿ ಸಸಿಗಳನ್ನು ನೆಟ್ಟಿರುವ ಬಗ್ಗೆ ಸರಿಯಾದ ಮಾಹಿತಿ ನೀಡದ ಬಿಬಿಎಂಪಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್‌, ಎರಡು ವಾರದಲ್ಲಿ ಪೂರ್ಣ ಮಾಹಿತಿ ನೀಡುವಂತೆ ನಿರ್ದೇಶಿಸಿದೆ.

ಎಷ್ಟು ಸಸಿಗಳನ್ನು ನೆಡಲಾಗಿದೆ, ಅವುಗಳಲ್ಲಿ ಎಷ್ಟುಉಳಿದಿವೆ, ಭಾನುವಾರ ಸುರಿದ ಭಾರೀ ಮಳೆಗೆ ಎಷ್ಟುಸಸಿಗಳು ಕೊಚ್ಚಿ ಹೋಗಿವೆ ಎಂಬುದು ಯಾರಿಗೂ ಗೊತ್ತಿಲ್ಲ. ಹೀಗಾಗಿ ಸಸಿಗಳನ್ನು ನೆಟ್ಟಿರುವ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಅವುಗಳ ಸ್ಥಿತಿಗತಿಯ ಕುರಿತು ಎರಡು ವಾರದಲ್ಲಿ ವರದಿ ಸಲ್ಲಿಸಬೇಕು ಎಂದು ಬಿಬಿಎಂಪಿ ಮರ ಅಧಿಕಾರಿ ಮತ್ತು ಬೆಂಗಳೂರು ನಗರ ಅರಣ್ಯ ಉಪ ಸಂರಕ್ಷಣಾಧಿಕಾರಿಗೆ ನಿರ್ದೇಶಿಸಿದೆ.

ಮೊಬೈಲ್‌ನಲ್ಲೇ ಟಿಕೆಟ್‌ ಖರೀದಿಸಿ ಮೆಟ್ರೋದಲ್ಲಿ ಸಂಚರಿಸಿ

ಮೆಟ್ರೋ ಕಾಮಗಾರಿಗೆ ನಗರದಲ್ಲಿ ಮರಗಳನ್ನು ಕತ್ತರಿಸುವುದನ್ನು ಆಕ್ಷೇಪಿಸಿ ಟಿ.ದತ್ತಾತ್ರೇಯ ದೇವರೆ ಮತ್ತು ಬೆಂಗಳೂರು ಪರಿಸರ ಟ್ರಸ್ಟ್‌ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್‌ ಆರಾಧೆ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಸೂಚನೆ ನೀಡಿ ವಿಚಾರಣೆ ಮುಂದೂಡಿತು.

ನ್ಯಾಯಾಲಯದ ಹಿಂದಿನ ನಿರ್ದೇಶನದಂತೆ ಕತ್ತರಿಸಿದ ಮರಗಳಿಗೆ ಪರ್ಯಾಯವಾಗಿ ಈವರೆಗೂ ಎಷ್ಟುಸಸಿಗಳನ್ನು ನೆಡಲಾಗಿದೆ, ಅವುಗಳಲ್ಲಿ ಎಷ್ಟುಉಳಿದಿವೆ, ಎಷ್ಟುನಾಶವಾಗಿವೆ ಎಂದು ಬಿಬಿಎಂಪಿ ಹಾಗೂ ಸರ್ಕಾರಿ ವಕೀಲರನ್ನು ಪ್ರಶ್ನಿಸಿತು. ಸರ್ಕಾರಿ ವಕೀಲರಾಗಲಿ ಅಥವಾ ಬಿಬಿಎಂಪಿ ಪರ ವಕೀಲರಾಗಲಿ ಸೂಕ್ತ ಮಾಹಿತಿ ನೀಡದಕ್ಕೆ ಬೇಸರಗೊಂಡ ನ್ಯಾಯಪೀಠ, ಪರ್ಯಾಯವಾಗಿ ನೆಟ್ಟಿರುವ ಸಸಿಗಳು ಸುರಕ್ಷತೆಯಿಂದ ಇರುವುದನ್ನು ಬಿಬಿಎಂಪಿ ಮರ ಅಧಿಕಾರಿ ನ್ಯಾಯಾಲಯಕ್ಕೆ ಖಾತರಿಪಡಿಸಬೇಕು. ನೆಟ್ಟಸಸಿ ಹಾಗೂ ಉಳಿದ ಸಸಿಗಳ ಬಗ್ಗೆ ಖಚಿತ ಮಾಹಿತಿ ನೀಡಬೇಕು. ಹಾಗೆಯೇ, ಬೇರುಸಹಿತ ಸ್ಥಳಾಂತರಿಸಿದ ಮರಗಳ ಪರಿಸ್ಥಿತಿ ಏನಾಗಿದೆ ಎಂಬುದರ ಕುರಿತು ಸಹ ನ್ಯಾಯಾಲಯ ವಿವರಿಸಬೇಕು ಎಂದು ಹೇಳಿತು.